ಕಾನೂನು ಚೌಕಟ್ಟಿನೊಳಗೆ ಗಣೇಶ, ಈದ್ ಮಿಲಾದ್ ಹಬ್ಬ ಶಾಂತಿಯಿಂದ ಆಚರಿಸಿ ಎಸ್‍ಪಿ ಸಂಗೀತಾ

” ಶಹಾಪುರ ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ  ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಎಸ್‍ಪಿ ಸಂಗೀತಾ ಮಾತನಾಡಿದರು
*****

ಶಹಾಪುರ :ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಆಚರಿಸಿ. ಕಾನೂನು ಚೌಕಟ್ಟಿನೊಳಗೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಕೋಮು ಸೌಹಾರ್ದತೆ,ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸುವಂತೆ ಯಾದಗಿರಿ ಜಿಲ್ಲಾ ವರಿಷ್ಠಾಧಿಕಾರಿ ಸಂಗೀತಾ ಅವರು ಕರೆ ನೀಡಿದರು.

ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ಐಕ್ಯತೆಯ ಪ್ರತೀಕ, ಸಮಾಜದಲ್ಲಿ ಸ್ವಾಸ್ಥ್ಯ, ಶಾಂತಿ, ಸುವ್ಯವಸ್ಥೆ ಇದ್ದರೆ ಪ್ರತಿ ಕುಟುಂಬ ಶಾಂತಿಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ. ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬ ಒಂದೇ ಸಾರಿ ಬಂದಿರುವುದರಿಂದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಬ್ಬಗಳು ಸರಳವಾಗಿ ನೆರವೇರುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಹೀಗಾಗಿ ಅಹಿತಕರ ಘಟನೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಸೂಚನೆ ನೀಡಿದರು.ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅಂತಹ ಘಟನೆಗಳಿಗೆ ಆಸ್ಪದ ಮಾಡಿಕೊಡಬಾರದು. ಜಿಲ್ಲೆಗೆ ಯಾವುದೇ ಕಪ್ಪು ಚುಕ್ಕೆ ತರದಂತೆ ನಡೆದುಕೊಳ್ಳಬೇಕು. ಈ ಬಾರಿ ಗಣೇಶನ ಹಬ್ಬದಲ್ಲಿ ಯಾವುದೇ ಡಿಜೆಗಳನ್ನು ಬಳಸುವಂತಿಲ್ಲ.ಮೈಕ್ ಗಳನ್ನು ಬಳಸಬಹುದು. ಹಬ್ಬದಲ್ಲಿ ಪುರಾಣಗಳಿಗೆ ಅವಕಾಶ ಇದೆ ಎಂದು ತಿಳಿಸಿದರು.

ಈ ಶಾಂತಿ ಸಭೆಯನ್ನು ಉದ್ದೇಶಿಸಿ ಡಿವೈಎಸ್ಪಿ ಜಾವೀದ್ ಇನಾಂದಾರ್ ಮಾತನಾಡಿ, ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು. ಎಲ್ಲರೂ ಕೆಇಬಿ, ಅಗ್ನಿಶಾಮಕ, ನಗರ ಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಿಗೆ ತರಬೇಕು. ಈ ಸಗರನಾಡು ಹಿಂದೂ ಮುಸ್ಲಿಮರ ಭಾವೈಕ್ಯತೆಯ ಬೀಡಾಗಿದೆ.

ತಾಲೂಕ ಆಡಳಿತ ಮತ್ತು ಪೊಲೀಸ್ ಇಲಾಖೆಗೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ನೀವೆಲ್ಲರೂ ನಮಗೆ ಸಹಕರಿಸಬೇಕು. ತಾಲೂಕಿನಾದ್ಯಂತ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಪೊಲೀಸ್ ಇಲಾಖೆಯವರು ಎಲ್ಲರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ.

ಸಮಾಜದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತ ಯಾವುದೇ ರೀತಿಯ ಸಂದೇಶಗಳಾಗಲಿ ಚಿತ್ರಗಳಾಗಲಿ, ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಬಾರದು. ಗಣೇಶ್ ಚತುರ್ಥಿಯಿಂದ 11 ದಿನಗಳ ನಂತರ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತದೆ. ಸೆ.28ನೇ ರಂದು ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬವಿದ್ದು ಅಂದು ಮುಸ್ಲಿಮರು ಹಬ್ಬವನ್ನು ಆಚರಿಸುತ್ತಾರೆ. ಆದ್ದರಿಂದ ಸೆ.28ನೇ ದಿನಾಂಕದಂದು ಗಣೇಶ ವಿಸರ್ಜನೆ ಕಾರ್ಯಕ್ರಮ ಇರುವುದರಿಂದ ಹಿಂದು ಮತ್ತು ಮುಸ್ಲಿಮರು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸರಕಾರಿ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಹೇಳಿದರು.

ತಹಶಿಲ್ದಾರ ಉಮಾಕಾಂತ ಹಳ್ಳೆ ಮಾತನಾಡಿದ ಅವರು, ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲು ತಾಲೂಕು ಆಡಳಿತದ ಅನುಮತಿ ಕಡ್ಡಾಯವಾಗಿದೆ. ಯಾವುದೇ ಅಹಿತಕರ ಘಟನೆಗಳನ್ನು ನಡೆಯದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯವನ್ನು ಹರಿಬಿಡಬಾರದು. ದಯವಿಟ್ಟು ಎಲ್ಲರೂ ಪರಿಸರ ಪ್ರೇಮಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ.ಸರ್ಕಾರ ನಿರ್ದೇಶನದಂತೆ ನಡೆದುಕೊಳ್ಳಬೇಕು ಸರ್ಕಾರದ ನಿರ್ದೇಶನಗಳನ್ನು ನಿಮಗೆ ಕೊಡಲಾಗುವುದು.ಗಣೇಶನ ವಿಸರ್ಜನೆಯ ಸಮಯವನ್ನು  ಅಧಿಕಾರಿಗಳಿಗೆ ಈ ಮೊದಲೇ ತಿಳಿಸಬೇಕು ಎಂದು ತಿಳಿಸಿದರು. ಪಿಐ ಎಸ್ಎಂ ಪಾಟೀಲ, ಡಿ ಎಸ್ ಬಿ ಇನ್ಸ್ಪೆಕ್ಟರ್ ದೇವೇಂದ್ರಪ್ಪ,ನಗರಸಭೆಯ ಎಇಇ ನಾನಾಸಾಹೇಬ್, ಕೆಇಬಿ ಎಇಇಮರೆಪ್ಪ, ನಗರದ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಭೆಯಲ್ಲಿ ಪಾಲ್ಗೊಂಡಿದ್ದರು.

About The Author