ಮುರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ | ಪ್ರಿನ್ಸಿಪಾಲ್ ಮತ್ತು ವಾರ್ಡನ್ ಅಮಾನತ್ತಿಗೆ ಆಗ್ರಹ

ಶಹಾಪುರ : ತಾಲೂಕಿನ ಬೇವಿನಹಳ್ಳಿ ಗ್ರಾಮದ ಪಕ್ಕದಲ್ಲಿರುವ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಇಂದು ಕಾಲ್ನಡಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಯ ಮುಂದೆ ವಸತಿ ನಿಲಯದ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಅವರನ್ನು ಕೂಡಲೇ ಅಮಾನತ್ತು ಮಾಡಿ ಹಾಗೂ ಅಮಾನತ್ತು ಮಾಡಿದ ಕನ್ನಡ ಮತ್ತು ಹಿಂದಿ ಶಿಕ್ಷಕರನ್ನು ಮತ್ತೆ ಪುನಹ ಸೇವೆಗೆ ಸೇರ್ಪಡೆ ಮಾಡಿಕೊಳ್ಳುವಂತೆ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಹಸೀಲ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಶಾಲಾ ಮಕ್ಕಳೊಂದಿಗೆ ಒಳ್ಳೆಯ ರೀತಿಯ ಪಾಠ ನೀಡುತ್ತಿದ್ದ ಹಿಂದಿ ಮತ್ತು ಕನ್ನಡ ಶಿಕ್ಷಕರನ್ನು ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತಿಸಿದರು ಎನ್ನುವ ಕಾರಣವನ್ನು ನೀಡಿ ವಾರ್ಡನ್ ಮತ್ತು ಪ್ರಾಂಶುಪಾಲರು ಇಬ್ಬರೂ ಸೇರಿ ಅಮಾನತ್ತು ಗೊಳಿಸುವಂತೆ ಮಾಡಿದ್ದಾರೆ. ವಾರಕ್ಕೊಮ್ಮೆ ಬರುವ ಪ್ರಿನ್ಸಿಪಾಲ್ ಮತ್ತು ವಾರ್ಡನ್ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ವಿದ್ಯಾರ್ಥಿಗಳು ವಾದಕ್ಕೆ ಇಳಿದರು.

ರಾಹುತಪ್ಪ ಎಂಬ ವಾರ್ಡನ್ ಮಕ್ಕಳೊಂದಿಗೆ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುತ್ತಾನೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಪ್ರಾಂಶುಪಾಲರಾದ ನೀಲಮ್ಮ ಎಂಬುವವರು ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗೆ ಸ್ಪಂದಿಸದೆ ಸುಳ್ಳು ಆರೋಪಿಸಿ ನೀವು ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತೀರಾ ಎಂದು ಶಹಾಪುರ ಪೊಲೀಸ್ ರನ್ನು ಕರೆಯಿಸಿ ಬೆದರಿಕೆ ಹಾಕುವರು ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.ಇAತಹ ಪ್ರಿನ್ಸಿಪಾಲರು ಹಾಗೂ ವಾರ್ಡನ್ ನಮಗೆ ಬೇಡವೇ ಬೇಡ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಪಟ್ಟು ಹಿಡಿದರು. ಮಕ್ಕಳನ್ನು ಮನವೊಲಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಹಾಗೂ ತಹಸಿಲ್ದಾರ್ ಉಮಾ ಕಾಂತ ಹಳ್ಳೆ ಹಾಗೂ ಜಿಲ್ಲಾ ಬುಡಕಟ್ಟು ಅಧಿಕಾರಿ ಸಿದ್ದು ಅಣಬಿ ಹರಸಾಹಸ ಪಟ್ಟರು.

ಮಕ್ಕಳು ಬೀದಿಗೆ ಬರಲು ಕಾರಣರಾರು. ವಸತಿ ಶಾಲೆಯಲ್ಲಿ ಇದ್ದು ಶಿಕ್ಷಣ ಕಲಿಯಬೇಕಾದ ಮಕ್ಕಳು ಬೀದಿಗೆ ಬಂದು ಹೋರಾಟ ಮಾಡುವ ವಾತಾವರಣ ಸೃಷ್ಟಿಸಿದವರು ಯಾರು. ಮತ್ತು ಹೊರಗೆ ಮಕ್ಕಳನ್ನು ಬೀದಿಗೆ ಬಿಟ್ಟವರು ಯಾರು. ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳು ಮತ್ತು ರೈತ ಪರ ಸಂಘಟನೆಗಳು ಒತ್ತಾಯಿಸಿದರು.