ಮುಕ್ಕಣ್ಣ ಕರಿಗಾರರ ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ ಕನ್ನಡ ವೈಚಾರಿಕ ಸಾಹಿತ್ಯ ಪ್ರಪಂಚಕ್ಕೊಂದು ಅನರ್ಘ್ಯರತ್ನಕಾಣಿಕೆ : ಸಿದ್ಧರಾಮ ಹೊನ್ಕಲ್
ಗಬ್ಬೂರು ಜೂನ್ 07,2026,,
ಮುಕ್ಕಣ್ಣ ಕರಿಗಾರರ ” ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ” ಕೃತಿಯು ಕನ್ನಡದ ವೈಚಾರಿಕ ಸಾಹಿತ್ಯ ಪ್ರಪಂಚಕ್ಕೆ ಅನರ್ಘ್ಯರತ್ನ ಕಾಣಿಕೆಯಾಗಿದೆ.ಕನಕದಾಸರ ಬಗೆಗಿನ ಅದ್ವಿತೀಯ ಕೃತಿಯಾಗಿದೆ,ಕೃತಿರತ್ನವಾಗಿದೆ.ಕನಕದಾಸರ ಕುರಿತು ಇದುವರೆಗೂ ನೂರಾರು ಕೃತಿಗಳು ಪ್ರಕಟಗೊಂಡಿವೆ.ಆದರೆ ಆ ಯಾವ ಕೃತಿಯಲ್ಲಿಯೂ ಕಾಣಸಿಗದ ಸಾಹಿತ್ಯ ತತ್ತ್ವ,ಕನಕತತ್ತ್ವ ಮುಕ್ಕಣ್ಣ ಕರಿಗಾರರ ಈ ಕೃತಿಯಲ್ಲಿದೆ.ಕನಕ ತತ್ತ್ವ ದರ್ಶನದ ಒಂದೊಂದು ಲೇಖನವು ಕನಕದಾಸರ ಬಗೆಗೆ ಹೊಸನೋಟವನ್ನು ತೋರಿಸುತ್ತ ಕನಕದಾಸರ ಭಕ್ತಿರಸಗಂಗೆಯಲ್ಲಿ ಮಿಂದೆದ್ದು ಮಡಿಯಾದ ನಿತ್ಯಶುದ್ಧ ಸಂತನ ವ್ಯಕ್ತಿತ್ವ ದರ್ಶನಮಾಡಿಸುವ, ಹೊಸಸುಳಿವುಗಳ ಮಿಂಚುಗೊಂಚಲಿನ ಅನನ್ಯ ಕೃತಿ ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ’ ಎಂದು ಅಭಿಪ್ರಾಯಿಸಿದರು ನಾಡಿನ ಖ್ಯಾತಸಾಹಿತಿಗಳು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ಧರಾಮ ಹೊನ್ಕಲ್ ಅವರು. ಅವರಿಂದು ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ನಡೆದ ಮುಕ್ಕಣ್ಣ ಕರಿಗಾರರ 62 ನೆಯ ಕೃತಿ ” ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ” ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯ ಇಂಡಿಯ ಪ್ರಗತಿಪರ ಚಿಂತಕರಾದ ಮಲ್ಲಿಕಾರ್ಜುನ ಶೆಂಡಗಿಯವರು ” ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ” ಕೃತಿಯನ್ನು ಪರಿಚಯಿಸುತ್ತ “ಮೂಲತಃ ಮುಕ್ಕಣ್ಣ ಕರಿಗಾರ ಅವರು ಶೈವಪರಂಪರೆಯವರು,ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರು; ಇದುವರೆಗೂ ಶಿವಸರ್ವೋತ್ತಮ ತತ್ತ್ವವನ್ನು ಪ್ರತಿಪಾದಿಸಿದವರು.ಆದರೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕನಕದಾಸರ ಋಷಿವ್ಯಕ್ತಿತ್ವವನ್ನು ಕರ್ನಾಟಕ ರಾಜ್ಯದಾದ್ಯಂತ ಪಸರಿಸುವ ಕಾರ್ಯವನ್ನು ಅದ್ಭುತವಾಗಿ ಮಾಡುತ್ತಿದ್ದಾರೆ.ಕನಕದಾಸರ ಕುರಿತು ಈಗಾಗಲೇ ಐದು ಪುಸ್ತಕಗಳನ್ನು ಪ್ರಕಟಿಸಿರುವ ಮುಕ್ಕಣ್ಣ ಕರಿಗಾರರು ಆ ಐದೂ ಪುಸ್ತಕಗಳಲ್ಲಿ ಕನಕದಾಸರ ಸಂತವ್ಯಕ್ತಿತ್ವವನ್ನು ಪರಿಸ್ಫುಟಗೊಳಿಸುವ ಮೂಲಕ ಕನಕ ಸಾಹಿತ್ಯಾಸಕ್ತರಿಗೆ ಪರಾಮರ್ಶನ ಸಾಹಿತ್ಯ ಒದಗಿಸಿದ್ದಾರೆ.ಆರನೆಯ ಕೃತಿಯಾದ ” ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ” ವು ಕನಕಸಾಹಿತ್ಯಕ್ಕೊಂದು ಅಪೂರ್ವಕೊಡುಗೆಯಾಗಿದೆ.ಕೃತಿಯಲ್ಲಿ ಇರುವ ಇಪ್ಪತ್ತೈದು ಲೇಖನಗಳು ಇಪ್ಪತ್ತೈದು ತತ್ತ್ವಗಳಂತೆ ಇವೆ.ಮುಕ್ಕಣ್ಣ ಕರಿಗಾರರ ಶಬ್ದಸಂಪತ್ತು ಅವರದೇ ಆದ ವೈಶಿಷ್ಟ್ಯ; ಅವರ ಋಷಿವ್ಯಕ್ತಿತ್ವದ ದಾರ್ಶನಿಕ ನೋಟದ ಕಾರಣದಿಂದಾಗಿಯೇ ಇಲ್ಲಿ ಹೊಸದೊಂದು ಶಬ್ದಲೋಕವೇ ನಮ್ಮೆದುರು ನಿಂತ ಅನುಭವವಾಗುತ್ತದೆ.ಇಲ್ಲಿ ಪ್ರಯೋಗಿಸಿದ ಪ್ರತಿಶಬ್ದವೂ ನೂತನವೆ,ತತ್ತ್ವಾರ್ಥ ತುಂಬಿಕೊಂಡ ತಾತ್ತ್ವಿಕ ಪದವೆ.ಕೃತಿಯು ಮೊದಲ ಓದಿಗೆ ದಕ್ಕುವಂತಹದ್ದಲ್ಲ,ಹಲವು ಬಾರಿ ಓದಿದಾಗ ಮಾತ್ರ ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ ಅರ್ಥಹೊಳೆಯುತ್ತದೆ,ಮಹತ್ತು ತಿಳಿಯುತ್ತದೆ’ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆಯ ರಾಯಚೂರು ಜಿಲ್ಲಾ ವರದಿಗಾರರಾದ ಬಸವರಾಜ ಭೋಗಾವತಿಯವರು ” ಮುಕ್ಕಣ್ಣ ಕರಿಗಾರ ಅವರು ಬದುಕು- ಬರಹಗಳೆರಡರಿಂದಲೂ ದೊಡ್ಡವರಾದವರು. ಅವರು ಅಧಿಕಾರ ಮಾತ್ರದಿಂದ ದೊಡ್ಡವರಾದವರಲ್ಲ,ತಾವು ನಂಬಿದ ತತ್ತ್ವಾದರ್ಶಗಳನ್ನು ತಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು, ಪ್ರತಿಪಾದಿಸುತ್ತ ಆದರ್ಶರಾದವರು.ಇತರ ಅಧಿಕಾರಿಗಳಂತೆ ಭೋಗಜೀವನವನ್ನು ಒಪ್ಪದೆ,ತ್ಯಾಗ ಜೀವನವನ್ನು ಅಪ್ಪಿ ವಿರಾಗಿಯ ನಿರ್ಮಮತೆಯನ್ನು ಬೆಳಸಿಕೊಂಡ ಸಿದ್ಧರವರು,ಸಂತಸಾಹಿತಿಗಳವರು. ಕವಿ ಸಾಹಿತಿಗಳಾದವರು ಸಾಮಾಜಿಕ ಬದ್ಧತೆಯಿಂದ ಬದುಕಬೇಕು ಮತ್ತು ಬರೆಯಬೇಕು ಎನ್ನುವ ನಂಬಿಕೆ ಅವರದು.ಸ್ವಸ್ಥಸಮಾಜ ನಿರ್ಮಾಣದ ಗುರಿಯಾಗಿ ಉಳ್ಳ ಸಾಹಿತ್ಯವೇ ಶ್ರೇಷ್ಠವಾದುದು ; ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ಫೂರ್ತಿಯಾಗಬಲ್ಲವರೇ ಶ್ರೇಷ್ಠ ಸಾಹಿತಿಗಳು ಎಂದು ನಂಬಿರುವ ಮುಕ್ಕಣ್ಣ ಕರಿಗಾರರು ಅಧಿಕಾರದ ಅಹಂಗೆ ಒಳಗಾದವರಲ್ಲ,ಪದವಿ ಪ್ರಶಸ್ತಿಗಳ ಗುಂಗಿಗೆ ಬಿದ್ದವರಲ್ಲ.ಸಾಹಿತ್ಯ ಸಮ್ಮೇಳನಗಳ ಆಹ್ವಾನವನ್ನು ಬೇಡ ಎನ್ನುವ,ಪದವಿಪ್ರಶಸ್ತಿಗಳಿಗಾಗಿ ಲಾಬಿ ಮಾಡದ,ಅಧಿಕಾರಿಗಳಾಗಿಯೂ ರಾಜಕಾರಣಿಗಳ ಮನೆಬಾಗಿಲುಕಾಯದ ಅಪರೂಪದ ತತ್ತ್ವನಿಷ್ಠ ಅಧಿಕಾರಿ ಅವರು.ಎಲ್ಲರಂತೆ ಅರಮನೆಗಳನ್ನು ಕಟ್ಟಿಸದೆ ಸರಳವಾಗಿ ಬದುಕುತ್ತ ‘ ನಾನು ಅರಮನೆಯನ್ನು ಕಟ್ಟಬಂದವನಲ್ಲ; ಅರಿವಿನ ಮನೆಯನ್ನು ಕಟ್ಟಬಂದವನು’ ಎಂದು ಹೇಳುತ್ತ ಅದರಂತೆಯೇ ಬದುಕಿ ನೂರಾರು ಜನರಿಗೆ ಪರಮಾತ್ಮನ ಪಥವನ್ನು ತೆರೆದುತೊರಿಸಿದ ನಡೆನುಡಿ ಒಂದಾದ ಬೆಡಗಿನ ವ್ಯಕ್ತಿತ್ವದವರು’ ಎಂದು ಬಣ್ಣಿಸಿದರು.ಶಹಾಪುರದ ಕವಿ,ಪತ್ರಕರ್ತ ಬಸವರಾಜ ಸಿನ್ನೂರ ಅವರು ಮಾತನಾಡುತ್ತ ” ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಅಂತ ಒಂದು ಪ್ರಾಧಿಕಾರ ಇದೆ ಎನ್ನುವುದೇ ನಾಡಜನತೆಗೆ ಗೊತ್ತಿರದ ಸ್ಥಿತಿಯಲ್ಲಿ ಅಜ್ಞಾತವಾಸವನ್ನು ಅನುಭವಿಸುತ್ತಿದ್ದ ಕನಕದಾಸರ ಐಕ್ಯಸ್ಥಳ ಕಾಗಿನೆಲೆಯನ್ನು, ಕನಕದಾಸರ ಹಿರಿದಾದ ಸಂತ ವ್ಯಕ್ತಿತ್ವವನ್ನು ರಾಜ್ಯದಾದ್ಯಂತ ಪರಿಚಯಿಸಿದ ಶ್ರೇಯಸ್ಸು ಮುಕ್ಕಣ್ಣ ಕರಿಗಾರ ಅವರದ್ದು.ಮುಕ್ಕಣ್ಣ ಕರಿಗಾರ ಅವರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಬಂದಬಳಿಕ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವು ಮಾತನಾಡುತ್ತಿದೆ ಎನ್ನುವ ಮಾತು ಅತಿಶಯೋಕ್ತಿ ಏನಲ್ಲ.ತಾವು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಆರು ತಿಂಗಳುಗಳ ಅತ್ಯಲ್ಪ ಅವಧಿಯಲ್ಲೇ ಮುಕ್ಕಣ್ಣ ಕರಿಗಾರ ಅವರು ಕನಕದಾಸರ ಸಂತ ವ್ಯಕ್ತಿತ್ವವನ್ನು ಮನೆಮನೆಗಳಿಗೆ ತಲುಪಿಸುವ ಸಾರ್ಥಕ ಕಾರ್ಯಮಾಡಿ,ಯಶಸ್ವಿಯಾಗಿದ್ದಾರೆ’ ಎಂದರು.ಚಡಚಣದ ವಿಚಾರವಾದಿ ಮಲ್ಲಿಕಾರ್ಜುನ ನಡಗೇರಿ ಅವರು ಮಾತನಾಡುತ್ತ ತಾವು ” 1999 ರಿಂದ ಮುಕ್ಕಣ್ಣ ಕರಿಗಾರ ಅವರ ಸಾಹಿತ್ಯವನ್ನು ಓದಿ,ಪ್ರಭಾವಿತರಾದವರು.ಮುಕ್ಕಣ್ಣ ಕರಿಗಾರರು “ದಿಕ್ಸೂಚಿ” ಸ್ಪರ್ಧಾಪರೀಕ್ಷೆಗಳ ಮಾಸಪತ್ರಿಕೆಯಲ್ಲಿ ಬರೆದ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತಾದ ಲೇಖನ ಅದರಲ್ಲೂ ಅವರು ಮಹಾಕವಿ ಕುವೆಂಪು ಅವರ ಋಷಿವ್ಯಕ್ತಿತ್ವವನ್ನು ಬಣ್ಣಿಸಿದ್ದು ಇಂದಿಗೂ ನನ್ನ ನೆನಪಿನಂಗಣದಲ್ಲಿ ಹಸಿರಾಗಿದೆ’ ಎಂದು ಹೇಳುತ್ತ ಕರಿಗಾರರು ಬಣ್ಣಿಸಿದ ಕುವೆಂಪುರವರ ಕುರಿತಾದ ಮಿಂಚುಗೊಂಚಲಿನ ವಾಕ್ಯ ಸರಣಿಗಳನ್ನು ಸರಾಗವಾಗಿ ಹೇಳಿದರು.ತಮ್ಮ ಮಾತುಗಳನ್ನು ಮುಂದುವರೆಸಿದ ನಡಗೇರಿಯವರು ‘ ನಂತರ ಮುಕ್ಕಣ್ಣ ಕರಿಗಾರರ ‘ ಬೂದಿಬಸವನ ತ್ರಿಪದಿಗಳು’ ಮತ್ತು’ ಯಮನ ಸಾವು’ ನಾಟಕವನ್ನು ಓದಿ,ಅವರ ಬಗ್ಗೆ ಎಲ್ಲಿಲ್ಲದ ಗೌರವಾಭಿಮಾನಗಳುಂಟಾದವು.ಅವರನ್ನು ಕಾಣಬೇಕು ಎನ್ನುವ ನನ್ನ ಬಹುದಿನಗಳ ಬೇಡಿಕೆ ಇಂದು ಶಿಕ್ಷಕಮಿತ್ರ ಮಲ್ಲಿಕಾರ್ಜುನ ಶೆಂಡಗಿ ಅವರ ಮೂಲಕ ಒದಗಿಬಂದಿತು.ಸಾಮಾನ್ಯರಿಗೆ ಮಾತ್ರ ಏಕೆ ವಿದ್ವಾಂಸರು ಕೂಡ ಸುಲಭವಾಗಿ ಅರ್ಥೈಸಿಕೊಳ್ಳಲಾಗದ ವಿದ್ವತ್ತು ಮತ್ತು ಅರ್ಥಸಂಪತ್ತಿನ ‘ ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ’ ಕೃತಿಯಲ್ಲಿ ಕನಕದಾಸರ ಕೀರ್ತನೆಗಳ ನಿಜಾರ್ಥ ಅನಾವರಣಗೊಂಡಿದೆ’ ಎಂದರು.
ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಲೇಖಕ ಮುಕ್ಕಣ್ಣ ಕರಿಗಾರ ಅವರು’ ಸಂತ ಕನಕದಾಸರು ಕರುನಾಡು ಕಂಡ ಅಪರೂಪದ ಸಂತರು,ಕರ್ನಾಟಕದ ಸಂಸ್ಕೃತಿಯನ್ನು ರೂಪಿಸಿದ ಮಹಾನ್ ಚೈತನ್ಯರುಗಳಲ್ಲಿ ಒಬ್ಬರು.ಕನಕದಾಸರು ಕುರುಬರಾಗಿ ಹುಟ್ಟಿ ಕುರುಬರಾಗಿಯೇ ಉಳಿಯದೆ ವಿಶ್ವಮಾನವರಾಗಿ ಬೆಳೆದು ವಿಶ್ವವಂದ್ಯರಾದ ಸಂತರು,ಮಹಾಂತರು.ಇಂತಹ ಮಹಾನ್ ಸಂತರನ್ನು ಜಾತಿಯ ಕಾರಣದಿಂದ ನಿರ್ಲಕ್ಷಿಸಿದ ಕಾರಣದಿಂದ ಕನಕದಾಸರ ಋಷಿವ್ಯಕ್ತಿತ್ವ,ಜಂಗಮ ವ್ಯಕ್ತಿತ್ವ ಬೆಳಕಿಗೆ ಬಂದಿರಲಿಲ್ಲ. ನಾನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತನಾದ ದಿನದಿಂದಲೂ ಕನಕದಾಸರ ಹೈಮಾಚಲೋಪಮ ಋಷಿವ್ಯಕ್ತಿತ್ವವನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದ್ದೇನೆ.ಇಂದು ಲೋಕಾರ್ಪಣೆಗೊಂಡ ‘ ಕನಕದಾಸರ ಮುಕ್ತಾತ್ಮ ತತ್ತ್ವ ದರ್ಶನ’ ಕೃತಿಯಲ್ಲಿ ಕನಕದಾಸರು ಪ್ರತಿಪಾದಿಸಿದ ಆತ್ಮತತ್ತ್ವವನ್ನು ನಿರೂಪಿಸಿದ್ದೇನೆ.ಕನಕದಾಸರನ್ನು ಕುಲಾಭಿಮಾನದ ಹೆಮ್ಮೆ ಮತ್ತು ಕೀಳುಕುಲದ ಅನಾದರಣೆ ಎನ್ನುವ ಎರಡು ವಿಪರೀತ ವಿಕಲ್ಪಗಳಿಂದ ನೋಡದೆ ಇದ್ದಾಗ ಮಾತ್ರ ಕನಕದಾಸರ ನಿಜವ್ಯಕ್ತಿತ್ವ ಅರ್ಥವಾಗುತ್ತದೆ.ಎಲ್ಲಿಯೂ ನಿಲ್ಲದ,ಯಾರಿಗೂ ಸಿಕ್ಕದ,ಯಾವುದಕ್ಕೂ ದಕ್ಕದ ಕನಕದಾಸರ ಬ್ರಹ್ಮಬೆಡಗಿನ ವ್ಯಕ್ತಿತ್ವವನ್ನು ಇಲ್ಲಿ ಚಿತ್ರಿಸಿದ್ದೇನೆ’ ಎಂದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುಕ್ಕಣ್ಣ ಕರಿಗಾರರ ಶಿಷ್ಯರುಗಳೂ ಮತ್ತು ಶಿಕ್ಷಕರುಗಳಾದ ಆದ ಷಣ್ಮುಖ ಹೂಗಾರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ ಬಸವಲಿಂಗ ಕರಿಗಾರ ವಂದಿಸಿದರು.ಗುರುಬಸವ ಹುರಕಡ್ಲಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪತ್ರಕರ್ತರುಗಳಾದ ಏಳುಬಾವೆಪ್ಪ ಗೌಡ ಮತ್ತು ರಮೇಶ ಖಾನಾಪುರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.