ಮೂರನೇ ಕಣ್ಣು : ರೈತರ ಬಗ್ಗೆ ಲಘುಧೋರಣೆ ಸಲ್ಲದು : ಮುಕ್ಕಣ್ಣ ಕರಿಗಾರ

       ಕರ್ನಾಟಕ ಸರಕಾರದ ಜವಾಬ್ದಾರಿಯುತ ಉಪಮುಖ್ಯಮಂತ್ರಿ ಮತ್ತು ಕೃಷಿಸಚಿವರ ಸ್ಥಾನದಲ್ಲಿ ಇರುವ ಡಿ.ಕೆ.ಶಿವಕುಮಾರ ಮತ್ತು ಶಿವಾನಂದ ಪಾಟೀಲ್ ಅವರಿಬ್ಬರು ರೈತರನ್ನು ಲಘುವಾಗಿ ಪರಿಗಣಿಸಿ ಆಡಿದ ಮಾತುಗಳು ಖಂಡನಾರ್ಹ.ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ‘ ರೈತರ ಆತ್ಮಹತ್ಯೆ ಪ್ರಕರಣಗಳು 2015ಕ್ಕೂ ಮೊದಲು ಕಡಿಮೆ ಇದ್ದವು.₹ 5 ಲಕ್ಷ ಪರಿಹಾರ ಕೊಡಲು ಆರಂಭವಾದ ಬಳಿಕ ಪ್ರಕರಣಗಳು ವರದಿಯಾಗುವುದು ಜಾಸ್ತಿಯಾಯಿತು’ ಎಂದಿರುವುದು ರೈತರ  ಅಮೂಲ್ಯ ಜೀವಗಳ ಬೆಲೆಯರಿಯದ ಅಸಂಬದ್ಧ ಹೇಳಿಕೆಯಾದರೆ  ಅವರನ್ನು ಸಮರ್ಥಿಸುವ ಭರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು’ ಎಲ್ಲಿದೆ ಹೇಳಿ ಆತ್ಮಹತ್ಯೆ? ಸ್ವಂತಕ್ಕೆ ಯಾರಾದರೂ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೆ? ಎಂದು ಪ್ರಶ್ನಿಸುವ ಮೂಲಕ ರೈತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.ಕೃಷಿ ಇಲಾಖೆಯ ಅಂಕಿ ಸಂಖ್ಯೆಗಳಂತೆ ರಾಜ್ಯದಲ್ಲಿ ಈ ಮೂರು ತಿಂಗಳ ಅವಧಿಯಲ್ಲಿ‌172 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಇಬ್ಬರೂ ಈ ಪ್ರಕರಣಗಳ ಸತ್ಯಾಸತ್ಯತೆಯನ್ನು ಮೊದಲು ಪರಿಶೀಲಿಸಬೇಕು.ಅದನ್ನು ಬಿಟ್ಟು ರೈತರ ಬಗ್ಗೆ ಹಗುರವಾಗಿ ಮಾತನಾಡುವುದು ಅವರಿಬ್ಬರ ಘನತೆಗೆ ತಕ್ಕುದಲ್ಲದ ಮಾತುಗಳು.
         ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಉತ್ತು ಬಿತ್ತು ಬೆಳೆದವರಲ್ಲ,ಹಾಗಾಗಿ ಅವರಿಗೆ ರೈತರ ಸಮಸ್ಯೆಗಳು ಅರ್ಥವಾಗುತ್ತಿಲ್ಲ.ರೈತಸಮುದಾಯದಿಂದಲೇ ಬಂದಿರುವ ಶಿವಾನಂದ ಪಾಟೀಲರು ತಾವು ರೈತರ ಹಿತಕಾಯುವ ಸಚಿವಸ್ಥಾನದಲ್ಲಿ ಕುಳಿತಿದ್ದೇನೆ ಎಂಬುದನ್ನರಿಯದೆ ಮಾತನಾಡಿದ್ದು ವಿಪರ್ಯಾಸವೇ ಸರಿ.ರೈತರಿಗೆ ಬದುಕುವ ಆಸೆ ಇರುವುದಿಲ್ಲವೆ? ಸರಕಾರ ನೀಡುವ 5 ಲಕ್ಷಗಳ ಪರಿಹಾರದ ಆಸೆಗಾಗಿ ಹೆಂಡಿರು ಮಕ್ಕಳನ್ನು ತಬ್ಬಲಿ ಮಾಡಲು ಬಯಸುತ್ತಾರೆಯೆ ರೈತರು? ರೈತರ ಆತ್ಮಹತ್ಯೆ ಪ್ರಕರಣಗಳು ನಾಗರಿಕ ಸಮಾಜದ ಅತ್ಯಂತಕರುಣಾಜನಕ ಪ್ರಸಂಗಗಳು.ಮೃತರೈತರ ಕುಟುಂಬಗಳಿಗೆ ಐದುಲಕ್ಷವಲ್ಲ,ಐವತ್ತು ಲಕ್ಷ ಪರಿಹಾರ ಕೊಟ್ಟರೂ ಅದು ರೈತರ ಜೀವನಕ್ಕೆ ಸಮನಾಗದು.ರೈತರು ಬೆಳೆದು ನಾಡಿಗೆ ಅನ್ನ ನೀಡದಿದ್ದರೆ ಈ ಮಂತ್ರಿಗಳು ಮಣ್ಣು ತಿನ್ನುತ್ತಿದ್ದರೆ?ಅನ್ನದಾತರ ಬದುಕು ಬವಣೆಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುವುದು ಜವಾಬ್ದಾರಿಯುತ ಸರ್ಕಾರದ ಪ್ರಾಥಮಿಕ ಕರ್ತವ್ಯ.
     ಇತ್ತೀಚಿನ ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ.ಕೃಷಿಕಾರ್ಯಗಳಿಗಾಗಿ ಲೇವಾದೇವಿಗಳಲ್ಲಿ,ಫೈನಾನ್ಸ್ ಗಳಲ್ಲಿ,ಬ್ಯಾಂಕುಗಳಲ್ಲಿ ಸಾಲ ತಂದು ಬಡ್ಡಿ ತೀರಿಸಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.ನೀರಾವರಿ ಪ್ರದೇಶಗಳಲ್ಲಿ ರೈತರಿಗೆ ಬೀಜ,ಗೊಬ್ಬರಗಳನ್ನು ಪೂರೈಸುವ ಅಂಗಡಿಗಳು,ಕಂಪನಿಗಳು ಬೆಳೆದ ಬೆಳೆಯನ್ನು ತಮ್ಮ ಅಂಗಡಿಗಳಲ್ಲೇ ಮಾರಾಟ ಮಾಡಬೇಕು ಎನ್ನುವ ಷರತ್ತು ವಿಧಿಸುತ್ತಿವೆಯಲ್ಲದೆ ರೈತರಿಗೆ ನೀಡಿದ ಬೀಜ,ಗೊಬ್ಬರಗಳ ಮೇಲೆ 3 ರಿಂದ 5% ನಷ್ಟು ಬಡ್ಡಿಯನ್ನು ವಿಧಿಸುತ್ತಿವೆ.ರೈತರಿಗೆ ಕಳಪೆ ಬೀಜ,ರಸಗೊಬ್ಬರಗಳನ್ನು ಪೂರೈಸಿ ರೈತರ ಬದುಕುಗಳನ್ನು ಹಾಳು ಮಾಡುತ್ತಿದ್ದಾರೆ.ರೈತರಿಗೆ ಕಳಪೆ ಬೀಜ,ಗೊಬ್ಬರಗಳನ್ನು ವಿತರಿಸಿ, ಬೀಜ ಗೊಬ್ಬರಗಳನ್ನು ಪೂರೈಸಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿರುವ ಎಷ್ಟು ಅಂಗಡಿಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ಮಾಡಿದ್ದಾರೆ? ಎಷ್ಟು ಜನ ಕೃಷಿ ಅಧಿಕಾರಿಗಳು ರೈತರಪರವಾದ ನಿಜವಾದ ಕಾಳಜಿಯನ್ನು ಹೊಂದಿದ್ದಾರೆ? ರೈತರ ಫಸಲು ನಾಶವಾದಾಗ ಬೆಳೆನಾಶದ ಪರಿಹಾರ ಲೆಕ್ಕ ಹಾಕುವ ಕೃಷಿ ಅಧಿಕಾರಿಗಳಲ್ಲಿ ಎಷ್ಟು ಜನರು ಹೃದಯವಂತಿಕೆಯಿಂದ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ?ಶಿವಾನಂದ ಪಾಟೀಲರು ತಮ್ಮ ಇಲಾಖೆಯಲ್ಲಿಯೇ ಇರುವ ರೈತವಿರೋಧಿ ನೀತಿ- ನಿಲುವುಗಳು,ರೈತವಿರೋಧಿ ಅಧಿಕಾರಿಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು.ಅದನ್ನು ಬಿಟ್ಟು ಐದುಲಕ್ಷರೂಪಾಯಿಗಳ ಪರಿಹಾರಹಣದ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅವರು ರೈತರಿಗೆ ಮಾಡಿದ ಅಪಮಾನ ಮಾತ್ರವಲ್ಲ, ರೈತರ ಘನತೆಯಿಂದ ಜೀವಿಸುವ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆ ಕೂಡ.
       ಐದು ಗ್ಯಾರಂಟಿಗಳ ಆಮಿಷ ತೋರಿಸಿ ಜನಬಲ ಪಡೆದು ಅಧಿಕಾರಕ್ಕೆ ಬಂದಿರುವ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್  ಸರಕಾರ ರೈತರಿಗೆ ಯಾವ ಗ್ಯಾರಂಟಿಯನ್ನೂ ನೀಡಿಲ್ಲ.ರೈತರ ಸಂಕಷ್ಟಗಳ ನಿವಾರಣೆಗಾಗಿ ‘ ರೈತ ಸಂಕಷ್ಟ ಪರಿಹಾರ ಮತ್ತು ಕಲ್ಯಾಣನಿಧಿ’ ಎನ್ನುವ ರೈತರನಿಧಿ ಯನ್ನು ಸ್ಥಾಪಿಸಿ ಆ ನಿಧಿಗೆ ಪ್ರತಿವರ್ಷ ಕನಿಷ್ಟ 20,000 ಕೋಟಿಗಳ ಹಣ ನೀಡಿ,ರೈತರ ಹಿತ ಕಾಯುವ ಕೆಲಸ ಮಾಡಬೇಕು ಮುಖ್ಯಮಂತ್ರಿ ಸಿದ್ರಾಮಯ್ಯನವರು.ರೈತರ ಬೆಳೆ ನಷ್ಟವಾದಾಗ ನ್ಯಾಯಯುತವಾದ ಪರಿಹಾರ ನೀಡಲು ಹಿಂದೇಟು ಹಾಕಬಾರದು.ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಕೂಡಲೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ನೆರವಿಗೆ ಧಾವಿಸಬೇಕು.ರೈತರ ಆತ್ಮಹತ್ಯೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು.ರೈತರನ್ನು ಕಾಡಿ,ಪೀಡಿಸುತ್ತಿರುವ ಕೃಷಿ ಇಲಾಖೆಯ ಅಧಿಕಾರಿಗಳು,ಮಧ್ಯವರ್ತಿಗಳನ್ನು ನಿಗ್ರಹಿಸಬೇಕು.ಎಪಿಎಂಸಿಗಳಲ್ಲಿ ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ,ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ರಕ್ಷಿಸಬೇಕು.ನಾಡಿಗೆ ಅನ್ನನೀಡುವ ಅನ್ನದಾತರ ಬದುಕಿಗೆ ಆಸರೆಯಾಗಬಲ್ಲ ಯಾವುದೇ ಕಾರ್ಯಕ್ರಮ ರೂಪಿಸಿ,ಅನುಷ್ಠಾನಗೊಳಿಸಿದರೆ ಅದು ಮುಖ್ಯಮಂತ್ರಿ ಸಿದ್ರಾಮಯ್ಯನವರ ರೈತಪರಬದ್ಧತೆ ಎನ್ನಿಸಿಕೊಳ್ಳುತ್ತದೆ.

About The Author