ಶಹಾಪುರ : ಸಂವಿಧಾನ ದಿನವನ್ನು ನಾವು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು ರೂಡಿ ನಮ್ಮದು.ಸಂವಿಧಾನ ಅಂದ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪು. ಅಂಬೇಡ್ಕರ ಅಂದಮೇಲೆ ಅವರ ಜಾತಿ ಗುರುತಿಸುವುದು ತಪ್ಪು. ಸಂವಿಧಾನ ಎಂದಾಕ್ಷಣ ಅದು ಕೆಲವು ವರ್ಗಗಳಿಗೆ ಮೀಸಲಾತಿ ನೀಡಿದೆ ಎಂದು ಬಹಳ ಜನರು ಸಾಮಾನ್ಯವಾಗಿ ಅರ್ಥೈಸಿಕೊಂಡಿರುವುದು ಗೋಚರವಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ 520 ಕ್ಕೂ ಹೆಚ್ಚು ಪ್ರಾಂತಗಳಿಂದ/ ಸಂಸ್ಥಾನ/ರಾಜ ಮನೆತನದ ಆಳ್ವಿಕೆಯಿಂದ ಕೂಡಿತ್ತು.ಸ್ವಾತಂತ್ರ್ಯ ನಂತರದಲ್ಲಿ ಇವುಗಳನ್ನು ಒಗ್ಗೂಡಿಸಿ ಬಲಿಷ್ಠ ಭಾರತಕ್ಕೆ ನಮ್ಮದೇ ಆದ ಸಂವಿಧಾನ ಬೇಕು ಎಂದು ಸಂವಿಧಾನ ಸಮಿತಿಯ ಸದಸ್ಯರ ಆಯ್ಕೆ, ನಂತರ ಸಭೆ ಮತ್ತು ಸಂವಿಧಾನ ಕರಡು ರಚನಾ ಸಮಿತಿಯ ಸಭೆಗಳು ಚರ್ಚೆಗಳು ನಮ್ಮ ಸಂವಿಧಾನ ರಚನೆಗೆ ನಡೆದ ಪ್ರಕ್ರಿಯೆಗಳು ಹಾಗೂ ಕರಡು ಸಮಿತಿಯ ಅಧ್ಯಕ್ಷರಾದ ಡಾ|| ಬಿರ್, ಆರ್ ಅಂಭೇಡ್ಕರ್ ಅವರ ಪಾತ್ರವನ್ನು ಇತಿಹಾಸದಲ್ಲಿ ಮರೆಯುವಂತಿಲ್ಲ.
ಇಂದಿಗೆ ನಾವು ನಮ್ಮ ದೇಶಕ್ಕೆ ಸಂವಿಧಾನವನ್ನು ಅರ್ಪಿಸಿಕೊಂಡು 75 ವರ್ಷಾಚರಣೆಯಲ್ಲಿದ್ದೇವೆ. ಆದರೆ ನಾವು ಸಂವಿಧಾನ ದಿನಾಚರಣೆ ಕುರಿತು ಅಂದಿನ ಕಾರ್ಯಕ್ರಮಗಳು, ಭಾಷಣ, ಗೋಷ್ಠಿಗಳಿಗೆ ಸೀಮಿತಗೊಳಿಸಿದ್ದೇವೆ. ಸಂವಿದಾನ ಅಂದಾಕ್ಷಣ ನಾವು ಕೆಲವು ವರ್ಗ, ಜಾತಿಗಳಿಗೆ ಮೀಸಲಾತಿ ನೀಡಿದ ಒಂದು ಗ್ರಂಥ ಎಂದು ನೆನಪಿಸಿಕೊಳ್ಳುವವರು ಹೆಚ್ಚು. ಆದರೆ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ, ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದೆ ಪ್ರತಿಯೊಬ್ಬರು ಸಮಾನರು, ಅವರು ಹಕ್ಕುಗಳಿಂದ ವಂಚಿತರಾಗಿದ್ದರೆ ಅವರಿಗೆ ಹಕ್ಕುಗಳನ್ನು ನೀಡಬೇಕು. ಅವರೂ ಕೂಡ ಮುಂದೆ ಬರಬೇಕಾದರೆ ಅವರಿಗೆ ಮೀಸಲಾತಿ ಪ್ರಾತಿನಿಧ್ಯ ನೀಡಬೇಕು ಎಂದು ವ್ಯಕ್ತಿಯಿಂದಿಡಿದು ಪ್ರಕೃತಿವರೆಗೆ ಸಮಾನತೆ ಸಂರಕ್ಷಣೆ ಪಾಲನೆ ಪೋಷಣೆ ಕುರಿತು ಸಂವಿಧಾನದಲ್ಲಿ ಕಾನೂನನ್ನು ರೂಪಿಸಲಾಗಿದೆ.
ಸಮಾನತೆ : ಭಾರತದಲ್ಲಿರುವ ಎಲ್ಲರೂ ಸಮಾನರು. ಯಾರನ್ನು ಜಾತಿ ಧರ್ಮ ಮತ್ತು ಭಾಷೆಯ ಆದಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಪ್ರತಿಯೊಬ್ಬರಿಗೂ ಸಮಾನತೆ ನೀಡಿದೆ.
ಮತದಾನದ ಹಕ್ಕು : 18 ವರ್ಷ ತುಂಬಿರುವ ಮಹಿಳೆ ಇರಲಿ , ಪುರಷನಾಗಿರಲಿ ಮತದಾನ ಹಕ್ಕು ಸಂವಿಧಾನ ನೀಡಿದೆ. ಒಂದು ಮತಕ್ಕೆ ಒಂದು ಮೌಲ್ಯ ಅಂದರೆ ಶ್ರೀಮಂತಿನಿಗೂ ಒಂದೇ ಮತ, ಬಡವನಿಗೂ ಒಂದೇ ಮತ. ಇಬ್ಬರಿಗೂ ನೀಡಿರುವ ಒಂದು ಮತದ ಮೌಲ್ಯ ಒಂದೇ ಎಂದು ಯುನಿವರ್ಸೆಲ್ ಆಗಿ ಪ್ರತಿಯೊಬ್ಬರಿಗೂ ನೀಡಿದೆ.
ಹಕ್ಕುಗಳಿಲ್ಲದ ನಾಗರಿಕರಾಗಿದ್ದೆವು : ಸಂವಿಧಾನ ರಚನೆಯ ಪೂರ್ವದಲ್ಲಿ ಅಂದರೆ ಸ್ವತಂತ್ರ್ಯ ಪೂರ್ವದಲ್ಲಿ ಪ್ರಾಂತಗಳ, ರಾಜಮನೆತನದ ಮತ್ತು ಬ್ರಿಟಿಷರ ಇಂಡಿಯ ಕಾಯ್ದೆಗಳ ಸರಕಾರಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಹಕ್ಕುಗಳು ಇರಲಿಲ್ಲ. ಜಾತಿ, ಧರ್ಮ,ವೃತ್ತಿ, ಜಮೀನಿನ ಮಾಲಿಕತ್ವದ ಆಧಾರದ ಮೇಲೆ ಹಕ್ಕುಗಳಿದ್ದವು. ಸಂವಿಧಾನ ರಚನೆಯಾದ ಮೇಲೆ ಪ್ರತಿಯೊಬ್ಬನಿಗೂ ಹಕ್ಕುಗಳನ್ನು ನೀಡಿ ದಕ್ಕೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ನಮ್ಮ ಸಂವಿಧಾನದಲ್ಲಿದೆ.
ಶಿಕ್ಷಣದ ಹಕ್ಕು : ಸಂವಿಧಾನದ ಪೂರ್ವದಲ್ಲಿ ಕೆಲವು ವರ್ಗಗಳಿಗೆ, ಮಾತ್ರ ಶಿಕ್ಷಣದ ಕಲಿಯಲು ಅವಕಾಶ ಇತ್ತು. ಅದು ಸಾರ್ವತ್ರಿಕವಾಗಿರಲಿಲ್ಲ. ಹಿಂದಿನ ಗುರುಕುಲ ವ್ಯವಸ್ಥೆಯಂತೆ ಇತ್ತು.ಸಂವಿಧಾನದ ನಂತರ ಎಲ್ಲರಿಗೂ ಒಂದೇ ರೀತಿಯ ಧರ್ಮ ಜಾತಿಯವರಿಗೂ ಹಾಗೂ ಮಹಿಳೆಯರಿಗೂ ವಿವಿಧ ಶಿಕ್ಷಣ ವ್ಯವಸ್ಥೆ ಕಲ್ಪಿಸಿತು.
ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನತೆ ಹಕ್ಕು : ಸಂವಿಧಾನ ರಚನೆಯ ಪೂರ್ವದಲ್ಲಿ ಮಹಿಳೆಯರಿಗೆ ಪುರುಷರಷ್ಟು ಸ್ವಾತಂತ್ರ್ಯ ಇರಲಿಲ್ಲ.ಪುರುಷರಷ್ಠೆ ಸಮಾನರಲ್ಲಾ, ಸ್ತ್ರೀಯರು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವಾತಂತ್ರಳಲ್ಲ ಎಂದು ಪುರುಷ ಪ್ರಧಾನ ಕುಟುಂಬದ ವ್ಯವಸ್ಥೆಯಲ್ಲಿ ಧರ್ಮದ ಹೆಸರಿನಲ್ಲಿ ಭಾರತದ ಜನಸಂಖ್ಯೆಯ ಅರ್ಧದಷ್ಟು ಸ್ತ್ರೀ ಜನಾಂಗವನ್ನು ಬಂಧನದಲ್ಲಿರಿಸಿದಂತಿತ್ತು. ಆದರೆ ಸಂವಿಧಾನ ಜಾರಿ ನಂತರ ಮಹಿಳೆಯರು ಪುರುಷರಷ್ಠೆ ಸಮಾನರು ಹಾಗೂ ಹಕ್ಕು ಉಳ್ಳರಾಗಿದ್ದಾರೆ ಎಂದು ಕಾನೂನಿನಲ್ಲಿ ಅವಕಾಶ ನೀಡಿರುವುದರಿಂದ ಪ್ರತಿ ಕುಟುಂಬದಲ್ಲಿನ ಮಹಿಳೆಯ ಸಬಲೀಕರಣ ಮಾಡಲು ಸಂವಿಧಾನದಲ್ಲಿನ ದಿಟ್ಟ ಹೆಜ್ಜೆಯ ನಿರ್ಧಾರ ಗಮನಾರ್ಹ ವಿಷಯ.
*ವಂಚಿತರಿಗೆ, ಅಸ್ಪಶ್ಯರಿಗೆ, ದುರ್ಬಲರಿಗೆ, ದಲಿತರಿಗೆ ಪ್ರಾತಿನಿಧ್ಯ : ರಾಜಕೀಯವಾಗಿ, ಶೈಕ್ಷಣಿಕವಾಗಿ, ಉದ್ಯೋಗದ ದೃಷ್ಠಿಯಲ್ಲಿ ಇಂತಹ ಸಮುದಾಯಗಳಿಗೆ ನಿಗದಿತ ಸಮಯದಲ್ಲಿ ನಾವು ಅವರಿಗೆ ಮೀಸಲಾತಿ ನೀಡಿ ಅವರ ಏಳಿಗೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಇದು ಕೇವಲ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಲ್ಲ.
*ಭಾವೈಕ್ಯತೆಯ ಭಾರತ: ಭಾರತದಲ್ಲಿ ಹಿಂದು, ಮುಸ್ಲೀಂ, ಕ್ರೈಸ್ತ, ಜೈನ, ಬೌದ್ಧ ಮುಂತಾದ ಧರ್ಮದ ಜನರಿದ್ದು, ಪ್ರತಿಯೊಬ್ಬರು ಪ್ರತಿಯೊಂದು ಧರ್ಮ ಭಾಷೆಯನ್ನು ಗೌರವಿಸಬೇಕು.ಅವರ ಸಂಸ್ಕೃತಿ ಸಂಪ್ರದಾಯಗಳನ್ನು ಆಚರಣೆ ಮಾಡಲು ಸಂವಿಧಾನದಲ್ಲಿ ಅವಕಾಶ ನೀಡಿದೆ. ಆದರೆ ಇತರರಿಗೆ ನೋವು ಆಗದಂತೆ ಸಮಾಜದಲ್ಲಿ ಅದರಿಂದ ಅಶಾಂತಿ ಆಗಬಾರದು. ಧರ್ಮ- ಧರ್ಮಗಳ ಮದ್ಯೆ ತಾರತಮ್ಯ ಮಾಡಬಾರದು ಎಂದು ಸಾರಿದೆ.
ಸಂವಿಧಾನದಲ್ಲಿ ಕೆಲವು ಜಾತಿಗೆ ಮೀಸಲಾತಿ ನೀಡಿದೆ.ಅವರ ಹೇಳಿಗೆಗೆ ಇರುವ ಕಾನೂನನ್ನು ಮಾರ್ಪಡಿಸಬೇಕು ಎಂದು ಚರ್ಚಿಸುತ್ತಿರುವುದು ಪರ- ವಿರೋದಕ್ಕೆ ಗ್ರಾಸವಾಗುತ್ತಿರುವುದು ವಿಪರ್ಯಾಸ.
ಇದರ ಮೇಲೆ ನಮಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.ನಮ್ಮ ಹೆಮ್ಮೆಯ ಭಾರತಕ್ಕೆ ಬೆಳಕಾಗಿರಲು ಇರುವ ಈ ಭಾರತಿಯ ಸಂವಿಧಾನವನ್ನು 75 ವರ್ಷದಲ್ಲಿ ಎಷ್ಟು ಅರ್ಥಮಾಡಿಕೊಂಡು ಅರ್ಪಿಸಿಕೊಂಡಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ನಾವು ನವೆಂಬರ್ 26 ರಂದು ಆಚರಿಸುವ ಭಾರತಿಯ ಸಂವಿಧಾನ ದಿನವನ್ನು ದೇಶದಲ್ಲಿ ಸಮಾನತೆ ಸ್ವಾತಂತ್ರ್ಯ ಭಾವೈಕ್ಯತೆಯಿಂದ ಇರಲು ಅವಕಾಶ ನೀಡಿದೆ. ಪ್ರತಿಯೊಬ್ಬ ನಾಗರಿಕನಿಗೂ ಹಕ್ಕು & ಕರ್ತವ್ಯಗಳನ್ನು ನೀಡಿರುವ ಸಂವಿದಾನವು ಮನುಷ್ಯನಿಂದಿಡಿದು ಪ್ರಾಣಿ, ಪಕ್ಷಿ ಮತ್ತು ಪ್ರಕೃತಿಯವರೆಗೂ ಪಾಲನೆ ಪೋಷಣೆ, ಸಂರಕ್ಷಣೆಗೆ ಸಂವಿಧಾನದಲ್ಲಿ ಕಾನೂನು ರೂಪಿಸಿದ್ದು ನಮ್ಮ ಸಂವಿಧಾನವಾಗಿದೆ. ಹಾಗಾಗಿ ನಮ್ಮ ಸಂವಿಧಾನ ದಿನವನ್ನು ಹೆಮ್ಮೆಯ ದಿನವನ್ನಾಗಿ ಆಚರಿಸೋಣಾ,
ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.ಸಂವಿಧಾನದ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ.ಅದನ್ನು ಸಂರಕ್ಷಣೆ ಮಾಡೋಣ ಶಪತ ಮಾಡೋಣ. ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸೋಣಾ ಎಂದು ಎಲ್ಲರಲ್ಲಿ ಮನವಿ.

ಶಿವುಕುಮಾರ ಬಿ,ಮುದುಕನ್
ಹುರಸಗುಂಡಗಿ
Post Views: 152