ಕಾನೂನು ಅರಿವು ನೆರವು ಕಾರ್ಯಕ್ರಮ  : ಬಾಲ್ಯ ವಿವಾಹ ತಡೆಗೆ ಪಣತೊಡಿ : ನ್ಯಾ.ಬಸವರಾಜ

ಶಹಾಪುರ : ಬಾಲ್ಯ ವಿವಾಹ ತಡೆಗೆ ಪ್ರತಿ ವಿದ್ಯಾರ್ಥಿನಿಯು ಪಣತೊಡಬೇಕು. ಜೊತೆಗೆ ಪ್ರತಿಯೊಬ್ಬರೂ ಇದನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಪ್ರತಿಜ್ಞೆ ಸ್ವೀಕರಿಸಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಹೇಳಬೇಕು ಎಂದು ಹೆಚ್ಚುವರಿ ನ್ಯಾಯಾಧೀಶ ಬಸವರಾಜ್ ವಿದ್ಯಾರ್ಥಿನಿಯರಿಗೆ ಹೇಳಿದರು.ಇಂದು ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಶಹಾಪೂರು ಮತ್ತು ಶಿಕ್ಷಣ ಇಲಾಖೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಲ್ಯ ವಿವಾಹ ಮತ್ತು ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 

ಇಂದಿನ ಶಾಲಾ ಮಕ್ಕಳಿಗೆ ಕಾನೂನಿನ ಅರಿವಿರಬೇಕು. ಮಹಿಳೆ 18 ವರ್ಷ, ಪುರುಷ 21 ವರ್ಷ ವಯಸ್ಸಾದರೆ ಅವರು ಮದುವೆಗೆ ಅರ್ಹರು. ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಅದು ಬಾಲ್ಯ ವಿವಾಹವಾಗುತ್ತದೆ. ಇದು ಕಾನೂನಿನ ಪ್ರಕಾರ ಅಪರಾಧ ಎಂದು ತಿಳಿಸಿದರು.

ಹಿರಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಇಂದು ಬಾಲ್ಯ ವಿವಾಹ ತಡೆಗಟ್ಟಲು  ಕಾನೂನಿನಡಿ ಹಲವು ಕಾಯ್ದೆಗಳು ಜಾರಿಯಲ್ಲಿವೆ. ಏಷ್ಯಾ ಖಂಡದಲ್ಲಿಯೇ ಶೇ. 40ರಷ್ಟು ಬಾಲ್ಯ ವಿವಾಹವಾಗುತ್ತಿರುವುದು ಕಳವಳಕಾರಿ ವಿಷಯ.ಆರೋಗ್ಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇದರ ಬಗ್ಗೆ ಪಾಲಕರಿಗೆ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು ಮತ್ತು ಶಿಕ್ಷೆಯ ಹರಿವಿನ ಬಗ್ಗೆ ತಿಳಿಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಉಪ ಪ್ರಾಂಶುಪಾಲರಾದ ವೆಂಕೋಬ್ ಪಾಟೀಲ್ ಮಾತನಾಡಿ,ನಮ್ಮ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಬಾಲ್ಯ ವಿವಾಹ ನಡೆದರೆ ಸರಕಾರಿ ಸಹಾಯವಾಣಿಯಾದ 1098 ಕ್ಕೆ ಯಾರ ಭಯವಿಲ್ಲದೆ ಫೋನ್ ಕರೆ ಮಾಡಿ ತಿಳಿಸಿ. ಶಾಲಾ ಮಕ್ಕಳು ಕೂಡ ಬಾಲ್ಯ ವಿವಾಹವನ್ನು ವಿರೋಧಿಸಬೇಕು.ನಿಮಗೆ ಪಾಲಕರು ಬಾಲ್ಯ ವಿವಾಹ ಮಾಡಲು ಹೊರಟರೆ ನಮ್ಮ ಗಮನಕ್ಕೆ ತನ್ನಿ. ನಾವು ಪಾಲಕರಿಗೆ ತಿಳಿ ಹೇಳುವುದರ ಜೊತೆಗೆ ಕಾನೂನು ಅಡಿಯಲ್ಲಿರುವ ಬಾಲ್ಯ ವಿವಾಹದಿಂದಾಗುವ ಅನಾಹುತಗಳು ಮತ್ತು ಶಿಕ್ಷೆಯ ಬಗ್ಗೆ ತಿಳಿಸುತ್ತೇವೆ.ಬಾಲ್ಯ ವಿವಾಹದ ಬಗ್ಗೆ ತಮ್ಮ ಹಿಂದಿನ ದಿನಗಳಲ್ಲಿ ಆದ ಘಟನೆಗಳನ್ನು ಸ್ಮರಿಸಿಕೊಂಡು ಶಾಲಾ ಮಕ್ಕಳಿಗೆ ಧೈರ್ಯ ತುಂಬಿದರು.

ವಕೀಲರಾದ ಶ್ರೀಮತಿ ಪರ್ವಿನ್ ಮಾತನಾಡಿ, ನಾನು ಈ ಶಾಲೆಯಲ್ಲಿ ಎಂಟನೇ ತರಗತಿಯಿಂದ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದೇನೆ. ನೀವೆಲ್ಲಾ ಮೊಬೈಲ್ ಬಳಕೆ ದೃಶ್ಯ ಮಾಧ್ಯಮಗಳ ಕಡೆ ಹೆಚ್ಚು ಗಮನ ಕೊಡದೆ, ಶಾಲಾ ಪುಸ್ತಕಗಳನ್ನು ಗೆಳೆಯರೆಂದು ಭಾವಿಸಿಕೊಂಡು ವಿದ್ಯಾಭ್ಯಾಸ ಮಾಡಿ. ಉನ್ನತ ಹುದ್ದೆಯನ್ನು ಅಲಂಕರಿಸಿಬೇಕು ಎಂದು ಶಾಲಾ ಮಕ್ಕಳಿಗೆ ತಿಳಿಸಿದರು.

ಬಿ ಆರ್ ಸಿ ರೇಣುಕಾ ಮಾತನಾಡಿ, ವಿದ್ಯಾರ್ಥಿಗಳು ಕೂಡ ಬಾಲ್ಯ ವಿವಾಹದ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು. ಪ್ರಸ್ತುತ ದಿನಮಾನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿವೆ. ಹಲವು ಕಾಯ್ದೆಗಳು ಜಾರಿಗೆ ಬಂದರೂ ಜನರು ಅವುಗಳನ್ನು ಅನುಸರಿಸುತ್ತಿಲ್ಲ. ಅದಕ್ಕಾಗಿ ಶಾಲಾ ಹಂತದಲ್ಲಿ ಮಕ್ಕಳಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಶಾಲಾ ಮಕ್ಕಳು ಗಟ್ಟಿತನ ತೋರಿಸಬೇಕಿದೆ. ಸಂಘ-ಸಂಸ್ಥೆಗಳು ಇತರ ಇಲಾಖೆಗಳು ಕೂಡ ಬಾಲ್ಯವಿವಾಹ ತಡೆಗಟ್ಟಲು ಸಹಕರಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮವನ್ನು  ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕು.ಶೋಭಾರವರು ಸಸಿಗಳಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ನಂತರ ಶಾಲಾ ಮಕ್ಕಳು ಮತ್ತು ಅತಿಥಿಗಳು ಸೇರಿದಂತೆ ಎಲ್ಲರಿಂದ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಸಂತೋಷ್ ದೇಶಮುಖ್ ಅಧ್ಯಕ್ಷರು ವಕೀಲರ ಸಂಘ,ಶೀಬಾ ಜಲಿಯಾನ್ ಕ್ಷೇತ್ರ ಶಿಕ್ಷಣಾಧಿಕಾರಿ, ವಕೀಲರಾದ ಭೀಮರಾಯ ಮೂಲಿಮನಿ, ಸರಕಾರಿ ಅಭಿಯೋಜಕರಾದ ವೈ ಬಿ ದೇಸಾಯಿ ಸೇರಿದಂತೆ ಶಿಕ್ಷಕರು,ಶಾಲಾಮಕ್ಕಳು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author