ಮೂರನೇ ಕಣ್ಣು : ವಿಜಯಪುರ ಜಿಲ್ಲೆಗೆ’ ಬಸವೇಶ್ವರ ಜಿಲ್ಲೆ ‘ಎಂದು ಹೆಸರಿಡುವುದು ಸಾರ್ಥಕ ಕಾರ್ಯ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠ ವಾರ್ತೆ (ಕರುನಾಡು ವಾಣಿ)

ವಿಜಯಪುರ ಜಿಲ್ಲೆಯನ್ನು ‘ ಬಸವ ಜಿಲ್ಲೆ’ ಇಲ್ಲವೆ ‘ ಬಸವೇಶ್ವರ ಜಿಲ್ಲೆ’ ಎಂದು ಹೆಸರಿಡುವಂತೆ ಆಗ್ರಹ ಕೇಳಿಬರುತ್ತಿದೆ.ಈ ಹಿಂದೆ ಇದ್ದ ಬಿಜಾಪುರ ಜಿಲ್ಲೆಯನ್ನು ವಿಜಯಪುರ ಎಂದು ಇತ್ತೀಚಿನ ವರ್ಷಗಳಲ್ಲಿಯೇ ಹೆಸರು ಬದಲಾಯಿಸಿದ್ದು ಮತ್ತೆ ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ಗೊಂದಲವಾಗುತ್ತದೆ ಎಂದು ಕೆಲವರು ವಾದಿಸಿದ್ದಾರೆ.ವಿಜಯಪುರ ಜಿಲ್ಲೆಯನ್ನು ಬಸವಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಿದರೆ ಯಾವ ಗೊಂದಲವೂ ಉಂಟಾಗುವುದಿಲ್ಲ.ಮೊಬೈಲ್ ಕಂಪ್ಯೂಟರ್ ಯುಗದ ಅತ್ಯಾಧುನಿಕ ಪ್ರಗತಿಯ ಈ ಕಾಲಘಟ್ಟದಲ್ಲಿ ಜಿಲ್ಲೆಯ ಮರುನಾಮಕರಣದ ವಿಷಯವನ್ನು ಸೊಶಿಯಲ್ ಮೀಡಿಯಾಗಳು ಸೇರಿದಂತೆ ಸರಕಾರದ ವೆಬ್ ಸೈಟಿನಲ್ಲಿ ಪ್ರಚುರಪಡಿಸಿದರೆ ಸಾಕು,ಎಲ್ಲರಿಗೂ ಗೊತ್ತಾಗುತ್ತದೆ.ಕಂದಾಯಭೂಮಿ,ಅರಣ್ಯಭೂಮಿಗಳಂತಹ ಕೆಲವು ಇಲಾಖೆಗಳ ದಾಖಲೆಗಳಲ್ಲಿ ಜಿಲ್ಲೆಯ ಹೆಸರು ಬದಲಾವಣೆ ಪ್ರಕ್ರಿಯೆಯ ಇಂದೀಕರಣ ( updation) ಕ್ಕೆ ಸ್ವಲ್ಪ ಸಮಯ ಹಿಡಿಯಬಹುದಷ್ಟೆ.ಕೆಲವರು ತಮ್ಮ ವೈಯಕ್ತಿಕ ಕಾರಣಗಳಿಂದ ಗೊಂದಲ ಉಂಟಾಗುತ್ತದೆ ಎಂದು ವಾದಿಸುತ್ತಿದ್ದಾರೆಯೇ ಹೊರತು ವಿಜಯಪುರ ಜಿಲ್ಲೆಯನ್ನು ಬಸವೇಶ್ವರರ ಹೆಸರಿನಲ್ಲಿ ಮರುನಾಮಕರಣ ಮಾಡಿದರೆ ಯಾವ ಸಮಸ್ಯೆಯೂ ಆಗದು.

ಬಸವಣ್ಣನವರು ಕರ್ನಾಟಕದ ಹೆಮ್ಮೆ,ತಾಯಿ ಭಾರತಾಂಬೆಯ ಸಹಸ್ರವರ್ಷ ತಪಸ್ಸಿನ ಫಲವಾಗಿ ಅವತರಿಸಿದ ಮಹಾನ್ ಶಿವ ವಿಭೂತಿ,ಪುಣ್ಯಪುರುಷರು.ಭಾರತದ ಸಮಾಜೋ ಧಾರ್ಮಿಕ ಕ್ಷೇತ್ರಗಳ ಸುಧಾರಕರುಗಳಲ್ಲಿ ಬಸವಣ್ಣನವರಿಗೆ ಸರಿಮಿಗಿಲಾದವರಿಲ್ಲ.ದೇಶದಲ್ಲಿ ಬಹಳಷ್ಟು ಜನ ಸಮಾಜಸುಧಾರಕರುಗಳು,ಧರ್ಮೋದ್ಧಾರಕರುಗಳು ಅವತರಿಸಿರಬಹುದಾದರೂ ಅವರಾರೂ ಬಸವಣ್ಣನವರಿಗೆ ಸಮರಾಗರು.ಕೆಲವರು ತಮ್ಮ ಮತಧರ್ಮಗಳ ವ್ಯಕ್ತಿಗಳು ಬಸವಣ್ಣನವರಿಗಿಂತ ಶ್ರೇಷ್ಠರೆಂದು ವಾದಿಸುತ್ತಾರೆ; ಆದರೆ ಇದು ಹುಸಿ ಅಭಿಮಾನದ ಸಂಗತಿಯೇ ಹೊರತು ಸತ್ಯದ ಮಾತಲ್ಲ.ಭಾರತದ ಮಹಾನ್ ವ್ಯಕ್ತಿಗಳು,ಸಮಾಜ ಸುಧಾರಕರುಗಳ ವ್ಯಕ್ತಿತ್ವವನ್ನು ಬಸವಣ್ಣನವರ ವ್ಯಕ್ತಿತ್ವದೊಂದಿಗೆ ನಿರ್ಮಲ,ಪ್ರಾಂಜಲ ಮನಸ್ಸಿನಿಂದ ಹೋಲಿಕೆ ಮಾಡುವವರಿಗೆ ಬಸವಣ್ಣನವರ ಅನನ್ಯ,ಅದ್ವಿತೀಯ ವ್ಯಕ್ತಿತ್ವದ ಅನುಪಮ ಬೆಡಗು ಅರ್ಥವಾಗುತ್ತದೆ.ಮರ್ತ್ಯ ಲೋಕಕ್ಕೆ ಮಹಾದೇವನ ಶಿವನ ನೆಲೆಯಾದ ಕೈಲಾಸದ ಬೆಲೆಯನ್ನಿತ್ತು, ಜಾತಿ ಮತ ಪಂಥ ಪಂಗಡಗಳಾಚೆಯ ಸರ್ವಾತ್ಮ ಸರ್ವೋದಯ ಸಮಾಜವನ್ನು ಕಟ್ಟಬಯಸಿದ ಬಸವಣ್ಣನವರು ಪ್ರಾಯೋಗಿಕ ಸಮಾಜಸುಧಾರಕರು.ಅವರು ಜನರಿಗೆ ಉಪದೇಶ ಮಾತ್ರ ನೀಡಲಿಲ್ಲ,ಉಪದೇಶಿಸಿದಂತೆ ಬದುಕಿ ತೋರಿಸಿದರು.ನಡೆ ನುಡಿಗಳು ಒಂದಾಗಿದ್ದ ಅಪ್ಪಟ ಚಿನ್ನದ ವ್ಯಕ್ತಿತ್ವ ಬಸವಣ್ಣನವರದು.ಒಬ್ಬ ಮನುಷ್ಯ ಈ ಎತ್ತರಕ್ಕೆ ಬೆಳೆಯಬಲ್ಲನೆ ಎನ್ನುವ ಸಾರ್ವಕಾಲಿಕ ಕುತೂಹಲ,ಗೌರವಕ್ಕೆ ಕಾರಣರಾಗಿ ಬೆಳೆದವರು ಬಸವಣ್ಣನವರು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೂ ಜಗತ್ಪ್ರಸಿದ್ಧ ಪ್ರಬುದ್ಧ ಸಂವಿಧಾನವನ್ನು ಹೊಂದಿಯೂ ನಮ್ಮ ದೇಶದಲ್ಲಿ ಇಂದಿಗೂ ಸಾಮಾಜಿಕ,ಆರ್ಥಿಕ,ಧಾರ್ಮಿಕ ಕ್ಷೇತ್ರಗಳಲ್ಲಿ ಅಸಮಾನತೆ ಇದೆ.ಅರಸೊತ್ತಿಗೆಯ ಕಾಲದಲ್ಲಿ,ಬಿಜ್ಜಳನ ಪ್ರಧಾನಿಯಾಗಿದ್ದುಕೊಂಡೇ ಬಸವಣ್ಣನವರು ಸಮಾನತೆಯ ಆಧಾರದ ಮೇಲೆ ಶಿವಸಮಾಜ,ಸರ್ವೋದಯ ಸಮಾಜ ನಿರ್ಮಾಣದ ಕನಸು ಕಾಣುತ್ತಾರೆ ; ಬರಿ ಕನಸುಣಿಯಾಗಿ ಉಳಿಯದೆ ತಾವು ಕಂಡ ಸಮತೆಯ ಸರ್ವೋದಯ ರಾಜ್ಯದ ಸಾಕಾರಕ್ಕಾಗಿ ಪ್ರಯತ್ನಿಸುತ್ತಾರೆ. ಸಂವಿಧಾನ,ಕಾನೂನು ಇಷ್ಟು ಪ್ರಬಲವಾಗಿರುವ ಈ ದಿನಗಳಲ್ಲಿಯೇ ದಲಿತ,ಕೆಳಸಮುದಾಯ ತರುಣರನ್ನು ಪ್ರೀತಿಸಿ ಮದುವೆಯಾಗುವ ಹೆಣ್ಣುಮಕ್ಕಳು ‘ ಮರ್ಯಾದೆ ಹತ್ಯೆ’ ಗೆ ಈಡಾಗುತ್ತಿರುವ ಘಟನೆಗಳನ್ನು ನೆನೆದರೆ ಹನ್ನೆರಡನೆಯ ಶತಮಾನದಲ್ಲಿ ಬಿಜ್ಜಳನ ಪ್ರಧಾನಿಯಾಗಿ ಬಸವಣ್ಣನವರು ಬ್ರಾಹ್ಮಣನಾಗಿದ್ದ ಮಧುವರಸನ ಮಗಳನ್ನು ಮಾದಾರ ಹರಳಯ್ಯನವರ ಮಗನೊಂದಿಗೆ ಮದುವೆ ಮಾಡಿದ್ದು ಊಹೆಗೂ ನಿಲುಕದ,ಅಸಾಮಾನ್ಯ ಸಂಗತಿ.ಆ ಕಾರಣಕ್ಕಾಗಿಯೇ ಗಂಡಾಂತರಕ್ಕೆ ಗುರಿಯಾಗಿ ಬಸವಣ್ಣನವರು ಶರಣಗಣದೊಂದಿಗೆ ಕಲ್ಯಾಣಪಟ್ಟಣದಿಂದ ನಿರ್ಗಮಿಸುತ್ತಾರೆ,ಕಲ್ಯಾಣದಲ್ಲಿ ಕ್ರಾಂತಿಯಾಗುತ್ತದೆ.ಇಂತಹ ಶಿವಸಮಾಜ ನಿರ್ಮಾಣ ನಿಷ್ಠೆ,ಇಂತಹ ಎದೆಗಾರಿಕೆ ಯಾವ ಸಮಾಜ ಸುಧಾರಕರಲ್ಲಿತ್ತು?ಕಲ್ಯಾಣದಲ್ಲಿ ಜರುಗಿದ ಕ್ರಾಂತಿ ಜಗತ್ತಿನಲ್ಲಿ ಮನುಷ್ಯತ್ವವನ್ನು ಎತ್ತಿಹಿಡಿದ ಮೊದಲ ಮಹಾನ್ ಕ್ರಾಂತಿ,ಜಗತ್ತಿನ ಇತಿಹಾಸದಲ್ಲಿ ಕಂಡರಿಯದ ಅಪೂರ್ವ ಬೆಳಕಿನ‌ಕ್ರಾಂತಿ.ಅಸಮಾನತೆಯ ವಿರುದ್ಧ ರಣಕಹಳೆ ಕೂಗಿದ್ದ ಸಮಾನತೆಯ ಕ್ರಾಂತಿ! ಸಮಾಜಕಟಂಕರಾಗಿದ್ದ ಪುರೋಹಿತರು- ಪಟ್ಟಭದ್ರರ ಹುಟ್ಟಡಗಿಸುವ ಉದ್ದೇಶದ ಗಟ್ಟಿಕ್ರಾಂತಿ ! ಸರ್ವೋದಯ ಕ್ರಾಂತಿ ! ಸರ್ವರಿಗೂ ಉನ್ನತಿಯ,ಉದ್ಧಾರದ ಹಕ್ಕಿದೆ ಎಂದು ಸಾರಿದ ಸಮುನ್ನತಿಯ ಕ್ರಾಂತಿ! ಇಂತಹ ಬೆಳಕಿನ ಕ್ರಾಂತಿಗೆ ಕಾರಣರಾದ ಕ್ರಾಂತಿಪುರುಷ ಬಸವಣ್ಣನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ ಎನ್ನುವುದು ಆ ಜಿಲ್ಲೆಯವರ ಸಂಭ್ರಮದ ಕಾರಣವಲ್ಲವೆ ?

ಧರ್ಮವು ಪುರೋಹಿತರು,ಪಟ್ಟಭದ್ರರ ಸ್ವತ್ತು,ತೊತ್ತು ಆಗಿದ್ದ ದಿನಗಳಲ್ಲಿ,ಅಸ್ಪೃಶ್ಯರಿಗೆ ಬೆಲೆಯೇ ಇಲ್ಲದ ವಿಷಮ- ವಿಷಮಯ ಪರಿಸ್ಥಿತಿಯ ಕಾಲದಲ್ಲಿ ರಾಜ್ಯಾಡಳಿತದ ಕೇಂದ್ರವ್ಯಕ್ತಿಯಾಗಿಯೂ ‘ಮಾದಾರ ಚೆನ್ನಯ್ಯ ನನ್ನ ಅಪ್ಪ’ ‘ ಡೋಹಾರ ಕಕ್ಕಯ್ಯ ನನ್ನ ಚಿಕ್ಕಪ್ಪ’ ಎಂದರಲ್ಲದೆ ಬಸವಣ್ಣನವರು ಅದರಂತೆ ನಡೆದುಕೊಂಡರು ಕೂಡ.ಅನುಭವ ಮಂಟಪದಲ್ಲಿ ಜಾತಿಭೇದವಿಲ್ಲದೆ,ವರ್ಗಭೇದವಿಲ್ಲದೆ ,ಲಿಂಗತಾರತಮ್ಯವಿಲ್ಲದೆ ಎಲ್ಲರಿಗೂ ಅವಕಾಶವನ್ನಿತ್ತರು,ಎಲ್ಲರ ಕೈಗಳಿಗೆ ಇಷ್ಟಲಿಂಗವನ್ನಿತ್ತು ಎಲ್ಲರನ್ನೂ ಶರಣರನ್ನಾಗಿಸಿದರು,ಮುಕ್ತಾತ್ಮರನ್ನಾಗಿಸಿದರು.ಸಾಮಾಜಿಕ ಧಾರ್ಮಿಕ ಶೋಷಣೆಗಳಿಂದ ಜನಸಾಮಾನ್ಯರನ್ನು ಉದ್ಧರಿಸಲೆಂದೇ ಬಸವಣ್ಣನವರು ಇಷ್ಟಲಿಂಗ ತತ್ತ್ವವನ್ನು ಆವಿಷ್ಕರಿಸಿ,ಅದಕ್ಕೆ ತಾತ್ತ್ವಿಕ ನೆಲೆಗಟ್ಟನ್ನು ನೀಡಿದರು.( ಕೆಲವರು ಬಸವಣ್ಣನವರ ಪೂರ್ವದಲ್ಲಿ ಇಷ್ಟಲಿಂಗ ಉಪಾಸನೆ ಇತ್ತು ಎಂದು ಸುಳ್ಳು ವಾದಿಸುತ್ತಾರೆ.ಬಸವಣ್ಣನವರ ಪೂರ್ವದಲ್ಲಿ ಶಿರೋಲಿಂಗಿಗಳಿದ್ದರು,ಬಾಹುಲಿಂಗಿಗಳಿದ್ದರು; ಪಾರ್ಥಿವ ಲಿಂಗ,ಮರಳು ಲಿಂಗ,ಬಾಣಲಿಂಗಗಳನ್ನು ಪೂಜಿಸುವ ಸ್ಥಾವರಲಿಂಗೋಪಾಸಕರುಗಳಿದ್ದರೇ ಹೊರತು ಇಷ್ಟಲಿಂಗೋಪಾಸಕರುಗಳು ಇರಲಿಲ್ಲ.ಬಸವಣ್ಣನವರ ಮಹಿಮಾಧಿಕ್ಯವನ್ನು ಒಪ್ಪದ ಅಪಕ್ವ ಮತಿಗಳು ಇಷ್ಟಲಿಂಗಕ್ಕೆ ಬಸವಪೂರ್ವದ ಪ್ರಾಚೀನ ಇತಿಹಾಸ ಸೃಷ್ಟಿಸಿದ್ದಾರೆ. ಶೈವ ಧರ್ಮ,ಸಂಸ್ಕೃತಿಯ ಆಳ ಅಧ್ಯಯನ ಮಾಡಿರುವ ನಾನು ಬಸವಣ್ಣನವರ ಪೂರ್ವದಲ್ಲಿ ಇಷ್ಟಲಿಂಗ ಪೂಜೆ ಇರಲಿಲ್ಲ ಎನ್ನುವ ನಿರ್ಧಾರ ತಳೆದಿದ್ದೇನೆ)

ದೇಶದ ಮೂಲನಿವಾಸಿಗಳಾದ ಶೂದ್ರರು,ಕಾಯಕ ಜೀವಿಗಳು ಕರ್ಮಠರ ಕರ್ಮಸಿದ್ಧಾಂತದ ಕಬಂಧ ಬಾಹುಗಳಡಿ ಸಿಕ್ಕು ದಿಕ್ಕುಗಾಣದೆ ಬಳಲುತ್ತಿದ್ದಾಗ ಅವರೆಲ್ಲರ ಕೊರಳುಗಳಲ್ಲಿ ಇಷ್ಟಲಿಂಗವನ್ನು ಕಟ್ಟಿ ಅವರನ್ನೂ ‘ ಲಿಂಗಾಯತರು’ ಗಳನ್ನಾಗಿಸಿದ,ಕಾಯಕಯೋಗಿಗಳನ್ನಾಗಿ ಪರಿವರ್ತಿಸಿದ ಅತ್ಯಪೂರ್ವ ಸಾಧನೆ,ಸಿದ್ಧಿ,ಯಶಸ್ಸು ಬಸವಣ್ಣನವರದು.ವೃತ್ತಿಯನ್ನು ಕಾಯಕಯೋಗವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಬಸವಣ್ಣನವರದು.ಸಂಪತ್ತಿನ ಅಸಮಾನ ಹಂಚಿಕೆಯು ಸಲ್ಲದೆಂದು ಇದ್ದವರು ಇಲ್ಲದವರೊಂದಿಗೆ ಅನ್ನ- ಆಹಾರ,ಸಂಪತ್ತು – ಸಂಪನ್ಮೂಲಗಳನ್ನು ಹಂಚಿಕೊಳ್ಳುವುದು ಶಿವನಿಗೆ ಪ್ರಿಯಕಾರ್ಯವೆಂದು ಅದನ್ನು ‘ ದಾಸೋಹ’ ಎಂದರು. ಇಂದಿನ ಕೆಲವರು ‘ರಾಮರಾಜ್ಯ’ ನಮ್ಮ ಆದರ್ಶ ಎನ್ನುತ್ತಾರೆ.ರಾಮರಾಜ್ಯ ಇತ್ತೋ ಇಲ್ಲವೋ ನಾವರಿಯೆವು.ಆದರೆ ಎಂಟುನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಬಸವಣ್ಣನವರು ಒಂದು ಪರಿಪೂರ್ಣ ಸಮಾಜ ಕಟ್ಟಿದ್ದರು,ಶಿವಸಾಮ್ರಾಜ್ಯವನ್ನು ಕಟ್ಟಿದ್ದರು ಎನ್ನುವುದಂತೂ ವಾಸ್ತವ,ಐತಿಹಾಸಿಕ ಸತ್ಯ.ತ್ರೇತಾಯುಗದ ರಾಮನನ್ನು ಹದಿನಾರು ಪರಿಪೂರ್ಣಗುಣಗಳುಳ್ಳ ಆದರ್ಶ ವ್ಯಕ್ತಿ ಎಂದು ಬಣ್ಣಿಸುತ್ತಾರೆ.ಆದರೆ ಎಂಟು ನೂರು ವರ್ಷಗಳ ಹಿಂದೆಯೇ ಕನ್ನಡದ ನೆಲದಲ್ಲಿಯೇ ‘ ಷೋಡಶ ಕಳಾ ಪ್ರಪೂರ್ಣ’ ರಾದವರು ಮಾತ್ರವಲ್ಲ ಸರ್ವ ಕಳೆ ಗುಣಗಳಿಂದ ಭೂಷಿತರಾಗಿದ್ದ ಬಸವಣ್ಣನವರು ಐತಿಹಾಸಿಕ ವ್ಯಕ್ತಿಯಾಗಿ ಬದುಕಿ ಬಾಳಿದ್ದರು ಎನ್ನುವುದನ್ನು ಮರೆಯಲಾಗದು.ಬಸವಣ್ಣನವರು ಪೂರ್ಣಾವತಾರಿಗಳು,ಪರಿಪೂರ್ಣ ಮಾನವರು,ಪೂರ್ಣಸಿದ್ಧರು,ಪೂರ್ಣಯೋಗಿಗಳು.ಪೂರ್ಣವು ಧರೆಗಿಳಿದು ಬೆಳಗಿದ ಅಪೂರ್ವ ಬೆಡಗೇ ಬಸವಣ್ಣನವರು.

ಕೈಲಾಸವನ್ನೇ ಧರೆಗಿಳಿಸಿದ ಅಪ್ರತಿಮ ಶಿವಭಕ್ತ ಬಸವಣ್ಣನವರು ವಿಜಯಪುರ ಜಿಲ್ಲೆಯಲ್ಲಿ ಜನಿಸಿ, ಆ ನೆಲವನ್ನೇ ತಮ್ಮ ಆರಂಭಿಕ ಕಾರ್ಯಕ್ಷೇತ್ರವನ್ನಾಗಿರಿಸಿಕೊಂಡಿದ್ದರು ಎನ್ನುವುದು ವಿಜಯಪುರ ಜಿಲ್ಲೆಯ ಜನರೆಲ್ಲರ ಹೆಮ್ಮೆಯ ,ಅಭಿಮಾನದ ಸಂಗತಿ.ವಿಜಯಪುರ ಜಿಲ್ಲೆಯ ಜನತೆ ತಮ್ಮ ಜಿಲ್ಲೆಯ ಹೆಸರನ್ನು ‘ ಬಸವೇಶ್ವರ ಜಿಲ್ಲೆ’ ಎಂದು ಮರುನಾಮಕರಣ ಮಾಡಿಕೊಂಡು ಸಂಭ್ರಮಿಸುವುದರಲ್ಲಿ ಶ್ರೇಯಸ್ಸು- ಪ್ರೇಯಸ್ಸುಗಳಿವೆ.ಕರ್ನಾಟಕ ಸರಕಾರವು ಕೂಡ ವಿಜಯಪುರ ಜಿಲ್ಲೆಗೆ ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ತನ್ನ ಸಾರ್ಥಕತೆ ಎಂದು ಭಾವಿಸಿ,ಆ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕು.

About The Author