ಸಾಲಬಾಧೆ ತಾಳದೆ ಮನನೊಂದು ರೈತ ಆತ್ಮಹತ್ಯೆ

ಶಹಾಪುರ : ಶಹಪೂರು ತಾಲೂಕಿನ ಹುರಸಗುಂಡಗಿ ಗ್ರಾಮದ ರೈತನಾದ ಮಕ್ಬುಲ್ ಸಾಬ್ ತಂದೆ ಖಾಜಾ ಹುಸೇನ್ ಮುಲ್ಲಾ(55) ತಾನು ಬೆಳೆದ ಬೆಳೆ ಸರಿಯಾಗಿ ಬಾರದೆ ಇರುವುದರಿಂದ ಮನನೊಂದು ಬ್ಯಾಂಕ್‌ ಸಾಲ ಹಾಗೂ ಕೈಗಡ ಸಾಲ ತೀರಿಸುವ ದಾರಿ ಕಾಣದೆ ಬೆಳಗಿನ ಜಾವ  ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತನಿಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳಿದ್ದಾರೆ.

ಶಹಾಪುರ ಶಾಖೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ ರೂ,ಬೆಳೆ ಸಾಲ ಹಾಗೂ ಕೈಗಡವಾಗಿ 12 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ. ಮೃತನ ಹೆಸರಲ್ಲಿ 5.20 ಎಕರೆ ಜಮೀನಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಹತ್ತಿ ಮತ್ತು ತೊಗರಿ ಬೆಳೆ ಸರಿಯಾಗಿ ಬಾರದೆ ಇರುವುದರಿಂದ ಮಾಡಿದ ಸಾಲ ತೀರಿಸುವ ದಾರಿ ಕಾಣದೆ, ಹತ್ತಿ ಬೆಳೆಗೆ ಸಿಂಪಡಿಸಲು ಮನೆಯಲ್ಲಿ ತಂದು ಇಟ್ಟಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದಾನೆ. ತಕ್ಷಣ ಈತನ ಅಣ್ಣ ತಮ್ಮಂದಿರು ಹೆಂಡತಿ ಬಂದು ನೋಡುವಾಗ ವಿಷ ಸೇವಿಸಿ ತುಂಬಾ ಹೊತ್ತಾಗಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಗಂಡ ವಿಷ ಕುಡಿದು ಮೃತಪಟ್ಟಿರುವ ವಿಷಯವನ್ನು ಮೃತನ ಹೆಂಡತಿ ಮುಮ್ತಾಜ್ ಬೇಗಂ ಭೀಮರಾಯನ ಗುಡಿಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಭೀಮರಾಯನ ಗುಡಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *