ಪುತ್ರವ್ಯಾಮೋಹ’ಕ್ಕೆ ಸಂವಿಧಾನದಲ್ಲಿ ಏನು ಅರ್ಥವಿದೆ ‘ ಲಾಯರ್ ಮುಖ್ಯಮಂತ್ರಿಗಳೆ’?

ಪುತ್ರವ್ಯಾಮೋಹ’ಕ್ಕೆ ಸಂವಿಧಾನದಲ್ಲಿ ಏನು ಅರ್ಥವಿದೆ ‘ ಲಾಯರ್ ಮುಖ್ಯಮಂತ್ರಿಗಳೆ’?:ಮುಕ್ಕಣ್ಣ ಕರಿಗಾರ

    ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಪುತ್ರ ಡಾ.ಯತೀಂದ್ರ ಅವರೊಂದಿಗೆ ನಡೆಸಿದ ಸಂಭಾಷಣೆಯ ಆಡಿಯೋ ಬಹಿರಂಗಗೊಂಡು ವಿರೋಧ ಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾದುದನ್ನು ಮಾಧ್ಯಮಪ್ರತಿನಿಧಿಗಳೆದುರು ಸಮರ್ಥಿಸಿಕೊಳ್ಳುತ್ತ ‘ ನಾನು ಲಾಯರ್ ಗೊತ್ತಾ?’ ಎಂದು ಪ್ರಶ್ನಿಸಿದ್ದಾರೆ.’ಲಾಯರ್’ ಎಂದು ಹೆಮ್ಮೆಯಿಂದ ಹೇಳಿಕೊಂಡು ತಮ್ಮ ಪುತ್ರನ ಹುಸಿಪ್ರತಿಷ್ಠೆಯನ್ನು ಸಮರ್ಥಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕಾರದಲ್ಲಿ ತಮ್ಮ ಪುತ್ರನ ಹಸ್ತಕ್ಷೇಪವು ಸಂವಿಧಾನಬದ್ಧ ನಡೆಯೆ? ಸಂವಿಧಾನದ ಯಾವ ಅನುಚ್ಛೇದವು ರಾಜ್ಯದ ಮುಖ್ಯಮಂತ್ರಿಯವರು ಅವರ ಮಗ ಇಲ್ಲವೆ ಕುಟುಂಬದ ಸದಸ್ಯರ ಮಾತುಗಳಿಗೆ ಮಣೆಹಾಕಬೇಕು ಎಂದು ಹೇಳಿದೆ ಎನ್ನುವುದನ್ನು ಕರ್ನಾಟಕದ ಜನತೆಯ ಮುಂದೆ ಇಡಬೇಕು.ಎಚ್ ಡಿ ಕುಮಾರಸ್ವಾಮಿಯವರಿಗೆ ಕಾನೂನಿನ ಅರಿವು ಇಲ್ಲ ಎಂದು ಟೀಕಿಸಲು ‘ ನಾನು ಲಾಯರ್’ ಎಂದು ಹೇಳಿಕೊಂಡರೆ ಸಾಲದು ಮುಖ್ಯಮಂತ್ರಿಗಳೆ,ನೀವು ಲಾಯರ್ ಆಗಿ ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಾದವರು,ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾದವರು.ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತೇನೆ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಸೊಗಸಾಗಿ ಭಾಷಣ ಮಾಡುವ ನೀವು ಮೇಲಿಂದ ಮೇಲೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ ಎನ್ನುವುದನ್ನು ನಾಡಿನ ಪ್ರಜ್ಞಾವಂತ ಜನತೆ ಗಮನಿಸುತ್ತಿದ್ದಾರೆ ಎನ್ನುವುದನ್ನು ಮರೆಯಬೇಡಿ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಆಡಿಯೋ ಪ್ರಕರಣದಲ್ಲಿ ಪ್ರಬುದ್ಧರಾಗಿ ವರ್ತಿಸಬೇಕಿತ್ತು.ಘಟನೆಯ ಬಗ್ಗೆ ವಿಷಾದವನ್ನಾದರೂ ವ್ಯಕ್ತಪಡಿಸಿ,ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದರೆ ಸಿದ್ಧರಾಮಯ್ಯನವರು ಸಾರ್ವಜನಿಕರ ಕಣ್ಣಲ್ಲಿ ದೊಡ್ಡವರು ಆಗುತ್ತಿದ್ದರು.ಎಚ್ ಡಿ ಕುಮಾರಸ್ಚಾಮಿಯವರು ಅನಧಿಕೃತ ವಿದ್ಯುತ್ ಸಂಪರ್ಕ ಪಡೆದ ಘಟನೆಯ ಬಗ್ಗೆ ವಿಷಾದವ್ಯಕ್ತಪಡಿಸಿ,ದಂಡಕಟ್ಟುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಈ ಬಗ್ಗೆ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಿದ್ದಾರೆ.ಆದರೆ ನೀವು ಮತ್ತು ನಿಮ್ಮ ಮಗ? ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಸಂಗದ ಬಗ್ಗೆ ವಿಷಾದವನ್ನಾದರೂ ವ್ಯಕ್ತಪಡಿಸುವ ಸೌಜನ್ಯವೂ ನಿಮ್ಮಲ್ಲಿಲ್ಲ.ಬದಲಿಗೆ ನಿಮ್ಮ ಪುತ್ರನ ವರ್ತನೆಯನ್ನು ಸಮರ್ಥಿಸಿಕೊಳ್ಳುವ ಸಂವಿಧಾನಬಾಹಿರನಡೆಯನ್ನು ಪ್ರದರ್ಶಿಸಿದ್ದೀರಿ.ಎಸ್ ಡಿ ಎಂ ಸಿ ವಿಷಯದ ಕುರಿತು ನನ್ನ ಮಗ ಫೋನಿನಲ್ಲಿ ಮಾತನಾಡಿದ್ದಾರೆ ಎಂದು ಸಮಜಾಯಿಸಿ ನೀಡಿರುವ ಮುಖ್ಯಮಂತ್ರಿಯವರು ರಾಜ್ಯದ ಜನತೆ ವೈರಲ್ ಆದ ಆ ವಿಡಿಯೋ ತುಣಕನ್ನು ನೋಡಿದ್ದಾರೆ ಎನ್ನುವುದನ್ನು ಮರೆತಿರುವಂತೆ ಕಾಣಿಸುತ್ತದೆ.ಆ ವಿಡಿಯೋದಲ್ಲಿ ಸಾರ್ವಜನಿಕ ಸಮಾರಂಭ ಒಂದರಲ್ಲಿ ಯತೀಂದ್ರ ಒಂದು ಪಟ್ಟಿಯ ಬಗ್ಗೆ ಮಾತನಾಡುತ್ತಿರುವುದು,ಯಾರು ವಿವೇಕಾನಂದ ಎಂದು ಪ್ರಶ್ನಿಸುವುದು,ನಾನು ಹೇಳಿದ ಪಟ್ಟಿಯಲ್ಲಿದ್ದವರದ್ದೇ ಫೈನಲ್ ಆಗಬೇಕು ಎಂದು ಒತ್ತಾಯಿಸಿರುವುದನ್ನು ನೋಡಿದ ನಾಡಿನ ಜನತೆ ಅದು ಎಸ್ ಡಿ ಎಂ ಸಿ ಗೆ ಸಂಬಂಧಿಸಿದ ವಿಷಯವಲ್ಲ ಎನ್ನುವುದನ್ನು ತಿಳಿದುಕೊಳ್ಳದಷ್ಟು ದಡ್ಡರೇನರಲ್ಲ.ಜನರನ್ನು ದಡ್ಡರೆಂದು ಭಾವಿಸಬೇಡಿ.ಆಗಲಿ,ನೀವು ಹೇಳಿದಂತೆಯೇ ನಿಮ್ಮ ಮಗ ಎಸ್ ಡಿ ಎಂ ಸಿ ವಿಷಯದ ಬಗ್ಗೆಯೇ ಮಾತನಾಡಿದ್ದಾರೆ ಎಂದು ಇಟ್ಟುಕೊಳ್ಳೋಣ ‘ ಇಂತಹ ವ್ಯಕ್ತಿಗಳದ್ದೇ ಆಗಬೇಕು’ ಎಂದು ಒತ್ತಾಯಿಸಲು ಯತೀಂದ್ರ ಯಾರು? ಅವರಿಗೆ ಏನು ಅಧಿಕಾರವಿದೆ ? ನೀವೇ ಸರಕಾರಿ ಆದೇಶ ಮಾಡಿದಂತೆ ಅವರು ವರುಣಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು.ಆಶ್ರಯ ಸಮಿತಿಯು ಸರಕಾರದ ವಸತಿಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಮಿತಿ‌.ಎಸ್.ಡಿ.ಎಂ.ಸಿ.ಗೂ ಆಶ್ರಯ ಸಮಿತಿಗೂ ಏನು ಸಂಬಂಧ? ಏನೋ ಒಂದು ಸಮರ್ಥನೆ ಕೊಡಲು ಹೋಗಿ ಮತ್ತಷ್ಟು ಸಂದೇಹಕ್ಕೆ ಆಸ್ಪದ ಕೊಡಬಾರದು.

ಪ್ರಬುದ್ಧ ಸಂವಿಧಾನದ ನಿರ್ದೇಶನಗಳಂತೆ ನಡೆಯುತ್ತಿರುವ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ವಂಶಾಡಳಿತಕ್ಕಾಗಲಿ,ಕುಟುಂಬದ ಸದಸ್ಯರ ಹಸ್ತಕ್ಷೇಪಕ್ಕಾಗಲಿ ಅವಕಾಶ ಇಲ್ಲ ಎನ್ನುವುದನ್ನು ‘ಲಾಯರ್ ಮುಖ್ಯಮಂತ್ರಿಗಳು’ ಮರೆಯಬಾರದು.ಜನರು ಒಂದು ಮಟ್ಟಿಗೆ ಯಾವುದನ್ನಾದರೂ ಸಹಿಸಿಕೊಳ್ಳುತ್ತಾರೆ,ಅತಿಯಾದರೆ ಅಮೃತವೂ ವಿಷವಂತೆ.ನಿಮ್ಮ ಪುತ್ರರತ್ನರ ಅತಿಯಾದ ದರ್ಪದ ನಡುವಳಿಕಯೇ ನಿಮ್ಮ ಪುತ್ರನ ವಿರುದ್ಧ ಜನಾಕ್ರೋಶದ ಕಾರಣ.ನೀವು ರಾಜ್ಯದ ಮುಖ್ಯಮಂತ್ರಿಗಳು,ಎಂ ಎಲ್ ಎ ಗಳು, ಸಚಿವರುಗಳು,ಹಿರಿಯ ಅಧಿಕಾರಿಗಳು ನಿಮ್ಮ ಎದುರು ಎದ್ದು ನಿಂತು,ಕೈಕಟ್ಟಿಕೊಂಡೇ ಮಾತನಾಡಬೇಕು ಎಂದು ನೀವು ನಿರೀಕ್ಷಿಸಿದರೆ ಹೇಗೋ ಒಪ್ಪಬಹುದು.ಆದರೆ ಏನೂ ಅಲ್ಲದ ನಿಮ್ಮ ಪುತ್ರ ಡಾ.ಯತೀಂದ್ರ ಅವರೆದುರು ಹಿರಿಯ ಐಎಎಸ್ ಅಧಿಕಾರಿಗಳು,ಕೆ ಎ ಎಸ್ ಅಧಿಕಾರಿಗಳು ಕೈಕಟ್ಟಿಕೊಂಡು ನಿಲ್ಲಬೇಕೆ? ಸರಕಾರಿ ಅಧಿಕಾರಿಗಳು ತಮ್ಮ ಕೆಲಸ ಕಾರ್ಯಗಳಿಗಾಗಿ ಯತೀಂದ್ರ ಅವರ ‘ಅನುಗ್ರಹ’ ಕ್ಕಾಗಿ ಅವರ ಮನೆಬಾಗಿಲು ಕಾಯಬೇಕೆ ? ಮುಖ್ಯಮಂತ್ರಿಗಳೆ, ಡಾ.ಯತೀಂದ್ರ ನಿಮ್ಮ ಮಗನಿರಬಹುದು,ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಎಲ್ಲರಂತೆ ಸಾಮಾನ್ಯ ನಾಗರಿಕರು.ಮುಖ್ಯಮಂತ್ರಿಗಳ ಮಗ ಎನ್ನುವ ಕಾರಣಕ್ಕೆ ಸಂವಿಧಾನವು ಡಾ.ಯತೀಂದ್ರ ಅವರಿಗೆ ಯಾವ Privilege and immunities ನೀಡಿಲ್ಲ ಎನ್ನುವುದನ್ನು ಲಾಯರ್ ಆಗಿ ನೀವು ಒಪ್ಪುತ್ತೀರಿ ತಾನೆ ? ಹಾಗಿದ್ದರೆ ಸಂವಿಧಾನದ ರಕ್ಷಣೆ ಇರುವ ಹಿರಿಯ ಐಎಎಸ್ ,ಐಪಿಎಸ್,ಕೆಎಎಸ್ ಅಧಿಕಾರಿಗಳು ನಿಮ್ಮ ಮಗನ ಮುಂದೆ ಕೈಕಟ್ಟಿಕೊಂಡುವ ನಿಲ್ಲುವ ಪರಿಸ್ಥಿತಿಯನ್ನು ಏಕೆ ಸೃಷ್ಟಿಸಿದ್ದೀರಿ?

 

‌ಯತೀಂದ್ರ ಅವರದ್ದು ತ್ಯಾಗವೆ ?

ತಮ್ಮ ಪುತ್ರನನ್ನು ಸಮರ್ಥಿಸುವ ಭರದಲ್ಲಿ ಮುಖ್ಯಮಂತ್ರಿಗಳು ‘ಯತೀಂದ್ರ ತ್ಯಾಗಮಾಡಿದ್ದಾರೆ’ ಎನ್ನುವ ಮಾತನ್ನೂ ಆಡಿದ್ದಾರೆ.ಯತೀಂದ್ರ ಅವರು ತ್ಯಾಗ ಮಾಡಿದ್ದಾರೆಯೆ ? ಯಾರಿಗಾಗಿ, ಯಾವ ತ್ಯಾಗ ಮಾಡಿದ್ದಾರೆ ಸನ್ಮಾನ್ಯ ಮುಖ್ಯಮಂತ್ರಿಗಳೆ ? ವರುಣಾಕ್ಷೇತ್ರವನ್ನು ಅವರು ನಿಮಗೆ ಬಿಟ್ಟುಕೊಟ್ಟಿದ್ದು ಸ್ವಾರ್ಥವೇ ಹೊರತು ತ್ಯಾಗವಲ್ಲ.ಕುಟುಂಬದ ಸದಸ್ಯರಿಗಾಗಿ ಏನನ್ನಾದರೂ ಮಾಡುವುದು ಆಧ್ಯಾತ್ಮಿಕ ಪರಿಭಾಷೆಯಲ್ಲಿ’ ಸ್ವಾರ್ಥ’ ಎನ್ನಿಸಿಕೊಳ್ಳುತ್ತದೆ.ನಿಮ್ಮ ರಾಜಕೀಯ ಅನಿವಾರ್ಯತೆಗಾಗಿ ನಿಮ್ಮ ಪುತ್ರ ವರುಣಾಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಮಗನಾಗಿ ಅವರ ಕರ್ತವ್ಯ.ಕರ್ನಾಟಕದ ಜನತೆಯ ಹಿತಕ್ಕಾಗಿ ಅವರು ಏನನ್ನಾದರೂ ಕಳೆದುಕೊಂಡಿದ್ದರೆ ಅದನ್ನು ತ್ಯಾಗ ಎನ್ನಬಹುದೇ ಹೊರತಾಗಿ ತಂದೆಯ ರಾಜಕೀಯ ಭವಿಷ್ಯಕ್ಕಾಗಿ ವರುಣಾಕ್ಷೇತ್ರದ ಶಾಸಕಸ್ಥಾನದ ಆಕಾಂಕ್ಷೆಯನ್ನು ಬಿಟ್ಟುಕೊಟ್ಟ ಯತೀಂದ್ರ ಅವರ ನಡೆಯನ್ನು ತ್ಯಾಗ ಎನ್ನಲಾಗದು.

ನಿಮ್ಮ ಬಗ್ಗೆ ಕಟುವಾದ ಶಬ್ದಗಳಲ್ಲಿ ಟೀಕಿಸುವುದಾಗಲಿ,ನಿಮ್ಮ ಮನಸ್ಸನ್ನು ನೋಯಿಸುವುದಾಗಲಿ ನನ್ನ ಉದ್ದೇಶವಲ್ಲ ಮುಖ್ಯಮಂತ್ರಿಗಳೆ.ನೀವು’ ನನಗೆ ನೋವುಂಟು ಮಾಡುವ ಉದ್ದೇಶವೇ ಕುಮಾರಸ್ವಾಮಿಯವರದ್ದು’ ಎಂದು ಪ್ರತಿಕ್ರಿಯಿಸಿದ್ದೀರಿ.ಆದರೆ ಸರಕಾರಿ ಅಧಿಕಾರಿಗಳಿಗೂ ಹೃದಯ ಇರುತ್ತದೆ,ಅವರೂ ಮನುಷ್ಯರು, ಅವರಿಗೂ ಭಾವನೆಗಳು ಇರುತ್ತವೆ ಎನ್ನುವುದನ್ನು ನೀವು ಒಪ್ಪುತ್ತೀರಾ?ನಿಮ್ಮ ಪುತ್ರರತ್ನನ ಸೌಜನ್ಯರಹಿತ ವರ್ತನೆಯಿಂದ ಅವರಿಗೂ ನೋವು ಉಂಟಾಗುವುದಿಲ್ಲವೆ ? ಸರಕಾರಿ ಅಧಿಕಾರಿಗಳಿಗೂ ಹೆಂಡಿರು ಮಕ್ಕಳುಗಳ ಕುಟುಂಬ ಇರುವುದಿಲ್ಲವೆ? ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ವರ್ಗಾವಣೆಯನ್ನೋ ,ಹುದ್ದೆಯನ್ನೋ ಬಯಸಿ ಬರುವ ಹಿರಿಯ ಸರಕಾರಿ ಅಧಿಕಾರಿಗಳೊಂದಿಗೆ ನಿಮ್ಮ‌ ‘ಕುಮಾರಕಂಠೀರವ ‘ಹೇಗೆ ವರ್ತಿಸುತ್ತಿದ್ದಾರೆ ಎನ್ನುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ನಿಮ್ಮದು ಸ್ವಾಭಿಮಾನದ ನಡೆ ಎಂದು ಒಪ್ಪಿಕೊಳ್ಳಬಹುದಾದರೂ ನಿಮ್ಮ ಪುತ್ರನ ದುರಂಹಕಾರಕ್ಕೆ ಏನು ಹೇಳುವುದು? ಯತೀಂದ್ರ ಅವರು ಎಂ ಬಿ ಬಿ ಎಸ್ ಪದವಿಧರರಾದ ಡಾಕ್ಟರ್ ಆಗಿಯೂ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎನ್ನುವುದನ್ನೂ ಮರೆತು ದರ್ಪ,ದುರಂಹಕಾರಗಳಿಂದ ವರ್ತಿಸುತ್ತಿದ್ದಾರೆ.

ನಿಮ್ಮ ಪುತ್ರನ ನಡೆಯನ್ನು ನೀವು ಸಮರ್ಥಿಸಿಕೊಂಡಿದ್ದು ‘ಸಂವಿಧಾನ ವಿರೋಧಿ ನಡೆ’ ಎಂದು ನಾನು ಹೇಳಬಯಸುವೆ.ನೀವು ಸಾರ್ವಜನಿಕವಾಗಿ ಅಲ್ಲಗಳೆದರೂ ಆಡಳಿತದಲ್ಲಿ ನಿಮ್ಮ ಪುತ್ರನ ಹಸ್ತಕ್ಷೇಪ ಇರುವುದು ಸತ್ಯಸಂಗತಿ.ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ನೀವು ವಂಶರಾಜಕಾರಣಕ್ಕಾಗಲಿ,ಆಡಳಿತದಲ್ಲಿ ಪುತ್ರನ ಹಸ್ತಕ್ಷೇಪಕ್ಕಾಗಲಿ ಅವಕಾಶನೀಡುವುದಿಲ್ಲ ಎಂದು ನಾಡಿನ ಪ್ರಜ್ಞಾವಂತರು ನಿರೀಕ್ಷಿಸಿದ್ದರು.ಆದರೆ ನಿಮ್ಮ ಪುತ್ರನನ್ನು ವರುಣಾಕ್ಷೇತ್ರದ ಆಶ್ರಯಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸುವ ಮೂಲಕ ನೀವು ಪ್ರಜ್ಞಾವಂತರು,ಸಂವಿಧಾನಪ್ರೇಮಿಗಳ ನಿರೀಕ್ಷೆಯನ್ನು ಹುಸಿಯಾಗಿಸಿದ್ದೀರಿ.ಈಗ ಪುತ್ರನ ಹಸ್ತಕ್ಷೇಪವನ್ನು ಸಮರ್ಥಿಸಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳಿಗೆ ಎಳ್ಳುನೀರು ಬಿಟ್ಟಿದ್ದೀರಿ.ಸನ್ಮಾನ್ಯ ಮುಖ್ಯಮಂತ್ರಿಗಳೆ ,ನೀವು ಮುಖ್ಯಮಂತ್ರಿಯಾಗಿ ಸಂವಿಧಾನದ ಅನುಚ್ಛೇದ 164(3) ರಂತೆ ಸಂವಿಧಾನದ ಮೂರನೇ ಅನುಸೂಚಿಯ v ರಲ್ಲಿ ನಿಗದಿಪಡಿಸಿದ ಪ್ರಮಾಣವಚನದ ನಮೂನೆಯಲ್ಲಿಯೇ ಕರ್ನಾಟಕದ ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿದ್ದೀರಲ್ಲವೆ ?ಆ ಪ್ರಮಾಣವಚನ ಪತ್ರದಲ್ಲಿ ……”‘ಮತ್ತು…ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ಮತ್ತು ಅಂತಃಕರಣಪೂರ್ವಕವಾಗಿ ನಿರ್ವಹಿಸುತ್ತೇನೆಂದೂ,ಭಯ ಅಥವಾ ಪಕ್ಷಪಾತವಿಲ್ಲದೆ,ರಾಗ ದ್ವೇಷವಿಲ್ಲದೆ ಎಲ್ಲಾ ಬಗೆಯ ಜನರಿಗೆ,ಸಂವಿಧಾನಕ್ಕೆ ಮತ್ತು ಕಾನೂನಿಗೆ ಅನುಸಾರವಾಗಿ ನ್ಯಾಯವಾದುದನ್ನೇ ಮಾಡುತ್ತೇನೆಂದೂ” ಪ್ರಮಾಣ ಮಾಡಿದ್ದೀರಲ್ಲವೆ ?ನಿಮಗೆ ಭಯ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಬಹುದು.ಆದರೆ ನಿಮ್ಮನಡೆ ‘ಪಕ್ಷಪಾತ’ದ ನಡೆ ಆಗುವುದಿಲ್ಲವೆ ? ಪುತ್ರವ್ಯಾಮೋಹವು ‘ ರಾಗ’ ವಲ್ಲವೆ ? ಡಾ.ಯತೀಂದ್ರ ಅವರು ಹೇಳಿದ ವ್ಯಕ್ತಿಗಳನ್ನೇ ಆಯ್ಕೆ ಮಾಡುವುದು ‘ ಪಕ್ಷಪಾತ’ವಾಗುತ್ತದೆ.’ರಾಗ ‘ಎಂದರೆ ಪ್ರೀತಿ,ವ್ಯಾಮೋಹ ಎಂದರ್ಥವಿದ್ದು ನಿಮ್ಮ ಪುತ್ರವ್ಯಾಮೋಹವು ಸಂವಿಧಾನದ ಪ್ರಮಾಣವಚನ ವಿಧಿಪತ್ರದಂತೆ ‘ ರಾಗ’ ಎನ್ನಿಸಿಕೊಳ್ಳುತ್ತದೆ.ನಿಮ್ಮ ಮಗನ ಪಟ್ಟಿಯಲ್ಲಿ ಇದ್ದವರನ್ನೇ ಅನುಮೋದಿಸುವುದು ಸಂವಿಧಾನಕ್ಕೆ,ಕಾನೂನಿಗೆ ಅನುಸಾರವಾಗಿ ನ್ಯಾಯವಾದುದನ್ನೇ ಮಾಡುತ್ತೇನೆ ಎನ್ನುವ ಪ್ರಮಾಣವಚನಕ್ಕೆ ವಿರುದ್ಧವಾದ ನಡೆಯಾಗುತ್ತದೆ.ಡಾ.ಯತೀಂದ್ರ ಅವರ ಪಟ್ಟಿಯಲ್ಲಿದ್ದವರನ್ನೇ ಆಯ್ಕೆಮಾಡಿದರೆ ಆ ಪಟ್ಟಿಯಲ್ಲಿದ್ದ ಇತರ ಅರ್ಹರಿಗೆ ಅನ್ಯಾಯ ಮಾಡಿದಂತೆ ಆಗುವುದಿಲ್ಲವೆ ಮುಖ್ಯಮಂತ್ರಿಗಳೆ?ಎಸ್ ಡಿ ಎಂ ಸಿ ಯ ಸಂಗತಿಯೇ ಆಗಿದ್ದರೂ ಡಾ.ಯತೀಂದ್ರ ಅವರ ಪಟ್ಟಿಯನ್ನು ಅನುಮೋದಿಸಿದ್ದು ಸಂವಿಧಾನದ ಆಶಯಗಳನ್ನು ಧಿಕ್ಕರಿಸಿದಂತೆ ಅಲ್ಲವೆ ಸನ್ಮಾನ್ಯ ಮುಖ್ಯಮಂತ್ರಿಗಳೆ ?.

About The Author