ಮೂರನೇ ಕಣ್ಣು : ಶಾಮನೂರು ಶಿವಶಂಕ್ರಪ್ಪನವರ ಲಿಂಗಾಯತ ಜಾತಿ ಪ್ರೇಮ ಮತ್ತು ಸಿದ್ಧರಾಮಯ್ಯನವರ ಸ್ವಪ್ರತಿಷ್ಠೆ : ಮುಕ್ಕಣ್ಣ ಕರಿಗಾರ

ಮೊನ್ನೆ ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕ್ರಪ್ಪನವರು ಅವರದೆ ಸರ್ಕಾರದ ಪಕ್ಷವು ಆಡಳಿತದಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಲಿತ , ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಾನಗಳನ್ನು ನೀಡುತ್ತಿದ್ದಾರೆ ಎಂದು ಭ್ರಮಿಸಿ ‘ ಈ ಸರಕಾರದಲ್ಲಿ ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು’ ಎಂದು ಹೇಳಿಕೆ ನೀಡಿದ್ದರು.ಹಣದ ಬಲದಿಂದಲೇ ಶಾಸಕರಾಗುತ್ತಿರುವ ಶಾಮನೂರು ಶಿವಶಂಕ್ರಪ್ಪನವರ ದರ್ಪದ ಮಾತುಗಳನ್ನು ಶೂದ್ರಸಮುದಾಯದ ಜನತೆ ಅರ್ಥಮಾಡಿಕೊಳ್ಳಬೇಕು.ಈ ಮನುಷ್ಯ 95 ವರ್ಷಗಳಿಗೂ ಮೇಲ್ಪಟ್ಟು ವಯಸ್ಸಿನವರಾಗಿದ್ದು ಸರಿಯಾಗಿ ನಡೆದಾಡಲು ಬಾರದೆ ಇದ್ದರೂ ಅಧಿಕಾರಬೇಕು,ಇವರಿಗೆ ಅಧಿಕಾರ ನೀಡಲು ಶೂದ್ರಸಮುದಾಯದ ಓಟುಗಳು ಬೇಕು,ಆದರೆ ಇವರು ಮಾಡುತ್ತಿರುವುದು ಮಾತ್ರ ಕೇವಲ ಸ್ವಜಾತಿಯ ಲಿಂಗಾಯತರ ಹಿತ ಕಾಪಾಡುವ ಕೆಲಸವನ್ನು.ಶೂದ್ರರು ಹಣಪಡೆದು ಓಟು ಹಾಕುವುದನ್ನು ನಿಲ್ಲಿಸದೆ ಇದ್ದರೆ ಶಾಮನೂರು ಶಿವಶಂಕ್ರಪ್ಪನವರಂತಹ ಶೂದ್ರಸಮುದಾಯಗಳವಿರೋಧಿ ವ್ಯಕ್ತಿಗಳ ಕೈ ಮೇಲಾಗುತ್ತಲೇ ಇರುತ್ತದೆ.ಸಿದ್ಧರಾಮಯ್ಯನವರು ಅಹಿಂದ ವರ್ಗದ ಪರವಾಗಿ ಮಾತನಾಡುತ್ತಿರಬಹುದು.ಆದರೆ ಅವರೇನು ಅಹಿಂದ ವರ್ಗದ ಅಧಿಕಾರಿಗಳಿಗೇ ಅಧಿಕಾರದ ಆಯಕಟ್ಟಿನ ಸ್ಥಾನಗಳನ್ನು ನೀಡುತ್ತಿಲ್ಲ.ಕಾಂಗ್ರೆಸ್ ಪಕ್ಷದ ಎಲ್ಲ ಜಾತಿಯ ನಾಯಕರುಗಳ ಮಾತಿಗೆ ಮಣೆಹಾಕಿ ಆಯಾ ಜಾತಿಯವರಿಗೆ ಉನ್ನತ ಹುದ್ದೆಗಳನ್ನು ನೀಡುತ್ತಿದ್ದಾರೆ.ಇಂದಿಗೂ ರಾಜ್ಯದ ಬಹುತೇಕ ಆಯಕಟ್ಟಿನ ಸ್ಥಾನಗಳಲ್ಲಿ ಲಿಂಗಾಯತರು,ಒಕ್ಕಲಿಗರು ಮತ್ತು ಬ್ರಾಹ್ಮಣರೇ ಇದ್ದಾರೆ.ಸಿದ್ಧರಾಮಯ್ಯನವರು ತಮ್ಮ ಸುತ್ತಮುತ್ತ ಅಹಿಂದ ಅಧಿಕಾರಿಗಳನ್ನು ಇಟ್ಟುಕೊಂಡಿರಬಹುದಷ್ಟೆ.ಆದರೆ ಸರಕಾರದ ಎಲ್ಲ ಇಲಾಖೆಗಳಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರದ್ದೇ ಪಾರುಪತ್ಯ ಇದೆ.

ಸರಕಾರದ ಬಹುಮಹಡಿ ಕಟ್ಟಡಗಳ ಪ್ರಮುಖ ಇಲಾಖೆಗಳತ್ತ ಒಮ್ಮೆ ಕಣ್ಣು ಹಾಯಿಸಿ ಅಲ್ಲಿ ಇದ್ದವರೆಲ್ಲ ಲಿಂಗಾಯತರು ಮತ್ತು ಒಕ್ಕಲಿಗರು.ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯನ್ನು ಒಮ್ಮೆ ನೋಡಿ ಅಲ್ಲಿ ಲಿಂಗಾಯತರದ್ದೇ ಅಧಿಪತ್ಯ ಇದೆ.ಎಚ್ ಕೆ ಪಾಟೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಂತ್ರಿಗಳಾಗಿದ್ದಾಗ ಎಂ ಎಸ್ ಬಿಲ್ಡಿಂಗ್ ಗೆ ಬಂದವರು ಇಂದಿಗೂ ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅಲ್ಲಿ ಶಾಖಾಧಿಕಾರಿ ಆಗಿದ್ದ ಒಬ್ಬರು ಈಗ ಉಪಕಾರ್ಯದರ್ಶಿ ಆಗಿದ್ದರೂ ಆ ಇಲಾಖೆಯಿಂದ ಕದಲಿಯೇ ಇಲ್ಲ.ಅಂದರೆ ಅದೇ ಇಲಾಖೆಯಲ್ಲಿ ಆ ಟೇಬಲ್ ನಿಂದ ಈ ಟೇಬಲ್ ಗೆ,ಆ ಶಾಖೆಯಿಂದ ಈ ಶಾಖೆಗೆ ವರ್ಗಾವಣೆಗೊಂಡಿದ್ದಾರೆಯೇ ವಿನಃ ಆರ್ಡಿಪಿಆರ್ ದಾಟಿ ಹೊರಗೆ ಹೋಗಲೇ ಇಲ್ಲ! ಮತ್ತೊಬ್ಬ ಮಹಾನುಭಾವರು ಅಲ್ಲಿಯೇ ವಯೋನಿವೃತ್ತಿ ಹೊಂದಿದ್ದಾರೆ.ದಲಿತ ಸಮುದಾಯಕ್ಕೆ ಸೇರಿದವರನ್ನು‌ ಹೊರತು ಪಡಿಸಿದರೆ ಇತರ ಸಮುದಾಯದವರು ಆರ್ಡಿಪಿಆರ್ನತ್ತ ಕಾಲು ಇಡದಂತೆ ಕಾವಲು ಕಾಯುತ್ತಿದ್ದಾರೆ ಅಲ್ಲಿನ ಲಿಂಗಾಯತ ಅಧಿಕಾರಿಗಳು.ಎಚ್ ಕೆ ಪಾಟೀಲರೇನು ಸಾಮಾನ್ಯರಲ್ಲ.ಕಂಪ್ಯೂಟರ್ ಆಪರೇಟರ್ ಆಗಿ ನೇಮಕಗೊಂಡು ಗ್ರೇಡ್ ಒನ್ ಕಾರ್ಯದರ್ಶಿ ಆಗಿದ್ದ ತಮ್ಮ ಪರಮಾಪ್ತನೊಬ್ಬನನ್ನು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕನಾಗುವ ಮಟ್ಟಿಗೆ ಬೆಳೆಸಿದ್ದಾರೆ.ಆ ಮನುಷ್ಯನಿಗೆ ಪದೋನ್ನತಿ ನೀಡಬೇಕೆಂದೇ ಎಚ್ ಕೆ ಪಾಟೀಲರು ಆರ್ಡಿಪಿಆರ್ ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ.ಅದೂ ಎಷ್ಟು ಬುದ್ಧಿವಂತಿಕೆಯಿಂದ!.ಶಾಸಕರುಗಳೆಲ್ಲ ಊರತ್ತ ಮುಖಮಾಡಿದ ಸದನದ ಕೊನೆಯದಿನದಂದು ಕೊನೆಯ ಅವಧಿಯಲ್ಲಿ ವಿಧೇಯಕವು ಚರ್ಚೆಗೆ ಬಾರದಂತೆ ಅವಸರದಲ್ಲಿ ಅಂಗೀಕಾರ ಪಡೆಯುವ ಅತಿ ಬುದ್ಧಿವಂತಿಕೆ ಪಾಟೀಲರದು.ಸಿದ್ಧರಾಮಯ್ಯನವರಾಗಲಿ ,ಕೆ ಎನ್ ರಾಜಣ್ಣನವರಾಗಲಿ ಏನೋ ಒಂದು ಹೇಳಿದರೆ ದೊಡ್ಡಸುದ್ದಿ ಮಾಡುವ ಜನರು ಎಚ್ ಕೆ ಪಾಟೀಲ್ ಅವರಂತಹ ಬುದ್ಧಿವಂತರ ಸಾಹಸಗಳನ್ನು ಗಮನಿಸುವುದೇ ಇಲ್ಲ.

ಶಾಮನೂರು ಶಿವಶಂಕ್ರಪ್ಪನವರಿಗೆ ಲಿಂಗಾಯತ ಸಮುದಾಯವರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಇಲ್ಲದೆ ಇರುವುದು ಸಮಸ್ಯೆಯಾಗಿ ಕಾಡುತ್ತಿರಬಹುದು.ಆದರೆ ಹೈಕೋರ್ಟ್,ಸುಪ್ರೀಂಕೋರ್ಟ್ಗಳು ಹುದ್ದೆಗೆ ಅರ್ಹತೆ ಇಲ್ಲ ಎಂದು ತಿರಸ್ಕರಿಸಿದ ಆಯ್ಕೆಪಟ್ಟಿಯಲ್ಲಿದ್ದ ಅಧಿಕಾರಿಗಳನ್ನು ಮನೆಗೆ ಕಳಿಸುವ ಬದಲು ಐದಾರುವರ್ಷಗಳ ಕಾಲ ರಾಜಾರೋಷವಾಗಿ ಡಿ ಸಿ ಹುದ್ದೆ ಅನುಭವಿಸಲು ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಅವಕಾಶ ಮಾಡಿಕೊಟ್ಟಿದ್ದನ್ನು ಮರೆತಿದ್ದಾರೆಯೆ ? ಸರಿಯಾಗಿ ಮಾತನಾಡಲು ಬಾರದ ಲಿಂಗಾಯತ ಸಮುದಾಯದ ಕೆ ಎ ಎಸ್ಅಧಿಕಾರಿಗಳನ್ನು ಅವರು ಲಿಂಗಾಯತರು ಎನ್ನುವ ಒಂದೇ ಕಾರಣದಿಂದ ಡಿ ಸಿ ಗಳನ್ನಾಗಿ ಮಾಡಿ ಮೂರ್ನಾಲ್ಕು ವರ್ಷಗಳವರೆಗೆ ದೊಡ್ಡದೊಡ್ಡ ಜಿಲ್ಲೆಗಳ ಅಧಿಪತ್ಯ ನೀಡಿದ್ದರಲ್ಲ!ಐಎಎಸ್ ಬಡ್ತಿಗೆ ಅರ್ಹರಿದ್ದ ಇತರ ಸಮುದಾಯಗಳ ಅಧಿಕಾರಿಗಳಿಗೆ ಇಲಾಖಾ ವಿಚಾರಣೆ‌ ಪ್ರಾರಂಭಿಸಿಯೋ ಇಲ್ಲವೆ ಯಾವುದೋ ಪ್ರಕರಣದಲ್ಲಿ ಅವರನ್ನು ಸಿಲುಕಿಸಿಯೋ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ‌ ಐಎಎಸ್ ಗೆ ಬಡ್ತಿ ನೀಡಿ ಅವರನ್ನು ಸಿ ಇ ಒ, ಡಿ ಸಿ ಮಾಡಲಿಲ್ಲವೆ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು? ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೆ ಎ ಸ್ ನಿಂದ ಐ ಎಎಸ್ ಗೆ ನೀಡಿದ ಬಡ್ತಿಗಳು ಸೇರಿದಂತೆ ಅವರಿಬ್ಬರ ಅವಧಿಯ ಎಲ್ಲ ನೇಮಕಾತಿಗಳನ್ನು ನೋಡಿ,ಅಲ್ಲಿ ಲಿಂಗಾಯತರದ್ದೇ ಮೇಲುಗೈ.ಶಾಮನೂರು ಶಿವಶಂಕ್ರಪ್ಪ ಅವರಂತಹ ಲಿಂಗಾಯತ ಸಮುದಾಯದ ಹಿತೈಷಿಗಳಿಗೆ ಎಲ್ಲ ಕಾಲದಲ್ಲೂ ಲಿಂಗಾಯತ ಅಧಿಕಾರಿಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಇರಬೇಕು ಎನ್ನಿಸುತ್ತದೆ.ಆದರೆ ಸಿದ್ಧರಾಮಯ್ಯನವರಂತಹ ಹಿಂದುಳಿದ ವರ್ಗದ ನಾಯಕರುಗಳಿಗೆ ಅವರ ಜನಾಂಗದ ಅಧಿಕಾರಿಗಳ ಹಿತ ಕಾಯುವುದಕ್ಕಿಂತ ಅವರ ಸ್ವಂತ ವ್ಯಕ್ತಿತ್ವವೇ ದೊಡ್ಡದು ಎನ್ನಿಸುತ್ತದೆ.

ನಿಜವಾಗಿ ಆಡಳಿತದಲ್ಲಿ ಬಿಗಿ ತರಬೇಕು ಎಂದರೆ ಕೆ ಎ ಎಸ್ ನಿಂದ ಐ ಎ ಎಸ್ ಗೆ‌ ಪ್ರಮೋಶನ್ ಪಡೆದವರಿಗೆ ಡಿ.ಸಿ.ಹುದ್ದೆಯನ್ನು ನೀಡಲೇಬಾರದು! ಕೆ ಎ ಎಸ್ ಅಧಿಕಾರಿಗಳು ರಾಜ್ಯದವರೇ ಆಗಿದ್ದು ಅದರಲ್ಲೂ ಬಹುತೇಕ ಜನರು ಮೇಲ್ವರ್ಗದವರೇ ಆಗಿರುತ್ತಾರೆ.ಕೆ ಎ ಎಸ್ ನಿಂದ ಐಎಎಸ್ ಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗಳಾದವರು ಮುಖ್ಯಪಾತ್ರ ವಹಿಸುವುದರಿಂದ ಜಾತಿವಾದಿ ಮುಖ್ಯಮಂತ್ರಿಗಳು ತಮ್ಮ ಸಮುದಾಯದವರಿಗೆ ಬಡ್ತಿ ನೀಡಲು ಇತರ ಸಮುದಾಯದವರಿಗೆ ಅನ್ಯಾಯ ಮಾಡುತ್ತಾರೆ.ಇದುವರೆಗೆ ಕೆ ಎ ಎಸ್ ನಿಂದ ಐ ಎ ಎಸ್ ಗೆ ಬಡ್ತಿ ಪಡೆದವರಲ್ಲಿ ಯಾವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಮೋಶನ್ ಪಡೆದಿದ್ದಾರೆ ಎನ್ನುವುದನ್ನು ಯಾರಾದರೂ ಪರಿಶೀಲಿಸಬಹುದು.ಇತರ ಅಭಿವೃದ್ಧಿ ಇಲಾಖೆಗಳಿಗೆ‌ 5% ಐಎಎಸ್ ಬಡ್ತಿಗೆ ಅವಕಾಶವಿದ್ದು ಇತರ ಅಭಿವೃದ್ಧಿ ಇಲಾಖೆಗಳಲ್ಲೂ ಲಿಂಗಾಯತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ.ಲಿಂಗಾಯತರನ್ನು ಬಿಟ್ಟರೆ ಒಕ್ಕಲಿಗರಿಗೆ ನಂತರದ ಪ್ರಾಶಸ್ತ್ಯ ಸಿಕ್ಕಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳಿಗೆ ಅವರಿಗಿರುವ ಸಾಂವಿಧಾನಿಕ ರಕ್ಷಣೆಯ ಕಾರಣದಿಂದ ಐಎಎಸ್ ಗೆ ಬಡ್ತಿ ದೊರೆತಿದೆಯೇ ಹೊರತು ದಲಿತಸಮುದಾಯದ ಮೇಲಿನ‌ ಪ್ರಾಮಾಣಿಕ ಕಾಳಜಿ ಕಳಕಳಿಗಳಿಂದ ಅವರಿಗೆ‌ ಪ್ರಮೋಶನ್ ನೀಡಿಲ್ಲ.ರಾಜ್ಯದ ಆಡಳಿತ ಯಂತ್ರವನ್ನು ಬಿಗಿಗೊಳಿಸಬೇಕು,ಆಡಳಿತ ಯಂತ್ರವನ್ನು ಪಾರದರ್ಶಕ,ಪ್ರಾಮಾಣಿಕವನ್ನಾಗಿರಸಬೇಕು ಎನ್ನುವ ಕಾಳಜಿ ಕಳಕಳಿ ಉಳ್ಳ ರಾಜಕಾರಣಿಗಳು ರಾಜ್ಯಸೇವೆಗೆ ಸೇರಿದ ಅಧಿಕಾರಿಗಳನ್ನು ಡಿ ಸಿ,ಸಿ ಇಒ ಮತ್ತು ಎಸ್ ಪಿ ಹುದ್ದೆಗಳಿಗೆ ಪ್ರಮೋಶನ್ ನೀಡುವುದನ್ನು ಮೊದಲು ನಿಲ್ಲಿಸಬೇಕು.ಹೊರರಾಜ್ಯಗಳಿಂದ ಬಂದ ಭಾರತೀಯ ಸೇವೆಗೆ ಸೇರಿದ ಅಧಿಕಾರಿಗಳು ಹೆಚ್ಚಿನ ರಾಜಕೀಯ ಮಾಡದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾರೆ.ರಾಜ್ಯ ಸೇವೆಯಿಂದ ಐಎಎಸ್ / ಐಪಿಎಸ್ ಹುದ್ದೆಗಳಿಗೆ ಬಡ್ತಿ ಪಡೆದವರೇ ಹೆಚ್ಚಿನ ರಾಜಕೀಯ,ಅದರಲ್ಲೂ‌ಜಾತಿ ರಾಜಕೀಯ ಮಾಡುತ್ತಾರೆ.

‌ ‌ ಶಾಮನೂರು ಶಿವಶಂಕರಪ್ಪ ಅವರಂತಹ ಲಿಂಗಾಯತ ನಾಯಕರ ಮನೋಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಿದ್ಧರಾಮಯ್ಯನವರು ಕುರುಬ ಸಮಾಜ ಸೇರಿದಂತೆ ಶೂದ್ರ ಮತ್ತು ದಲಿತ ಸಮುದಾಯಗಳ ಅಧಿಕಾರಿಗಳಿಗೆ ಉನ್ನತ ಹುದ್ದೆಯನ್ನು ನೀಡುವುದು ಆ ವರ್ಗಗಳ ತಮ್ಮ ಬಗೆಗಿನ ಸಾಮಾಜಿಕ ಬದ್ಧತೆ ಎಂದು ಭಾವಿಸಬೇಕು.ಸಿದ್ಧರಾಮಯ್ಯನವರು ವೇದಿಕೆಗಳಲ್ಲೇನೋ ದಲಿತರಪರವಾಗಿ,ಹಿಂದುಳಿದವರ ಪರವಾಗಿ ಸೊಗಸಾಗಿ ಮಾತನಾಡುತ್ತಾರೆ.ಆದರೆ ಆ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ರಾಜಕೀಯ ಮತ್ತು ಸರಕಾರಿ ಹುದ್ದೆಗಳಲ್ಲಿ ಉನ್ನತ ಸ್ಥಾನ ಮಾನ ನೀಡುವಾಗ ನೂರೆಂಟು ಲೆಕ್ಕ ಹಾಕುತ್ತಾರೆ.ಸಿದ್ಧರಾಮಯ್ಯನವರಿಗೆ ತಮ್ಮ ವ್ಯಕ್ತಿತ್ವ ದೊಡ್ಡದು ಎನ್ನಿಸುತ್ತದೆಯೇ ಹೊರತು ಶೂದ್ರಸಮುದಾಯಗಳ ಹಿತಕಾಯುವುದು ಮುಖ್ಯ ಎನ್ನಿಸುವುದಿಲ್ಲ.ಶಾಮನೂರು ಶಿವಶಂಕ್ರಪ್ಪನವರಂಥವರನ್ನು ನೋಡಿ ಸಿದ್ಧರಾಮಯ್ಯನವರು ಕಲಿಯುವುದು ಬಹಳಷ್ಟಿದೆ.

About The Author