ನಮ್ಮ ಪಕ್ಷದ ಬಗ್ಗೆ ಇವರಿಗೇಕೆ ಕಾಳಜಿ | ನಿಮ್ಮ ಪಕ್ಷವನ್ನು ಸರಿಪಡಿಸಿಕೊಳ್ಳಿ |  ಬಿಜೆಪಿ ವಿರುದ್ಧ ಸಚಿವ ದರ್ಶನಾಪುರ ವಾಗ್ದಾಳಿ

ಶಹಾಪುರ : ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಚಿಂತೆ ಹೆಚ್ಚಾಗಿದೆ. ಬಿಜೆಪಿ ಪಕ್ಷದಲ್ಲಿ ಹಲವಾರು ಆಂತರಿಕ ಸಮಸ್ಯೆಗಳು ಜಗಜ್ಜಾಹಿರಾಗುತ್ತಿವೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಇವತ್ತು ನಾಳೆ ಮೂರು ತಿಂಗಳು ಆರು ತಿಂಗಳು ಎರಡು ವರ್ಷ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಮುಖ್ಯಮಂತ್ರಿ ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಶರಣಬಸಪ್ಪಗೌಡ ದರ್ಶನಪುರ ಖಾರವಾಗಿ ನುಡಿದರು.
ನಗರದ ನಗರಸಭೆಯಲ್ಲಿ ಆಶ್ರಯ ಸಮಿತಿ ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಒಳ್ಳೆಯ ಆಡಳಿತ ನಡೆಸುತ್ತಿದೆ. ಚುನಾವಣೆಯಲ್ಲಿ ಕೊಟ್ಟ ಭರವಸೆಗಳಂತೆ 5 ಗ್ಯಾರಂಟಿಗಳನ್ನು ಮತದಾರರಿಗೆ ಕೊಟ್ಟಿದ್ದೇವೆ. ನೇರವಾಗಿ ಬಡವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ನವರು ಹಲವಾರು ಆರೋಪಗಳನ್ನು ಮಾಡುತ್ತಿದ್ದಾರೆ.
ಪ್ರಿಯಾಂಕ ಖರ್ಗೆ ಯಾಕೆ ರಾಜೀನಾಮೆ ಕೊಡಬೇಕು ?…
ಗುತ್ತಿಗೆದಾರ ಸಚಿನ್ ಪಾಂಚಾಳ ಡೆತ್ ನೋಟ್ ಬಗ್ಗೆ ವಿವರಿಸಿದ ಸಚಿವರು ಸಚಿನ್ ಪಾಂಚಾಳ ಡೆತ್ ನೋಟಿನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಹೆಸರೇ ಇಲ್ಲವೆಂದ ಮೇಲೆ ಯಾಕೆ ಪ್ರಿಯಾಂಕ ಖರ್ಗೆ ರಾಜೀನಾಮೆ ಕೊಡಬೇಕು. ಬಿಜೆಪಿ ಅಧಿಕಾರದಲ್ಲಿದ್ದಾಗ ಸಂತೋಷ ಸಾವಿನ ಡೆತ್ ನೋಟ್ ನಲ್ಲಿ ಮಾಜಿ ಸಚಿವ ಈಶ್ವರಪ್ಪನವರ ಹೆಸರಿತ್ತು. ರಾಜೀನಾಮೆ ಕೊಟ್ಟರು. ಸಚಿನ್ ಪಾಂಚಾಳ ಸಚಿವರ ಜೊತೆ ಫೋಟೋದಲ್ಲಿ ಇದ್ದಾನೆ ಇಂದ ಕ್ಷಣ ರಾಜೀನಾಮೆ ಕೇಳುತ್ತಿರುವ ಬಿಜೆಪಿಯವರು. ಹಾಗಾದರೆ ಫೋಟೋದಲ್ಲಿ ಸಚಿವರ ಜೊತೆ ಕಾಣಿಸಿಕೊಂಡರೆ ರಾಜೀನಾಮೆ ಕೊಡಬೇಕೆಂದಾದರೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೂಡ ರಾಜೀನಾಮೆ ಕೊಡಬೇಕಾಗುತ್ತದೆ. ಉಪಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ನವರು ಕೂಡಿ ಪ್ರಚಾರ ಮಾಡಿದರು. ಕಾಂಗ್ರೆಸ್ ಗೆಲುವು ಸಾಧಿಸಿತು. ಇದನ್ನು ಬಿಜೆಪಿಯವರು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದರು..
ಶೇ.60 ಭ್ರಷ್ಟಾಚಾರ ಹೇಳಿಕೆ ವಿರುದ್ಧ ಕಿಡಿ ಕಾರಿದ ಸಚಿವರು……
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್ ಸರ್ಕಾರದಲ್ಲಿ ಶೇ.60ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾತನಾಡಿದ್ದಾರೆ. ಇದು ಹಾಸ್ಯಸ್ಪದ‌. ಒಂದು ಕಡೆ ರಾಜ್ಯದಲ್ಲಿ ಜನರಿಗೆ ಗ್ಯಾರಂಟಿಗಳನ್ನು ನೀಡಿ ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ಕಾಂಗ್ರೆಸ್ನವರು ತಳ್ಳುತ್ತಿದ್ದಾರೆ ಎಂದು ಹೇಳಿದ ಇವರು, ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದು ಹೇಳುತ್ತಾರೆ. ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದಾದರೆ ಶೇ. 60ರಷ್ಟು ಭ್ರಷ್ಟಾಚಾರ ಹೇಗೆ ಬರುತ್ತದೆ. ಮಾಜಿ ಮುಖ್ಯಮಂತ್ರಿ ಅವರು ಯಾವ ಅರ್ಥದ ಮೇಲೆ ಹೇಳಿದರೊ ತಿಳಿಯುತ್ತಿಲ್ಲ ಎಂದು ಹೇಳಿದರು.