ಬಸವಣ್ಣನವರ ಶಿವದರ್ಶನ –೦೯ : ಶಿವಮಂತ್ರ ಧ್ಯಾನದಿಂದ ಜಗತ್ತನ್ನೇ ವಶೀಕರಣ ಮಾಡಬಹುದು : ಮುಕ್ಕಣ್ಣ ಕರಿಗಾರ

ಬಸವಣ್ಣನವರ ಶಿವದರ್ಶನ –೦೯

ಶಿವಮಂತ್ರ ಧ್ಯಾನದಿಂದ ಜಗತ್ತನ್ನೇ ವಶೀಕರಣ ಮಾಡಬಹುದು

ಮುಕ್ಕಣ್ಣ ಕರಿಗಾರ

ವಶ್ಯವ ಬಲ್ಲೆವೆಂದೆಂಬಿರಯ್ಯಾ–
ಬುದ್ಧಿಯನರಿಯದ ಮನುಜರು ಕೇಳಿರಯ್ಯಾ ;
ವಶ್ಯವಾವುದೆಂದರಿಯದೆ
ಮರುಳಗೊಂಬಿರೆಲೆ ಗಾವಿಲ ಮನುಜರಿರ !
‘ ಓಂ ನಮಃ ಶಿವಾಯ’ ಎಂಬ ಮಂತ್ರ ಸರ್ವಜನ ವಶ್ಯ
ಕೂಡಲ ಸಂಗಮದೇವಾ.

ಶಿವಮಂತ್ರ ಧ್ಯಾನದಿಂದ ಸರ್ವಜನರನ್ನು ಅಷ್ಟೇ ಏಕೆ ಭೂಮಂಡಲವನ್ನೇ ವಶೀಕರಣಗೊಳಿಸಬಹುದು,ಸ್ವಾಧೀನಗೊಳಿಸಬಹುದು ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ.ತಾಂತ್ರಿಕ ಸಾಧಕರುಗಳು ಜನವಶೀಕರಣ ಮಾಡಿಕೊಂಡು ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತ ವಶ್ಯಸಿದ್ಧಿಪ್ರವೀಣರೆಂದು ಬೀಗುತ್ತಾರೆ.ಅಂತಹ ತಾಂತ್ರಿಕ ಸಾಧಕರುಗಳನ್ನು ಕೆಡೆನುಡಿಯುತ್ತ ಬಸವಣ್ಣನವರು ಕ್ಷುದ್ರವಿದ್ಯಾಪ್ರಯೋಗಗಳಿಂದ ಜನವಶೀಕರಣ ಮಾಡಿಕೊಳ್ಳುವುದೇಕೆ ‘ಓಂ ನಮಃ ಶಿವಾಯ’ ಎನ್ನುವ ಶಿವಮಹಾಮಂತ್ರವನ್ನು ಜಪಿಸುತ್ತ ಸರ್ವಜನರನ್ನು,ಇಡೀ ಜಗತ್ತನ್ನು ವಶೀಕರಿಸಿಕೊಳ್ಳಬಹುದು ಎನ್ನುತ್ತಾರೆ.ಕಣ್ಣಿಲ್ಲದ ಕುರುಡ ಬೆಳಕನ್ನು,ಜಗತ್ತನ್ನು ಕಾಣದಂತೆ ಕುರುಡುಬುದ್ಧಿಯ ಜನರು ತಾಂತ್ರಿಕ ವಿದ್ಯೆ,ಸಾಧನೆ ಸಿದ್ಧಿಗಳಲ್ಲಿಯೇ ವ್ಯರ್ಥಹಾಳಾಗುತ್ತಾರೆ.ತಾಂತ್ರಿಕ ಸಿದ್ಧಿಗಳು ಅಧ್ಯಾತ್ಮಿಕ ಸಿದ್ಧಿಗಳಲ್ಲವಾದ್ದರಿಂದ ಅವುಗಳಿಂದ ಹೆಚ್ಚಿನ ಪ್ರಯೋಜನವಿಲ್ಲ.ಅಧ್ಯಾತ್ಮಿಕ ಸಿದ್ಧಿಗಳ ಎದುರು ಕ್ಷುದ್ರಸಿದ್ಧಿಗಳ ಆಟ ನಡೆಯದು.ಹಾಗಿದ್ದೂ ಜನವಶೀಕರಣದಂತಹ ಕ್ಷುದ್ರಸಿದ್ಧಿಗಳಿಗಾಗಿ ಹಂಬಲಿಸುವವರು ಕುರುಡರಲ್ಲವೆ,ಮೂರ್ಖರಲ್ಲವೆ ಎಂದು ಪ್ರಶ್ನಿಸುತ್ತಾರೆ ಬಸವಣ್ಣನವರು.

‘ ಶಿವ’ ಎಂದರೆ ಶುಭ,ಮಂಗಳ,ಕಲ್ಯಾಣ ಎನ್ನುವ ಅರ್ಥಗಳಿರುವಂತೆಯೇ ಯಾವುದು ಜಗತ್ತನ್ನೆಲ್ಲ ವ್ಯಾಪಿಸಿದೆಯೋ ಅದೇ ಶಿವ ಎನ್ನುವ ಅರ್ಥವೂ ಇದೆ.ಶಿವನಾಮವು ಜಗತ್ತಿನ ಎಲ್ಲೆಡೆ ಪಸರಿಸಿದೆ.ಶಿವನು ಸ್ವಯಂ ಪ್ರಕೃತಿಪತಿಯಾದುದರಿಂದ ಪ್ರಕೃತಿಯಲ್ಲಿ ನಡೆಯುವ ಎಲ್ಲ ಘಟನೆ,ಪ್ರಸಂಗಗಳ ಹಿಂದೆಯೂ ಶಿವಸಂಕಲ್ಪವಿರುತ್ತದೆ.ಜಗನ್ನಿಯಾಮಕನಾದ ಪರಶಿವನ ಪ್ರತೀಕವಾದ ‘ ಓಂ ನಮಃ ಶಿವಾಯ’ ಎನ್ನುವ ಮಂತ್ರಧ್ಯಾನದಿಂದ ಜನರಷ್ಟೇ ಏಕೆ ಇಡೀ ಜಗತ್ತೇ ಶಿವಭಕ್ತನ ವಶವಾಗುತ್ತದೆ,ಶಿವಭಕ್ತನತ್ತ ಆಕರ್ಷಿತವಾಗುತ್ತದೆ.ಅನವರತ ಶಿವಮಂತ್ರ ಧ್ಯಾನಿಸುತ್ತ,ಸ್ಮರಿಸುತ್ತ ಶಿವಭಕ್ತರು ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಬಹುದು,ಪ್ರಪಂಚ ವಿಜಯಿಗಳಾಗಬಹುದು.ಹೀಗಿದ್ದ ಬಳಿಕ ಕ್ಷುದ್ರಸಿದ್ಧಿಗಳಿಗಾಗಿ ಕ್ಷುದ್ರಮಂತ್ರಗಳನ್ನು ಅವಲಂಬಿಸುವವರು ಮೂರ್ಖರಲ್ಲವೆ ? ಕ್ಷುದ್ರವಿದ್ಯೆಯು ನಿಶ್ಚಿತ ಉದ್ದೇಶಕ್ಕೆ ಪೂರಕವಾದ ಸಿದ್ಧಿಯನ್ನು ಮಾತ್ರ ನೀಡುತ್ತದೆಯೇ ಹೊರತು ಎಲ್ಲ ಸಿದ್ಧಿಗಳನ್ನು ನೀಡುವುದಿಲ್ಲ.ಆದರೆ ‘ ಓಂ ನಮಃ ಶಿವಾಯ’ ಎನ್ನುವ ಮಂತ್ರದ ಜಪ- ಅನುಷ್ಠಾನದ ಬಲದಿಂದ ಸಾಧಕನು ತನ್ನ ಮನದ ಬಯಕೆಯನ್ನು ಈಡೇರಿಸಿಕೊಳ್ಳುವುದರ ಜೊತೆಗೆ ಸರ್ವಸಿದ್ಧಿ ಸಂಪನ್ನನಾಗಿ ಆ ಮಹಾಮಂತ್ರದ ಪ್ರಭಾವದಿಂದ ಶಿವಾನುಗ್ರಹಕ್ಕೂ ಕೂಡ ಪಾತ್ರನಾಗಿ ಮೋಕ್ಷವನ್ನು ಪಡೆಯುತ್ತಾನೆ.ಜೀವನದ ಆತ್ಯಂತಿಕ ಗುರಿ,ಪರಮಾರ್ಥ ಮೋಕ್ಷವೇ ಆಗಿರುವಾಗ ಮತ್ತು ‘ ಓಂ ನಮಃ ಶಿವಾಯ’ ಎನ್ನುವ ಶಿವ ಷಡಕ್ಷರಿ ( ‘ನಮಃ ಶಿವಾಯ’ ಎನ್ನುವುದು ಪಂಚಾಕ್ಷರಿ ಮಂತ್ರ; ಓಂ ಪ್ರಣವಸಹಿತ ‘ ಓಂ ನಮಃ ಶಿವಾಯ ಎನ್ನುವುದು ಷಡಕ್ಷರಿ ಮಂತ್ರ) ಮಂತ್ರವನ್ನು ಜಪಿಸುತ್ತ ಸರ್ವಸಿದ್ಧಿಗಳೊಂದಿಗೆ ಮೋಕ್ಷವನ್ನು ಪಡೆಯಬಹುದಾದ್ದರಿಂದ’ ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು ಬಿಟ್ಟು ಅನ್ಯ ಮಂತ್ರ- ತಂತ್ರಗಳನ್ನು ಅವಲಂಬಿಸುವವರು ಕುರುಡರಿದ್ದಂತೆ ಎನ್ನುವ ಬಸವಣ್ಣನವರು ಶಿವಮಂತ್ರದ ಪಾರಮ್ಯವನ್ನು,ಸರ್ವಾಧಿಕ್ಯವನ್ನು ನಿರೂಪಿಸಿದ್ದಾರೆ ಈ ವಚನದಲ್ಲಿ.

೨೦.೦೮.೨೦೨೪

About The Author