ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ | ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪರಿಣಿತರಾಗಬೇಕಿದೆ

ಶಹಾಪುರ : ಪಠ್ಯದ ಜೊತೆಗೆ ಪಠ್ಯೇತರ ತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪರಿಣಿತರಾಗಬೇಕಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ನಗರದ ಸರಕಾರಿ ತಾಲೂಕು ಕ್ರೀಡಾಂಗಣದಲ್ಲಿ ದಿ. ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿರುವ ಸಮೂಹ ಶಿಕ್ಷಣ ಸಂಸ್ಥೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಸ್ಪಷ್ಟವಾದ ಗುರಿ ಹೊಂದಿರಬೇಕು. ಇಂದಿನಿಂದಲೆ ಆ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕಿದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಹಿಂದುಳಿದ ವರ್ಗದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಭೀಮಣ್ಣ ಮೇಟಿ ಅವರ ಸಾಧನೆ ದೊಡ್ಡದು. ಸಣ್ಣ ವಯಸ್ಸಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ವಿದ್ಯೆಯ ಜೊತೆಗೆ ಉದ್ಯೋಗವನ್ನು ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯು ಈ ಭಾಗದ ಜನರಿಗೆ ಉನ್ನತ ಮಟ್ಟಕ್ಕೆ ಬೆಳೆದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ವಿಭಾಗದ ಶಿಕ್ಷಣವನ್ನು ಆರಂಭಿಸಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಡಿಯು ಸಂಸ್ಥೆಯ ಸಂಸ್ಥಾಪಕರು ಮತ್ತು ಕಾಂಗ್ರೆಸ್ ಮುಖಂಡರಾದ ಡಾ.ಭೀಮಣ್ಣ ಮೇಟಿ ರವರು ಮಾತನಾಡುತ್ತಾ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಪೂರ್ಣಗೊಳ್ಳಬೇಕಿದೆ.ಅದಕ್ಕಾಗಿ ಕ್ರೀಡೆ ಅತ್ಯಗತ್ಯ. ಸಂಸ್ಥೆಯಲ್ಲಿ ಶಿಕ್ಷಕರು ಕಳೆದ 15 ದಿನಗಳಿಂದ ಯೋಗ ಧ್ಯಾನ ಕ್ರೀಡೆ ಕರಾಟೆ ನೃತ್ಯಗಳನ್ನು ಶಾಲಾ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ. ಇಂದು ಕ್ರೀಡೆಗಳು ನಡೆಯುತ್ತಿವೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿದೆ ಎಂದು ಮಕ್ಕಳಿಗೆ ತಿಳಿಸಿದರು.

ಆರಂಭದಲ್ಲಿ ಸಚಿವರು ಶಾಲಾ ಮಕ್ಕಳಿಂದ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಸಂಸ್ಥೆಯ ಅಧ್ಯಕ್ಷರು ಸಚಿವರಿಗೆ ದೇವರಾಜ ಅರಸು ಭಾವಚಿತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಯಾದಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದರ್ಶನ್ ನಾಯಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹನುಮನಗೌಡ ಮರ್ಕಲ್,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಚೆನ್ನಪ್ಪಗೌಡ,ಕಾಡಯ್ಯ ಸ್ವಾಮಿ,ಶರಣುಪಾಟೀಲ್,ಸಂಸ್ಥೆಯ ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಮೇಟಿ, ಕಾಂಗ್ರೆಸ್ ಮುಖಂಡರಾದ ಶಾಂತು ಪಾಟೀಲ್ ಕಾಡಂಗೇರ, ಶರಭಣ್ಣ ರಸ್ತಾಪುರ ಸೇರಿದಂತೆ ಸಂಸ್ಥೆಯ ಶಾಲಾ ಮಕ್ಕಳು ಶಿಕ್ಷಕರು ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

About The Author