ರೈತ ಚಳುವಳಿಯ ತಾಕತ್ತು ತೋರಿಸಬೇಕಾಗಿದೆ : ಸಲಾದಪೂರ

  ಶಹಾಪುರ : ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆಗೆ ಫೆಬ್ರವರಿ ಅಂತ್ಯದವರೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ 9 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ  ಭೀಮರಾಯನ ಗುಡಿಯ ಕೆಬಿಜೆನ್ಎಲ್ ಆಡಳಿತ ಕಚೇರಿಗೆ ಬೀಗ ಜಡೆದು ಆಹೋರಾತ್ರಿ ಧರಣಿ ನಡೆಸಿ ನಂತರ ಶಹಪುರ್ ನಗರದ ಬಸವೇಶ್ವರ ವೃತ್ತದ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ವೃತ್ತದಲ್ಲಿ ಅನಿರ್ದಿಷ್ಟ ಧರಣಿ ಮುಂದುವರಿಯಲಿದೆ ಎಂದು ರೈತ ಮುಖಂಡರು ತಿಳಿಸಿದರು.ಈ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ರೈತ ಹೋರಾಟಗಾರ ಶರಣಪ್ಪ ಸಲಾದಪೂರ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ತಮಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ.
ಕಷ್ಟಪಟ್ಟು ದುಡಿಯುವ ರೈತರ ಬವಣೆ ಮಾತ್ರ ಹೇಳತೀರದಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಜನ ಇನ್ನಾದರೂ ನಮ್ಮ ಬದುಕು ಹಸನಾಗಬಹುದು ಎಂದು ಕನಸು ಕಂಡಿದ್ದರು. ಆದರೆ ಅಲ್ಲಿಯೂ ರೈತರಿಗೆ ಸಿಕ್ಕಿದ್ದು ಲಾಠಿಯ ಹೊಡೆತ, ತುಪಾಕಿಯ ಗುಂಡೇಟು. ಇಂತಹ ಸಂದರ್ಭದಲ್ಲಿ ರೈತ ಸಂಘವನ್ನು ಕಟ್ಟಿ ರೈತ ಚಳವಳಿಯ ತಾಕತ್ತು ತೋರಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ರೈತ ಚಳವಳಿಗಳಲ್ಲಿಯೂ ಭಿನ್ನಮತ, ಬಣಗಳು ಹುಟ್ಟಿಕೊಂಡ ನಂತರ ರೈತ ಚಳುವಳಿಗಳಲ್ಲಿ ಗಟ್ಟಿತನದ ಕೊರತೆ ಎದ್ದು ಕಾಣುತ್ತಿದೆ. ನಮ್ಮಲ್ಲಿ ಭಿನ್ನಮತಗಳು ಏನೇ ಇದ್ದರೂ ರೈತರ ವಿಷಯ ಬಂದಾಗ ಜಾತಿ ಮತ ಪಂಥ ಮರೆತು ಎಲ್ಲರದ್ದು ರೈತ ಕುಲ ಎನ್ನುವ ಭಾವನೆ ಮೂಡಬೇಕು. ರೈತ ಚಳುವಳಿ ಗಟ್ಟಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದರೆ ನೀರು ತರುವುದು ದೊಡ್ಡ ಮಾತಲ್ಲ ಎಂದರು.
ಇದೆ ವೇಳೆ ಮಾತನಾಡಿದ ಹಿರಿಯ ಮುಖಂಡ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ನರಗುಂದ, ನವಲಗುಂದ ರೈತ ಚಳವಳಿ ಇತಿಹಾಸವನ್ನೇ ಸೃಷ್ಟಿಸಿದೆ. ಆ ಹೋರಾಟದಂತೆ ಇಲ್ಲಿಯೂ ಎಲ್ಲ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ಹೋರಾಟ ಯಶಸ್ವಿಯಾಗಲು ಸಾಧ್ಯ ಎಂದರು.
 ಪ್ರತಿಭಟನೆಯಲ್ಲಿ, ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ನಾಗರತ್ನ ಪಾಟಿಲ್, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ, ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಹಸಿರು ಸೇನೆಯ ರಾಜ್ಯ ಕಾರ್ಯಧ್ಯಕ್ಷ ಮಹೇಶ್ ಗೌಡ ಸುಬೇದಾರ್, ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.
ಸಚಿವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ ರೈತ ಮುಖಂಡರು.ಹೋರಾಟ ಮುಂಚೂಣಿಯಲ್ಲಿರುವ ರೈತನಾಯಕರು ಸಚಿವ ಶರಣಬಸಪ್ಪ ಗೌಡ ದರ್ಶನಾಪುರವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿ ಜಿಲ್ಲೆಯಲ್ಲಿ 14,000 ಹೆಕ್ಟೇರ್ಗಿಂತಲೂ ಹೆಚ್ಚು ಮೆಣಸಿನ ಕಾಯಿ ಬೆಳೆಗಾರರಿದ್ದಾರೆ. ನೀರು ಹರಿಸದಿದ್ದರೆ ಎಲ್ಲ ರೈತರು ದಿವಾಳಿಯಾಗುತ್ತಾರೆ. ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಮನವಿ ಪತ್ರ ಸ್ವೀಕರಿಸಿದ ನಂತರ ಸಚಿವ ಶರಣಬಸಪ್ಪಗೌಡ ದರ್ಶನಾಪುರವರು ಹೋರಾಟ ಮಾಡುವ ಹಕ್ಕು ನಿಮಗಿದೆ. ರೈತರ ಸಂಕಷ್ಟದ ಅರಿವು ನನಗಿದೆ. ನಾನು ಪ್ರಾಮಾಣಿಕವಾಗಿ ಮುಖ್ಯಮಂತ್ರಿ ಅವರ ಹತ್ತಿರ ಮಾತನಾಡಿ ಇಲ್ಲಿನ ರೈತರ ಪರಿಸ್ಥಿತಿ ಮನವರಿಕೆ ಮಾಡಿಕೊಡುತ್ತೇನೆ. ಮುಖ್ಯಮಂತ್ರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಾರೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.

About The Author