ಮೂರನೇ ಕಣ್ಣು : ಸಿದ್ರಾಮಯ್ಯನವರ ಮುಂದಿರುವ ಸವಾಲುಗಳು : ಮುಕ್ಕಣ್ಣ ಕರಿಗಾರ

ಸಿದ್ರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಎರಡನೇ ಅವಧಿಯನ್ನು ಇಂದು ಪ್ರಾರಂಭಿಸಿದ್ದಾರೆ.ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಚುನಾವಣೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಜಾರಿ ಗೊಳಿಸುವುದಾಗಿ ಹೇಳಿದ್ದಾರೆ.ಹಿಂದೆ ಹಲವು ಭಾಗ್ಯಗಳಿಂದ ಹೆಸರಾಗಿದ್ದ ಸಿದ್ರಾಮಯ್ಯನವರು ಈಗ ‘ ಗ್ಯಾರಂಟಿಗಳನ್ನು ಗ್ಯಾರಂಟಿಯಾಗಿ ಅನುಷ್ಠಾನಗೊಳಿಸಿದ ಗ್ಯಾರಂಟಿವೀರ’ ರಾಗಿ ಹೆಸರಾಗಬೇಕಿದೆ.

ಸಿದ್ರಾಮಯ್ಯನವರ ಕಳಂಕರಹಿತ ವ್ಯಕ್ತಿತ್ವ,ಜನಪ್ರಿಯ ನಾಯಕನ ಇಮೇಜ್ ,ಎಲ್ಲ ಜಾತಿ- ಜನಾಂಗಗಳ ಭರವಸೆಯ ನಾಯಕ ಮತ್ತು ವರ್ಷದಲ್ಲಿಯೇ ಬರಲಿರುವ ಲೋಕಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ತರಬಲ್ಲ ಸಮರ್ಥ್ಯ ನಾಯಕನ ಸತ್ತ್ವಸಾಮರ್ಥ್ಯಗಳಿಂದ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ರೇಸಿನಲ್ಲಿ ಯಾರಕೈಗೂ ಸಿಗದೆ ಓಡುತ್ತಿದ್ದ ಡಿ.ಕೆ.ಶಿವಕುಮಾರ ಅವರನ್ನು ಹಿಂದಕ್ಕೆ ಸರಿಸಿ ಸಿದ್ರಾಮಯ್ಯನವರನ್ನು ಐದು ವರ್ಷಗಳ ಮೊದಲ ಅವಧಿಯ ಮುಖ್ಯಮಂತ್ರಿಯನ್ನಾಗಿ ಮಾಡಿದೆ.ಸಿದ್ರಾಮಯ್ಯನವರಿಗೀಗ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಈಡೇರಿಸಿ ಹೈಕಮಾಂಡ್ ಮತ್ತು ಗ್ಯಾರಂಟಿಗಳ ಫಲಾನುಭವಿ ವರ್ಗಗಳನ್ನು ತೃಪ್ತಿಪಡಿಸುವ ಮತ್ತು ತಮ್ಮ ಸ್ವತಂತ್ರವ್ಯಕ್ತಿತ್ವದ ಕನಸು- ಕಾಣ್ಕೆಗಳ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾದ ಎರಡು ಒತ್ತಡಗಳಿವೆ.ಈ ಎರಡು ಅಂಶಗಳಲ್ಲಿ ಅವರು ಹೇಗೆ ಯಶಸ್ವಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಿದ್ರಾಮಯ್ಯನವರ 2013-2018 ರ ಮೊದಲ ಮುಖ್ಯಮಂತ್ರಿ ಹುದ್ದೆಯ ಅವಧಿಗೂ ಹತ್ತು ವರ್ಷಗಳ ನಂತರ 2023 ರಲ್ಲಿ ಪ್ರಾರಂಭವಾಗಲಿರುವ ಮುಖ್ಯಮಂತ್ರಿ ಅವಧಿಗೂ ಸಾಕಷ್ಟು ವ್ಯತ್ಯಾಸವಿದೆ.ಆಗ ಸಿದ್ರಾಮಯ್ಯನವರಿಗೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಇತ್ತು,ಐದು ವರ್ಷಗಳ ಕಾಲ ತಾವೊಬ್ಬರೇ ಮುಖ್ಯಮಂತ್ರಿಯಾಗುವ ಅವಕಾಶವಿದ್ದುದರಿಂದ ಹಲವು ಹತ್ತು ಕನಸಿನ ಭಾಗ್ಯಗಳನ್ನು ಜಾರಿಗೆ ತಂದಿದ್ದರು.ಈಗ ಅಷ್ಟು ಪರಿಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಿಲ್ಲ.ಕಾಂಗ್ರೆಸ್ ವರಿಷ್ಠರ ನಿಗರಾಣಿಯಲ್ಲಿ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬದಿಯಲ್ಲೇ ಇರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲೇಬೇಕಿರುವ ಅನಿವಾರ್ಯತೆಗೆ ಸಿಲುಕಿದ್ದಾರೆ ಸಿದ್ರಾಮಯ್ಯನವರು.ಮುಖ್ಯಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿದ ಡಿ.ಕೆ.ಶಿವಕುಮಾರ ಅವರು ಅವಕಾಶ ಸಿಕ್ಕಾಗಲೆಲ್ಲ ಸಿದ್ರಾಮಯ್ಯನವರ ವೇಗಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಾರೆ.

ಸಿದ್ರಾಮಯ್ಯನವರ ಮುಂದಿರುವ ಸವಾಲುಗಳಲ್ಲಿ ಮೊದಲನೆಯದೇ ಡಿ.ಕೆ.ಶಿವಕುಮಾರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವುದು.ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರೂ ಡಿ.ಕೆ.ಶಿವಕುಮಾರ ಅವರು ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷಸ್ಥಾನವನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.ಸಮಯ- ಸಂದರ್ಭಗಳು ಬಂದಾಗ ಆ ಹುದ್ದೆಯ ಬಲದಿಂದ ಸಿದ್ರಾಮಯ್ಯನವರನ್ನು ಮಣಿಸುವುದು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಡಿ.ಕೆ.ಶಿವಕುಮಾರ ಅವರ ಲೆಕ್ಕಾಚಾರ.ವಿಧಾನಸೌಧದಲ್ಲಿ ಎರಡು ‘ ಶಕ್ತಿಕೇಂದ್ರ’ ಗಳು ಉಂಟಾಗದಂತೆ ಎಚ್ಚರಿಕೆಯಿಂದ ಇದ್ದು ತಮ್ಮ ಸಾಮರ್ಥ್ಯವನ್ನು ನಿರೂಪಿಸಬೇಕಿದೆ ಸಿದ್ರಾಮಯ್ಯನವರು.

ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಕಳೆದುಕೊಂಡು ತಂತ್ರಗಾರಿಕೆ ಹೆಣೆಯುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಅವರು ಯಾವ ಸಮಯದಲ್ಲಿ ಯಾವ ಅಸ್ತ್ರಗಳನ್ನು ಪ್ರಯೋಗಿಸಿ ಸರ್ಕಾರವನ್ನು ದುರ್ಬಲಗೊಳಿಸಲು ಇಲ್ಲವೆ ಉರುಳಿಸಲು ಪ್ರಯತ್ನಿಸುತ್ತಾರೋ ಎನ್ನುವ ಎಚ್ಚರಿಕೆಯಲ್ಲೂ ಇರಬೇಕಾಗುತ್ತದೆ ಸಿದ್ರಾಮಯ್ಯನವರು.

ಕೇಂದ್ರ ಸರಕಾರದಿಂದ ಅಭಿವೃದ್ಧಿ ಯೋಜನೆಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರೆಯುವುದಿಲ್ಲ. ಕೇಂದ್ರ ಸರ್ಕಾರದ ಅನುಮತಿ,ಅನುಮೋದನೆ ಅಗತ್ಯವಿರುವ ಪರಿಸರ,ಅಂತರ ರಾಜ್ಯ ನದಿನೀರಿನ ಹಂಚಿಕೆ,ಅರಣ್ಯ,ಗಣಿಗಾರಿಕೆ ಮೊದಲಾದರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಬೇಗನೆ ಸಿಗುವುದಿಲ್ಲ ಸಿಕ್ಕರೂ ಅನುಷ್ಠಾನಗೊಳಿಸಲು ಸಾಧ್ಯವಾಗದಂತಹ ನಿಯಮ ನಿರ್ಬಂಧನೆಗಳನ್ನು ಹಾಕಲಾಗುತ್ತದೆ.ಇಂತಹ ‘ ಉದ್ದೇಶಪೂರ್ವಕ ತಡೆಗಳನ್ನು’ ಸಿದ್ರಾಮಯ್ಯನವರು ಹೇಗೆ ದಾಟಿ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

‌ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಡತೆಯನ್ನು ಮೈಗೂಡಿಸಿಕೊಂಡು ಕುಂಭಕರ್ಣ ನಿದ್ದೆಯಲ್ಲಿದ್ದ ಆಡಳಿತಶಾಹಿಯ ಸ್ವೇಚ್ಛಾಚಾರಿ ವರ್ತನೆಗೆ ಬ್ರೇಕ್ ಹಾಕಿ ಅಧಿಕಾರಿಗಳು ಕೆಲಸ ಮಾಡುವಂತೆ,ಸಾರ್ವಜನಿಕರಿಗೆ ಸ್ಪಂದಿಸುವಂತೆ ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಆಡಳಿತಕ್ಕೆ ಚುರುಕು ಮೂಡಿಸಬೇಕಿದೆ.ಒಂದೇ ಇಲಾಖೆಯಲ್ಲಿ ನಾಲ್ಕೈದು ವರ್ಷಗಳ ಕಾಲ ಕಾರ್ಯದರ್ಶಿ,ಪ್ರಧಾನ ಕಾರ್ಯದರ್ಶಿ ಮತ್ತು ಅಪರಮುಖ್ಯಕಾರ್ಯದರ್ಶಿಯಂತಹ ಹುದ್ದೆಗಳನ್ನು ಅನುಭವಿಸಿದ ಐಎಎಸ್ ಅಧಿಕಾರಿಗಳು ಆ ಇಲಾಖೆಯಲ್ಲಿ ಏನೆಲ್ಲ ಅಧ್ವಾನ ಮಾಡಿದ್ದಾರೆ,ಏನೆಲ್ಲ ‘ಘನಕಾರ್ಯ’ ಗಳನ್ನು ಮಾಡಿದ್ದಾರೆ ಎನ್ನುವುದನ್ನು ಪರಿಶೀಲಿಸಬೇಕು.ಕೆಲವು ಇಲಾಖೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿಗಳಾಗಿವೆ,ನಿಯಮಗಳನ್ನು ಉಲ್ಲಂಘಿಸಿ ಬಡ್ತಿ ನೀಡಲಾಗಿದೆ ,ಅನಗತ್ಯ ಹುದ್ದೆಗಳನ್ನು ಸೃಷ್ಟಿಸಲಾಗಿದೆ,ನಿಯಮಗಳನ್ನು ತೂರಿ ಉನ್ನತ ಹುದ್ದೆಗಳನ್ನು ನೀಡಲಾಗಿದೆ.ಇಂತಹ ‘ಅಕ್ರಮ ಅವಕಾಶ’ಗಳನ್ನು ಹತ್ತಿಕ್ಕಿ ಸರಕಾರಿ ಸೇವಾ ನಿಯಮಗಳು ಎಲ್ಲರಿಗು ಒಂದೇ ಎನ್ನುವುದನ್ನು ತೋರಿಸಬೇಕಿದೆ.

‌ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಜಾತಿಗೆ ಸೇರಿದ ಅಧಿಕಾರಿಗಳಿಗೆ ಹೆಚ್ಚಿನ ಪ್ರಮೋಶನ್ ನೀಡಲಾಗಿದೆ,ಕೆಲವರಿಗೆ ಪ್ರಮೋಶನ್ ನೀಡಲು ನಿಯಮಗಳನ್ನು ಗಾಳಿಗೆ ತೂರಲಾಗಿದೆ,ಅರ್ಹತೆ ಇಲ್ಲದವರನ್ನು ಜಿಲ್ಲಾ ಪಂಚಾಯತಿಗಳಸಿಇಒ ಹುದ್ದೆಯಲ್ಲಿಟ್ಟು ಅಧಿಕಾರ ಅನುಭವಿಸಲು ಅವಕಾಶ ಮಾಡಿಕೊಡಲಾಗಿದೆಯಲ್ಲದೆ ಸರ್ಕಾರದ ಬಹುಮುಖ್ಯ ಇಲಾಖೆಗಳಲ್ಲಿ ಒಂದೇ ವರ್ಗದ ಅಧಿಕಾರಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅಕ್ರಮವಾಗಿ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತಿರುವವರನ್ನು ಹೊರಗಟ್ಟಿ ‘ ವಿಧಾನಸೌಧ ಮತ್ತು ಸಚಿವಾಲಯದಿಂದಲೇ ಪ್ರಾರಂಭಿಸಬೇಕಿದೆ ಸಾಮಾಜಿಕ ನ್ಯಾಯ ಆಧಾರಿತ ಆಡಳಿತ ಪದ್ಧತಿಯನ್ನು.

ಕೊನೆಯದಾಗಿ ಸಿದ್ರಾಮಯ್ಯನವರು ಗಮನಿಸಲೇಬೇಕಾದ ಮಹತ್ವದ ಸಂಗತಿ ಒಂದಿದೆ.ಸಿದ್ರಾಮಯ್ಯನವರಿಗಾಗಿ ಉತ್ತರ ಕರ್ನಾಟಕದ ಕುರುಬರು ಹುಚ್ಚು ಆವೇಶದಿಂದ ಕೆಲಸ ಮಾಡಿದ್ದಾರೆ.ಮೈಸೂರು ಭಾಗಕ್ಕಿಂತ ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಸಿದ್ರಾಮಯ್ಯನವರ ಕುರುಬ ಅಭಿಮಾನಿಗಳು.ಬೆಂಗಳೂರು ಮೈಸೂರುಗಳ ಕುರುಬರುಗಳಿಗೆ ತಮ್ಮ ಮನೆ ಕಛೇರಿಗಳ ಪ್ರವೇಶದ್ವಾರವನ್ನು ಸದಾ ತೆರೆದಿಟ್ಟು ಉತ್ತರ ಕರ್ನಾಟಕದ ಜಿಲ್ಲೆಗಳು,ಬೆಳಗಾವಿಯಂತಹ ದೂರದ ಸ್ಥಳಗಳಿಂದ ಸಮಸ್ಯೆಗಳನ್ನು ಹೇಳಿಕೊಂಡು ಬರುವ ಕುರುಬರಿಗೆ ಮನೆ ಮತ್ತು ಕಛೇರಿಗಳಿಗೆ ಪ್ರವೇಶ ನಿರಾಕರಿಸುವ,ನಿರ್ಬಂಧಿಸುವ ತಮ್ಮ ಸುತ್ತ ಠಿಕಾಣಿ ಹೂಡುವ ದುರ್ಬುದ್ಧಿಯ ಜನರನ್ನು ಹೊರಗಿಡಲೇಬೇಕು ಸಿದ್ರಾಮಯ್ಯನವರು.ಜೊತೆಗೆ ವಿವಿಧ ನಿಗಮ ಮಂಡಳಿ ಮತ್ತಿತರ ಸ್ವಾಯತ್ತ ಸಂಸ್ಥೆಗಳಿಗೆ ಸ್ವಜಾತಿಯ ಜನರನ್ನು ಅಧ್ಯಕ್ಷರು,ಸದಸ್ಯರುಗಳನ್ನಾಗಿ ನೇಮಕಮಾಡುವಾಗ ತಮ್ಮ ಸುತ್ತಮುತ್ತ ಪ್ರದಕ್ಷಿಣೆ ಮಾಡುತ್ತಿರುವ ಬೆಂಗಳೂರು ಮೈಸೂರುಗಳ ಕುರುಬರಿಗೆ ಮಾತ್ರ ಅವಕಾಶ ನೀಡದೆ,ಬೆಂಗಳೂರು ಮೈಸೂರುಗಳ ಕಣ್ಣಾಸರೆಯ ಕುರುಬರಿಗಿಂತ ರಾಜ್ಯದಾದ್ಯಂತ ಅಲ್ಲಲ್ಲಿ ಇರುವ ಕುರುಬರ ನಿಜವಾದ ಪ್ರತಿಭಾವಂತರುಗಳಿಗೆ ಸ್ಥಾನ ಮಾನ ನೀಡಬೇಕು.ಯಾವುದೋ ಪತ್ರಿಕೆಯಲ್ಲಿ ನಾಲ್ಕಕ್ಷರದ ಲೇಖನ ಬರೆದು ಅಧ್ಯಕ್ಷಗಿರಿಗೆ ಲಾಬಿಮಾಡುವ ಕುರುಬರ ಬರಹಗಾರರಿಗಿಂತ ಸಹಸ್ರಪಟ್ಟು ಹೆಚ್ಚಿನ ಸರ್ಜನಶೀಲ ಸಾಮರ್ಥ್ಯದ ಕುರುಬರ ಬರಹಗಾರರು ಇತರೆಡೆಗಳಲ್ಲಿ ಇದ್ದಾರೆ.ಹಿಂದೆ ಮುಂದೆ ಓಡಾಡಿಕೊಂಡು ಅರ್ಹತೆ ಇಲ್ಲದೆ ಇದ್ದರೂ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನು ಗಿಟ್ಟಿಸಿಕೊಂಡು ಅಪಹಾಸ್ಯಕ್ಕೆ ಗುರಿಯಾದ ‘ಮಹಾನ್ ಪ್ರತಿಭಾವಂತರುಗಳಿಂತಲೂ ಮಿಗಿಲಾದ ಸತ್ತ್ವ ಸಾಮರ್ಥ್ಯ ಉಳ್ಳ ಬರಹಗಾರರು,ಶಿಕ್ಷಣ ತಜ್ಞರು,ಕಲಾವಿದರುಗಳು,ನಾಟಕಕಾರರು ರಾಜ್ಯದಾದ್ಯಂತ ಇದ್ದಾರೆ.ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿ ಈಗ ಕೊನೆಯ ಅವಧಿಯಲ್ಲಿದ್ದಾರೆ,(ಮುಂದೆ ಮತ್ತೆ ಯಾವಾಗ ಬರುತ್ತಾರೋ ಕುರುಬ ಸಮುದಾಯದಿಂದ ಮುಖ್ಯಮಂತ್ರಿಗಳು,ಹೇಳಲಾಗದು) ಆ ಕಾರಣಕ್ಕಾದರೂ ವಿವಿಧ ನಿಗಮ ಮಂಡಳಿ,ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಗಳಿಗೆ ಅಧ್ಯಕ್ಷರು ಸದಸ್ಯರುಗಳು ನೇಮಿಸುವಾಗ ಕರ್ನಾಟಕದಾದ್ಯಂತ ಇರುವ ಪ್ರತಿಭಾವಂತರುಗಳನ್ನು ಹುಡುಕಿ,ಅವಕಾಶ ನೀಡಬೇಕಿದೆ.

About The Author