ಸಂಕಲ್ಪಶಕ್ತಿಯನ್ನು ನೂರ್ಮಡಿಸುವ ದಿನ ಅಕ್ಷಯ ತೃತೀಯಾ

ದಿನ ವಿಶೇಷ: ಸಂಕಲ್ಪಶಕ್ತಿಯನ್ನು ನೂರ್ಮಡಿಸುವ ದಿನ ಅಕ್ಷಯ ತೃತೀಯಾ : ಮುಕ್ಕಣ್ಣ ಕರಿಗಾರ

ಇಂದು ಅಕ್ಷಯ ತೃತೀಯಾ,ಭಾರತೀಯ ಸಂಸ್ಕೃತಿಯಲ್ಲಿ ಆಚರಿಸಲ್ಪಡುತ್ತಿರುವ ವಿಶೇಷ ದಿನಗಳಲ್ಲೊಂದು.ಚಿನ್ನ ಬೆಳ್ಳಿಯ ವ್ಯಾಪಾರ ಭರದಿಂದ ಸಾಗಿರುತ್ತದೆ ಈ ದಿನ.ವಾಸ್ತವವಾಗಿ ಅಕ್ಷಯತೃತೀಯಾದ ಆಚರಣೆಯ ಹಿನ್ನಲೆಯ ತತ್ತ್ವವೇ ಬೇರೆ.ವ್ಯಾಪಾರಿಗಳು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು ಈ ದಿನ ಚಿನ್ನ ಖರೀದಿಸಿದರೆ ಚಿನ್ನ ಹೇರಳವಾಗಿ ಸಂಗ್ರಹವಾಗುತ್ತದೆ,ಲಕ್ಷ್ಮಿಯ ಆಗಮನವಾಗುತ್ತದೆ ಎಂದೆಲ್ಲ ಸುಳ್ಳುಹೇಳಿ ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳುತ್ತಾರೆ.ಜನರು ಸಾಲ ಮಾಡಿಯಾದರೂ ಬಂಗಾರ ಖರೀದಿಸುತ್ತಾರೆ.

ಅಕ್ಷಯ ತೃತೀಯಾವು ಮನುಷ್ಯರು ತಮ್ಮ ಕರ್ಮಗಳನ್ನು ಕಳೆದುಕೊಂಡು ಪುಣ್ಯಸಂಪಾದಿಸಲು ಇರುವ ವಿಶೇಷದಿನ.ಈದಿನ ಮಾಡಿದ ದಾನ ಮತ್ತು ಸತ್ಕಾರ್ಯಗಳು ಅಕ್ಷಯವಾದ ಫಲವನ್ನು ಕೊಡುತ್ತವೆ.ಅಕ್ಷಯ ತೃತೀಯಾದಂದು ದಾನ ಮಾಡಬೇಕು,ಪುಣ್ಯಕಾರ್ಯಗಳನ್ನು ಮಾಡಬೇಕು.ಸಂಪತ್ತನ್ನು ದಾನ ಮಾಡುವುದು ಮತ್ತು ದಾನಗೈದ ಸಂಪತ್ತಿನಿಂದ ಅಕ್ಷಯವಾದ ಪುಣ್ಯ ಇಲ್ಲವೆ ಕೀರ್ತಿಯನ್ನು ಸಂಪಾದಿಸುವುದು ಅಕ್ಷಯ ತೃತೀಯಾದ ಆಚರಣೆಯ ಕಾರಣವೇ ಹೊರತು ಸಂಪತ್ತಿನ ಸಂಗ್ರಹವಲ್ಲ.ಇಂದು ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ದಾನ ಮಾಡಬೇಕು,ನಿರ್ಗತಿಕರಿಗೆ ನೆರವುನೀಡಬೇಕು.ದಾನ ನೀಡುವುದು ಎಂದರೆ ಬಡವರಿಗೆ ಅಕ್ಕಿದಾನ ಮಾಡಬಹುದು,ಅನಾಥ ಮಕ್ಕಳಿಗೆ ಹಾಲು ಸಕ್ಕರೆಯ ದಾನ ನೀಡಬಹುದು.ಬಡವರಿಗೆ ಹಣಕಾಸಿನ ನೆರವು ನೀಡಬಹುದು.ದೇವಸ್ಥಾನಗಳಿಗೆ ಕಾಣಿಕೆ ನೀಡಬಹುದು.ಶಿಷ್ಯರು ತಮ್ಮ ಗುರುಗಳಿಗೆ ತಮ್ಮ ಕೈಲಾದ ದಾನ,ಕೊಡುಗೆ ನೀಡಬಹುದು.ಸಾಧುಸಂತರುಗಳಿಗೆ ದಾನ ನೀಡಿದರೆ ಉತ್ತಮ‌ ಫಲವಿದೆ.

ಈ ದಿನ ಉತ್ತಮ ಆಲೋಚನೆಗಳನ್ನು ಮಾಡಬೇಕು.ಉದಾತ್ತ ಚಿಂತನೆ ಮಾಡಬೇಕು.ನಮ್ಮ ಚಿಂತನೆ,ಆಲೋಚನೆಗಳಿಗೆ ಶಕ್ತಿತುಂಬುವ ದಿನ ಇದಾದ್ದರಿಂದ ಈ ದಿನ ಉದಾರಹೃದಯಿಗಳಾಗಿ,ಹೃದಯವಂತರಾಗಿ ಆಲೋಚಿಸಬೇಕು,ಪರರ ಹಿತಚಿಂತನೆ ಗೈಯಬೇಕು.ಪರರ ಬಗೆಗೆ ಒಳಿತನ್ನು ಚಿಂತಿಸಿದಷ್ಟೂ ನಮಗೇ ಒಳಿತು ಆಗುತ್ತದೆ.ಈದಿನ ಮಾಡುವ ಲೋಕೋಪಕಾರಿ ಆಲೋಚನೆಗಳಿಂದ ನಮಗೆ ಒಳಿತಾದರೆ ಈ ದಿನ ಗೈಯ್ಯುವ ದುರಾಲೋಚನೆಗಳಿಂದ ಬಹಳ ಕೆಡುಕು ಉಂಟಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಅಕ್ಷಯತೃತೀಯಾವು ನಮ್ಮ ಸಂಕಲ್ಪಶಕ್ತಿಯ ಮೇಲೆ ಪ್ರಭಾವ ಬೀರುವ ದಿನವಾಗಿದ್ದರಿಂದ ನಾವು ಸತ್ ಸಂಕಲ್ಪಗಳನ್ನು,ಮಹಾನ್ ಸಂಕಲ್ಪಗಳನ್ನು ಮಾಡಲು ಉತ್ತಮದಿನ.ಜ್ಯೋತಿಷ ಶಾಸ್ತ್ರದಂತೆ ಚಂದ್ರನು ಮನಸ್ಸಿನ ಅಧಿಪತಿಯಾಗಿದ್ದು ರೋಹಿಣಿಯು ಚಂದ್ರನ ಅತ್ಯಂತ ಪ್ರಿಯಪತ್ನಿಯು.ರೋಹಿಣಿ ನಕ್ಷತ್ರದಲ್ಲಿ ಅಕ್ಷಯ ತೃತೀಯಾವು ಸಂಭವಿಸುವುದರಿಂದ ಚಂದ್ರನು ಸಾಧಕರ,ಮಹತ್ವಾಕಾಂಕ್ಷಿಗಳ ಮಹೋನ್ನತ ಧ್ಯೇಯಾದರ್ಶಗಳನ್ನು ಈಡೇರಿಸುತ್ತಾನೆ.ಹಾಗಾಗಿ ಈ ದಿನದಂದು ಮಹತ್ವವಾದ,ಮಹತ್ತರವಾದ ಸಂಕಲ್ಪ ಮಾಡಬೇಕು.ಮಹೋನ್ನತವಾದ ಸಂಕಲ್ಪವು ಅಡೆತಡೆಗಳಿಲ್ಲದೆ ಸಿದ್ಧಿಸುವ ಸಂಕಲ್ಪಸಿದ್ಧಿಯ ದಿನ ಅಕ್ಷಯ ತೃತೀಯ.ನಮಗೆ ಉತ್ತಮಿಕೆಪ್ರಾಪ್ತವಾಗಲಿ,ಉನ್ನತಿಕೆ ಒದಗಿ ಬರಲಿ ಎಂದು ಸಂಕಲ್ಪಿಸುವುದರ ಜೊತೆಗೆ ಲೋಕದ ಸಮಸ್ತರಿಗೂ ಒಳಿತಾಗಲಿ ಎಂದು ಸಂಕಲ್ಪಿಸುವುದೇ ಮಹಾನ್ ಸಂಕಲ್ಪ.ಅಕ್ಷಯ ತೃತೀಯಾದಂದು ಚಿನ್ನ,ಬೆಳ್ಳಿಗಳನ್ನು ಖರೀದಿಸುವ ಬದಲು ಸತ್ಸಂಕಲ್ಪ,ಮಹಾನ್ ಸಂಕಲ್ಪವನ್ನು ಮಾಡಿ ಮಹಾನ್ ವ್ಯಕ್ತಿಗಳಾಗಬೇಕು.

೧೦.೦೫.೨೦೨೪

About The Author