ಮೂರನೇ ಕಣ್ಣು : ಪುಸ್ತಕಗಳ ಖರೀದಿ, ವಿಚಾರಿಸಬೇಕಾದ ಸಂಗತಿಗಳು : ಮುಕ್ಕಣ್ಣ ಕರಿಗಾರ
ಸರಕಾರದ ಗ್ರಂಥಾಲಯ ಇಲಾಖೆಯ ಪುಸ್ತಕಗಳ ಖರೀದಿ ನೀತಿ,ನಿಲುವುಗಳ ಬಗ್ಗೆ ಆಗಾಗ್ಗೆ ಅಪಸ್ವರ,ಆಕ್ಷೇಪಗಳು ವ್ಯಕ್ತವಾಗುತ್ತಿರುತ್ತವೆ.ಪ್ರಜಾವಾಣಿ ದಿನಪತ್ರಿಕೆಯ ಜೂನ್ 09,2026 ರ ಸಂಚಿಕೆಯ ವಾಚಕರ ವಾಣಿಯಲ್ಲಿ ಅಕ್ಷತಾ ಹುಂಚದಕಟ್ಟಿ,ಎಂ.ರಾಜೇಶ್ವರಿ, ರಾಜೇಂದ್ರ ಪ್ರಸಾದ್, ಹೇಮಾ ಪಟ್ಟಣಶೆಟ್ಟಿ, ಬಸವರಾಜ ಸೂಳಿಬಾವಿ,ಟಿ ಎಸ್ ಗೊರವರ,ಚಾಂದಪಾಷ,ಗುರುಪ್ರಸಾದ ಡಿ ಎನ್,ಧನಂಜಯ್ ಮತ್ತು ನಿತೇಶ ಕುಂಟಾಡಿಯವರುಗಳು ಬರೆದ ಜಂಟಿ ಪತ್ರವನ್ನು ಓದಿದೆ.ಗ್ರಂಥಾಲಯ ಇಲಾಖೆಯ ಪುಸ್ತಕಗಳ ಖರೀದಿಲ್ಲಿರುವ ಗೊಂದಲ,ಗತ್ತು- ಗೈರತ್ತುಗಳ ಬಗ್ಗೆ ಇವರೆಲ್ಲ ವ್ಯಕ್ತಪಡಿಸಿರುವ ಅಭಿಪ್ರಾಯ ಸಮರ್ಥನೀಯವಾಗಿದೆ,ಪರಿಗಣಿಸಲೇಬೇಕಾಗಿದೆ.
ಕನ್ನಡ ಸಂಸ್ಕೃತಿಯನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ದೊಡ್ಡದಿದೆ ಎನ್ನುವುದನ್ನು ಸರಕಾರದಲ್ಲಿದ್ದವರು ಆಲೋಚಿಸಬೇಕು.ಪುಸ್ತಕ ಸಂಸ್ಕೃತಿ ಬೆಳೆಯದ ಹೊರತು ಕನ್ನಡ ಸಂಸ್ಕೃತಿಯು ಬಲಗೊಳ್ಳದು.ಉತ್ತಮ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಒದಗಿಸುವುದು ಸರಕಾರದ ಆದ್ಯ ಕರ್ತವ್ಯವಾಗಬೇಕು.ಇಲಾಖೆಯ ಸುಧಾರಣೆ ಹೆಸರಿನಲ್ಲಿ ಐಎಎಸ್ ಅಧಿಕಾರಿಗಳನ್ನು ಗ್ರಂಥಾಲಯ ಇಲಾಖೆಯಲ್ಲಿ ತಂದು ಕೂಡಿಸಬಾರದು.ಐಎಎಸ್ ಅಧಿಕಾರಿಗಳಿಗೆ ಬೇಕಾದಷ್ಟು ಅವಕಾಶಗಳಿವೆ; ಎಲ್ಲ ಇಲಾಖೆಗಳು,ಸಂಸ್ಥೆಗಳಿಗೆ ಐಎಎಸ್ ಅಧಿಕಾರಿಗಳ ಅಗತ್ಯವಿಲ್ಲ.ಗ್ರಂಥಾಲಯ ಇಲಾಖೆ,ಶಿಕ್ಷಣ ಇಲಾಖೆ ಮತ್ತು ವೈದ್ಯಕೀಯ ಇಲಾಖೆಗಳಂತಹ ಕೆಲವು ಇಲಾಖೆಗಳು ಐಎಎಸ್ ಅಧಿಕಾರಿಗಳಿಂದ ಮುಕ್ತವಾಗಿರಬೇಕು.ಕನ್ನಡ ಸಂಸ್ಕೃತಿಯನ್ನು ಉಳಿಸಿ,ಬೆಳೆಸಬೇಕು ಎನ್ನುವ ಕಾಳಜಿ- ಕಳಕಳಿಗಳನ್ನುಳ್ಳವರು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ ಇದು. ಗ್ರಂಥಾಲಯ ಇಲಾಖೆಯಲ್ಲಿ ಆಗಲೇಬೇಕಾದ ಮೊದಲ ಆಡಳಿತಾತ್ಮಕ ಸುಧಾರಣೆ ಇದು.
ಇನ್ನು ಪ್ರಕಾಶಕರ ವಿಚಾರಕ್ಕೆ ಬರೋಣ.ಕನ್ನಡದಲ್ಲಿ ವರ್ಷಕ್ಕೆ ಏನಿಲ್ಲವೆಂದರೂ ಹದಿನೈದು ಸಾವಿರ ಹೊಸ ಶೀರ್ಷಿಕೆಗಳ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ.ಆದರೆ ಈ ಎಲ್ಲ ಶೀರ್ಷಿಕೆಗಳ ಪುಸ್ತಕಗಳು ಗ್ರಂಥಾಲಯ ಇಲಾಖೆಯ ಖರೀದಿಗೆ ಯೋಗ್ಯವಾಗಿರುವುದಿಲ್ಲ.ಕವಿ ಸಾಹಿತಿಗಳು ಎನ್ನಿಸಿಕೊಳ್ಳಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಬರೆಯುತ್ತಿರುವ ಪುಸ್ತಕಗಳು ಕನ್ನಡದ ಅಕ್ಷರಲೋಕಕ್ಕೆ ಕಳೆಯೇ ಸರಿ.ವ್ಯಾಕರಣಬದ್ಧವಾಗಿ ಬರೆಯಲಾಗದವರ,ಕಾಗುಣಿತ ದೋಷಗಳುಳ್ಳ,ಅಲ್ಪಪ್ರಾಣ- ಮಹಾಪ್ರಾಣಗಳ ಅರಿವೇ ಇಲ್ಲದವರು ಬರೆಯುವ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಕಳಿಸಿದರೆ ಆಗುವ ಪರಿಣಾಮವೇನು ? ಕೆಲವರಲ್ಲಿ ಪುಸ್ತಕ ಮುದ್ರಣಮಾಡುವ ಉಮೇದು ಇರುತ್ತದೆಯೇ ಹೊರತು ಪುಸ್ತಕದ ತತ್ತ್ವ- ಸತ್ತ್ವವನ್ನು ಪರೀಕ್ಷಿಸುವ ಪರಿಣತಿ ಇರುವುದಿಲ್ಲ.
ಜೊತೆಗೆ ಕನ್ನಡದ ಖ್ಯಾತನಾಮ ಸಾಹಿತಿಗಳು ಎನ್ನಿಸಿಕೊಂಡವರು ಬರೆದ ಎಲ್ಲ ಪುಸ್ತಕಗಳು ಗ್ರಂಥಾಲಯ ಇಲಾಖೆಯ ಖರೀದಿಗೆ ಯೋಗ್ಯವಾಗಿರುವುದಿಲ್ಲ ! ಹಾಗಾಗಿ ಹಿರಿಯರು ಬರೆದಿದ್ದಾರೆ ಎಂದ ಮಾತ್ರಕ್ಕೆ ಅವರ ಎಲ್ಲಪುಸ್ತಕಗಳನ್ನು ಖರೀದಿಸಬಾರದು.ಹೊಸ ಲೇಖಕರುಗಳಲ್ಲಿ ಕೆಲವರು ಉತ್ತಮವಾಗಿ ಬರೆಯುತ್ತಾರೆ.ಅಂಥವರ ಪುಸ್ತಕಗಳನ್ನು ಖರೀದಿಸಲು ಹಿಂದೇಟು ಹಾಕಬಾರದು.ರಾಮಾಯಣ,ಮಹಾಭಾರತ,ಭಗವದ್ಗೀತೆಗಳಂತಹ ವಿಷಯವನ್ನಾಧರಿಸಿದ ಅಧಿಕಬೆಲೆಯುಳ್ಳ ಬೃಹತ್ ಗ್ರಂಥಗಳನ್ನು ಖರೀದಿಸಿದರೆ ಪ್ರಯೋಜನವಿಲ್ಲ.ಭಾರತಸಂವಿಧಾನ ಸೇರಿದಂತೆ ಉಪಯುಕ್ತ ಪುಸ್ತಕಗಳು ಎಲ್ಲ ಗ್ರಂಥಾಲಯಗಳಲ್ಲಿ ಇರಬೇಕು.ಜ್ಯೋತಿಷ,ಪುರಾಣಗಳು,ಸ್ಮೃತಿಗಳನ್ನು ಓದುವ ಅಗತ್ಯವೇನಿದೆ ಇಂದಿನ ವೈಜ್ಞಾನಿಕ ಯುಗದಲ್ಲಿ? ಆಸಕ್ತರು ಬೇಕಿದ್ದರೆ ಅವುಗಳನ್ನು ಖರೀದಿಸಿ ಓದಲಿ.ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಸಾಂವಿಧಾನಿಕ ಬದ್ಧತೆಯುಳ್ಳ ಸರಕಾರ ಮತ್ತು ಸರಕಾರದ ಗ್ರಂಥಾಲಯ ಇಲಾಖೆ ಯುಗಧರ್ಮಕ್ಕೆ ಪೂರಕವಲ್ಲದ,ಅಪ್ರಸ್ತುತ ಸಾಹಿತ್ಯವನ್ನು ಪ್ರೋತ್ಸಾಹಿಸಬಾರದು.ವಿಜ್ಞಾನ, ವೈದ್ಯಕೀಯ,ಸಾರ್ವಜನಿಕ ಆಡಳಿತ,ರಾಜ್ಯಾಡಳಿತ ಪದ್ಧತಿ,ಪರಿಸರ ವಿಜ್ಞಾನ, ಜೀವ ವಿಜ್ಞಾನ, ಖಗೋಳ ವಿಜ್ಞಾನ ಸೇರಿದಂತೆ ಶೈಕ್ಷಣಿಕ ಪಠ್ಯಕ್ಕೆ ಪೂರಕವಾದ ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಮಾತ್ರ ಖರೀದಿಸಬೇಕು.ಯಾವುದೇ ಪ್ರಕಾಶಕರು, ಪುಸ್ತಕ ಮಾರಾಟಗಾರರು ಪ್ರಕಟಿಸುವ ಬಹುಪಾಲು ಪುಸ್ತಕಗಳನ್ನು ಖರೀದಿಸಬಾರದು.
ಗ್ರಂಥಾಲಯ ಇಲಾಖೆಯು ವರ್ಷಕ್ಕೆ ಒಂದು ಸಾವಿರ ಹೊಸ ಶೀರ್ಷಿಕೆಗಳ ಪುಸ್ತಕಗಳನ್ನು ಮಾತ್ರ ಖರೀದಿಸಬೇಕು.ಆ ಪುಸ್ತಕಗಳ ವಿಷಯ ವಸ್ತು,ಸತ್ತ್ವವನ್ನು ಆಧರಿಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತವಾದ ಪುಸ್ತಕಗಳನ್ನು ಮಾತ್ರ ಖರೀದಿಸಬೇಕು.ಸಾರ್ವಜನಿಕರ ತೆರಿಗೆಯ ಹಣದಿಂದ ಸಾರ್ವಜನಿಕರಿಗೆ ಉಪಯುಕ್ತವಾದ ಪುಸ್ತಕಗಳನ್ನು ಮಾತ್ರ ಖರೀದಿಸಬೇಕೇ ಹೊರತು ಯಾರಿಗೂ ವಿವೇಚನಾಧಿಕಾರ ಇರಬಾರದು.ಲೇಖಕರು ತಾವು ಬರೆದ ಪುಸ್ತಕಗಳನ್ನು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ನೊಂದಾಯಿಸುತ್ತಾರೆ.ನೊಂದಣಿ ಸಂದರ್ಭದಲ್ಲಿ ಲೇಖಕರು ತಮ್ಮ ಪುಸ್ತಕಗಳ ಮೂರು ಪ್ರತಿಗಳನ್ನು ಗ್ರಂಥಾಲಯ ಇಲಾಖೆಗೆ ನೀಡುತ್ತಾರೆ.ಗ್ರಂಥಾಲಯ ಇಲಾಖೆಯು ಕವಿ ಸಾಹಿತಿ ಪ್ರಕಾಶಕರುಗಳನ್ನು ಒಳಗೊಂಡ ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸಬೇಕು.ಪ್ರತಿವರ್ಷದ ಜನೆವರಿಯಿಂದ ಡಿಸೆಂಬರ್ ವರೆಗೆ ಪ್ರಕಟವಾಗುವ ಪುಸ್ತಕಗಳನ್ನು ಅವುಗಳು ನೊಂದಣಿಯಾದ ಕೂಡಲೆ ಆಯ್ಕೆ ಸಮಿತಿಯ ಸದಸ್ಯರುಗಳಿಗೆ ಕಳುಹಿಸಿ ಉತ್ತಮ ಪುಸ್ತಕಗಳ ಆಯ್ಕೆಮಾಡಬೇಕು.ಆಯಾ ವರ್ಷದಲ್ಲಿ ಪ್ರಕಟಗೊಂಡ ಸಾಹಿತ್ಯ ಮತ್ತು ಮಾನವಿಕ ವಿಭಾಗಗಳ ಒಟ್ಟು ಒಂದು ಸಾವಿರ ಪುಸ್ತಕಗಳನ್ನು ಮಾತ್ರ ಖರೀದಿಸಬೇಕು.ರಾಜ್ಯದಲ್ಲಿ ಎಲ್ಲ ನೊಂದಾಯಿತ ಪ್ರಕಾಶಕರುಗಳು ಪ್ರಕಟಿಸಿದ ಪುಸ್ತಕಗಳು ಆಯ್ಕೆ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.ಅಖಂಡ ಕರ್ನಾಟವನ್ನು ಪ್ರತಿನಿಧಿಸುವಂತೆ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಯಬೇಕು.ಗ್ರಂಥಾಲಯ ಇಲಾಖೆ ಮಾತ್ರ ಪುಸ್ತಕಗಳನ್ನು ಖರೀದಿಸಿ,ಇತರ ಇಲಾಖೆಗಳಿಗೆ ನೀಡುವಂತಹ ವ್ಯವಸ್ಥೆ ಆಗಬೇಕು.ಶಿಕ್ಷಣ ಇಲಾಖೆ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಸಮಾಜ ಕಲ್ಯಾಣ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗಳಂತಹ ಕೆಲವು ಇಲಾಖೆಗಳು, ಸಂಸ್ಥೆಗಳು ಪುಸ್ತಕಗಳನ್ನು ಖರೀದಿಸುತ್ತಿದ್ದು ಈ ಸಂಸ್ಥೆಗಳು ಪುಸ್ತಕಗಳ ಗುಣಮಟ್ಟ,ಸಾಹಿತ್ಯ ಸತ್ತ್ವವನ್ನು ಪರಿಶೀಲಿಸದೆ ಕಾಟಾಚಾರದ ನಿಯಮಾವಳಿಗಳನ್ನು ಅಳವಡಿಸಿಕೊಂಡು ಪುಸ್ತಕಗಳನ್ನು ಖರೀದಿಸುತ್ತಿದ್ದು ಅದು ನಿಲ್ಲಬೇಕು.ಬೇಕಿದ್ದರೆ ಆಯಾ ಇಲಾಖೆಗಳ ಅವಶ್ಯಕತೆಯನ್ನು ಅರಿತು ಪುಸ್ತಕಗಳನ್ನು ಒದಗಿಸಬಹುದು. ಗ್ರಂಥಾಲಯ ಇಲಾಖೆಗೆ ಶಕ್ತಿ ತುಂಬಬೇಕು.ಗ್ರಂಥಾಲಯ ಇಲಾಖೆಯನ್ನು ಈ ಮೊದಲಿನಂತೆ ಸ್ವತಂತ್ರ ಇಲಾಖೆಯನ್ನಾಗಿ ಮುಂದುವರೆಸಬೇಕು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಂಥಾಲಯ ಇಲಾಖೆಯನ್ನು ಪ್ರತ್ಯೇಕಿಸಬೇಕು.ಇಂತಹ ಕೆಲವು ಅಗತ್ಯ ಸುಧಾರಣೆಗಳು ಆಗಬೇಕಿದೆ ಗ್ರಂಥಾಲಯ ಇಲಾಖೆಯಲ್ಲಿ.
೦೯.೦೬.೨೦೨೬