ಮೂರನೇ ಕಣ್ಣು : ಸರಕಾರದ ಗ್ಯಾರಂಟಿ ಯೋಜನೆಗಳ ಹಿಂದಿನ ತತ್ತ್ವ,ಉದ್ದೇಶ ಅರ್ಥ ಮಾಡಿಕೊಳ್ಳದ, ಬಡಜನರ ಬದುಕು -ಬವಣೆ ಅರಿಯದ ನಿರ್ಭಯಾನಂದ ಎಂತಹ ಸಂನ್ಯಾಸಿ ? : ಮುಕ್ಕಣ್ಣ ಕರಿಗಾರ

ನಮ್ಮಲ್ಲಿ ಸಂನ್ಯಾಸಿಗಳು ಏನು ಮಾಡಬೇಕೋ ಅದನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾಡುತ್ತಿದ್ದಾರೆ ಎನ್ನುವುದಕ್ಕೆ ಕಲ್ಬುರ್ಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉತ್ತಮ ಉದಾಹರಣೆ.ಕಲ್ಬುರ್ಗಿಯ ವಿಕಾಸ ಅಕಾಡೆಮಿಯು ಶಿಕ್ಷಕರು ಮತ್ತು ಮಹಿಳೆಯರಿಗಾಗಿ ಕಲ್ಬುರ್ಗಿಯ ಇಂಜನಿಯರಿಂಗ್ ಇನ್ಸ್ಟಿಟ್ಯೂಟ್ ನ ಆಡಿಟೋರಿಯಮ್ ನ ಸಭಾಂಗಣದಲ್ಲಿ ಏರ್ಪಡಿಸಿದ್ದ “ಸಂವಾದ” ದಲ್ಲಿ ಮಾತನಾಡುತ್ತ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳನ್ನು ಟೀಕಿಸಿದ್ದಾರೆ .( ಡೆಕ್ಕನ್ ಹೆರಾಲ್ಡ್ ಜೂನ್ 19,2023) ಅವರು ಮಾತನಾಡುತ್ತ ” ನಾನು ನಿಮಗೆ ಏನಾದರೂ ಕೊಟ್ಟರೆ ನೀವು ಅದರ ಅವಶ್ಯಕತೆ ಇದ್ದರೆ ಮಾತ್ರಸ್ವೀಕರಿಸಬೇಕು.ನೀವು ಜನರಲ್ಲಿ ಆತ್ಮವಿಶ್ವಾಸ,ಸ್ವಾವಲಂಬನೆಯನ್ನು ಉಂಟುಮಾಡದೆ ಇದ್ದರೆ ಅದು ಕೊಲೆಗೆ ಸಮ. ಗ್ಯಾರಂಟಿಗಳನ್ನು ಘೋಷಿಸಿರುವ ಸರಕಾರದಲ್ಲಿರುವ ನಾಯಕರುಗಳಿಗೆ ವಿವೇಕವಿಲ್ಲ ಅಲ್ಲದೆ ಅವುಗಳನ್ನು ಸ್ವೀಕರಿಸುವ ಜನರಿಗೆ ನಾಚಿಕೆ ಇಲ್ಲ” ಎಂದು ಅಪ್ಪಣೆ ಕೊಡಿಸಿದ್ದಾರೆ ಈ ಪುಣ್ಯಾತ್ಮ ಸಂನ್ಯಾಸಿ.ಕರುಣೆ,ಹೃದಯವಂತಿಕೆ ಇಲ್ಲದ ನಿರ್ಭಯಾನಂದ ಸ್ವಾಮಿ ಸಂನ್ಯಾಸತ್ವಕ್ಕೇ ಕಳಂಕ,ಅಪಚಾರ.ಬಡವರ ಬಗೆಗೆ,ಮಹಿಳೆಯರ ಬಗೆಗೆ ಕಿಂಚತ್ತೂ ಕನಿಕರವಿಲ್ಲದ ನಿರ್ಭಯಾನಂದ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥರಾಗಿರುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.ಇಂತಹ ‘ ಪುಣ್ಯಾತ್ಮ’ ಸಂನ್ಯಾಸಿಗಳಿಂದಾಗಿಯೇ ಆಗಾಗ ರಾಮಕೃಷ್ಣಾಶ್ರಮದ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ.ನಿರ್ಭಯಾನಂದರಿಗೆ ರಾಜಕೀಯ ಮೋಹ ಇಲ್ಲದಿದ್ದರೆ ಈ ಸಂವಾದವನ್ನು ಏರ್ಪಡಿಸಿದ್ದ ವಿಕಾಸ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಬಾರದಿತ್ತು.ಸಮಾರಂಭದಲ್ಲಿ ಬಿಜೆಪಿಯ ಮುಖಂಡರಾದ ಬಸವರಾಜ ಪಾಟೀಲ್ ಸೇಡಂ ಅವರು ಪಾಲ್ಗೊಂಡಿದ್ದಾರೆ.ಬಸವರಾಜ ಪಾಟೀಲ್ ಸೇಡಂ ಅವರ ‘ಕಲ್ಯಾಣ ಕರ್ನಾಟಕ ಮಾನವ ಅಭಿವೃದ್ಧಿ ಸಂಪನ್ಮೂಲ ಸಂಸ್ಥೆ’ಯು ಸರಕಾರಿ ಅನುದಾನದ ದುರ್ಬಳಕೆ ಮಾಡಿಕೊಂಡಿದೆ ಎಂದು ಸರಕಾರವು ಆ ಸಂಸ್ಥೆಯ ವಿರುದ್ಧ ತನಿಖೆಗಾಗಿ ಆದೇಶಿಸಿದ್ದು ತನಿಖೆ ನಡೆಯುತ್ತಿದೆ.ವಸ್ತುಸ್ಥಿತಿ ಹೀಗಿರುವಾಗ ಬಸವರಾಜ

ಪಾಟೀಲ್ ಸೇಡಂ ಅವರ ಸಮ್ಮುಖದಲ್ಲಿಯೇ ನಿರ್ಭಯಾನಂದ ಸ್ವಾಮಿ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದು ಅವರು ಒಂದು ರಾಜಕೀಯ ಪಕ್ಷದತ್ತ ಒಲವು ಹೊಂದಿದ್ದಾರೆ ಎನ್ನುವುದನ್ನು ಸೂಚಿಸುವುದಿಲ್ಲವೆ?.ಸ್ವತಃ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳದ ನಿರ್ಭಯಾನಂದ ಸ್ವಾಮಿ ಇತರ ಧಾರ್ಮಿಕ ಮುಖಂಡರುಗಳು ರಾಜಕೀಯ ಒಲವು ಹೊಂದಿದ ಬಗ್ಗೆ ಇದೇ ಸಭೆಯಲ್ಲಿ ಟೀಕಿಸಿದ್ದಾರೆ.ತನ್ನ ಅಂಗಳದ ಹೊಲಸನ್ನು ತೊಳೆದುಕೊಳ್ಳದ ನಿರ್ಭಯಾನಂದರು ಇತರರ ಅಂಗಳದತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ.

‌ ‌ ಸಂನ್ಯಾಸ ಧರ್ಮದ ಬಗೆಗೆ ನಿರ್ಭಯಾನಂದರಿಗೆ ತಿಳಿದಿದ್ದರೆ ಸಂನ್ಯಾಸಿ ರಾಜಕೀಯದ ಬಗ್ಗೆ ನಿರ್ಲಿಪ್ತನಾಗಿರಬೇಕು ಮತ್ತು ಜನಸಾಮಾನ್ಯರ ಕಲ್ಯಾಣಕ್ಕೆ ಬದ್ಧನಾಗಿರಬೇಕು ಎನ್ನುವುದನ್ನು ಅನುಷ್ಠಾನಕ್ಕೆ ತರಬೇಕಿತ್ತು.ಕಾಷಾಯಧರಿಸಿ ಪ್ರವಚನ ಮಾಡುತ್ತ ಪಾಂಡಿತ್ಯ ಪ್ರದರ್ಶಿಸುವ ಬದಲು ವಿವೇಕಾನಂದರಂತೆ ಬಡವರ ಮನೆಗಳಲ್ಲಿ ಊಟ ಮಾಡುವುದನ್ನು ಕಲಿಯಬೇಕು,ತುತ್ತು ಊಟಕ್ಕೂ ಗತಿ ಇಲ್ಲದ ಬಡವರ ಗುಡಿಸಲುಗಳಲ್ಲಿ ಮಲಗಬೇಕು.ಆಗ ನಿರ್ಭಯಾನಂದರಿಗೆ ಸತ್ಯ ಅರ್ಥವಾಗುತ್ತದೆ.ರಾಮಕೃಷ್ಣ ಪರಮಹಂಸರು,ವಿವೇಕಾನಂದರು ದೀನದರಿದ್ರರಲ್ಲಿ ದೇವರನ್ನು ಕಂಡರೆ ನಿರ್ಭಯಾನಂದ ಬಡವರು,ದುರ್ಬಲರನ್ನು ‘ನಾಚಿಕೆಇಲ್ಲದವರು’ ಎನ್ನುತ್ತಿದ್ದಾರೆ.ವಿವೇಕಾನಂದರ ಬದುಕನ್ನು ಓದಿ,ಅರ್ಥೈಸಿಕೊಂಡಿದ್ದರೆ ನಿರ್ಭಯಾನಂದ ರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರಲಿಲ್ಲ.ವಿವೇಕಾನಂದರು ‘ ದರಿದ್ರದೇವೋಭವ’ ಎಂದು ಸಾವಿರಾರು ಸಾರೆ ಹೇಳಿದ್ದರಲ್ಲದೆ ಬಡವರ ಹೊಟ್ಟೆಯ ಹಸಿವನ್ನು ನೀಗಿಸದ ಧರ್ಮ ಧರ್ಮವೇ ಅಲ್ಲ,ದೀನ ದಲಿತರ ಬವಣೆಗಾಗಿ ಮಿಡಿಯದ ಧಾರ್ಮಿಕ ವ್ಯಕ್ತಿಗಳು ಪಾಷಂಡಿಗಳು ಎಂದಿದ್ದಾರೆ ಎನ್ನುವುದು ತಿಳಿದಿದೆಯೆ?ಭಾರತಾಂಬೆಯ ಮಕ್ಕಳನ್ನು ಬಡತನ,ದಾರಿದ್ರ್ಯ,ಶೋಷಣೆಗಳಿಂದ ಮುಕ್ತರನ್ನಾಗಿಸುವುದೇ ತಮ್ಮ ಜೀವನದ ಧ್ಯೇಯ,ಉಚ್ಚತಮ ಗುರಿ ಎಂದು ಭಾವಿಸಿ ಅದಕ್ಕಾಗಿಯೇ ಬದುಕಿದ ಧೀರೋದಾತ್ತ ಚೇತನ ವಿವೇಕಾನಂದರು ಎತ್ತ ಕಾರ್ಪೋರೇಟ್ ಸಂನ್ಯಾಸಿ ನಿರ್ಭಯಾನಂದರು ಎತ್ತ?

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಸರಕಾರವು ಜಾರಿಗೊಳಿಸುತ್ತಿದೆ ಎನ್ನುವುದನ್ನು ಸಹಿಸದ ಕೆಲವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ.ಬಡವರ ಬಗ್ಗೆ ಕಾಳಜಿ- ಕಳಕಳಿ ಇಲ್ಲದವರು,ಅಂಬಾನಿ- ಅದಾನಿಗಳೇ ದೇಶದ ಸರ್ವಸ್ವ ಎಂದು ಬಗೆದಿರುವವರಿಗೆ ಬಡವರ ಬದುಕು ಬವಣೆಗಳು ಅರ್ಥವಾಗುವುದಿಲ್ಲ.ಎ.ಸಿ.ಕಾರಿನಲ್ಲಿ ಸುತ್ತುತ್ತಿರುವ ನಿರ್ಭಯಾನಂದರಿಗೆ ಮಹಿಳೆಯರಿಗೆ ಬಸ್ಸಿನಲ್ಲಿ ಪುಕ್ಕಟೆಯಾಗಿ ಸಂಚರಿಸಲು ಸರಕಾರವು ಅವಕಾಶ ಮಾಡಿಕೊಟ್ಟಿದ್ದರಿಂದ ಪ್ರತಿದಿನ ಲಕ್ಷಾಂತರ ಮಹಿಳೆಯರು ಮನೆಯಿಂದ ಹೊರಗೆ ಬರುತ್ತಿದ್ದಾರೆ,ಅವರ ನೆಂಟರಿಷ್ಟರನ್ನು ಭೇಟಿಯಾಗುತ್ತಿದ್ದಾರೆ,ಆಸ್ಪತ್ತೆಗಳಿಗೆ ತೆರಳಿ ರೋಗಪೀಡಿತ ಸಂಬಂಧಿಕರನ್ನು ಮಾತನಾಡಿಸುತ್ತಿದ್ದಾರೆ,ಶಿರಸಿಯ ಮಾರಿಕಾಂಬಾ,ಧರ್ಮಸ್ಥಳ- ಕುಕ್ಕೆ ಸುಬ್ರಹ್ಮಣ್ಯಗಳಂತಹ ಕ್ಷೇತ್ರಗಳ ದರ್ಶನ ಪಡೆಯುತ್ತಿದ್ದಾರೆ ಎನ್ನುವ ವಾಸ್ತವ ಅರ್ಥವಾಗಿರಲಿಕ್ಕಿಲ್ಲ.ಬಡ ಮಹಿಳೆಯರು ಉಳಿತಾಯವಾದ ಬಸ್ಸಿನ ಟಿಕೆಟ್ ದರವನ್ನು ತಮ್ಮ ಮಕ್ಕಳು,ಮೊಮ್ಮಕ್ಕಳ ಶಾಲಾ ಫೀಸು,ಪುಸ್ತಕಗಳಿಗಾಗಿ ತೆಗೆದಿರಿಸುತ್ತಿದ್ದಾರೆ ಎನ್ನುವ ಸತ್ಯ ನಿರ್ಭಯಾನಂದರಿಗೆ ಗೋಚರಿಸುತ್ತಿಲ್ಲವೆ? ಪತ್ರಿಕೆಗಳನ್ನು ಓದುತ್ತಿಲ್ಲವೆ ನಿರ್ಭಯಾನಂದರು? ಟಿ ವಿ ವಾಹಿನಿಗಳು ನೋಡುತ್ತಿಲ್ಲವೆ ನಿರ್ಭಯಾನಂದರು? ಹೀಗಿದ್ದೂ ಯಾಕೆ ಸ್ವಾಮಿ ಸಂನ್ಯಾಸಿಗಳಿಗೆ ಶೋಭೆಯಲ್ಲದ ಇಂತಹ ಉಪದ್ವ್ಯಾಪಿತನದ ಮಾತು? ಬಡವರು ಮಹಿಳೆಯರ ಬಗ್ಗೆ ಕರುಣೆ- ಕನಿಕರ ಇಲ್ಲದ ನಿರ್ಭಯಾನಂದರಂತಹ ಸಂವೇದನಾಶೂನ್ಯ ಸಂನ್ಯಾಸಿಗಳು ಭಾರತದ ಸಂನ್ಯಾಸಧರ್ಮಕ್ಕೆ ಅಪಚಾರ,ಭಾರತ ಮಾತೆಗೆ ಹೊರೆ.ಬಡಜನರಿಗೆ ಗ್ಯಾರಂಟಿಗಳನ್ನು ಪಡೆಯಲು ನಾಚಿಕೆ ಇಲ್ಲ ಇನ್ನುವ ನಿರ್ಭಯಾನಂದ ನಾಗರಿಕ ಸಮಾಜಕ್ಕೆ ನಾಚಿಕೆಗೇಡು ! ಬಡವರು ಗ್ಯಾರಂಟಿಗಳ ಪ್ರಯೋಜನ ಪಡೆಯುವುದು ನಾಚಿಕೆಗೇಡು ಎನ್ನುವ ನಿರ್ಭಯಾನಂದ ತಮ್ಮ ಬಗ್ಗೆ ತಾವು ನಾಚಿಕೆ ಪಟ್ಟುಕೊಳ್ಳಬೇಕು.

ನಮ್ಮ ದೇಶದಲ್ಲಿ ಸಂನ್ಯಾಸಕ್ಕೆ ವಿಶೇಷ ಮಹತ್ವವಿದೆ,ಪೂಜ್ಯಸ್ಥಾನವಿದೆ.ನಿರ್ಭಯಾನಂದರಂತಹ ಪಂಡಿತ ಸಂನ್ಯಾಸಿಗಳಿಂದ ಸಂನ್ಯಾಸಕ್ಕೆ ಮಹತ್ವಬಂದಿಲ್ಲ.ಸಂನ್ಯಾಸಿಯಾದವನು ತಾನು ಭಿಕ್ಷೆ ಬೇಡಿ ಬದುಕಬೇಕು,ತಂದ ಭಿಕ್ಷಾನ್ನದಲ್ಲಿ ಹಂಚಿ ಉಣ್ಣಬೇಕು ಎನ್ನುವುದು ಸಂನ್ಯಾಸಧರ್ಮದ ಮೂಲತತ್ತ್ವ.ಹಿಂದೆ ಸಂನ್ಯಾಸಿಗಳು ಭಿಕ್ಷೆಬೇಡಿ ತಂದುದರಲ್ಲಿ ಅವರ ಬಳಿ ಬಂದ ಹಸಿದವರಿಗೆ ಅನ್ನ ನೀಡುತ್ತಿದ್ದರು,ನಾಯಿಗಳಿಗೆ ಆಹಾರ ನೀಡುತ್ತಿದ್ದರು( ಅಂತಹ ನಿಜವಾದ ಸಂನ್ಯಾಸಿಗಳು ಇಂದೂ ಇದ್ದಾರೆ ಅಲ್ಲಲ್ಲಿ)ಇದು ತ್ಯಾಗ,ಇದು ನಿರ್ಮೋಹ,ಇದು ಸೇವೆ.ಬಹುಶಃ ನಿರ್ಭಯಾನಂದರಂತಹ ಉಪನ್ಯಾಸಪ್ರಿಯ ಸಂನ್ಯಾಸಿಗಳಿಗೆ ಭಾರತದ ಸಂನ್ಯಾಸಧರ್ಮದ ಆಳ ಅಗಲಗಳು,ಅದರ ಹಿರಿಮೆ ಗರಿಮೆಗಳು ಅರ್ಥವಾಗಲಿಕ್ಕಿಲ್ಲ.

ನಿರ್ಭಯಾನಂದರು ದೇವರನ್ನು ಎಲ್ಲಿ ಕಾಣುತ್ತಿದ್ದಾರೆ? ಕಾರ್ಪೋರೇಟ್ ಸಂಸ್ಥೆಗಳಲ್ಲಿ ದೇವರಿಲ್ಲ,ಉಳ್ಳವರ ಪರ ವಕಾಲತ್ತು ವಹಿಸುವ ಅಧಿಕಾರಸ್ಥರ ಬಳಿಯೂ ದೇವರು ಇಲ್ಲ.ದೇವರು ಬಡವರ ಗುಡಿಸಲುಗಳಲ್ಲಿ ಇದ್ದಾನೆ,ಬಡವರ ಹಸಿದ ಎದೆಗೂಡುಗಳಲ್ಲಿ ಒಡಮೂಡಿದ್ದಾನೆ ದೇವರು.ರಾಮಕೃಷ್ಣ ಪರಮಹಂಸರು ದಲಿತರ ಶೌಚಾಲಯಗಳನ್ನು ತಮ್ಮ ತಲೆಯ ಕೂದಲುಗಳಿಂದ ಸ್ವಚ್ಛಗೊಳಿಸುತ್ತಿದ್ದರು.ತಮ್ಮ ಬಳಿ ಬಂದ ಬಡವರ ಸಂಕಟ ಪರಿಹರಿಸು ಎಂದು ತಾಯಿ ಮಹಾಕಾಳಿಯನ್ನು ಆರ್ತರಾಗಿ ಪ್ರಾರ್ಥಿಸುತ್ತಿದ್ದರು.ಅಂತಹ ಮಹೋನ್ನತ ಚೇತನ ರಾಮಕೃಷ್ಣರ ಹೆಸರಿನ ಆಶ್ರಮದ ಮುಖ್ಯಸ್ಥರಾಗಿ ನಿರ್ಭಯಾನಂದ ಬಡವರ ಬಗ್ಗೆ ಕೆಟ್ಟ ಮಾತುಗಳನ್ನಾಡುತ್ತಿರುವುದು ರಾಮಕೃಷ್ಣ ವಿವೇಕಾನಂದರ ಪವಿತ್ರ ಪರಂಪರೆಗೆ ಎಸಗುತ್ತಿರುವ ದ್ರೋಹ. ನಿತ್ಯ ಪುಕ್ಕಟೆ ಬಸ್ಸುಗಳಲ್ಲಿ ಸಂಚರಿಸಿ ಜೀವನೋಪಾಯ ಕಂಡುಕೊಳ್ಳುತ್ತಿರುವ ತಾಯಂದಿರುಗಳಲ್ಲಿ ಮಾತೆ ಶಾರದಾದೇವಿಯವರನ್ನು ಕಾಣದಿದ್ದರೆ ನಿರ್ಭಯಾನಂದರ ರಾಮಕೃಷ್ಣ ವಿವೇಕಾನಂದರ ಪರಂಪರೆಯ ಸಂನ್ಯಾಸತ್ವಕ್ಕೆ ಅರ್ಥವಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬರಲು ಬಿಜೆಪಿಯ ಜನ ವಿರೋಧಿ ನೀತಿಗಳು ಮತ್ತು ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಐದು ಗ್ಯಾರಂಟಿಗಳೇ‌ಕಾರಣ ಎನ್ನುವ ವಾಸ್ತವವನ್ನು ನಿರ್ಭಯಾನಂದರಂತಹ ಸಂನ್ಯಾಸಿಗಳು ಅರ್ಥ ಮಾಡಿಕೊಳ್ಳಬೇಕು.ದೇವರು- ಧರ್ಮಗಳಂತಹ ಭಾವನಾತ್ಮಕ ವಿಚಾರಗಳನ್ನು ಪ್ರಚೋದಿಸಿ,ಬಡವರ ಹಸಿದ ಹೊಟ್ಟೆಗಳಿಗೆ ತಣ್ಣೀರು ಬಟ್ಟೆ ಕಟ್ಟಿದ ಕಾರಣದ ಬಡವರಶಾಪದಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.ಕಾಂಗ್ರೆಸ್ಸಿನವರು ಅನ್ನಭಾಗ್ಯದ ಮೂಲಕ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ.ತಿಂಗಳಿಗೆ ಎರಡುಸಾವಿರ ರೂಪಾಯಿಗಳನ್ನು ಮನೆಯ ಒಡತಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಮಹಿಳೆಯರಿಗೆ ಸ್ವಲ್ಪವಾದರೂ ಆರ್ಥಿಕ ಸ್ವಾವಲಂಬನೆ ನೀಡಲಾಗುತ್ತಿದೆ.ಹಣದ ಅಭಾವದಿಂದ ಮದುವೆ ಮತ್ತಿತರ ಕಾರಣಗಳಲ್ಲದೆ ಹೊರಬರದೆ ಇದ್ದ ಮಹಿಳೆಯರು ಉಚಿತ ಬಸ್ಸು ಪ್ರಯಾಣದ ಕಾರಣದಿಂದ ಕ್ಷೇತ್ರಗಳಿಗೆ ಭೇಟಿ ನೀಡಿ ದೇವ ದೇವಿಯರ ದರ್ಶನ ಪಡೆಯುತ್ತಿದ್ದಾರೆ.ಎರಡು ನೂರು ಯುನಿಟ್ ಗಳ ವರೆಗಿನ ಉಚಿತ ವಿದ್ಯತ್ ಕಾರಣದಿಂದ ಬಡವರ ಮನೆಗಳಲ್ಲಿ ಫ್ಯಾನುಗಳು ತಿರುಗುತ್ತಿವೆ.ಇಂತಹ ಮನುಷ್ಯತ್ವಪೋಷಕ ಸರಕಾರಿ ಕ್ರಮಗಳನ್ನು ಒಪ್ಪದಿದ್ದರೆ ನಿರ್ಭಯಾನಂದರೆ ನೀವು ಎಂತಹ ಸಂನ್ಯಾಸಿ? ಅಷ್ಟಕ್ಕೂ ಸಂನ್ಯಾಸಿ ಉದಾರ ಹೃದಯಿಯಾಗಿರಬೇಕು ಇನ್ನೊಬ್ಬರ ಸಂತಸದಲ್ಲಿ ಸಂತಸಕಾಣಬೇಕು ಎನ್ನುತ್ತದೆ ಸಂನ್ಯಾಸ ನಿಯಮ.ಸಂನ್ಯಾಸಿಗಳಾದ ನಿಮಗೇಕೆ ಬಡವರು,ಮಹಿಳೆಯರ ಜೀವನಾನಂದದಲ್ಲಿ ಕರಬುವ ಸಣ್ಣಬುದ್ಧಿ ನಿರ್ಭಯಾನಂದರೆ?

ಕೊನೆಯದಾಗಿ ಒಂದು ಮಾತು ನಿರ್ಭಯಾನಂದರೆ,ನಿಮ್ಮ ಹಾಗೆಯೇ ನಾನೂ ಸಹ ಒಂದು ಧರ್ಮಪೀಠದ ಮುಖ್ಯಸ್ಥನೆ.ಪರಶಿವನ ಲೋಕಕಲ್ಯಾಣಗುಣವನ್ನೇ ಬಿತ್ತಿ ಬೆಳೆಯುತ್ತಿರುವ ‘ ಮಹಾಶೈವ ಧರ್ಮಪೀಠ’ ಎನ್ನುವ ಧರ್ಮಪೀಠದ ಮುಖ್ಯಸ್ಥ.ನಮ್ಮ ಮಠವು ಭಾರತದ ರಾಷ್ಟ್ರೀಯ ಧರ್ಮವನ್ನು ಎತ್ತಿಹಿಡಿಯುವ ಮಠವೆ.ಆದರೆ ನಮ್ಮ ಮಠದ ಬಾಗಿಲನ್ನು ಬಡವರು,ದಲಿತರು,ದುರ್ಬಲರಿಗಾಗಿ ತೆರೆದಿಟ್ಟಿದ್ದೇವೆ.ಉಳ್ಳವರು,ಶ್ರೀಮಂತರು ಮತ್ತು ರಾಜಕಾರಣಿಗಳನ್ನು ಭಕ್ತರನ್ನಾಗಿ ಮಾತ್ರ ಕಾಣುವ ನಾವು ಜನಸಾಮಾನ್ಯರ ಎದೆಯಲ್ಲಿ ಪರಶಿವನನ್ನು ಕಾಣುತ್ತಿದ್ದೇವೆ.ದೊಡ್ಡದೊಡ್ಡ ಉಪನ್ಯಾಸ,ಪ್ರವಚನಗಳನ್ನು ನೀಡದೆ ಶಿವ ವಿಶ್ವೇಶ್ವರನ ಸನ್ನಿಧಿಯನ್ನರಸಿ ಬರುವಲೋಕಸಮಸ್ತರಿಗೆ ‘ ಒಡಲಿಲ್ಲದಿದ್ದರೂ ಒಡಲು ಉಳ್ಳವರ ತಾಪ ಸಂತಾಪಗಳನ್ನು ಶಮನಗೊಳಿಸಿ ಉದ್ಧರಿಸುವ ಮಹೋದಾರಿ ಮಹಾದೇವ ಶಿವನ ಕಾರುಣ್ಯಾಮೃತವನ್ನು ಉಣಬಡಿಸುತ್ತಿದ್ದೇವೆ.ಸುಶಿಕ್ಷಿತ ಜನರೊಡನೆ ಸಂವಾದ ಮಾಡಿ ಪಂಡಿತರು ಎನ್ನಿಸಿಕೊಳ್ಳದೆ ನೀವೂ ಬಡವರ ಮನೆಗಳತ್ತ ನಡೆಯಿರಿ,ದಲಿತರ ಓಣಿಗಳನ್ನು ಸುತ್ತಿ.ಶೋಷಿತರ ಬದುಕನ್ನು ತೆರೆದ ಕಣ್ಣುಗಳಿಂದ ನೋಡಿ.ಬಡವರು ದಲಿತರ ಓಣಿಗಳಲ್ಲಿಯೇ ಕಾಣುತ್ತಾಳೆ ನಿಮಗೆ ತಾಯಿ ಮಹಾಕಾಳಿ.ನೊಂದವರ ನಿಟ್ಟುಸಿರು,ಬೇಗುದಿ ನಿಮಗೆ ಅರ್ಥವಾದರೆ, ನೊಂದವರ ಕಣ್ಣೀರನ್ನು ಒರೆಸುವ ಬುದ್ಧಿ ನಿಮ್ಮಲ್ಲಿ ಉಂಟಾದರೆ ಆ ಕ್ಷಣಗಳೇ ನಿಮ್ಮ ಸಾಕ್ಷಾತ್ಕಾರದ ಕ್ಷಣಗಳು.ಇಂತಹ ದಿವ್ಯತ್ವವನ್ನು ಬಿಟ್ಟು,ಸಂನ್ಯಾಸಿ ಸಾಧಿಸಬೇಕಾದುದನ್ನು ಬಿಟ್ಟು ಏನು ಏನನ್ನೋ ಮಾತನಾಡುತ್ತೀದ್ದೀರಲ್ಲ ನಿರ್ಭಯಾನಂದರೆ!

 

About The Author