ಎಂಟನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ : ರೈತರ ಕಣ್ಣೀರಿನ ಶಾಪ ನಿಮ್ಮನ್ನು ಸರ್ವನಾಶ ಮಾಡಲಿದೆ : ನೀರು ಕೊಡಿ ಇಲ್ಲ ಕುರ್ಚಿ ಖಾಲಿ ಮಾಡಿ

yadagiri ಶಹಾಪುರ : ನೀರು ಕೊಡಿ ಇಲ್ಲ ಕುರ್ಚಿ ಖಾಲಿ ಮಾಡಿ.ರೈತರ ಕಣ್ಣೀರಿನ ಶಾಪ ನಿಮ್ಮನ್ನು ಸರ್ವನಾಶ ಮಾಡಲಿದೆ.ರೈತರು ಶಾಂತಿದೂತರು ನಮ್ಮನ್ನು ಪರೀಕ್ಷಿಸಬೇಡಿ ನಮ್ಮ ಹೋರಾಟ ನೀರು ಬಿಡುವ ತನಕ ನಿರಂತರ ಪ್ರತಿಭಟನೆ ನಡೆಸುತ್ತೇವೆ. ನಮಗೆ ಯಾರ ಮೇಲೆ ದ್ವೇಷವಿಲ್ಲ. ನಮ್ಮ ರೈತರನ್ನು ಕಾಯುವುದೇ ನಮ್ಮ ಕೆಲಸ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಹೇಳಿದರು.ನಗರದ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಶಹಾಪುರ : ನಗರದ ಬಸವೇಶ್ವರ ವೃತ್ತದಲ್ಲಿ,
ನಾರಾಯಣಪುರ ಕಾಲುವೆಗೆ ನೀರು ಬಿಡುವಂತೆ ಅಹೋರಾತ್ರಿ ಧರಣಿಯಲ್ಲಿ ನಿರತ ರೈತರು
******
ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದೇ ಇದ್ದಲ್ಲಿಬೆಳೆ ನಷ್ಟವಾಗುತ್ತದೆ.ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಾವು ನೀರು ಬಿಡಿ ಎಂದು ಕೇಳುತ್ತಿರುವುದು ಗಾಂಜಾ ಬೆಳೆಸುವುದಕ್ಕೆ ಅಲ್ಲ.  14000 ಹೆಕ್ಟೇರ್‌ನಲ್ಲಿ ನಾವು ಕಷ್ಟ ಪಟ್ಟು ಬೆಳೆದ ಮೆಣಸಿನಕಾಯಿ ಬೆಳೆಯು ನಮ್ಮ ಕಣ್ಣೆದುರಿಗೆ ಒಣಗಿ ಹೋಗುತ್ತಿದೆ. ಒಂದು ಬೆಳೆಗಾದರೂ ನೀರು ಸಿಗುವದೆಂಬ ಆಶಾಭಾವದಿಂದ ಭೂಮಿಯಲ್ಲಿ ಬಿತ್ತಿದ್ದ ಬೆಳೆಗಳು ನೀರಿಲ್ಲದೇ ಸೊರಗಿ ಕಮರಿ ಬೆಂಡಾಗುತ್ತಿವೆ. ಕೂಡಲೇ ಸರ್ಕಾರ ಬೆಳೆಗಳ ನೆರವಿಗೆ ಧಾವಿಸಿ ಅನ್ನದಾತರನ್ನು ಉಳಿಸಬೇಕು. ರೈತರೊಡನೆ ಸರ್ಕಾರ ಮಂಡುತನಕ್ಕೆ ಇಳಿಯಬಾರದು. ನಮ್ಮ ಹೋರಾಟ ರಾಜ್ಯ ಹೆದ್ದಾರಿ ಮೇಲೆ ಮುಂದುವರೆಯುತ್ತದೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಭಾಗಶಃ ಬಂದ್ ಮಾಡುವ ಮೂಲಕ ವ್ಯಾಪಾರಸ್ಥರು ರೈತರಿಗೆ ಬೆಂಬಲ ಸೂಚಿಸಿದರು. ರಸ್ತಾಪುರ ಕ್ರಾಸ್ ಹಾಗೂ ಭೀಮರಾಯನ ಗುಡಿ ಹತ್ತಿರ ಮುಂಜಾಗ್ರತ ಕ್ರಮವಾಗಿ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು.ಪ್ರತಿಭಟನೆಯಲ್ಲಿ ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಉಪಾಧ್ಯಕ್ಷ ರಾಕೇಶ ಗೌಡ, ಕಲ್ಬುರ್ಗಿ ರೈತ ಸಂಘದ ಜಿಲ್ಲಾಧ್ಯಕ್ಷ ಅಲ್ಲ ಪಟೇಲ್ ಹಿಜೇರಿ, ಬಿಜೆಪಿ ಹಿರಿಯ ಮುಖಂಡ ಬಸವರಾಜ್ ವಿಭೂತಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಭೈರಪ್ಪ, ಮಹಿಳಾ ಹೋರಾಟಗಾರ್ತಿ ಯಶೋಧ, ರೈತ ಮುಖಂಡ ಮಲ್ಲನಗೌಡ ಪರಿವಾಣ ಅಶೋಕ್ ಮಲ್ಲಾಬಾದಿ, ಚಂದ್ರಕಲಾ ವಡಿಗೇರ, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಶಂಕರ್ ನಾಯಕ್ ಜಾದವ್, ಸಿದ್ದಣ್ಣ ಎಂಕಂಚಿ, ಮುದ್ದಣ್ಣ ಅಮ್ಮಪುರ್, ಬಾಬುರಾವ್ ಹೊಸಮನಿ, ತಿಪ್ಪಣ್ಣ ಬಿರಾದಾರ್, ಅಡಿವಪ್ಪ ಜಾಕ ಅರುಣಿ ಬಸವರಾಜ, ಶ್ರೀ ಕಾಂತಗೌಡ ಸುಬೇದಾರ್,ಭೀಮಣ್ಣ ಮಿಲ್ಟ್ರಿ, ಅನಿಲ್ ಕುಮಾರ್, ಮರೆಪ್ಪ ಲಕ್ಷ್ಮಿಪುರ, ಶ್ರೀಮಂತಗೌಡ, ಬನಶಂಕರ ಗೌಡ, ಸಿದ್ದಣ್ಣ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.
ಸರ್ಕಾರ ಕಾಟಚಾರಕ್ಕೆ ಮಾತುಕತೆ ನಡೆಸಿದೆ, ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಹೇಳುತ್ತಿಲ್ಲ. ನೀರು ಬರುವವರೆಗೆ ರಾಜ್ಯ ಹೆದ್ದಾರಿ ಮೇಲೆ ನಮ್ಮ ಹೋರಾಟ ನಡೆಯಲಿದೆ. ಸರ್ಕಾರ  ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ನಮ್ಮ ಸಹನೆಯ ಕಟ್ಟೆ ಹೊಡೆಯುವ ಮುಂಚೆ ನಮಗೆ ನೀರು ಕೊಡಿ,ರೈತರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಇರುವುದಿಲ್ಲ.ನಿಮಗೆ ರೈತರು ಬೆಳೆದ ಅನ್ನಬೇಕು. ನಿಮ್ಮಿಂದ ರೈತರಿಗೆ ನೀರು ಕೊಡದಿದ್ದರೆ ನೀವು ಕುರ್ಚಿ ಮೇಲೆ ಯಾಕೆ ಕೂಡಬೇಕು.ನೀರು ಬಿಡುವವರೆಗೂ ಹೋರಾಟ ಮುಂದುವರಿಯಲಿದೆ.
ನಾಗರತ್ನ ಪಾಟೀಲ್ 
ಮಹಿಳಾ ರಾಜ್ಯಾಧ್ಯಕ್ಷರು.
ಕರ್ನಾಟಕ ರಾಜ್ಯ ರೈತ ಸಂಘ.
ನೀರಿಗಾಗಿ ದೀಡ್ ನಮಸ್ಕಾರ ಹಾಕಿದ ರೈತರು
******
ರೈತರು ನೀರು ಕೇಳುವದರಲ್ಲಿ ನ್ಯಾಯವಿದೆ. ಉದ್ಯೋಗಕ್ಕಾಗಿ ಎಷ್ಟೋ ಜನರು ಊರು ತೊರೆದು ನಗರಕ್ಕೆ ಹೋದರೆ, ರೈತ ಮಾತ್ರ ತನಗೆ ಏನೇ ಕಷ್ಟ ಬಂದರೂ ಎದೆಗುಂದದೆ ಕೃಷಿ ಕಾಯಕದಲ್ಲಿ ಮುಂದಾಗುತ್ತಾನೆ.  ಇದರಲ್ಲಿ ತನ್ನ ಒಪ್ಪೊತ್ತಿನ ಊಟವನ್ನು ಕೂಡ ಮರೆತು ಬಿಡುತ್ತಾನೆ. ರೈತನು ದೇಶದ ಬೆನ್ನೆಲುಬು ಎಂಬ ಮಾತು ಬಿಟ್ಟರೇ ಆತನ ಕಷ್ಟ, ಸುಖಕ್ಕೆ ನೆರವಾಗುವುದು ತುಂಬಾ ಕಡಿಮೆ. ಸರ್ಕಾರ ಯಾವುದೇ ಇರಲಿ. ರೈತರ ಸಂಕಷ್ಟ ಪರಿಹರಿಸುವ ಜವಾಬ್ದಾರಿ ಸರಕಾರದ ಮೇಲಿದೆ. ಈ ಹೋರಾಟಕ್ಕೇ ನನ್ನ ಸಂಪೂರ್ಣ ಬೆಂಬಲವಿದೆ. ಸದಾ ನಾನು ರೈತರ ಜೊತೆ ನಿಲ್ಲುತ್ತೇನೆ.
ಅಮಿನ್ ರೆಡ್ಡಿ ಯಾಳಗಿ ಬಿಜೆಪಿ ಮುಖಂಡ ಶಹಾಪುರ.
ಕಾಲುವೆಗೆ ನೀರು ಬಿಡುವಂತೆ ಉರುಳು‌ ಸೇವೆಗೈದ ರೈತ‌ ಮುಖಂಡರು
ತಹಶೀಲ್ ಕಛೇರಿಯಿಂದ ಬಸವೇಶ್ವರ ವೃತ್ತದ ವರಿಗೆ ಸಾವಿರಾರು ಜನರೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ರೈತರು ಉರುಳು ಸೇವೆ ಮತ್ತು ದೀಡ್ ನಮಸ್ಕಾರ ಹಾಕಿದರು.ಹಸಿರು ಸೇನೆಯ ರಾಜ್ಯ ಕಾರ್ಯಧ್ಯಕ್ಷ ಮಹೇಶ್ ಗೌಡ ಸುಬೇದಾರ್ ಈ ಪ್ರತಿಭಟನೆಯಲ್ಲಿ ತಮ್ಮ ತಲೆ ಬೋಳಿಸಿಕೊಳ್ಳುವ ಮೂಲಕ ವಿನೂತನ ಪ್ರತಿಭಟನೆಗೈದರು.
ಕಾಲುವೆಗೆ ನೀರು ಬಿಡುವಂತೆ ತಲೆ ಮಂಡಿ ಕೊಟ್ಟು
ವಿನೂತನ ಪ್ರತಿಭಟನೆಗೈದ ರೈತಸಂಘದ ಮಹೇಶ್ ಸುಬೇದಾರ
ಆಲಮಟ್ಟಿ ಮತ್ತು ನಾರಾಯಣಪೇಟೆ ಜಲಾಶಯದಲ್ಲಿ 57.22 ಟಿಎಂಸಿ ನೀರಿದ್ದರೂ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ ಎಂಟು ದಿನಗಳಿಂದ ಶಾಂತಿಯುತವಾಗಿ ಅಹೋರಾತ್ರಿ ಧರಣಿ ಮಾಡಿದರೂ ಸರ್ಕಾರ ಸ್ಪಂದಿಸದಿರುವುದು ನಾಚಿಕೆಗೇಡಿನ ಸಂಗತಿ.ನೀರು ಬಿಡುವವರೆಗೆ ರಾಜ್ಯ ಹೆದ್ದಾರಿ ತಡೆದು ಅನಿರ್ದಿಷ್ಟ ಧರಣಿ ಮುಂದುವರಿಸುತ್ತೇವೆ. ಸರ್ಕಾರಕ್ಕೆ ತಾಕತ್ತಿದ್ದರೆ ನಮ್ಮನ್ನು ತಡೆಯಲಿ.
ಶರಣು ಮಂದಾರವಾಡ
ಜಿಲ್ಲಾಧ್ಯಕ್ಷರು.ಕರ್ನಾಟಕ ರಾಜ್ಯ ರೈತ ಸಂಘ.
 
ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಹೆಂಡತಿಯ ಕಿವಿಯ ಬೆಂಡೋಲೆ ಮಾರಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದೇನೆ. ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ಮಾಡಿದ ಸಾಲ ತೀರಿಸಲಾಗದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪರಸ್ಥಿತಿಯಲ್ಲಿದ್ದೇವೆ.
ಸುಕೂರಸಾಬ ಸಿಂಗನಹಳ್ಳಿ ಮೆಣಸಿನಕಾಯಿ ಬೆಳೆದ ರೈತ

About The Author