ಶಿವಭಕ್ತರಿಗೆ ಎಲ್ಲ ದಿನಗಳು ಶುಭದಿನಗಳೆ !

ಬಸವೋಪನಿಷತ್ತು ೪೩ : ಶಿವಭಕ್ತರಿಗೆ ಎಲ್ಲ ದಿನಗಳು ಶುಭದಿನಗಳೆ !—ಮುಕ್ಕಣ್ಣ ಕರಿಗಾರ

ಎಮ್ಮವರು ಬೆಸಗೊಂಡರೆ ಶುಭಲಗ್ನವರನ್ನಿರಯ್ಯಾ ;
ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ ;
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ ;
ನಾಳಿನದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ ;
ಕೂಡಲ ಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ !

ಬಸವಣ್ಣನವರು ಈ ವಚನದಲ್ಲಿ ಜ್ಯೋತಿಷಶಾಸ್ತ್ರದ ಪಾರಮ್ಯವನ್ನು,ಪ್ರಮಾಣವನ್ನು ಅಲ್ಲಗಳೆದು ಶಿವಭಕ್ತರು ಜ್ಯೋತಿಷವಾದಿ ಶಾಸ್ತ್ರಗಳನ್ನು ನಂಬದೆ ಶಿವನಲ್ಲಿ ಅಚಲ ವಿಶ್ವಾಸವನ್ನಿಟ್ಟು ನಡೆಯಬೇಕೆಂದು ತಿಳಿಸಿದ್ದಾರೆ.ಶಿವಶರಣರು ಅಪ್ಪಣೆ ಕೊಟ್ಟ ಅಥವಾ ಸೂಚನೆ ಕೊಟ್ಟರೆ ಆಕ್ಷಣ,ಆದಿನವೇ ಶುಭಮುಹೂರ್ತವಾಗುತ್ತದೆ.ಮದುವೆಗಾಗಿ ಜ್ಯೋತಿಷಿಗಳು ಬರೆದುಕೊಟ್ಟ ಮುಹೂರ್ತವನ್ನು ನೋಡದೆ ಶಿವಶರಣರ ಬಾಯಿಂದ ಬಂದ ಮಾತಿನಂತೆ ನಡೆದರೆ,ಮದುವೆಯ ಮುಹೂರ್ತ ನಿಗದಿಪಡಿಸಿದರೆ ಆ ದಿನವೇ ರಾಶಿಕೂಟ,ಮದುವೆಯ ಅನುಬಂಧದ ಋಣಕೂಟ,ಚಂದ್ರಬಲ ತಾರಾಬಲಗಳೊದಗಿ ಬರುತ್ತವೆ.ನಾಳೆ ಎಂದು ಕಾಯದೆ ಇಂದಿನ ದಿನವೇ ಶುಭಶೋಭನಾದಿ ಕಾರ್ಯಗಳನ್ನು ಮಾಡಬೇಕು.ಶಿವನನ್ನು ಪೂಜಿಸುವ ಶಿವಭಕ್ತರು ಜ್ಯೋತಿಷವಾದಿ ಶಾಸ್ತ್ರಗಳ ಹಂಗಿಗೆ ಒಳಗಾಗಬಾರದು.ಬಸವಣ್ಣನವರು ಈ ವಚನದಲ್ಲಿ ಮದುವೆಯಾಗುವುದು ಜನುಮ ಜನುಮಗಳ ಋಣಾನುಬಂಧ ಎನ್ನುವ ನಂಬಿಕೆಯನ್ನು ಕೂಡ ಅಲ್ಲಗಳೆದಿದ್ದಾರೆ.ಸತ್ತಬಳಿಕ ಶವವಾಗಿ ಮಣ್ಣುಪಾಲಾಗುವ ದೇಹದ ಸಂಬಂಧಗಳು ಈ ದೇಹದೊಂದಿಗೆ ಕೊನೆಯಾಗುತ್ತವೆ.ಅವಿನಾಶಿಯಾದ ಆತ್ಮನಿಗೆ ಯಾವ ಸಂಬಂಧಗಳೂ ಇಲ್ಲವಾದ್ದರಿಂದ ಹಿಂದಿನ ಜನ್ಮದ ಋಣಾನುಬಂಧದಿಂದ ಗಂಡಹೆಂಡಿರಾಗುತ್ತಾರೆ ಎನ್ನುವುದು ಸುಳ್ಳು ಸಂಗತಿ ಎನ್ನುವ ಅಭಿಪ್ರಾಯವೂ ಈ ವಚನಾಂತರ್ಗತವಾಗಿದೆ.

ಸ್ವಸ್ಥಸಮಾಜವನ್ನು ,ಶಿವಸಮಾಜವನ್ನು ಕಟ್ಟಬಯಸಿದ್ದ ಬಸವಣ್ಣನವರು ಸಮಾಜಕ್ಕೆ ಕಂಟಕಪ್ರಾಯವಾಗಿದ್ದ ಅನಿಷ್ಟಗಳನ್ನೆಲ್ಲ ನಿವಾರಿಸಲು ಪ್ರಯತ್ನಿಸಿದರು.ಜ್ಯೋತಿಷವು ಅಂತಹ ಅನಿಷ್ಟಗಳಲ್ಲಿ ಒಂದಾಗಿದ್ದು ಅದು ಜನರನ್ನು ದುರ್ಬಲರನ್ನಾಗಿಸುತ್ತದೆ.ಜ್ಯೋತಿಷಿಗಳು ಶುಭದಿನ ಅಶುಭದಿನ,ಶುಭಘಳಿಗೆ ಅಶುಭ ಘಳಿಗೆ ,ಆ ಗ್ರಹದೋಷ– ಈ ಗ್ರಹದೋಷ ಎಂದು ಸುಳ್ಳು ಸುಳ್ಳೇ ಏನನ್ನೋ ಗಳಹುತ್ತ ಜನರನ್ನು ಭಯಭ್ರಾಂತರನ್ನಾಗಿಸುತ್ತಾರೆ.ಅದರಲ್ಲೂ ಮದುವೆಯ ಕಾರ್ಯಕ್ಕಂತೂ ಜ್ಯೋತಿಷರು,ಶಾಸ್ತ್ರಿಗಳನ್ನು ಕೇಳಿಯೇ ಮುಂದಡಿ ಇಡುವಂತಹ ವಿಪರೀತ ಪರಿಸ್ಥಿತಿ ಏರ್ಪಟ್ಟಿದೆ.ಪರಶಿವನ ಸಂಕಲ್ಪದಂತೆ ಸೃಷ್ಟಿಕೊಂಡ ವಿಶ್ವ,ಬ್ರಹ್ಮಾಂಡದಲ್ಲಿ ಎಲ್ಲವೂ ಪರಶಿವನ ನಿಯತಿನಿಯಮಕ್ಕನುಗುಣವಾಗಿ ನಡೆಯುತ್ತಿರಬೇಕಾದರೆ ಗ್ರಹ ನಕ್ಷತ್ರಗಳು ಪರಶಿವನಿಗಿಂತ ದೊಡ್ಡವಾಗಬಲ್ಲವೆ ? ದಡ್ಡ ಜ್ಯೋತಿಷಿಗಳು ಹೊಟ್ಟೆಹೊರೆಯಲು ಆ ಗ್ರಹಕಾಟ,ಈ ಗ್ರಹಕಾಟ ಎಂದು ಬೊಗಳುತ್ತಾರೆ.ಎಲ್ಲ ಗ್ರಹಗಳಿಗೂ ಒಡೆಯನಾದ ಗ್ರಹೇಶ್ವರ ಶಿವನನ್ನು ಪೂಜಿಸಿದರೆ ಸಕಲದೋಷಗಳು ನಿವಾರಣೆಯಾಗುತ್ತವೆ.ಶಿವನು ತನ್ನ ಭಕ್ತರ ಮೂಲಕ ಜಗದೋದ್ಧಾರದ ಲೀಲೆಯನ್ನಾಡುತ್ತಿರುವುದರಿಂದ ಶಿವಶರಣರ ನುಡಿಯೇ ಶಿವನುಡಿಯಾಗುತ್ತದೆ,ಶಿವಶರಣರ ನಡೆಯೇ ಶಿವನಡೆಯಾಗುತ್ತದೆ.ಶಿವಶರಣರು ಈ ದಿನ ಶುಭದಿನ ಎಂದರೆ ಆ ದಿನಶುಭದಿನವೇ ಆಗಿ ಪರಿಣಮಿಸುವುದರಿಂದ ಭಕ್ತರು ಶಿವಶರಣರು ಸೂಚಿಸಿದ ದಿನದಂದು ಮದುವೆ ಮಾಡಿದರೆ ಸಕಲ ಸನ್ಮಂಗಳಗಳುಂಟಾಗುತ್ತವೆ.ಜ್ಯೋತಿಷಿಗಳು ವಿವಾಹಕಾರ್ಯಕ್ಕಾಗಿ ಶುಭಮುಹೂರ್ತ ಎಂದು ರಾಶಿಕೂಟ,ಗಣಕೂಟ,ಚಂದ್ರಬಲ ತಾರಾಬಲಗಳಿರುವ ಒಂದು ದಿನವನ್ನು ಗೊತ್ತುಮಾಡುತ್ತಾರೆ.ಮೇಷವಾದಿ ಹನ್ನೆರಡು ರಾಶಿಗಳ ಫಲ ದೇವಗಣ,ಮನುಷ್ಯಗಣ ಮತ್ತು ರಾಕ್ಷಸಗಣವೆಂಬ ಗಣತ್ರಯಗಳನ್ನು ಎಣಿಸಿ , ವಿವಾಹಕ್ಕೆ ಸಂಬಂಧಿಸಿದ ಹನ್ನೆರಡು ಕೂಟಗಳಲ್ಲಿ ಒಂದಾದ ಗಣಕೂಟವನ್ನು ನಿಷ್ಕರಿಸುತ್ತಾರೆ.ನಂತರ ಚಂದ್ರ ಮತ್ತು ತಾರಾಬಲವನ್ನು ನೋಡುತ್ತಾರೆ.ತಾರಾಕೂಟವೆಂದರೆ ವಧುವರರ ನಕ್ಷತ್ರಗಳಿಗೆ ಇರಬೇಕಾದ ಒಂದುಕೂಟ.ಚಂದ್ರನ ಉತ್ತಮದೆಸೆಯೇ ಚಂದ್ರಬಲ.ಇಂತಹ ಸಂಗತಿಗಳನ್ನಾಧರಿಸಿ ಜ್ಯೋತಿಷಿಗಳು ನಿರ್ಧರಿಸುವ ವಿವಾಹಮುಹೂರ್ತವು ಶುಭಲಗ್ನವೆನ್ನಿಸಿಕೊಳ್ಳುತ್ತದೆ.ಆದರೆ ಜ್ಯೋತಿಷಿಗಳು ಶುಭಲಗ್ನವೆಂದು ನಿರ್ಧರಿಸಿದ ದಿನ,ಮುಹೂರ್ತದಲ್ಲಿ ಮದುವೆಯಾದವರಿಗೆಲ್ಲ ಒಳ್ಳೆಯದು ಆಗಿದೆಯೆ ? ಜ್ಯೋತಿಷರು ಬರೆದುಕೊಟ್ಟ ಮುಹೂರ್ತದಲ್ಲೇ ಮದುವೆಯಾದ ಎಷ್ಟೋ ಜನ ದಂಪತಿಗಳು ವಿಚ್ಛೇದನ ಪಡೆದಿದ್ದಾರಲ್ಲ ! ಜ್ಯೋತಿಷಿಗಳ ನಿರ್ಣಯದ ಶುಭದಿನದಲ್ಲೇ ಮದುವೆಯಾದವರು ತುಂಬುದಾಂಪತ್ಯಜೀವನ ನಡೆಸದೆ ಅಕಾಲಮೃತ್ಯುವಿಗೆ ಈಡಾಗಿದ್ದಾರಲ್ಲ ! ಜ್ಯೋತಿಷಿಗಳು ನಿರ್ಧರಿಸಿದ್ದ ಶುಭದಿನ,ಶುಭಗಳಿಗೆಯಲ್ಲಿ ಮದುವೆಯಾದ ಎಷ್ಟೋ ಜನ ಮಕ್ಕಳು ಆಗದೆ ಸಂತಾನಭಾಗ್ಯದ ಕೊರತೆಯಿಂದ ಪರಿತಪಿಸುತ್ತಿದ್ದಾರಲ್ಲ ! ಒಂದು ವೇಳೆ ಜ್ಯೋತಿಷಿಗಳು ಹೇಳಿದ ಮುಹೂರ್ತ ನಿಜವಾಗಿಯೂ ಶುಭಮುಹೂರ್ತವೇ ಆಗಿದ್ದರೆ ಇಂತಹ ಅನಿಷ್ಟಕಾರಕ ಪ್ರಸಂಗಗಳು ಜರುಗಬಾರದಲ್ಲ.ಇದೆಲ್ಲ ಮನುಷ್ಯರ ಭ್ರಮೆ ! ನಾವು ನಂಬಬೇಕಾದದ್ದು ಸರ್ವಶಕ್ತನಾದ ಪರಮಾತ್ಮನನ್ನೇ ಹೊರತು ಹೊಟ್ಟೆಪಾಡಿನ ಜ್ಯೋತಿಷಿ,ಶಾಸ್ತ್ರಿಗಳನ್ನಲ್ಲ.ಶಿವನನ್ನು ಸ್ಮರಿಸುತ್ತ ಮಾಡುವ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ.ಶಿವಶರಣರು ನುಡಿದ ದಿನವೇ ಶುಭದಿನವಾಗುತ್ತದೆ.ನಾಳೆಗೆ ಎಂದು ಕಾಯದೆ ಎಲ್ಲ ದಿನಗಳು ಶುಭದಿನಗಳೆ ಎಂದು ತಿಳಿದು ಶಿವನನ್ನು ಪೂಜಿಸಿ ಎಲ್ಲದಿನಗಳಲ್ಲಿಯೂ ಮದುವೆಯಾದಿ ಮಂಗಲಕಾರ್ಯಗಳನ್ನು ಮಾಡಬಹುದು.ಜ್ಯೋತಿಷಿಗಳು ನಿರ್ಧರಿಸುವ ಚಂದ್ರಬಲ ತಾರಾಬಲಕ್ಕೆ ಏನಾದರೂ ಅರ್ಥವಿದೆಯೆ ? ತಾರೆಯು ಬೃಹಸ್ಪತಿಯ ಪತ್ನಿಯು.ಚಂದ್ರನು ಗುರುಪತ್ನಿಯನ್ನು ಮೋಹಿಸಿದ.ಇಂತಹ ವ್ಯಭಿಚಾರಿಗಳ ಬಲವು ನೂತನವಧುವರರಿಗೆ ಬೇಕೆ ? ಇದನ್ನು ವಿಚಾರಿಸದಷ್ಟು ಮತಿಮೂಢರಾಗಿದ್ದಾರೆ ಜನರು.

ವಚನದ ಉತ್ತರಾರ್ಧದಲ್ಲಿ ಬಸವಣ್ಣನವರು ‘ ನಾಳೆಯ ದಿನಕ್ಕಿಂತ ಇಂದಿನ ದಿನವೇ ಲೇಸು ‘ ಮತ್ತು ‘ ಕೂಡಲ ಸಂಗಮದೇವನನ್ನು ಪೂಜಿಸಿದ ಫಲ’ ಎಂದಿರುವ ಸಂಗತಿಯನ್ನು ಗಮನಿಸಬೇಕು.ನಾಳೆಗಾಗಿ ಕಾಯಬಾರದು.ನಾಳೆ ಎಂದು ಕಾಯುವ ಮನುಷ್ಯ ನಾಳೆಯವರೆಗೆ ಬದುಕುವ ಖಾತ್ರಿ ಇದೆಯೆ ? ಮನುಷ್ಯ ಜೀವನ ಯಾವಾಗ,ಏನೋ ಯಾರು ಬಲ್ಲರು ? ಭವಿಷತ್ತಿಗಾಗಿ ಕಾಯದೆ ವರ್ತಮಾನದಲ್ಲಿ ಆನಂದದಿಂದ ಬದುಕುವುದೇ ಜ್ಞಾನಿಗಳ ಲಕ್ಷಣ.ಶಿವನು ಪ್ರಕೃತಿಪತಿಯಾದುದರಿಂದ ಶಿವೋಪಾಸಕರು ಪ್ರಾಕೃತಿಕ ಸಂಗತಿಗಳಿಗೆ,ಶಾಸ್ತ್ರಸಾಹಿತ್ಯಕ್ಕೆ ಬೆಲೆ ಕೊಡಬಾರದು.ಶಿವನಾಮವೇ ಅಶುಭನಿವಾರಕನಾಮವಾಗಿದ್ದು ಶಿವಶಿವ ಎನ್ನುತ್ತ ,ಶಿವನನ್ನು ಪೂಜಿಸುತ್ತ ಎಲ್ಲ ದಿನಗಳಲ್ಲಿಯೂ ಶುಭ ಕಾರ್ಯಗಳನ್ನು ಮಾಡಬಹುದು.ಶಾಪಗ್ರಸ್ತನಾದ ಚಂದ್ರನನ್ನು ಶಿವನೇ ಉದ್ಧರಿಸಿರುವನು.ದಕ್ಷನು ತನ್ನ ಇಪ್ಪತ್ತೇಳು ಜನ ಹೆಣ್ಣುಮಕ್ಕಳನ್ನು ಚಂದ್ರನಿಗೆ ಮದುವೆ ಮಾಡಿಕೊಡುವನು.ಚಂದ್ರನು ಇಪ್ಪತ್ತೇಳು ಜನ ದಕ್ಷಪುತ್ರಿಯರಲ್ಲಿ ರೋಹಿಣಿಯಲ್ಲಿ ಮಾತ್ರ ಅನುರಕ್ತನಾಗಿ ಉಳಿದ ಇಪ್ಪತ್ತಾರು ಜನರನ್ನು ಕಡೆಗಣಿಸುವನು.ಪುತ್ರಿಯರ ದೂರನ್ನಾಲಿಸಿದ ದಕ್ಷನು ಸೌಂದರ್ಯಮದದಿಂದ ಉಬ್ಬಿಕೊಬ್ಬಿದ ಚಂದ್ರನನ್ನು ಕುಷ್ಠರೋಗಿಯಾಗುವಂತೆ ಶಪಿಸುವನು.ಕುಷ್ಠರೋಗಿಯಾಗಿ,ಕಳೆಗುಂದಿ ದುಃಖಕ್ಕೊಳಗಾದ ಚಂದ್ರನು ದೇವತೆಗಳ ಸಲಹೆಯಂತೆ ಸೌರಾಷ್ಟ್ರದಲ್ಲಿ ಶಿವನನ್ನು ಪೂಜಿಸಿ ಶಾಪಮುಕ್ತನಾಗುವನು.ಶಿವನು ಚಂದ್ರನನ್ನು ತನ್ನ ತಲೆಯಲ್ಲಿ ಧರಿಸುವ ಮೂಲಕ ಚಂದ್ರನನ್ನು ವೃದ್ಧಿ ಕ್ಷಯಗಳುಳ್ಳವನಾಗುವಂತೆ ಹರಸಿ ಚಂದ್ರಶೇಖರ ಲೀಲೆಯನ್ನು ಮೆರೆಯುವನು.ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೌರಾಷ್ಟ್ರಸೋಮನಾಥ ಜ್ಯೋತಿರ್ಲಿಂಗವು ಚಂದ್ರನನ್ನು ಉದ್ಧರಿಸಿದ ಶಿವಲೀಲೆಯು.ಚಂದ್ರನನ್ನು ಮೋಹಿಸಿದ ತಪ್ಪಿಗಾಗಿ ಗುರುವಿನ ಶಾಪಪೀಡಿತಳಾದ ತಾರೆಯು ಶಿವನನ್ನು ಪೂಜಿಸಿ ಶಾಪಮುಕ್ತಳಾಗುವಳು.ಚಂದ್ರ ತಾರೆಯರೇ ತಮಗೆ ಬಂದೊದಗಿದ ಶಾಪ, ದುಸ್ಥಿತಿಯಿಂದ ಪಾರಾಗಲು ಶಿವನ ಮೊರೆಹೋಗಿರುವಾಗ ಶಿವಭಕ್ತರು ಜ್ಯೋತಿಷಿಗಳ ಮಾತುಗಳನ್ನು ನಂಬಬಹುದೆ ? ಶಿವನನ್ನು ಪೂಜಿಸಿದರೆ ಅಶುಭವು ಶುಭವಾಗಿ ಪರಿವರ್ತನೆಯಾಗುತ್ತದೆ,ಅಮಂಗಳವು ಮಂಗಳವಾಗಿ ಪರಿಣಮಿಸುತ್ತದೆ,ಅನಿಷ್ಟವು ಇಷ್ಟವಾಗಿ ಮಾರ್ಪಡುತ್ತದೆ.

೧೫.೦೨.೨೦೨೪

About The Author