ಮೂರನೇ ಕಣ್ಣು : ಬಸವರಾಜ ಬೊಮ್ಮಾಯಿ ‘ ಕುರುಬರ ಕ್ಷಮೆ ಯಾಚಿಸಬೇಕು ! 

ಮೂರನೇ ಕಣ್ಣು : ಬಸವರಾಜ ಬೊಮ್ಮಾಯಿ ‘ ಕುರುಬರ ಕ್ಷಮೆ ಯಾಚಿಸಬೇಕು ! : ಮುಕ್ಕಣ್ಣ ಕರಿಗಾರ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಲಿಗೆಯ ಮೇಲೆ ಹಿಡಿತ ಕಳೆದುಕೊಂಡಂತೆ ತೋರುತ್ತಿದೆ.ಬಿಜೆಪಿ ಪಕ್ಷವು ನಿನ್ನೆ ಬೆಂಗಳೂರಿನ ಆನಂದರಾವ್ ಸರ್ಕಲ್ಲಿನಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ವಿರುದ್ಧ ಮಾತನಾಡುತ್ತ ‘ ರಾಜ್ಯದಲ್ಲಿ ಸುಳ್ಳ- ಮಳ್ಳ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದಿದ್ದಾರೆ.'( ಪ್ರಜಾವಣಿಯ ಇಂದಿನ ಮುಖಪುಟ ಸುದ್ದಿ) ಮಳ್ಳ’ ಎನ್ನುವುದನ್ನು ಕುರುಬರನ್ನು ನಿಂದಿಸುವ ಪದ.ಬಹುಶಃ ಸಿದ್ರಾಮಯ್ಯನವರು ‘ ಮಳ್ಳಕುರುಬ’ರಾಗಿ ಕಂಡಿರಬಹುದು ಬಸವರಾಜ ಬೊಮ್ಮಾಯಿಯವರಿಗೆ.’ ಮಳ್ಳ’ ಎನ್ನುವುದು ಕುರುಬರನ್ನು ಕೆಟ್ಟದ್ದಾಗಿ ನಿಂದಿಸುವ ಪದ,ಹಸಿದಡ್ಡ,ಮರುಳ ಎನ್ನುವ ಅರ್ಥ ಬರುವ ಶಬ್ದ.ನಮ್ಮ ಸಮಾಜದಲ್ಲಿ ಕುರುಬರನ್ನು ಇಂದಿಗೂ ಕೀಳಾಗಿ ಕಾಣುವ ದುರ್ಬುದ್ಧಿ,ಅಸಹನೆ ಜನರಲ್ಲಿದೆ.ಕುರುಬರನ್ನು ಬಯ್ಯುವಾಗ ‘ ಮಳ್ಳ ಕುರುಬ’ ಎಂದು ಟೀಕಿಸುತ್ತಾರೆ.ಕುರುಬರಷ್ಟು ಬುದ್ಧಿವಂತರು,ಶಕ್ತಿ ಶಾಲಿಗಳು ಭಾರತದ ಇತಿಹಾಸದಲ್ಲೇ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳದ ಜನರು ಕುರುಬರನ್ನು ‘ಮಳ್ಳಕುರುಬ’ ಎಂದು ಹೀಯಾಳಿಸಿ ,ಸಂತೃಪ್ತಿ ಪಡುತ್ತಾರೆ.

ಹಳ್ಳಿಗಳ ಜನರ ವರ್ತನೆ ಹೇಗೂ ಇರಬಹುದು .ಆದರೆ ಬಸವರಾಜ ಬೊಮ್ಮಾಯಿ ಅವರ ಬಾಯಲ್ಲಿ ಇಂತಹ ಶಬ್ದ ಬರಬಹುದೆ? ಅಲ್ಲದೆ ಅವರು ಹಾವೇರಿಯ ಕುರುಬ ಮತದಾರರಿಂದ ಆರಿಸಿ ಬಂದಿದ್ದನ್ನು ಇಷ್ಟು ಬೇಗನೆ ಮರೆತು ಬಿಟ್ಟರೆ? ಕನಕಗುರುಪೀಠದ ಜಗದ್ಗುರುಗಳೊಡನೆ ಇರುವ ಮಧುರ ಬಾಂಧವ್ಯದಿಂದಾಗಿ ಕುರುಬರ ಓಟುಗಳು ಬಸವರಾಜ ಬೊಮ್ಮಾಯಿಯವರಿಗೆ ಬೀಳುತ್ತಿವೆ.ಹೀಗಿದ್ದೂ ಕುರುಬರ ಬಗ್ಗೆ ಬಸವರಾಜ ಬೊಮ್ಮಾಯಿಯವರಿಗೆ ಏಕೆ ಇಷ್ಟು ಅಸಹನೆ? ಕಾಗಿನೆಲೆ ಕನಕಗುರುಪೀಠದ ಜಗದ್ಗುರುಗಳು ಈ ಬಗ್ಗೆ ಬಸವರಾಜ ಬೊಮ್ಮಾಯಿಯವರ ಸ್ಪಷ್ಟನೆ ಪಡೆಯಬೇಕು.

ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಕುರುಬರನ್ನು ‘ ಮಳ್ಳ’ ಎಂದು ಟೀಕಿಸುವವರು ಒಂದು ಸತ್ಯ ಅರ್ಥ ಮಾಡಿಕೊಳ್ಳಬೇಕು.ಭಾರತದ ಇತಿಹಾಸ ಆರಂಭವಾಗುವುದೇ ಕುರುಬರಿಂದ,ಕುರುಬರೇ ಭಾರತದ ಮೂಲ ನಿವಾಸಿಗಳು.ಕುರುಬರೇ ರಾಜ್ಯ- ಸಾಮ್ರಾಜ್ಯಗಳು ಕಟ್ಟಿ ಆಳಿದ ಮೊದಲಿಗರು.ಕುರುಬರೇ ಋಷಿಗಳು,ಸಂತರು,ದಾರ್ಶನಿಕರುಗಳು ಆದವರು.ಸಮಾಜದ ಮೇಲ್ವರ್ಗದವರು ಎಂದು ಹೇಳಿಕೊಳ್ಳುತ್ತಿರುವ ಜನರು ಪೂಜಿಸುತ್ತಿರುವ ನೂರಕ್ಕೆ ತೊಂಬತ್ತರಷ್ಟು ದೇವರುಗಳು ಕುರುಬರ ಶರಣರು- ಸಂತರುಗಳೆ.ಕುರುಬ ಶರಣರು,ಯೋಗಿಗಳ ಹೆಸರುಗಳನ್ನು ಶಿಷ್ಟೀಕರಣ ಮಾಡಿ,ವೈದಿಕ ವಿಧಿ ವಿಧಾನಗಳಿಂದ ಪೂಜಿಸುತ್ತಿದ್ದಾರೆ.ಪೂಜಿಸುವ ದೇವರು ಕುರುಬರು,ಬೈಯುವುದು ಮಾತ್ರ ಕುರುಬರನ್ನು!ಕುರುಬರ ದೈವಗಳಿಂದಲೇ ಉದ್ಧಾರವಾಗುವ ಜನರು ಕುರುಬರನ್ನು ಕೀಳಾಗಿ ಕಾಣುವ ಮನೋರೋಗಕ್ಕೆ ತುತ್ತಾಗಿದ್ದಾರೆ.

ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯಲ್ಲಿ ಕುರುಬ ಶರಣರ ಸಂಖ್ಯೆ ಸಾಕಷ್ಟು ದೊಡ್ಡದಿದೆ.ಶೂನ್ಯ ಸಿಂಹಾಸನದ ಅಧಿಪತಿ ಅಲ್ಲಮಪ್ರಭುದೇವರು ಸ್ವತಃ ಕುರುಬರು.ಅವರನ್ನು ‘ ನಟುವ ಜಾತಿ’ ಯವರೆಂದು ಸುಳ್ಳು ಬಿತ್ತರಿಸಲಾಗಿದೆ.ಚಾಮರಸನು ತನ್ನ ‘ ಪ್ರಭುಲಿಂಗ ಲೀಲೆ’ ಯಲ್ಲಿ ಅಲ್ಲನನನ್ನು ‘ ಮದ್ದಳೆಯಲ್ಲಮ’ ಎನ್ನುತ್ತಾನೆ.’ ಮದ್ದಳೆ’ ಎಂದರೆ ಡೊಳ್ಳು ಎಂದರ್ಥ.ಈಗ ಮದ್ದಳೆ ಎನ್ನುವ ಒಂದು ಪ್ರತ್ಯೇಕ ವಾದ್ಯವನ್ನು ಯಕ್ಷಗಾನ ಬಯಲಾಟಗಳಲ್ಲಿ ಬಳಸುತ್ತಿದ್ದಾರಾದರೂ ಅದು ಪ್ರಾಚೀನವಾದ್ಯವಲ್ಲ.ಮದ್ದಳೆ ಎಂದರೆ ಡೊಳ್ಳೇ.ಮಾಯೆಯು ಅಲ್ಲಮನಿಗೆ ವಶವಾದ ಪ್ರಸಂಗವನ್ನು ನೆನಪಿಸಿಕೊಳ್ಳಿ.ಅಲ್ಲಮನ ಮದ್ದಳೆಯ ನಾದ- ಕುಣಿತಗಳಿಗೆ ಮನಸೋಲುತ್ತಾಳೆ ಮಾಯೆ.ಕುರುಬರಲ್ಲಿ ಇಂದಿಗೂ ಡೊಳ್ಳು ಕುಣಿತ ಇದೆ,ಅದು ಚಿತ್ತಾಕರ್ಷಕವಾಗಿಯೂ ಇದೆ. ಸ್ಫುರದ್ರೂಪಿಯಾಗಿದ್ದ ಅಲ್ಲಮನ ಡೊಳ್ಳುಕುಣಿತದ ವೈಖರಿಗೆ ಮನಸೋಲುತ್ತಾಳೆ ಮಾಯೆ.ಅಲ್ಲಮನ ಕುರುಬ ಕುಲ ಮೂಲವನ್ನು ಮುಚ್ಚಿಡಲು ಅವನನ್ನು ‘ ಸುಜ್ಞಾನಿ ನಿರಂಹಕಾರಿ’ ದಂಪತಿಗಳ ಮಗನನ್ನಾಗಿ ಮಾಡಲಾಗಿದೆ,ಅನಿಮಿಷ ಎನ್ನುವ ಯೋಗಿಯ ಕೈಯ ಲಿಂಗ ಪಡೆದಂತೆ ಚಿತ್ರಿಸಲಾಗಿದೆ.ಅಲ್ಲಮನ ವಚನಗಳ ಅಂಕಿತ ಗೊಗ್ಗೇಶ್ವರ ಎನ್ನುವುದು.ಅದನ್ನು ಗುಹೇಶ್ವರ ಎಂದು ಮಾರ್ಪಡಿಸಲಾಗಿದೆ.ಗೊಗ್ಗೇಶ್ವರ ಎನ್ನುವುದು ಒಗ್ಗೇಶ್ವರದ ಪೂರ್ವನಾಮ.ಒಗ್ಗೇಶ್ವರ ಎಂದರೆ ಪಶುಪತಿ ಶಿವ.ಶ್ರೀಶೈಲ ಮಲ್ಲಿಕಾರ್ಜುನ ಅಥವಾ ಮಲ್ಲಯ್ಯನನ್ನು ಒಗ್ಗೇಶ್ವರ ಎನ್ನುತ್ತಾರೆ. ಹೂವಿನ ಹಡಗಲಿಯ ಮೈಲಾರ, ಯಾದಗಿರಿಯ ಮೈಲಾಪುರ,ಬೀದರಿನ ಮೈಲಾರನ ದೇವಸ್ಥಾನಗಳಲ್ಲಿ ‘ಒಗ್ಗರು’ ಎನ್ನುವ ಕುರುಬರ ಸಾಧುಗಳನ್ನು ಕಾಣಬಹುದು.ಒಗ್ಗ ಎನ್ನುವುದು ಅತ್ಯಂತ ಹಳೆಯ,ಪ್ರಾಕೃತ ಭಾಷೆಯ ಪದ.( ಕೆಲವರು ಅದನ್ನು ವ್ಯಾಘ್ರದಿಂದ ವ್ಯುತ್ಪತ್ತಿಯಾದ ಪದ ಎಂದು ಅರ್ಥೈಸಿದ್ದಾರೆ.ಅದು ಸರಿಯಲ್ಲ) ಒಗ್ಗ ಎನ್ನುವುದು ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ವಿಶಿಷ್ಟ ನೈವೇದ್ಯ ಪದ್ಧತಿ.ಪುರಾಣಗಳಲ್ಲಿ ನೇಪಾಳದ ಪಶುಪತಿ ಶಿವನಿಗೆ ಹಾಲು ಮತ್ತು ನುಚ್ಚನ್ನ ನೈವೇದ್ಯವನ್ನು ಸಮರ್ಪಿಸುವ ಉಲ್ಲೇಖಗಳಿವೆ.ಹಾಲು ಮತ್ತು ನುಚ್ಚನ್ನ ನೀಡುವವರು ಕುರುಬರೆ ತಾನೆ? ಖೀರ್ ಭವಾನಿ ದೇವಾಲಯದಲ್ಲೂ ಹಾಲು ನುಚ್ಚನ್ನದ ನೈವೇದ್ಯವಿದೆ.ನೇಪಾಳದ ಪಶುಪತಿನಾಥನಿಂದ ಬಂದ ಒಗ್ಗ ನೈವೇದ್ಯ ಸಂಪ್ರದಾಯವು ಕರ್ನಾಟಕ,ಆಂಧ್ರಪ್ರದೇಶ,ಮಹಾರಾಷ್ಟ್ರ ರಾಜ್ಯಗಳಲ್ಲಿ ‘ ಒಗ್ಗರಿಗೆ ಊಟ’ ಬಡಿಸುವ ಪದ್ಧತಿಯಾಗಿ ಬೆಳೆದಿದೆ.ಮಲ್ಲಯ್ಯನನ್ನು ಮನೆದೇವರು ಆಗಿ ಉಳ್ಳ ಮೇಲ್ವರ್ಗದ ಜಾತಿಯವರು ಅವರ ಮನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲು ಕುರುಬರಾದ ಒಗ್ಗಯ್ಯಗಳಿಗೆ ಪ್ರಸಾದ ನೀಡುವ ಮೂಲಕ ಮಲ್ಲಯ್ಯನನ್ನು ಸಂತೃಪ್ತಗೊಳಿಸುತ್ತಾರೆ.ಹಳ್ಳಿಗಳಲ್ಲಿ ಅಂಗಡಿ,ವ್ಯಾಪಾರ ಪ್ರಾರಂಭಿಸುವಾಗ ಮೊದಲು ಕುರುಬರರಿಂದಲೇ ‘ಬೋಣಿಗೆ’ ಮಾಡಿಸುತ್ತಾರೆ.’ ಬೋಣಿಗೆ’ ಎಂದರೆ ದೇವರ ಕಾಣಿಕೆ ಎಂದರ್ಥ.ಕುರುಬರ ಅನುಗ್ರಹದಿಂದ ವ್ಯಾಪಾರ- ವಹಿವಾಟು ಚೆನ್ನಾಗಿ ನಡೆಯುತ್ತದೆ ಎನ್ನುವ ನಂಬಿಕೆಯಿಂದ ‘ ಕುರುಬರ ಬೋಣಿಗೆ’ ಪಡೆಯಲಾಗುತ್ತಿದೆ.

ಕುರುಬರ ಹಿರಿಮೆ ಇಷ್ಟಕ್ಕೇ ನಿಲ್ಲದು.ಹರಪ್ಪ- ಮೊಹಂಜೋದಾರೋ ಉತ್ಖನನದಲ್ಲಿ ಸಿಕ್ಕ ಪಶುಪತಿ ಶಿವ ‘ ಟಗರುತಲೆಯ ಶಿವ’ .ಪಶುಪತಿಯ ವಿಗ್ರಹದ ಸುತ್ತ ಜಿಂಕೆ,ಕುರಿ ಟಗರುಗಳಿವೆ.ಪಾಶುಪತ ಶೈವವು ದೇಶದ ಮೂಲಶೈವವಾದರೆ ಕುರುಬರು ಶಿವನ ಮೂಲ ಆರಾಧಕರು ಎನ್ನುವುದು ಮತ್ತು ಸಿಂಧೂ ನಾಗರಿಕತೆಯು ಕುರುಬರ ನಾಗರಿಕತೆ ಎಂದು ಜನತೆ ತಿಳಿದುಕೊಳ್ಳಬೇಕಿದೆ.ಸಿಂಧೂನಾಗರಿಕತೆಯ ಪಶುಪತಿಯೇ ನೇಪಾಳದ ಪಶುಪತಿನಾಥ ನಾಗಿದ್ದು ಆ ಪಶುಪತಿ ಶಿವನೇ ಶ್ರೀಶೈಲದ ಮಲ್ಲಿಕಾರ್ಜುನ ಮತ್ತು ಉಜ್ಜಯನಿಯ ಮಹಾಕಾಲ.’ಗೊಗ್ಗ’ ಎನ್ನುವ ಶಬ್ದಕ್ಕೆ ಕಂಬಳಿ ಹೊದ್ದವನು ಎನ್ನುವ ಅರ್ಥವಿದ್ದು ಶಿವನು ಕಂಬಳಿಯನ್ನೇ ತನ್ನ ಉಡುಗೆಯನ್ನಾಗಿರಿಸಿಕೊಂಡಿದ್ದಾನೆ.ಅದನ್ನು ಮರೆಮಾಚಿ ಪರಮಕರುಣಾಳುವೂ ಪರಮ ಸಾತ್ತ್ವಿಕನೂ ಆಗಿರುವ ಶಿವನನ್ನು ಆನೆ, ಜಿಂಕೆ ಇಲ್ಲವೆ ಹುಲಿಯನ್ನು ಕೊಂದ ಕ್ರೂರಿಯನ್ನಾಗಿಸಿ ‘ಗಜಚರ್ಮಾಂಬರ’ ‘ ಹುಲಿಯುಡುಗೆಯ ಒಡೆಯ’ ಎಂಬಿತ್ಯಾದಿ ಚಿತ್ರಿಸಲಾಗಿದೆ. ಶಿವನ ದಕ್ಷಿಣಾ ಮೂರ್ತಿ ಇಲ್ಲವೆ ಈಶಾನ ಮೂರ್ತಿಯ ಕಲ್ಪನೆಯಿಂದ ಸ್ಫೂರ್ತಿಗೊಂಡ ಅಲ್ಲಮಪ್ರಭುಗಳು ‘ ಗೊಗ್ಗೇಶ್ವರ’ ತತ್ತ್ವವನ್ನು ತಮ್ಮ ವಚನಗಳ ಅಂಕಿತವನ್ನಾಗಿ ಸ್ವೀಕರಿಸಿದ್ದಾರೆ.ಶಿವನ ಕೈಯ ಡಮರುಗವು ವ್ಯಾಕರಣ,ನಾಟ್ಯ ಮೊದಲಾದ ಶಾಸ್ತ್ರಗಳ ಉಗಮವೆಂಬುದನ್ನು ಇಲ್ಲಿ ಲಕ್ಷಿಸಬೇಕು.ಶಿವನ ಕೈಯೊಳಿಹ ಡಮರುಗವೇ ಕುರುಬರ ಡೊಳ್ಳು.’ ಕುರಿಯು “ಪಶು”.ಕುರಿ ಎಂಬ ಪ್ರಾಣಿ ಮತ್ತು ಜಗತ್ತಿನ ಜೀವರುಗಳ ಪಾಲಕನೂ ಪೋಷಕನೂ ಆದುದರಿಂದ ಶಿವನು ಪಶುಪತಿ.

ವಚನ ಚಳುವಳಿಯ ಸ್ವಲ್ಪ ಪೂರ್ವದಲ್ಲಿದ್ದ ರೇವಣಸಿದ್ಧರು ( ಇವರು ಮೂಲ ರೇವಣಸಿದ್ಧರಲ್ಲ,ಸಿದ್ಧರಾಮನ ಹುಟ್ಟಿನ ಬಗ್ಗೆ ಭವಿಷ್ಯ ಹೇಳಿದ ವಚನಕಾರ ರೇವಣಸಿದ್ಧರು.ಮೂಲ ರೇವಣಸಿದ್ಧರು ಪುರಾಣಪ್ರಸಿದ್ಧ ತಪಸ್ವಿಗಳು,ಋಷಿಗಳು.ಅವರೇ ಕುರುಬರ ಮೂಲ ಗುರುಗಳು.ಇತಿಹಾಸ,ಸಂಸ್ಕೃತಿಯ ಪೂರ್ಣ ಅರಿವು ಇಲ್ಲದ ಕೆಲವರು ಹನ್ನೊಂದನೆಯ ಶತಮಾನದಲ್ಲಿ ಬದುಕಿದ್ದ ಯೋಗಿ ರೇವಣಸಿದ್ಧರನ್ನೇ ನಿಜವಾದ ರೇವಣಸಿದ್ಧರು ಎಂದು ಭಾವಿಸಿದ್ದಾರೆ) ಕುರುಬ ಕುಲದ ಮಹಾನ್ ತಪಸ್ವಿಗಳೂ ಸಿದ್ಧರಾಮನ ಹುಟ್ಟಿನ ಮುನ್ಸೂಚನೆ ಕೊಟ್ಟ ತ್ರಿಕಾಲಜ್ಞಾನಿಗಳೂ ಆಗಿದ್ದ ರೇವಣಸಿದ್ಧರು ವಚನಕಾಲದ ಸ್ವಲ್ಪ ಮುಂಚೆ ಇದ್ದ ಸಿದ್ಧರು.ಸಿದ್ಧರಾಮನು ಸಹ ಕುರುಬನೆ.(ಸಿದ್ಧರಾಮನನ್ನು ಕುಡು ಒಕ್ಕಲಿಗ ಎಂದು ಬಿಂಬಿಸುವುದು ಸುಳ್ಳು.ಅವನ ಮೂಲ ಹೆಸರು ಧೂಳಿಮಾಕಾಳ ಎನ್ನುವುದನ್ನು ಸ್ಮರಿಸಬೇಕು.ಶ್ರೀಶೈಲದ ಮಲ್ಲಯ್ಯ ಹಾಲುತೆನೆಯನ್ನಲ್ಲದೆ ಧೂಳಿ ಮಾಕಾಳನಿಂದ ಹಾಲು ನುಚ್ಚಿನ ಊಟ ಬಯಸುತ್ತಾನೆ.ಹಾಲು ನುಚ್ಚು ಅಥವಾ ಕಟಾಲಿ ಎನ್ನುವುದು ಕುರುಬರ ಅಡುಗೆ ತಾನೆ?) ಸಿಂಧನೂರು ತಾಲೂಕಿನ ಉಳಿಯುಮೇಶ್ವರ ವಚನಾಂಕಿತದ ಶರಣ ಚಿಕ್ಕಯ್ಯ ಸೇರಿದಂತೆ ಬಹಳಷ್ಟು ಜನ ಕುರುಬ ಜಾತಿಯ ವಚನಕಾರರಿದ್ದರು ಬಸವಣ್ಣನವರ ಶರಣಚಳುವಳಿಯ ಬಲವಾಗಿ.

ಶಿವನು ತನ್ನ ಭಕ್ತರು ಕೇಳಿದ ಎಲ್ಲವನ್ನೂ ಕೊಡುತ್ತಾನೆ ಭಕ್ತರಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ ಎನ್ನುವ ಮಹೋದಾರಿ ಎನ್ನುವ ಕಾರಣದಿಂದ ಶಿವನನ್ನು ‘ ಮರುಳಶಂಕರ’ ಎನ್ನುತ್ತಾರೆ.ಆ ಮರುಳಶಂಕರನ ಮಕ್ಕಳೆ ಮುಗ್ಧ ಕುರುಬರು.ಶಿವನು ರಾವಣನಿಗೆ ಆತ್ಮಲಿಂಗವನ್ನೇ ಕೊಟ್ಟ,ಭಸ್ಮಾಸುರನಿಗೆ ತನ್ನ ಉರಿನೇತ್ರ, ಉರಿಹಸ್ತವನ್ನೇ ನೀಡಿದ್ದ ತಾನು ತೊಂದರೆಗೊಳಗಾಗುವೆ ಎಂದು ತಿಳಿದೂ.ಸಮುದ್ರಮಥನದಲ್ಲಿ ಉಂಟಾದ ಹಾಲಹಾಲ ಇಲ್ಲವೆ ಕಾಲಕೂಟ ವಿಷವನ್ನು ಕುಡಿದು ಜಗತ್ತನ್ನು ವಿನಾಶದಿಂದ ಪಾರುಮಾಡಿದ ನಂಜುಂಡ,ವಿಷಕಂಠ,ನೀಲಕಂಠನೆಂದು ಹೊಗಳಿಸಿಕೊಂಡ.ಶಿವನಂತೆಯೇ ಮುಗ್ಧರಿರುವ ಕುರುಬರು ಜಗತ್ತಿನ ಕಲ್ಯಾಣಕ್ಕಾಗಿ,ಪರರ ಒಳಿತಿಗಾಗಿಯೇ ಜೀವಿಸುತ್ತಿರುವ ಪರೋಪಕಾರಿ ,ಲೋಕಹಿತಚಿಂತಕರು ಎನ್ನುವ ಕಾರಣದಿಂದಾಗಿಯೇ ಶಿವಸಂಕಲ್ಪವನ್ನನುಸರಿಸಿ ನೂರಕ್ಕೆ ತೊಂಬತ್ತರಷ್ಟು ಜನ ಶರಣರು,ಸಿದ್ಧರು,ಮಹಾಂತರುಗಳು ಕುರುಬರಾಗಿ ಹುಟ್ಟಿರುವುದು.

ಕವಿಕುಲಗುರುವೆಂದು ವಿಶ್ವವೇ ಹಾಡಿಹೊಗಳುತ್ತಿರುವ ಕಾಳಿದಾಸನನ್ನು ಮೀರಿಸುವ ಕವಿಗಳು ಬ್ರಾಹ್ಮಣರಾದಿ ಮೇಲ್ವರ್ಗದ ಜಾತಿಯಲ್ಲಿ ಇದುವರೆಗೂ ಹುಟ್ಟಿಲ್ಲ ಎನ್ನುವುದು ಕುರುಬರ ಹಿರಿಮೆ.ಬರಿಯ ನೇಮವೇ ಪೂಜೆಯಲ್ಲ ಎಂದು ಎದೆತುಂಬಿದ ಭಕ್ತಿಯಿಂದ ಹಾಡಿ,ಕರೆದು ಕಲ್ಲುವಿಗ್ರಹದಲ್ಲಿ ಕೃಷ್ಣನನ್ನು ಜಾಗೃತಗೊಳಿಸಿ ಅವನನ್ನು ಪಶ್ಚಿಮಕ್ಕೆ ತಿರುಗುವಂತೆ ಮಾಡಿ ಕೃಷ್ಣನ ದರ್ಶನ ಪಡೆದ ಕನಕದಾಸರಿಗಿಂತ ಮಿಗಿಲು ಯೋಗಿಗಳುಂಟೆ? ವಿಜಯ ನಗರ ಸಾಮ್ರಾಜ್ಯದ ಸ್ಥಾಪಕರೂ ಕುರುಬರೆ ಅಲ್ಲವೆ? ಕದಂಬರು,ಪಲ್ಲವರು,ಗಂಗರು ಕುರುಬರಲ್ಲವೆ? ಇಷ್ಟು ಮಾತ್ರವಲ್ಲ,ಕುರುಬರ ಹಿರಿಮೆ ಗರಿಮೆಗಳನ್ನು ಬಿತ್ತರಿಸುವ ಸಹಸ್ರ ಸಹಸ್ರ ಉದಾಹರಣೆಗಳನ್ನು ನೀಡಬಹುದು.ಇಂತಹ ಹಿರಿಮೆ ಗರಿಮೆಯನ್ನುಳ್ಳ ದೇಶ ,ನಾಡನ್ನು ರೂಪಿಸಿದ ಮೂಲಪುರುಷರಾದ ಕುರುಬರ ಬಗ್ಗೆ ಯಾಕಿಷ್ಟು ಅಸಹನೆ? ಅದೂ ಸುಸಂಸ್ಕತರು ಎಂದು ಕೊಳ್ಳುವ,ರಾಜ್ಯದ ಮಾಜಿಮುಖ್ಯಮಂತ್ರಿಯೂ ಆಗಿದ್ದ ಬಸವರಾಜ ಬೊಮ್ಮಾಯಿ ಅವರಂಥವರ ಬಾಯಲ್ಲಿ ಇಂಥ ಮಾತೆ?

About The Author