ಕಲ್ಯಾಣಕಾವ್ಯ : ಸಿದ್ಧಾರ್ಥನನ್ನು ನಂಬದವರು ಬುದ್ಧನನ್ನು ಪೂಜಿಸುತ್ತಾರೆ !

ಕಲ್ಯಾಣಕಾವ್ಯ : ಸಿದ್ಧಾರ್ಥನನ್ನು ನಂಬದವರು ಬುದ್ಧನನ್ನು ಪೂಜಿಸುತ್ತಾರೆ ! : 

ಮುಕ್ಕಣ್ಣ ಕರಿಗಾರ

ಅರಸುಕುಮಾರ ಸಿದ್ಧಾರ್ಥ
ಎಲ್ಲರಂತಿರದೆ ಭಿನ್ನನಾಗಿದ್ದುದು
ಅವನ ತಂದೆ ತಾಯಿಗಳ ಕಳವಳಕ್ಕೆ ಕಾರಣವಾಗಿತ್ತು
ರಾಜಮನೆತನದ ಹಿತೈಷಿಗಳ ಸಮಸ್ಯೆಯಾಗಿತ್ತು
ಸಿದ್ಧಾರ್ಥನ ಮಡದಿಯ ದುಗುಡದ ಮೂಲವಾಗಿತ್ತು.
ಆ ನಾಲ್ಕು ದೃಶ್ಯಗಳನ್ನು ಕಂಡಾದ ಬಳಿಕವಂತೂ
ಸಿದ್ಧಾರ್ಥ ಹುಚ್ಚನಂತೆ ವರ್ತಿಸತೊಡಗಿದ
ಗೊಣಗತೊಡಗಿದ,ಗುನುಗತೊಡಗಿದ.
ಅಪ್ಪ- ಅಮ್ಮ,ಹೆಂಡತಿ,ಅರಮನೆಯ ಮಂದಿಗೆ
ಅರ್ಥವಾಗದ ಸಿದ್ಧಾರ್ಥನನ್ನು
ಒಂಚೂರು ಅರ್ಥಮಾಡಿಕೊಂಡಿದ್ದವನೆಂದರೆ
ಅವನ ಪ್ರಿಯ ಬಂಟ,ಸಖ ಚೆನ್ನ ಮಾತ್ರ.
ಒಂದು ಮಧ್ಯರಾತ್ರಿ
ತನ್ನ ನಿರ್ಧಾರದಂತೆಯೆ
ಸಿದ್ಧಾರ್ಥ ಅರಮನೆ,ಭೋಗ ಭಾಗ್ಯ
ಮಡದಿ ಮಗನನ್ನು ತೊರೆದು ಹೊರಟಾಗ
ಅರ್ಧದಾರಿಯಷ್ಟು ದೂರ ಜೊತೆ ಬಂದಿದ್ದ
ಚೆನ್ನನಿಗೂ ಅನುಮಾನ ಕಾಡುತ್ತಿತ್ತು
‘ ಕಾಣಬಲ್ಲನೆ ಅರಸುಕುಮಾರ
ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರ?
ಮನುಕುಲದ ದುಃಖಕ್ಕೆ ಕಂಡಾನೆ
ಪರಿಹಾರ ಸಿದ್ಧಾರ್ಥ?’

ಸಿದ್ಧಾರ್ಥನ ತಂದೆ ಮತ್ತು ಅರಸುಪರಿವಾರಕ್ಕೆ
‘ ಮಗ ಏನಾದನೊ’ ಎನ್ವ ಚಿಂತೆ
ಸಿದ್ಧಾರ್ಥನ ಮಡದಿ
‘ ಹುಟ್ಟಿದ ಎಳೆ ಕಂದನ ನಗುಮುಖವನ್ನು
ನೋಡಿ ಆನಂದಿಷ್ಟು ಬೇಸರವೆ ಜೀವನದಿ?’
ಎಂದು ಕುದಿದುಕೊಂಡಳು.
ಅರಮನೆ,ರಾಜ್ಯ ದುಃಖಿಸಿತು ಸಿದ್ಧಾರ್ಥನ
ನಿರ್ಗಮನದ ಸುದ್ದಿಯನು ಕೇಳಿ.
ಸಿದ್ಧಾರ್ಥ ಹೊರಟು ನಡೆದುದೆಲ್ಲಿಗೆ?
ಗೊತ್ತಿರಲಿಲ್ಲ ಈ ಪ್ರಶ್ನೆಗೆ ಯಾರಿಗೂ ಉತ್ತರ.
‘ ಏನಾಯಿತು?’
‘ ಯಾಕೆ ತೊರೆದರು ಯುವರಾಜ ರಾಜ್ಯವನು?’
ಈ ಬಗೆಯ ಪ್ರಶ್ನೆಗಳಲ್ಲಿ ಮುಳುಗಿ ತೇಲುತ್ತಿದ್ದವರಿಗೆ
ಸಿದ್ಧಾರ್ಥ ಹುಟ್ಟಿದ ಸಂದರ್ಭದಲ್ಲಿ
ಜ್ಞಾನಿಯೋರ್ವ ನುಡಿದ ಭವಿಷ್ಯದ
ಪುರಾವೆ ನೀಡಲಾಗುತ್ತಿತ್ತು.
ಯಾರಿಗೂ ಸಿದ್ಧಾರ್ಥನ ಅಂತರಂಗದ
ತಳಮಳ ಅರ್ಥವಾಗಿರಲಿಲ್ಲ.
ಅರಮನೆಯ ತೊರೆದು ಹೊರನಡೆದ
ಸಿದ್ಧಾರ್ಥನ ದಾರಿ,ಗುರಿಗಳ ಬಗೆಗೆ
ತಿಳಿದಿರಲಿಲ್ಲ ಯಾರಿಗೂ.
ಆಡಿಕೊಂಡರು ಎಲ್ಲರು ತಮತಮಗೆ
ತೋಚಿದಂತೆ
ಮನುಷ್ಯಲೋಕವೇ ಹೀಗಲ್ಲವೆ!
‘ಎಲ್ಲರಂತಿರದೆ ಭಿನ್ನರಾಗಿರುವುದೆ
ಮಹಾತ್ಮರ ಲಕ್ಷಣ’
ಎನ್ನುವುದನ್ನರಿಯದ ಜಗತ್ತು
ಸತ್ಪುರುಷರನ್ನೂ ಅರ್ಥೈಸುತ್ತದೆ
ತನ್ನ ಕಣ್ಣ ಅಳತೆಯಲ್ಲಿ.

ಕಡುಕಷ್ಟ,ನೋವು,ನಿರಾಶೆಗಳ
ಅನುಭವಿಸಿ
ಉಪವಾಸ ವನವಾಸಗಳ ತಾಪವನುಂಡು
ಒಡಲನ್ನು ಗೆಲ್ಲಲಾಗದೆಂದು
ಬಡವಿಯ ಮನೆಯ ಹಾಲು ಅನ್ನವನುಂಡು
ಕೊನೆಗೊಂದು ದಿನ
ಬೋಧಿವೃಕ್ಷದಡಿ ಬೆಳಕನ್ನು ಕಂಡ ಸಿದ್ಧಾರ್ಥ
ಬುದ್ಧನಾದ! ಲೋಕಗುರುವಾದ!
ವಂದಿಸಬರುವವರೆ ಎಲ್ಲರು ಬುದ್ಧಗುರುವನ್ನು
ಹಾಡಿ ಹೊಗಳುವವರೆ ಎಲ್ಲರೂ
ಬೆಳಕಿನ ಸ್ವರೂಪನನ್ನು.
ಮೊದಲು ತನ್ನನ್ನು ಅರ್ಥಮಾಡಿಕೊಳ್ಳದವರು
ತನ್ನ ಪಥದಲ್ಲಿ ನಡೆದು ಬರದೆ ಬಿಟ್ಟುಹೋದವರು
ತನ್ನ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಇದ್ದವರು
ತನ್ನ ನಿಲುವಿನಲ್ಲಿ ನಂಬಿಕೆ ಕಾಣದೆ
ಇದ್ದವರು
ಈ ಎಲ್ಲ ಬಗೆಯ ಜನರು
ಈಗ ಬಳಿ ಬಂದು ವಂದಿಸುತ್ತಿರುವುದನ್ನು
ಕಂಡ ಬುದ್ಧ ಮುಗಳುನಗೆ ಬೀರುತ್ತಿದ್ದ
ಎಲ್ಲ ಪ್ರಶ್ನೆಗಳಿಗೆ
ಎಲ್ಲರ ಸಂದೇಹಗಳಿಗೆ
ಉತ್ತರವಾಗಿತ್ತು ಬುದ್ಧನ ಮುಗುಳುನಗೆ.
ನಡುರಾತ್ರಿ ಎದ್ದು ನಡೆದಾಗ
ಕೆಡೆನುಡಿದು ಅನುಮಾನಿಸಿದವರು
ಉಡುಗೊರೆ ಕಾಣಿಕೆಗಳನ್ನಿತ್ತು
ಸಡಗರಿಸಿ,ಸಂಭ್ರಮಿಸುತ್ತಿದ್ದರು ಬುದ್ಧದೇವನ
ಎಡಬಲದಿ !
ಸಿದ್ಧಿಪುರುಷರಾಗಬಯಸುವವರಿಗೆ
ಬುದ್ಧನೇ ಸ್ಫೂರ್ತಿ,ದಾರಿ,ಗುರು
‘ ಯಾರು ಏನೇ ಅಂದುಕೊಳ್ಳಲಿ
ನೀನು ನೀನಾಗಿರು
ಹೆರವರ ಕಣ್ಣಲ್ಲಿ ನೋಡದಿರು
ಪ್ರಪಂಚವನು
ನಿನ್ನದೆ ಅನುಭವದ ಬೆಳಕಿನಲ್ಲಿ
ಅರ್ಥೈಸು ಜಗತ್ತನ್ನು
ಕತ್ತಲೆಯ ನಡುವೆ ಆಗು ನೀನು ಬೆಳಕು
ಬೆಳಕು ಆದಾಗ ನೀನು
ಬೆಳಗುವದನ್ನಷ್ಟೆ ಉದ್ದೇಶವಾಗಿ ಬದುಕಬೇಕು!
ಬೆಳಕಿಗೆ ಬೆಳಗುವ ಹೊರತು
ಇಲ್ಲ ಮತ್ತೊಂದು ಅರ್ಥ,ಉದ್ದೇಶ.
ಆಗು ನೀನು ಬೆಳಕು
ಬರಿಯ ಬೆಳಕು’

About The Author