ಗೋಗಿ ಕೆ ಗ್ರಾಮದ ಕುರಿಹಟ್ಟಿಗೆ ನುಗ್ಗಿದ ತೋಳ 9 ಕುರಿಗಳ ಸಾವು ಮಹಾಮಂಡಲ ನಿರ್ದೇಶಕರ ಭೇಟಿ

ಶಹಾಪುರ : ತಾಲೂಕಿನ ಗೋಗಿ ಕೆ ಗ್ರಾಮದಲ್ಲಿ ಬುಧವಾರ ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ಕುರಿಗಾಯಿಗಳು ಇಲ್ಲದ ಸಮಯದಲ್ಲಿ  ಕುರಿದೊಡ್ಡಿಗೆ ನುಗ್ಗಿದ ತೋಳ ಒಂದು ಕುರಿದೊಡ್ಡಿಯಲ್ಲಿರುವ  ಒಂಬತ್ತು ಕುರಿಗಳನ್ನು ತಿಂದು ಹಾಕಿದ್ದು, ಇದರಿಂದ ಕುರಿಗಾಗರು ಕಂಗಾಲಾಗಿದ್ದು, ಸತ್ತ ಕುರಿಗಳ ಆರ್ಥಿಕ ನಷ್ಟ ತುಂಬಿ ಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.ಗ್ರಾಮದ ಸನ್ ರೆಡ್ಡಿಪ್ಪನಿಗೆ ಸೇರಿದ ಎರಡು ಕುರಿಗಳು,ದೇವಮ್ಮ ಗಂಡ ಚಂದಪ್ಪನಿಗೆ ಸೇರಿದ ಎರಡು ಕುರಿಗಳು, ಸಿದ್ದಮ್ಮ ಗಂಡ ಹನುಮಂತನಿಗೆ ಸೇರಿದ ಮೂರು ಕುರಿಗಳನ್ನು ತೋಳ ತಿಂದು ಹಾಕಿ ಹೋಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ರಾಜ್ಯ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಭೇಟಿ ನೀಡಿ ಸತ್ತ ಕುರಿಗಳನ್ನು ಪರಿಶೀಲಿಸಿ ತಾಲೂಕು ಪಶು ಸಂಗೋಪನ ಆಸ್ಪತ್ರೆಯ ವೈದ್ಯರಾದ ಡಾ.ರಾಜು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಕರೆಸಿ ಪಂಚನಾಮಿ ಮಾಡಿಸಿದರು.ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು.
ಅರಣ್ಯ ಇಲಾಖೆಗೆ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು,ಇಲಾಖೆಯಿಂದ ಸಿಗುವ ಪರಿಹಾರವನ್ನು ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಿಗುವ ಪರಿಹಾರ ಧನವನ್ನು ಕುರಿಗಾರರಿಗೆ ಒದಗಿಸಿ ಕೊಡುವುದಾಗಿ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ ತಿಳಿಸಿದ್ದಾರೆ