ಭೋಗ- ಮೋಕ್ಷಪ್ರದವಾದ ಶಿವಮಂತ್ರಾನುಷ್ಠಾನದಿಂದ ಸರ್ವವೂ ಸಾಧ್ಯ

ಬಸವೋಪನಿಷತ್ತು ೧೨ : ಭೋಗ- ಮೋಕ್ಷಪ್ರದವಾದ ಶಿವಮಂತ್ರಾನುಷ್ಠಾನದಿಂದ ಸರ್ವವೂ ಸಾಧ್ಯ : ಮುಕ್ಕಣ್ಣ ಕರಿಗಾರ

ವಶ್ಯವ ಬಲ್ಲೆವೆಂದೆಂಬಿರಯ್ಯಾ–
ಬುದ್ಧಿಯರಿಯದ ಮನುಜರು ಕೇಳಿರಯ್ಯಾ ;
ವಶ್ಯವಾವುದೆಂದರಿಯದೆ
ಮರುಳುಗೊಂಬಿರೆಲೆ ಗಾವಿಲ ಮನುಜರಿರಾ !
‘ ಓಂ ನಮಃ ಶಿವಾಯ’– ಎಂಬ ಮಂತ್ರ ಸರ್ವಜನ ವಶ್ಯ
ಕೂಡಲಸಂಗಮದೇವಾ.

ಶಿವಭಕ್ತಿಯನ್ನಾಚರಿಸದ,ಶಿವಮಂತ್ರ ಮಹಿಮೆಯನ್ನರಿಯದ ಮೂಢ ಜನರು ತಾಂತ್ರಿಕಸಿದ್ಧಿಗಳನ್ನು ವಶಮಾಡಿಕೊಂಡು ಹಾಳಾಗುತ್ತಿರುವುದನ್ನು ವಿಡಂಬಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ.ತಾಂತ್ರಿಕ ಸಾಧಕರುಗಳು ವಶೀಕರಣ ವಿದ್ಯೆಯಲ್ಲಿ ಸಿದ್ಧಿಯನ್ನು ಪಡೆದಿದ್ದೇವೆ,ಎಂತಹವರನ್ನಾದರೂ ಸಮ್ಮೋಹಿನಿಗೊಳಿಸಬಲ್ಲೆವು ಎಂದು ಕೊಚ್ಚಿಕೊಳ್ಳುತ್ತಾರೆ.ಇದು ಮರುಳುತನವಲ್ಲದೆ ಸದಾಚಾರವಲ್ಲ.’ ಓಂ ನಮಃಶಿವಾಯ’ ಮಂತ್ರ ಜಪ, ತಪದಿಂದ ಕೆಲವರನ್ನಷ್ಟೇ ಏಕೆ,ಇಷ್ಟಪಟ್ಟ ಸ್ತ್ರೀಯರನ್ನಷ್ಟೇ ಏಕೆ, ಸರ್ವಜನರನ್ನೂ ಇಡೀ ಜಗತ್ತನ್ನೇ ವಶೀಕರಿಸಿಕೊಳ್ಳಬಹುದಾದ್ದರಿಂದ ವಶೀಕರಣವಾದಿ ತಾಂತ್ರಿಕ ವಿದ್ಯೆಗಳಿಗೆ ಮನಸೋತು,ಅದರಲ್ಲೇ ಸಿಕ್ಕಿಬೀಳದೆ ಸರ್ವಾರ್ಥ ಸಾಧಕವಾದ ‘ ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸುತ್ತಿರಬೇಕು ಎನ್ನುತ್ತಾರೆ ಬಸವಣ್ಣನವರು.

ಭಾರತದಲ್ಲಿ ಶುದ್ಧವಿದ್ಯೆಯಾದ ಅಧ್ಯಾತ್ಮವಿದ್ಯೆಯು ಇರುವಂತೆಯೇ ಅಶುದ್ಧ ಇಲ್ಲವೆ ಮಲಿನ ವಿದ್ಯೆಯಾದ ತಾಂತ್ರಿಕ ವಿದ್ಯೆಯೂ ಇದೆ.ತಾಂತ್ರಿಕ ವಿದ್ಯೆಯು ಬಹುಬೇಗನೆ ಫಲಕೊಡುವುದರಿಂದ ದೀರ್ಘಕಾಲ ತಪಸ್ಸು,ಧ್ಯಾನಗಳನ್ನಾಚರಿಸಲು ಆಗದ ತಾಮಸಪ್ರವೃತ್ತಿಯ ಜನರು ತಾಂತ್ರಿಕ ಸಿದ್ಧಿಗಳ ಮೊರೆಹೋಗುತ್ತಾರೆ.ತಾಂತ್ರಿಕ ವಿದ್ಯೆಯು ಕ್ಷುದ್ರವಿದ್ಯೆಯಾಗಿದ್ದು ಅದರ ಸಾಧನೆಯಿಂದ ಕೆಲವು ಕ್ಷುದ್ರಸಿದ್ಧಿಗಳನ್ನು ಸಂಪಾದಿಸಿಕೊಳ್ಳುವರು.ವಶೀಕರಣವು ಅಂತಹ ತಾಂತ್ರಿಕ ಸಿದ್ಧಿಗಳಲ್ಲಿ ಒಂದಾಗಿದ್ದು ವಶೀಕರಣಸಿದ್ಧಿ ಪಡೆದ ತಾಂತ್ರಿಕನು ಜನರನ್ನು ತನ್ನತ್ತ ಆಕರ್ಷಿಸಬಲ್ಲ,ಜನರಿಂದ ತನ್ನ ಕೆಲಸ – ಕಾರ್ಯಗಳನ್ನು ಮಾಡಿಸಿಕೊಳ್ಳಬಲ್ಲ. ವಶೀಕರಣ ವಿದ್ಯೆಯ ಬಲದಿಂದ ಪರಸ್ತ್ರೀಯರನ್ನು ವಶೀಕರಿಸಿಕೊಂಡು ಅವರ ಮನೆಗಳನ್ನು ಹಾಳು ಮಾಡುವ ಕ್ಷುಲ್ಲಕ ವ್ಯಕ್ತಿಗಳನೇಕರಿದ್ದಾರೆ.ಶಾರದಾ ತಿಲಕ,ಉಡ್ಡೀಶ ತಂತ್ರ,ಮಂತ್ರ ಮಹೋದಧಿಗಳಂತಹ ತಾಂತ್ರಿಕ ಗ್ರಂಥಗಳು ಷಟ್ಕರ್ಮಗಳೆಂಬ ಆರು ಬಗೆಯ ತಾಂತ್ರಿಕ ಸಿದ್ಧಿಗಳ ಬಗ್ಗೆ ಹೇಳುತ್ತವೆ ;
” ಶಾಂತಿವಶ್ಯಸ್ತಂಭನಾನಿ ವಿದ್ವೇಷೋಚ್ಛಾಟಾನೀ ತಥಾ /
ಮಾರಣಾಂತಾನಿ ಶಂಸನ್ತಿ ಷಟ್ ಕರ್ಮಾಣಿ ಮನೀಷಣಃ //
ಅಂದರೆ ಶಾಂತಿಕರ್ಮ,ವಶೀಕರಣ,ಸ್ತಂಭನ,ವಿದ್ವೇಷಣ,ಉಚ್ಚಾಟನ ಮತ್ತು ಮಾರಣ ಇವೇ ತಾಂತ್ರಿಕ ಷಟ್ಕರ್ಮಪದ್ಧತಿಯ ಆರು ಕ್ರಿಯೆಗಳು,ಕರ್ಮಗಳು.

ಇಂತಹ‌ ಕ್ಷುದ್ರವಿದ್ಯಾ ಸಾಧಕರು ಗಾವಿಲರಿದ್ದಂತೆ ಅಂದರೆ ಕುರುಡರು ಇದ್ದಂತೆ.ಕುರುಡನಿಗೆ ಬೆಳಕು ಯಾವುದು ಕತ್ತಲೆ ಯಾವುದು ಎಂದು ಗೊತ್ತಾಗುವುದಿಲ್ಲ.ಅವನು ಎಲ್ಲೆಲ್ಲಿಯೂ ಕತ್ತಲೆಯನ್ನೇ ಕಾಣುತ್ತಾನೆ.ಬೆಳಕು ಎಂದರೆ ಏನು ಎಂದೇ ಗೊತ್ತಿಲ್ಲದ ಕುರುಡನು ಬೆಳಕನ್ನು ಕಾಣಲಾರ,ಬೆಳಕಿನ ಅರ್ಥವನ್ನು ಗ್ರಹಿಸಲಾರನು.’ಓಂ ನಮಃ ಶಿವಾಯ’ ಎನ್ನುವ ಶಿವಷಡಕ್ಷರಿ ಮಂತ್ರವನ್ನು ಅನುಗಾಲ ಜಪಿಸುತ್ತ ಶಿವಾನುಗ್ರಹವನ್ನುಣ್ಣಬಹುದು,ಸರ್ವಜಗತ್ತನೇ ವಶೀಕರಿಸಿ ತನ್ನ ಸ್ವಾಧೀನದಲ್ಲಿರಿಸಿಕೊಳ್ಳಬಹುದು.

ಬಸವಣ್ಣನವರು’ ಓಂ ನಮಃ ಶಿವಾಯ’ ಎನ್ನುವ ಶಿವಷಡಕ್ಷರಿ ಮಂತ್ರದ ಮಹತ್ವವನ್ನು ಸಾರಿದ್ದಾರೆ ಈ ವಚನದಲ್ಲಿ.ಕೆಡುಕಿಗೆ ಕಾರಣವಾಗುವ ತಾಂತ್ರಿಕ ಸಿದ್ಧಿಗಳಿಗಂಟಿಕೊಳ್ಳದೆ ಶಿವನಾಮ ಸ್ಮರಣೆ ಮಾಡುತ್ತ,ಓಂ ನಮಃ ಶಿವಾಯ ಎನ್ನುವ ಶಿವ ಷಡಕ್ಷರಿಯನ್ನು ಜಪಿಸುತ್ತ ಸರ್ವಕಾರ್ಯಸಿದ್ಧಿಯನ್ನು ಪಡೆಯಬಹುದು,ಸರ್ವಜನರನ್ನೂ ವಶೀಕರಣ ಮಾಡಿಕೊಳ್ಳಬಹುದು.ತಾಂತ್ರಿಕ ಮಂತ್ರಗಳು ಕೊಡುವ ಫಲವು ಅತ್ಯಲ್ಪ ; ಆದರೆ ಶಿವನಾಮವು ಕೊಡುವ ಫಲಮಹಿಮೆಯು ಬಣ್ಣಿಸಲಸದಳವಾದುದು.ಶಿವ ಶಬ್ದದಲ್ಲಿಯೇ ವಶೀಕರಣತತ್ತ್ವವಿದೆ.’ಶಿವ’ ಶಬ್ದವನ್ನು ತಿರುಗು ಮುರುಗಾಗಿ ಉಚ್ಚರಿಸಿದರೆ ‘ ವಶಿ’ ಎಂದಾಗುತ್ತದೆ.ಜಗತ್ತು ಯಾರಲ್ಲಿ ವಾಸಮಾಡಿದೆಯೋ ಆ ಶಿವನೇ ಶಿವಮಂತ್ರದ ಮೂಲವಾಗಿದ್ದಾನೆ.ಅಂದಬಳಿಕ ಶಿವ ಷಡಕ್ಷರಿ ಮಂತ್ರಾನುಷ್ಠಾನ ಸಾಧನೆಯಿಂದ ದೊರಕದ ಫಲ ಪದವಿಗಳುಂಟೆ ? ಈ ವಚನದಲ್ಲಿ ಇನ್ನೊಂದು ಗಮನಾರ್ಹ ಅಂಶವಿದೆ.ಬಸವಣ್ಣನವರು ಶಿವೋಪದೇಶ,ಶಿವದೀಕ್ಷಾ ವಿದ್ಯೆಯ ಸಂಪ್ರದಾಯವನ್ನು ಮುರಿದಿದ್ದಾರೆ ಇಲ್ಲಿ ತಮ್ಮ ಲೋಕಕಾರುಣ್ಯ ಗುಣವಿಶೇಷದಿಂದ.ಶಿವದೀಕ್ಷಾ ಪದ್ಧತಿ,ಶಿವಮಂತ್ರೋಪದೇಶದಲ್ಲಿ ಗುರುಗಳಾದವರು ತಾವಾಗಿಯೇ ತಮಗೆ ಒಂದು ಕಟ್ಟುಪಾಡನ್ನು ವಿಧಿಸಿಕೊಂಡಿದ್ದಾರೆ — ‘ ನಮಃ ಶಿವಾಯ’ ಎನ್ನುವ ಶಿವಪಂಚಾಕ್ಷರಿ ಮಂತ್ರವನ್ನು ಯಾರು ಬೇಕಾದರೂ ಧ್ಯಾನಿಸಬಹುದು,ಜಪಿಸಬಹುದಾ ದ್ದರಿಂದ ಮಹಿಳೆಯರು,ಮಕ್ಕಳು ಅವರು ಇವರು ಎನ್ನದೆ ಯಾರಿಗಾದರೂ ಪಂಚಾಕ್ಷರಿ ಮಂತ್ರೋಪದೇಶ ಮಾಡಬಹುದು ; ಆದರೆ ‘ಓಂ’ ಪ್ರಣವಯುಕ್ತ ಷಡಕ್ಷರಿ ಮಂತ್ರವನ್ನು ಉನ್ನತಮಟ್ಟದ ಸಾಧಕರುಗಳಿಗೆ,ಸಂನ್ಯಾಸಿ- ವಿರಕ್ತರುಗಳಿಗೆ ಮಾತ್ರವೇ ಬೋಧಿಸಬೇಕು ಎನ್ನುವುದು ಆ ಕಟ್ಟುಕಟ್ಟಲೆ.ಬಸವಣ್ಣನವರು ಈ ವಚನ ಮತ್ತು ಇಂತಹದೆ ಅರ್ಥ ಧ್ವನಿಸುವ ಐದಾರು ವಚನಗಳಲ್ಲಿ ನೇರವಾಗಿ ‘ ಓಂ ನಮಃ ಶಿವಾಯ’ ಮಂತ್ರದ ಪ್ರಸ್ತಾಪ ಮಾಡುವ ಮೂಲಕ ಕೃತಕಕಟ್ಟುಗಳ ಸಂಕೋಲೆಯನ್ನು ಹರಿದೊಗೆದಿದ್ದಾರೆ,ಸರ್ವರೂ ಶಿವ ಷಡಕ್ಷರಿ ಮಂತ್ರವನ್ನು ಜಪಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ.ನಮಃ ಶಿವಾಯ ಮಂತ್ರವು ಸಾಕಾರ ಶಿವನ ಸ್ವರೂಪವಾಗಿದ್ದು ‘ ಓಂ’ ಪ್ರಣವವು ನಿರಾಕಾರಶಿವನ,ಪರಶಿವನ,ಪರಬ್ರಹ್ಮನ ಸ್ವರೂಪವಾಗಿದ್ದು ನಿರಾಕಾರ ತತ್ತ್ವವೇ ಪರಶಿವನ ಮೂಲ ಸ್ವರೂಪವಾಗಿದ್ದು ಓಂಕಾರಯುಕ್ತ ಶಿವ ಮಂತ್ರದಿಂದ ಪರಶಿವನ ಅನುಗ್ರಹವನ್ನು ಪಡೆಯಬಹುದು.ಇಷ್ಟಲಿಂಗವು ಕೂಡ ನಿರಾಕಾರಶಿವ ಇಲ್ಲವೆ ಪರಶಿವನ ಪ್ರತೀಕವಾಗಿದ್ದು’ ಓಂ ನಮಃಶಿವಾಯ ‘ ಎನ್ನುವ ಶಿವಷಡಕ್ಷರಿ ಮಂತ್ರದಿಂದ ಇಷ್ಟಲಿಂಗೋಪಾಸನೆ ಮಾಡಬೇಕು.ಲೋಕೋದ್ಧಾರ ಬದ್ಧರಾಗಿದ್ದ ಬಸವಣ್ಣನವರು ಪಾರದರ್ಶಕವಾದ,ಪ್ರಾಮಾಣಿಕವಾದ ಮುಕ್ತಮನಸ್ಸಿನ ಮಹೋನ್ನತ ಬದುಕನ್ನು ಬಾಳಿದವರು.ಮುಚ್ಚಿಡುವುದು,ಬಚ್ಚಿಡುವುದು ಬಸವಣ್ಣನವರಿಗೆ ಗೊತ್ತೇ ಇರಲಿಲ್ಲ.ಹಾಗಾಗಿ ಅವರು ‘ ಓಂ ನಮಃಶಿವಾಯ’ ಎನ್ನುವ ಶಕ್ತಿಶಾಲಿ,ಶಿವಪರಮೇಶ್ವರಸ್ವರೂಪವಾದ ಮಂತ್ರವನ್ನೇ ಜನರೆದುರು ತೆರೆದಿಟ್ಟರು.’ಓಂ ನಮಃಶಿವಾಯ’ ಮಂತ್ರದ ಅನವರತ ಧ್ಯಾನ ಜಪಗಳಿಂದ ಭಕ್ತರು ಶಿವಸ್ವರೂಪರೇ ಆಗಬಹುದು.ಭೋಗಮೋಕ್ಷಪ್ರದವಾದ ಇಂತಹ ಮಹಾಮಂತ್ರವನ್ನು ಬಿಟ್ಟು ಕ್ಷುದ್ರವಿದ್ಯೆ,ಕ್ಷುದ್ರಮಂತ್ರಗಳಿಗೆ ಕಟ್ಟುಬೀಳುವವರು ಕೆಟ್ಟಜೀವರುಗಳೇ ಸರಿ.

‌ ೧೨.೦೧.೨೦೨೪

About The Author