ದೇವದುರ್ಗ ತಾಲೂಕಿನ ಇಒ ಜನಪರ ಕಾಳಜಿಯಿಂದ ಕೆಲಸ ಮಾಡಬೇಕು; ಶಾಸಕರು ಬರ ಪರಿಸ್ಥಿತಿಯಲ್ಲಿ ಜನರೊಂದಿಗೆ ಇರಬೇಕು !

 

ದೇವದುರ್ಗ ತಾಲೂಕಿನ ಇಒ ಜನಪರ ಕಾಳಜಿಯಿಂದ ಕೆಲಸ ಮಾಡಬೇಕು; ಶಾಸಕರು ಬರ ಪರಿಸ್ಥಿತಿಯಲ್ಲಿ ಜನರೊಂದಿಗೆ ಇರಬೇಕು ! : ಮುಕ್ಕಣ್ಣ ಕರಿಗಾರ

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನವೆಂಬರ್ 15 ರ ಬುಧವಾರದಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲೆಯ ಬರಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ನರೆಗಾ ಯೋಜನೆಯ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸಲಾಗಿದೆ.ಜಿಲ್ಲೆಯಲ್ಲಿ ಬರಪರಿಸ್ಥಿತಿ ಇರುವುದರಿಂದ ಕೂಲಿಕಾರರ ಬದುಕಿಗೆ ಆಸರೆಯಾಗುವ ಬರಪರಿಹಾರ ಕಾಮಗಾರಿಗಳನ್ನು ತೆಗೆದುಕೊಳ್ಳಲು ಜಿಲ್ಲೆಯ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು ‘ ದೇವದುರ್ಗ ತಾಲೂಕು ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದ ಸಂಗತಿ ಪತ್ರಿಕೆಗಳಲ್ಲಿ ವರದಿಯಾಗಿದೆ. ದೇವದುರ್ಗದ ಶಾಸಕರಾದ ಶ್ರೀಮತಿ ಕರಿಯಮ್ಮ ನಾಯಕ್ ಅವರು ಸಹ ಈ ಸಭೆಯಲ್ಲಿ ಇದ್ದರು.ಜಾಲಹಳ್ಳಿ ಗ್ರಾಮಪಂಚಾಯತಿಯಲ್ಲಿ ಕೆಲಸಕ್ಕೆ ಬಾರದವರಿಗೂ ಹಾಜರಾತಿ ಹಾಕಿ ಭ್ರಷ್ಟಾಚಾರಕ್ಕೆ ಕಾರಣವಾದ ಬಿಎಪ್ಟಿ ರವಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ಅಧ್ಯಕ್ಷ ಯಲ್ಲಪ್ಪ ಗಚ್ಚಿನಮನಿ ಹಾಗೂ ಕಾರ್ಯದರ್ಶಿ ಸುರೇಶಗೌಡ ದೇವದುರ್ಗ ತಾಲೂಕಾ ಪಂಚಾಯತಿ ಇಒ ಅವರಿಗೆ ಪತ್ರಬರೆದು ಒತ್ತಾಯಿಸಿದ ಸಂಗತಿಯೂ ಪತ್ರಿಕೆಗಳಲ್ಲಿ ವರದಿಯಾಗಿದೆ.ಜಾಲಹಳ್ಳಿ ಗ್ರಾಮ ಪಂಚಾಯತಿ ಸೇರಿದಂತೆ ಇಡೀ ತಾಲೂಕಿನಲ್ಲಿ ನರೆಗಾ ಯೋಜನೆಯಡಿ ಎರಡುನೂರು ಕೋಟಿ ಅವ್ಯವಹಾರ ಆಗಿದೆ ಎಂದು ಕರ್ನಾಟಕ ಪ್ರಾಂತಕೂಲಿಕಾರರ ಸಂಘದ ಪದಾಧಿಕಾರಿಗಳು ತಮ್ಮ ಪತ್ರದಲ್ಲಿ ದೂರಿದ್ದಾರೆ.ದೇವದುರ್ಗ ತಾಲೂಕಿನ ನರೆಗಾ ಯೋಜನೆಯ ಅವ್ಯವಹಾರದ ಕುರಿತು ಸರ್ಕಾರದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ತನಿಖೆ ನಡೆಸಲಾಗಿತ್ತು.ಮನರೆಗಾ ಯೋಜನೆಯಡಿ ಅನುದಾನ ದುರ್ಬಳಕೆ ಮಾಡಿಕೊಂಡ ಬಹಳಷ್ಟು ಜನ ಪಿಡಿಒಗಳು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿರುವುದಾಗಿ ತಿಳಿದು ಬಂದಿದೆ.ಹಾಗಿದ್ದೂ ದೇವದುರ್ಗ ತಾಲೂಕಿನ ನರೆಗಾ ಯೋಜನೆಯಡಿ ಅವ್ಯವಹಾರ ನಿರಂತರವಾಗಿ ನಡೆದೇ ಇದೆ ಎನ್ನುವುದು ಬೇಸರದ ಸಂಗತಿ.

ದೇವದುರ್ಗ ಶಾಸಕರ ನಿರಾಸಕ್ತಿ

ದೇವದುರ್ಗ ತಾಲೂಕಿನಲ್ಲಿ ನಡೆದ ಅವ್ಯವಹಾರಗಳಲ್ಲಿ ತಪ್ಪೆಸಗಿದವರಿಗೆ ಶಿಕ್ಷೆ ಕೊಡಿಸಿಯೇ‌ಕೊಡಿಸುತ್ತೇನೆ ,ದೇವದುರ್ಗ ತಾಲೂಕಿನಲ್ಲಿ ಭ್ರಷ್ಟಾಚಾರ ನಿಯಂತ್ರಿಸುತ್ತೇನೆ ಎಂದು ಚುನಾವಣಾ ಪೂರ್ವದಲ್ಲಿ ಹೇಳಿದ್ದ ದೇವದುರ್ಗದ ಶಾಸಕಿ ಶ್ರೀಮತಿ‌ ಕರಿಯಮ್ಮ ನಾಯಕ್ ಅವರು ತಮ್ಮ ರಾಜಕೀಯ ಚಟುವಟಿಕೆಗಳಲ್ಲಿಯೇ ಬ್ಯುಸಿ ಇರುವಂತೆ ಕಾಣಿಸುತ್ತಿದೆ.ಶಾಸಕರಾಗಿ ಆಯ್ಕೆಯಾದ ಪ್ರಾರಂಭದ ದಿನಗಳಲ್ಲಿ ತಾಲೂಕಿನ ಎಲ್ಲ ಇಲಾಖೆಗಳ ಸರಕಾರಿ ಅಧಿಕಾರಿಗಳ ಸಭೆ ಜರುಗಿಸಿ,ಪ್ರಗತಿ ಪರಿಶೀಲಿಸಿ ಕೆಲವು ಸೂಚನೆಗಳನ್ನು ನೀಡಿದ್ದು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಶ್ರೀಮತಿ ಕರಿಯಮ್ಮ ನಾಯಕ್ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದಂತೆ ಕಾಣುತ್ತಿಲ್ಲ.ಶಾಸಕರು ಬಹುತೇಕ ದಿನಗಳಲ್ಲಿ ಬೆಂಗಳೂರಿನಲ್ಲಿಯೇ ಇರುವ ದೂರುಗಳು ಬಂದಿವೆ.ದೇವದುರ್ಗದ ಜನತೆ ಆರು ತಿಂಗಳ ಕಡಿಮೆ ಅವಧಿಯಲ್ಲಿಯೇ ಶಾಸಕರಾದ ಕರಿಯಮ್ಮ ನಾಯಕ್ ಅವರ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.ಇದು ಒಳ್ಳೆಯ ಬೆಳವಣಿಗೆಯಲ್ಲ.ಬರದ ಪರಿಸ್ಥಿತಿಯಲ್ಲಿ ಕರಿಯಮ್ಮ ನಾಯಕ್ ಅವರು ದೇವದುರ್ಗದ ಜನತೆಯ ಜೊತೆಗಿದ್ದು ಅವರ ಕಷ್ಟ- ನೋವುಗಳಿಗೆ ಸ್ಪಂದಿಸಬೇಕು.ಕರಿಯಮ್ಮನವರಲ್ಲಿ ವಿಶ್ವಾಸವಿಟ್ಟು ದೇವದುರ್ಗ ತಾಲೂಕಿನ ಮತದಾರರು ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ಗೆಲ್ಲಿಸಿದ್ದಾರೆಯೇ ಹೊರತು ಜೆಡಿಎಸ್ ಪಕ್ಷದ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಂಡು ಬೆಂಗಳೂರಿನತ್ತ ಮುಖಮಾಡಿ ಕುಳಿತುಕೊಳ್ಳಲು ಅಲ್ಲ ಎನ್ನುವುದನ್ನು ಶ್ರೀಮತಿ ಕರಿಯಮ್ಮ ನಾಯಕ್ ಅವರು ಅರ್ಥಮಾಡಿಕೊಳ್ಳಬೇಕು.ಈಗ ಅವರು ತಾಲೂಕಿನಲ್ಲಿಯೇ ವಾಸ್ತವ್ಯ ಮಾಡಿ ತಾಲೂಕಿನ ಎಲ್ಲ ಸರಕಾರಿ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಬೇಕು.ಅಧಿಕಾರಿಗಳನ್ನು ಅಂಕೆಯಲ್ಲಿಟ್ಟುಕೊಂಡು ಜನರ ಕೆಲಸ ಕಾರ್ಯಗಳನ್ನು ಮಾಡಿಸಬೇಕು.’ಸರಕಾರಿ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ’ ಎಂದು ದೂರುವ ಬದಲು ಯಾವ ಅಧಿಕಾರಿ ಜನಪರವಾಗಿ ಕೆಲಸ ಮಾಡುವುದಿಲ್ಲವೋ ಅಂಥವರ ವಿರುದ್ಧ ಅವರ ಮೇಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಲಿಖಿತ ದೂರು ನೀಡಬೇಕು.ಬೇಕಿದ್ದರೆ ಮುಖ್ಯಮಂತ್ರಿಯವರಿಗೂ ದೂರು ನೀಡಲಿ.ಆದರೆ ಅಧಿಕಾರಿಗಳು ಜನಪರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕಾದ ಶಾಸಕರು ಬಹುತೇಕ ವೇಳೆ ತಾಲೂಕಿನಿಂದ ಹೊರಗೆ ಉಳಿಯುತ್ತಿರುವುದು,ಗ್ರಾಮಗಳಿಗೆ ಭೇಟಿ ನೀಡದೆ ಇರುವುದು,ಸಾರ್ವಜನಿಕರ ಫೋನ್ ಕರೆಗಳಿಗೆ ಸ್ಪಂದಿಸದೆ ಇರುವುದು ಇವೇ ಮೊದಲಾದ ನಕಾರಾತ್ಮಕ ಅಂಶಗಳಿಂದ ಶ್ರೀಮತಿ ಕರಿಯಮ್ಮನವರು ಈಗಾಗಲೇ ತಾಲೂಕಿನ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.ಈಗಲಾದರೂ ಅವರು ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ.

ತಾಲೂಕಿನ ಅಭಿವೃದ್ಧಿಯಲ್ಲಿ ತಾಲೂಕಾ ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ.ಎಲ್ಲ ಗ್ರಾಮ ಪಂಚಾಯತಿಗಳ ಮೇಲೆ ನಿಯಂತ್ರಣಾಧಿಕಾರವನ್ನು ಹೊಂದಿರುವ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಂದ ತಾಲೂಕಿನಲ್ಲಿ ಜನಪರ ಅಭಿವೃದ್ಧಿ ಯೋಜನೆಗಳು,ಕಾರ್ಯಕ್ರಮಗಳು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕಾದುದು ಶಾಸಕರಾದ ಕರಿಯಮ್ಮ ನಾಯಕ್ ಅವರ ಕರ್ತವ್ಯ.ಸರಕಾರಿ ಅಧಿಕಾರಿಗಳು ದೇವದುರ್ಗಕ್ಕೆ ಯಾರದೇ ಬೆಂಬಲದಿಂದ ಬಂದಿರಲಿ,ಯಾರ ಲೆಟರ್ ಪ್ಯಾಡಿನ ಬಲದಿಂದಲಾದರೂ ಬಂದಿರಲಿ ಪ್ರಸ್ತುತ ಶಾಸಕರಾಗಿರುವ ಕರಿಯಮ್ಮ ನಾಯಕ್ ಅವರೊಂದಿಗೆ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಿ ಕೆಲಸ ಮಾಡಬೇಕಾದರು.ಕಾನೂನು ಬದ್ಧವಾದ ಶಾಸಕರ ಸೂಚನೆಗಳನ್ನು ಧಿಕ್ಕರಿಸುವ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ನಿಯಮ- ಕಾನೂನುಗಳಿವೆ.ತಾಲೂಕಿನಲ್ಲಿ ಬರದ ವಾತಾವರಣ ಇದ್ದಾಗ ಶಾಸಕರು ನರೆಗಾಯೋಜನೆಯ ತಾಲೂಕಾ ಕಾರ್ಯಕ್ರಮ ನಿರ್ವಾಹಕ ( Programme officer) ರಾದ ಇಒ ಅವರೊಂದಿಗೆ ಸಮನ್ವಯ ಸಾಧಿಸಿ ಕೂಲಿಕಾರರಿಗೆ ಕೆಲಸ ಸಿಗುವಂತೆ ಮಾಡಬೇಕು.ಶುದ್ಧಕುಡಿಯುವ ನೀರು ಗ್ರಾಮಸ್ಥರಿಗೆ ದೊರಕುವಂತೆ ಮಾಡಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.ಬಡಜನರು ಹೊಟ್ಟೆಪಾಡಿಗಾಗಿ ಬೆಂಗಳೂರು,ಹುಬ್ಬಳ್ಳಿ,ಗೋವಾ ಮಹಾರಾಷ್ಟ್ರಗಳಿಗೆ ಗುಳೆಹೋಗದಂತೆ ನೋಡಿಕೊಳ್ಳಬೇಕು.ಇಂತಹ ಜನಪರ ಕಾರ್ಯಗಳನ್ನು ಮಾಡಲು ಶಾಸಕರಿಗೆ ಅವರ ಅನುದಾನವೇ ಬೇಕಿಲ್ಲ.ನರೆಗಾ ಯೋಜನೆ,ಹದಿನಾರನೇ ಹಣಕಾಸು ಯೋಜನೆ,ಜಲಜೀವನ್ ಮಿಶನ್,ಸಂಜೀವನಿ ಯೋಜನೆ ಮೊದಲಾದ ಸರಕಾರಿ ಯೋಜನೆಗಳಿವೆ.ಸರಕಾರಿ ಅಧಿಕಾರಿಗಳಿಂದ ಇಂತಹ ಯೋಜನೆಗಳ ಲಾಭ ಜನತೆಗೆ ದಕ್ಕುವಂತೆ ನೋಡಿಕೊಳ್ಳಬೇಕು ಶಾಸಕರು.ಶಾಸಕರು ಸರಕಾರಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ,ಸಂವಹನದಿಂದ ಇಂತಹ ಅಭಿವೃದ್ಧಿ ಕಾರ್ಯಕ್ರಮ,ಯೋಜನೆಗಳನ್ನು ಅನುಷ್ಠಾನಗೊಳಿಸಿ ಕುಸಿಯುತ್ತಿರುವ ತಮ್ಮ‌ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವತ್ತ ಗಮನಿಸಬೇಕು.

ದೇವದುರ್ಗದ ಇಒ ರಾಮರೆಡ್ಡಿಯವರು ಹಿಂದೆ ಇದೇ ತಾಲೂಕಿನಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಗಿ ವೃತ್ತಿಜೀವನ‌ಪ್ರಾರಂಭಿಸಿದವರು.ಅವರಿಗೆ ದೇವದುರ್ಗ ತಾಲೂಕಿನ ಸಮಸ್ಯೆಗಳ ಅರಿವು ಇದೆ. ಪಿಡಿಒ ಹುದ್ದೆಯಿಂದ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾಗಿ,ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಡ್ತಿ ಪಡೆದು ಕಾರ್ಯನಿರ್ವಹಿಸುತ್ತಿರುವ ರಾಮರೆಡ್ಡಿಯವರಿಗೆ ಉದ್ಯೋಗ ಖಾತ್ರಿ ಯೋಜನೆಯ ಒಳ ಹೊರಗುಗಳೆಲ್ಲ ಚೆನ್ನಾಗಿ ಗೊತ್ತಿವೆ.ಹೀಗಾಗಿ ಅವರು ಬಡಕೂಲಿಕಾರ್ಮಿಕರ ಬದುಕಿಗೆ ಭರವಸೆಯಾಗುವ,ಗ್ರಾಮೀಣ ಜನಪದರ ಬದುಕಿಗೆ ಆಸರೆಯಾಗುವ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ ಪ್ರಾಮಾಣಿಕ ಆಸಕ್ತಿ ತೋರಿಸಬೇಕು.ಬಡವರ ಅನ್ನ ಕಸಿಯುತ್ತಿರುವ ಪಿಡಿಒ,ಗ್ರಾಮ ಪಂಚಾಯತಿ ಸಿಬ್ಬಂದಿಯವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು.ಹೆಚ್ಚು ಹೆಚ್ಚು field visit ಮಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಕಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.ಪಿಡಿಒ ಆಗಿದ್ದ ತಾಲೂಕಿನಲ್ಲಿಯೇ ಇಒ ಆಗಿ ಕರ್ತವ್ಯ ನಿರ್ವಹಿಸುವ ಅದೃಷ್ಟ ಪಡೆದದ್ದಕ್ಕೆ ಆ ತಾಲೂಕಿಗೆ ಏನಾದರೂ ವಿಶೇಷ ಕೆಲಸ ಕಾರ್ಯ ಮಾಡಿ ತೋರಿಸಬೇಕು ಎನ್ನುವ ಸೇವಾ ಮನೋಭಾವನೆ ಇಒ ಅವರಿಗಿರಬೇಕು.ಈಗಂತೂ ತಾಲೂಕಾ ಪಂಚಾಯತಿ,ಜಿಲ್ಲಾ ಪಂಚಾಯತಿಗಳ ಚುನಾಯಿತ ಜನ ಪ್ರತಿನಿಧಿಗಳಿಲ್ಲವಾದ್ದರಿಂದ ಜನಪರವಾದ ಕೆಲಸ ಕಾರ್ಯಗಳನ್ನು ಮಾಡಲು ಇಒ ಅವರಿಗೆ ಎಲ್ಲ ಅಧಿಕಾರ ಇದೆ.ನರೆಗಾ ಯೋಜನೆ ಒಂದರಡಿಯೇ ದೇವದುರ್ಗ ತಾಲೂಕಿನಲ್ಲಿ ಅದ್ಭುತವಾದ ಕೆಲಸ ಕಾರ್ಯಗಳನ್ನು ಮಾಡಬಹುದು.ಮಠ ಪೀಠಗಳ ಸ್ವಾಮಿಗಳ ಬಳಿ ಸುತ್ತಾಡಿ ಅವರಿಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟು ಅವರ ಆಶೀರ್ವಾದ ಪಡೆದೆ ಎನ್ನುವ ಧನ್ಯತಾಭಾವಕ್ಕಿಂತ ರಾಮರೆಡ್ಡಿಯವರು ಬಡಜನರ ಮನೆಬಾಗಿಲುಗಳಿಗೆ ಹೋಗಿ ಅವರ ಕಷ್ಟ- ದುಃಖ ಪರಿಹರಿಸುವ ಕಾರ್ಯಮಾಡಿದರೆ ಅದರಿಂದ ದೇವರು ಸಂತೃಪ್ತನಾಗುತ್ತಾನೆ.ಗುಡಿ ಗುಂಡಾರಗಳಲ್ಲಿ ದೇವರನ್ನು ಹುಡುಕುವ ಬದಲು ಬಡವರ ಗುಡಿಸಲುಗಳಲ್ಲಿ,ನೊಂದವರ ಅಸಹಾಯಕ ಮುಖಗಳಲ್ಲಿ ದೇವರನ್ನು ಕಾಣಬೇಕು ರಾಮರೆಡ್ಡಿಯವರು.ಜನಪರ ಕೆಲಸ ಕಾರ್ಯಗಳನ್ನು ಮಾಡಿದ ಅಧಿಕಾರಿಗಳನ್ನು ಜನರು ಸದಾ ಸ್ಮರಿಸುತ್ತಿರುತ್ತಾರೆ ಎನ್ನುವುದನ್ನು ಲಕ್ಷ್ಯದಲ್ಲಿಟ್ಟುಕೊಂಡು ರಾಮರೆಡ್ಡಿಯವರು ಜನಪರ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಆಶಿಸುವೆ.

About The Author