ಮತದಾನ ಪವಿತ್ರವಾದದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ

ವಡಗೇರಾ : ದೇಶದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ ಆಯ್ಕೆಗಾಗಿ  ಮೇ 7.ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡುವಂತೆ  ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವಿಫ್ ಸಮಿತಿಯ ಅಧ್ಯಕ್ಷರಾದ  ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು. ತಾಲೂಕಿನ ಹೈಯ್ಯಾಳ. ಬಿ. ಗ್ರಾಮದಲ್ಲಿ ಹೋಬಳಿ ಮಟ್ಟದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮತದಾನ ಅತ್ಯಂತ ಪವಿತ್ರವಾದದ್ದು. ಸಂವಿಧಾನವು ನಮಗೆ ಮತದಾನದ ಹಕ್ಕನ್ನು ನೀಡಿದೆ. ಯಾರು ಕೂಡಾ ಮತದಾನದಿಂದ ದೂರ ಉಳಿಯದೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಿದರು.
 ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ ಸರ್ಕಾರವು ಮತದಾನದ ಜಾಗೃತಿ ಕುರಿತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿ ಗ್ರಾಮ ಮಟ್ಟದಲ್ಲಿ ಕೂಡ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮತದಾನ ನಮ್ಮ ಪ್ರಮುಖ ಹಕ್ಕು ಅದನ್ನು ಕಡ್ಡಾಯವಾಗಿ ಚಲಾವಣೆ ಮಾಡಬೇಕು. ಯುವಕರೆ ದೇಶದ ಶಕ್ತಿ. ಪ್ರತಿಯೊಬ್ಬರು ಮತದಾನ ಮಾಡುವುದರ ಜೊತೆಗೆ ಮತ್ತೊಬ್ಬರನ್ನು ಕರೆತಂದು ಮತದಾನ ಮಾಡಿಸಿ. ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಕ್ಕು. ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು ಎಂದು ತಮ್ಮ ಹಾಸ್ಯ ಚಟಾಕಿಯ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಿದರು.
 ಗ್ರಾಮದ ಹೈಯಾಳಲಿಂಗೇಶ್ವರ ದೇವಸ್ಥಾನದಿಂದ ಬೈಕ್ ರ್‍ಯಾಲಿ ನಡೆಸಲಾಯಿತು.ಮತದಾನ ಜಾಗೃತಿ ಪೋಸ್ಟರ್ ಹಿಡಿದು ಜಾಗೃತಿ ಘೋಷಣೆಗಳನ್ನು ಹಾಕುವ ಮೂಲಕ ಗ್ರಾಮಸ್ಥರಲ್ಲಿ ಮತದಾನದ ಅರಿವು ಮೂಡಿಸಲಾಯಿತು. ವಿಶೇಷವಾಗಿ ಗ್ರಂಥಾಲಯದ ಸಿಬ್ಬಂದಿಗಳಾದ ಮರೇಪ್ಪ ಕ್ಯಾತ್ನಳ ಹಾಗೂ ಬಸರೆಡ್ಡಿ ರವರು ಬಯಲಾಟದ ಮೂಲಕ ಮತದಾನ ಜಾಗೃತಿ ಮೂಡಿಸಿ ಎಲ್ಲರ ಗಮನ ಸೆಳೆದರು.
 ಮಹಿಳೆಯರಿಂದ ರಂಗೋಲಿ ಸ್ಪರ್ಧೆ ನಿಂಬೆಹಣ್ಣಿನ ಓಟ ಗೋಣಿಚೀಲದ ಓಟ ಹಾಗೂ ಚುನಾವಣೆ ರಾಯಭಾರಿ ಗಳಿಂದ ಹಾಡು ಇನ್ನಿತರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಯಿತು. ಕ್ರೀಡೆಯಲ್ಲಿ ಗೆದ್ದವರಿಗೆ ಸೂಕ್ತ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು , ಜಿಲ್ಲಾ ವಿಕಲಚೇತನ ಅಧಿಕಾರಿಗಳು, ಸಿಡಿಪಿಓ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಕ್ರೀಡ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಪಿಡಿಓ,ಡಿಇಓ, ಗ್ರಂಥಾಲಯ ಮೇಲ್ವಿಚಾರಕರು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನೆರೇಗಾ ಯೋಜನೆ ಕಾಯಕ ಬಂದುಗಳು ಹಾಗೂ ಇನ್ನಿತರ ಸಿಬ್ಬಂದಿ ವರ್ಗದವರು  ಗ್ರಾಮಸ್ಥರು ಉಪಸ್ಥಿತರಿದ್ದರು.

About The Author