ವಲಸೆ ಹೊಗದೆ ನಿಮ್ಮೂರಲ್ಲೆ ನರೇಗಾದಡಿ ಕೂಲಿ ಕೆಲಸ ಮಾಡಿ : ರಾಥೋಡ್

ಶಹಾಪುರ : ಬೇಸಿಗೆ ಬರಗಾಲದ ಹಿನ್ನಲೆ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಕುಟುಂಬ ನಿರ್ವಹಣೆ ಮಾಡಲು ಕೂಲಿ ಕೆಲಸಕ್ಕಾಗಿ ದೂರದ ನಗರ-ಪಟ್ಟಣಗಳಿಗೆ ವಲಸೆ ಹೊಗದೆ ನರೇಗಾ ಯೋಜನೆಯಡಿ ನಿಮ್ಮೂರಲ್ಲೆ ಕೂಲಿ ಕೆಲಸ ಮಾಡಿ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಬಿಎಸ್ ರಾಠೋಡ್ ಕೂಲಿಕಾರರಿಗೆ ಮನವಿ ಮಾಡಿದರು.
 ತಾಲೂಕಿನ ಹತ್ತಿಗೂಡುರು ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿಯ, ದುಡಿಮೆ ಖಾತ್ರಿ ಎರಡು ತಿಂಗಳ ವಿಶೇಷ ಅಭಿಯಾನದಡಿ ಪ್ರಗತಿಯಲ್ಲಿದ್ದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿಕಾರರ ಸಮಸ್ಯೆ ಆಲಿಸಿ ಮಾತನಾಡಿದರು.ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದ್ದು, ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ 34,900 ರೂ.ಗಳ ಕೂಲಿ ಹಣ ಪಡೆದುಕೊಳ್ಳಬಹುದು ಎಂದರು.
ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳು ಪೂರ್ಣಗೊಂಡಿದ್ದು, ಕೃಷಿ ಕೂಲಿಕಾರರಿಗೆ ಕೆಲಸವಿಲ್ಲದೆ, ಜೀವನ ನಿರ್ವಹಣೆ ಮಾಡಲು ಕೆಲಸಕ್ಕಾಗಿ ದೂರದ ನಗರಪಟ್ಟಣಗಳಿಗೆ ವಲಸೆ ಹೊಗುವದನ್ನು ತಡೆಯಲು ಗ್ರಾಮ ಪಂಚಾಯಿತಿಗಳಿಂದ ನರೇಗಾ ಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸ ನೀಡುತ್ತಿದ್ದು, ಕೂಲಿಕಾರರು ಅರ್ಜಿ ನಮೂನೆ-6ರಡಿ ಗ್ರಾಮ ಪಂಚಾಯಿತಿಗೆ ಕೂಲಿ ಬೇಡಿಕೆ ಸಲ್ಲಿಸಿ, ಯೋಜನೆಯ ಲಾಭ ಪಡೆದುಕೊಳ್ಳಿ ಎಂದು ಹೇಳಿದರು.
ವಿಶೇಷಚೇತನರು, ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರಿಕರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ ದುರ್ಬಲ ವರ್ಗಗಳಿಗೆ ಆಧ್ಯತೆ ಮೇರೆಗೆ ಕೂಲಿ ಕೆಲಸ ನೀಡಲಾಗುತ್ತಿದೆ.ಬೇಸಿಗೆ ತಾಪಮಾನ ಹೆಚ್ಚಿದ್ದು, ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ನರೇಗಾ ಕಾಮಗಾರಿ ಕೆಲಸ ಮಾಡುವ ಪ್ರಮಾಣದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಶೇ.30 ಹಾಗೂ ಜೂನ್ ತಿಂಗಳಲ್ಲಿ ಶೇ.20ರಷ್ಟು ರಿಯಾಯ್ತಿ ನೀಡಿದ್ದು, ರಿಯಾಯ್ತಿಯ ಸದುಪಯೋಗ ಪಡೆದು ಕೆಲಸ ಮಾಡಿ ಎಂದು ಕೂಲಿಕಾರರಿಗೆ ಸಲಹೆ ನೀಡಿದರು.
 ಪಿಡಿಒ ಅಕ್ಕನಾಗಮ್ಮ, ಜಿಲ್ಲಾ ಪಂಚಾಯತ ಎಡಿಪಿಸಿ ಬನ್ನಪ್ಪ ಬೈಟಪುಲ್ಲಿ, ತಾಂತ್ರಿಕ ಸಂಯೋಜಕ ಮುಜಾಮಿಲ್, ಐಇಸಿ ಸಂಯೋಜಕ ಬಸಪ್ಪ, ತಾಂತ್ರಿಕ ಸಹಾಯಕರಾದ ಪವನಕುಮಾರ, ಮರೆಪ್ಪ ದೊರೆ, ಗ್ರಾಮ ಕಾಯಕ ಮಿತ್ರ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ನರೇಗಾ ಕೂಲಿಕಾರರು ಇದ್ದರು.