ಮಹಾಶೈವ ಧರ್ಮಪೀಠದಲ್ಲಿ 75 ನೆಯ ‘ ಶಿವೋಪಶಮನ ಕಾರ್ಯ’

ದೇವದುರ್ಗ : ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಡಿಸೆಂಬರ್ 31,2023 ರ ಆದಿತ್ಯವಾರದಂದು 75 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಮಹಾಶೈವ ಧರ್ಮಪೀಠದ ಭಕ್ತರಾದ ಜೇಗರಕಲ್ಲಿನ ನಾಗೇಶ ಪೂಜಾರಿ ಅವರು ಇಂದು ಕೈಲಾಸನಾಥ ವಿಶ್ವೇಶ್ವರನಿಗೆ ಈಯಲು ಒಂದೆರಡು ದಿನಗಳಷ್ಟೇ ಬಾಕಿ ಇರುವ ಹಸು ಒಂದನ್ನು ಭಕ್ತಿಕಾಣಿಕೆಯಾಗಿ ಸಮರ್ಪಿಸಿದ್ದು ಈ ಶಿವೋಪಶಮನ ದಿನದ ವಿಶೇಷವಾಗಿತ್ತು.ಪೀಠದಲ್ಲಿ ಹಸುವನ್ನು ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.ಶ್ರೀ ಪೀಠಕ್ಕೆ ಹಸುವಿನ ಕಾಣಿಕೆಯ ಭಕ್ತಿಸೇವೆ ಸಲ್ಲಿಸಿದ ನಾಗೇಶ ಪೂಜಾರಿಯವರನ್ನು ಪೀಠಾಧ್ಯಕ್ಷರು ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಸನ್ಮಾನಿಸಿ,ಆಶೀರ್ವದಿಸಿದರು.

ಈ ದಿನದ ದಾಸೋಹಿಗಳಾದ ಶಾಂಭವಿ ಉಮೇಶ ಪತ್ತಾರ ದಂಪತಿಗಳ ಪರವಾಗಿ ಇತ್ತೀಚೆಗಷ್ಟೇ ಮದುವೆಯಾದ ಅವರ ಮಗಳು ಸೌಮ್ಯಶ್ರೀ ಮತ್ತು ಅಳಿಯ ವೀರಭದ್ರಾಚಾರಿಯವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.ದಿನಗಳುರುಳಿದ್ದೇ ಗೊತ್ತಾಗದಂತೆ ಮಹಾಶೈವ ಧರ್ಮಪೀಠದಲ್ಲಿ ಇಂದಿಗೆ 75 ಶಿವೋಪಶಮನಗಳು ಪೂರ್ಣಗೊಂಡವು.ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ಭಕ್ತರ ಸರ್ವವಿಧ ಸಮಸ್ಯೆಗಳಿಗೆ ಕರಗಿ ಅವರನ್ನು ಸಂಕಷ್ಟಮುಕ್ತರನ್ನಾಗಿ ಮಾಡುತ್ತ ‘ ಮಾತನಾಡುವ ಮಹಾದೇವ’ ಎಂದು ಬಿರುದುಗೊಂಡಿದ್ದಾನೆ.ಒಡಲಿಲ್ಲದ ಶಿವನು ಒಡಲುಗೊಂಡು ನುಡಿದು ಲೋಕೋದ್ಧಾರದ ಲೀಲೆಯನ್ನಾಡುವ ಪರಮ ಬೆಡಗನ್ನು ಮಹಾಶೈವ ಧರ್ಮಪೀಠದಲ್ಲಿ ನೋಡಬಹುದು. ಭಕ್ತರ ಸಮಸ್ಯೆಗಳನ್ನು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವನಿಯಾಮಕ ವಿಶ್ವೇಶ್ವರ ಶಿವನಲ್ಲಿ ನಿವೇದಿಸಿಕೊಂಡು ಶಿವನಿಂದಲೇ ಪರಿಹಾರ ಪಡೆದು ಭಕ್ತರಿಗೆ ಶಿವಾನುಗ್ರಹವನ್ನು ಕರುಣಿಸುವ ಅಪರೂಪದ,ಶಿವಸತ್ಯದ,ಶಿವನ ಲೋಕಕಾರುಣ್ಯಗುಣದ ಪ್ರಕಟಪ್ರಕಾಶವನ್ನು ಭಕ್ತರುಗಳು ಮಹಾಶೈವ ಧರ್ಮಪೀಠದಲ್ಲಿ ಅನುಭವಿಸಿ,ಆನಂದಿತರಾಗುತ್ತಿದ್ದಾರೆ.

ಮಹಾಶೈವ ಧರ್ಮಪೀಠವು ಈ ಎಪ್ಪತ್ತೈದು ವಾರಗಳ ಕಡಿಮೆ ಅವಧಿಯಲ್ಲಿಯೇ ರಾಜ್ಯ ಹೊರರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದು ಕರ್ನಾಟಕ,ಆಂಧ್ರಪ್ರದೇಶ,ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಶ್ರೀಕ್ಷೇತ್ರ ಕೈಲಾಸದತ್ತ ಬರುತ್ತಿದ್ದಾರೆ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಸರ್ವೋತ್ತಮ ತತ್ತ್ವವನ್ನು ಪ್ರತಿಪಾದಿಸುತ್ತಿರುವ ಜೊತೆಗೆ ಶಿವಸಮತೆ,ಶಿವಪೂರ್ಣತೆ,ಶಿವಸಮಗ್ರತೆಯ ತತ್ತ್ವಗಳನ್ನು ಸ್ವಯಂ ಅನುಷ್ಠಾನಕ್ಕೆ ತರುತ್ತಿರುವುದರಿಂದ ಮಹಾಶೈವ ಧರ್ಮಪೀಠವು ಇತರ ಮಠಪೀಠಗಳಿಂದ ಭಿನ್ನವಾಗಿ ತನ್ನದೆ ಅನನ್ಯತೆಯನ್ನು ಕಾಪಾಡಿಕೊಂಡು ಸರ್ವಜನಾದರಣೀಯ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತಿದೆ.ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವನ ಸನ್ನಿಧಿಯನ್ನರಸಿ ಬರುವ ಭಕ್ತರಲ್ಲಿ ಯಾವ ವಿಧದ ಭೇದವನ್ನೆಣಿಸದೆ ಸರ್ವವರನ್ನೂ ಸಮಭಾವದಿಂದ ಕಾಣುತ್ತಿರುವುದರಿಂದ ಬರುವ ಭಕ್ತರಲ್ಲಿ ‘ ಇದು ನಮ್ಮ ಮಠ’ ಎನ್ನುವ ಭಕ್ತಿಭಾವವು ಬಲಿಯುತ್ತಿದೆ.ಮುಕ್ಕಣ್ಣ ಕರಿಗಾರ ಅವರು ಬಿಡಿಗಾಸನ್ನೂ ನಿರೀಕ್ಷಿಸದೆ ಶಿವಸೇವೆ ಎಂದು ಉಚಿತವಾಗಿ ಭಕ್ತರುಗಳನ್ನು ನೋಡುತ್ತಿರುವುದರಿಂದ ಆಸ್ಪತ್ರೆಗಳಿಗೆ ತೆರಳಿ ಸಾವಿರಾರು ರೂಪಾಯಿಗಳ ಶುಲ್ಕ ಕೊಡಲಾಗದ ಬಡವರು ನಾಡಿನುದ್ದಗಲದಿಂದ ಮಹಾಶೈವ ಧರ್ಮಪೀಠವನ್ನು ಹುಡುಕಿಕೊಂಡು ಬರಲು ಕಾರಣವಾಗಿದೆ.ಇತರೆಡೆಗಳಲ್ಲಿ ಇರುವಂತೆ ಮಹಾಶೈವ ಧರ್ಮಪೀಠದಲ್ಲಿ ಪಂಕ್ತಿಭೇದಕ್ಕೆ ಅವಕಾಶವಿಲ್ಲದೆ ಇರುವುದು ಶ್ರೀಪೀಠದ ಬಗ್ಗೆ ಭಕ್ತರ ಗೌರವಾದರಗಳು ನೂರ್ಮಡಿಯಾಗಲು ಕಾರಣ.ಇಲ್ಲಿ ಪಂಕ್ತಿಭೇದಕ್ಕೆ ಅವಕಾಶವಿಲ್ಲವಷ್ಟೇ ಅಲ್ಲ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ತೋರಿಸಿಕೊಳ್ಳಲು ಬಂದಿದ್ದ ಭಕ್ತರಜೊತೆಗೆ ಕುಳಿತು ಪ್ರಸಾದಸ್ವೀಕರಿಸುವ ಮೂಲಕ ಮಠ ಪೀಠಗಳ ಸ್ವಯಂಘೋಷಿತ ‘ ದೊಡ್ಡವರು, ದೇವಮಾನವರು’ ಗಳಿಗೆ ದೊಡ್ಡ ಆದರ್ಶವಾಗಿದ್ದಾರೆ.

ಮಹಾಶೈವ ಧರ್ಮಪೀಠವು ಭಕ್ತರಲ್ಲಿ ಧಾರ್ಮಿಕ ಸಂಸ್ಕಾರವನ್ನು ನೀಡುವ ಸಂಸ್ಕಾರಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.ಮುಕ್ಕಣ್ಣ ಕರಿಗಾರ ಅವರ ಗುರುಗಳಾಗಿದ್ದ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳು ವಿಶ್ವಕ್ಕೆ ಅನುಗ್ರಹಿಸಿದ ಪ್ರಭುಕಾರುಣ್ಯವನ್ನು ಧರೆಗಿಳಿಸುವ ಮಹಾಮಂತ್ರ, ಆಧುನಿಕ ಯುಗದ ಗಾಯತ್ರಿ ಮಂತ್ರವೆಂದೇ ಪ್ರಸಿದ್ಧಿಯಾಗಿರುವ ” ಹೇ ಪ್ರಭೋ ಪ್ರಸೀದ ಓಂ” ಮಂತ್ರವನ್ನು ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷರಾಗಿರುವ ಗುರುಬಸವ ಹುರಕಡ್ಲಿಯವರು ಪ್ರಸಾದಪೂರ್ವದಲ್ಲಿ ಭಕ್ತರೊಡನೆ ಸಾಮೂಹಿಕವಾಗಿ ಪಠಿಸುವ ಮೂಲಕ ಧಾರ್ಮಿಕ ಸಂಸ್ಕಾರ,ಪ್ರಸಾದಸಂಸ್ಕಾರ ನೀಡುತ್ತಿದ್ದಾರೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲ ಕಾರ್ತಕರ್ತರುಗಳಾದ ಗೋಪಾಲಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಭಕ್ತಪ್ರಮುಖರುಗಳಾದ ಶರಣಗೌಡ ಹೊನ್ನಟಗಿ,ಶಿವಯ್ಯಸ್ವಾಮಿ ಮಠಪತಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ವಿರುಪಾಕ್ಷಪ್ಪಗೌಡ ಹೊನ್ನಟಗಿ,ಬಂದಪ್ಪಗೌಡ ಖಾನಾಪುರ,ಯಲ್ಲಪ್ಪ ಕರಿಗಾರ, ರಂಗನಾಥ ಮಸೀದಪುರ,ಪರಶುರಾಮ ಜಡೇರ, ಬೆಟ್ಟಪ್ಪ ಗದಾರ,ಬೂದಿಬಸವ ಶಾಂತಪ್ಪ ಕರಿಗಾರ,ಮೌನೇಶ ಮಲ್ಕಾಪುರ,ಶಿವಕುಮಾರ ವಸ್ತಾರ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

About The Author