ದೇಶದ ಎಲ್ಲಾ ಶಾಸನಗಳ ತಾಯಿಯೆ ಭಾರತ ಸಂವಿಧಾನ ನ್ಯಾಯಾಧೀಶ ಹನುಮಂತ ಅನಂತರಾವ್ ಸಾತ್ವಿಕ ಅಭಿಮತ

ದೇವದುರ್ಗ: ಭಾರತದ ಎಲ್ಲ ಶಾಸನಗಳ ತಾಯಿಯೇ ನಮ್ಮ ಸಂವಿಧಾನ. ಹೀಗಾಗಿ ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವ ಕೊಡಬೇಕೆಂದು ತಾಲೂಕು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಹನುಮಂತ ಅನಂತರಾವ್ ಸಾತ್ವಿಕ ಅವರು ಹೇಳಿದರು.

ಇಂದು ಪಟ್ಟಣದ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವವಿಜ್ಞಾನ ವಸತಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ  ಸಹಯೋಗದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದಲ್ಲಿ ಎಷ್ಟೋ ಹಕ್ಕುಗಳಿವೆ. ಆದರೆ ಮೂಲಭೂತ ಹಕ್ಕುಗಳನ್ನು ಯಾರು ಕೂಡ ಉಲ್ಲಂಘನೆ ಮಾಡಲು ಬರುವುದಿಲ್ಲ. ನಾವು ಅನುಭವಿಸಲು ಮೂಲಭೂತ ಹಕ್ಕುಗಳು ಇರುವಂತೆ ಮೂಲಭೂತ ಕರ್ತವ್ಯಗಳು ಇವೆ. ಅವುಗಳನ್ನು ಪಾಲಿಸುವುದು ಆದ್ಯ ಕರ್ತವ್ಯವಾಗಿದೆ ಎಂದರು.

ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಬಾಳಾಸಾಹೇಬ ವಡವಡೆ ಮಾತನಾಡಿ, ಕಾನೂನು ಸೇವಾ ಸಮಿತಿ ಮೂಲಕ ಉಚಿತವಾಗಿ ಕಾನೂನು ಸೇವೆಗಳ ಲಭ್ಯತೆ ಇದೆ. ಇದರ ಸದುಪಯೋಗ ತಾವು ಪಡೆದುಕೊಳ್ಳಬೇಕು. ಮೂಲಭೂತ ಹಕ್ಕುಗಳಾದ ಸಮಾನತೆ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಕ್ಕು, ಧಾರ್ಮಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರ ಹಕ್ಕು ಕುರಿತಾಗಿ, ಅನೇಕ ಪ್ರಕರಣಗಳನ್ನು ಉದಾಹರಣೆ ನೀಡಿದರು.

ಮಾನವ ಹಕ್ಕುಗಳ ಕುರಿತು ನ್ಯಾಯವಾದಿ ರವಿಕುಮಾರ ಪಾಟೀಲ್ ಅಳ್ಳುಂಡಿ, ರಾಷ್ಟ್ರೀಯ ಕಾನೂನು ಸೇವೆಗಳ ಕಾಯ್ದೆಯ ಧ್ಯೇಯೋದ್ದೇಶಗಳು ಮತ್ತು ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಕುರಿತು ಪ್ಯಾನೆಲ್ ನ್ಯಾಯವಾದಿ ವೆಂಕನಗೌಡ ಮಾಲಿ ಪಾಟೀಲ್ ಉಪನ್ಯಾಸ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಚಂದ್ರಶೇಖರ ವಿಭೂತಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆ ವತಿಯಿಂದ ವಸತಿ ಕಾಲೇಜಿನ ಗ್ರಂಥಾಲಯಕ್ಕೆ ಸಂವಿಧಾನ ಪೀಠಿಕೆ, ಸಂವಿಧಾನ ಓದು, ಮಕ್ಕಳಿಗಾಗಿ ಸಂವಿಧಾನ, ಭಾರತದ ಪುಸ್ತಕಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿಡ್ಡಯ್ಯ ಟಿ.ನಾಯಕ,ಶಿಕ್ಷಣ ಸಂಯೋಜಕ ಮ‌ಹಾದೇವಪ್ಪ ಉಪಸ್ಥಿತರಿದ್ದು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕುಮಾರಿ ಸೌಂದರ್ಯ ಸಂಗಡಿಗರು ಪ್ರಾರ್ಥಿಸಿದರೆ,ಉಪನ್ಯಾಸಕ ಸಚಿನ್ ಎಲ್.ರಾವ್ ಸ್ವಾಗತಿಸಿದರು. ರಮೇಶ್ ಭಜಂತ್ರಿ ನಿರೂಪಿಸಿದರು. ವೀರನಗೌಡ ವಂದಿಸಿದರು.

About The Author