ಮೂರನೇ ಕಣ್ಣು : ಉತ್ಸವಮೂರ್ತಿ’ ಯಂತಿರುವ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಯಾಕಿಷ್ಟು ವ್ಯಾಮೋಹ ? : ಮುಕ್ಕಣ್ಣ ಕರಿಗಾರ

ದೆಹಲಿಯಲ್ಲಿರುವ ಕಾಂಗ್ರೆಸ್ ವರಿಷ್ಠರು ಸಿದ್ರಾಮಯ್ಯನವರನ್ನು ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.ಡಿ.ಕೆ.ಶಿವಕುಮಾರ ಅವರ ಮನ ಒಲಿಸಲು ಬಹಳಷ್ಟು ಹೆಣಗಾಡಿದ ಕಾಂಗ್ರೆಸ್ ಹೈಕಮಾಂಡ್ ಶಿವಕುಮಾರ ಅವರ ಷರತ್ತುಗಳಿಗೆ ಒಪ್ಪಿಕೊಂಡಿದೆ.ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸಬೇಕು ಎನ್ನುವದರೊಂದಿಗೆ ತಮ್ಮೊಬ್ಬರನ್ನೇ ‘ ಉಪಮುಖ್ಯಮಂತ್ರಿ’ ಮಾಡಬೇಕು ಎಂದು ಡಿ.ಕೆ.ಶಿವಕುಮಾರ ಅವರು ಮಂಡಿಸಿದ್ದ ಬೇಡಿಕೆಗೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದೆ.ಇತರ ಉಪಮುಖ್ಯಮಂತ್ರಿಗಳಿದ್ದರೆ ತಮ್ಮ ಮಹತ್ತು ಕಡಿಮೆ ಆಗುವುದೆಂದು ಭಾವಿಸಿದ್ದರೊ ಏನೋ ಡಿ.ಕೆ.ಶಿವಕುಮಾರ ಅವರು,ಅದಕ್ಕಾಗಿ ತಮ್ಮ ಹೊರತಾಗಿ ಯಾರನ್ನೂ ಉಪಮುಖ್ಯಮಂತ್ರಿ ಮಾಡಬಾರದು ಎಂದು ಪಟ್ಟು ಹಿಡಿದಿದ್ದರು.ವರಿಷ್ಠರು ಡಿ.ಕೆ.ಶಿವಕುಮಾರ ಅವರ ಈ ಬೇಡಿಕೆಯನ್ನು ಒಪ್ಪಿರುವುದರಿಂದ ಉಪಮುಖ್ಯಮಂತ್ರಿ ಆಗುವ ಕನಸುಕಂಡಿದ್ದ ಕೆಲವರಿಗೆ ನಿರಾಶೆ ಆಗಿದೆ.ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ ಲಿಂಗಾಯತರು,ಅಲ್ಪಸಂಖ್ಯಾತರು ಮತ್ತು ದಲಿತರಿಗೆ ನೀಡಲು ಕಾಂಗ್ರೆಸ್ ವರಿಷ್ಠರು ಈ ಮೊದಲು ಆಲೋಚಿಸಿದ್ದರು.ದಲಿತಕೋಟಾದಡಿ ತಾವು ಉಪಮುಖ್ಯಮಂತ್ರಿ ಆಗಬಹುದು ಎಂದು ನಿರೀಕ್ಷಿಸಿದ್ದ ಡಾ.ಜಿ.ಪರಮೇಶ್ವರ ಅವರಿಗೆ ಸಹಜವಾಗಿಯೇ ನಿರಾಶೆಯಾಗಿ ಅವರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.ದೆಹಲಿಯಲ್ಲಿರುವ ಕಾಂಗ್ರೆಸ್ ಶಾಸಕರುಗಳಿಗೆ ಸಹ ‘ ಒಬ್ಬ ಉಪಮುಖ್ಯಮಂತ್ರಿ’ ಸೂತ್ರ ಒಪ್ಪಿಗೆಯಾಗದೆ ಅವರು ವರಿಷ್ಠರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ತಿಳಿಸಲು ನಿರ್ಧರಿಸಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಯ ಬಗೆಗಿನ ತಪ್ಪು ತಿಳಿವಳಿಕೆಯೇ ಅದನ್ನು ಹೇಗಾದರೂ ಮಾಡಿ ಪಡೆಯಬೇಕು ಎನ್ನುವ ಹಠದ ಕಾರಣ.ಉಪಮುಖ್ಯಮಂತ್ರಿ ಹುದ್ದೆಯು ಸಾಂವಿಧಾನಿಕ ಹುದ್ದೆಯಲ್ಲವಾದ್ದರಿಂದ ಅದಕ್ಕೆ ಯಾವ ಮಹತ್ವವೂ ಇಲ್ಲ.ಉಪಮುಖ್ಯಮಂತ್ರಿ ಎಂದು ತಮ್ಮ ಕಛೇರಿಗೆ ಬೋರ್ಡ್ ಬರೆಸಬಹುದು,ಲೆಟರ್ ಹೆಡ್ ಮಾಡಿಸಬಹುದು, ಅಧಿಕೃತ ಸರಕಾರಿ ಕಾರ್ಯಕ್ರಮಗಳಲ್ಲಿ ಆ ಪದವಿ ನಮೂದಿಸಬಹುದಷ್ಟೆ.ರಾಜಕೀಯ ಅನಿವಾರ್ಯತೆಗಾಗಿ ಸೃಷ್ಟಿಸುವ ಉಪ ಪ್ರಧಾನಿ,ಉಪ ಮುಖ್ಯಮಂತ್ರಿಗಳು ಸಾಂವಿಧಾನಿಕ ಹುದ್ದೆಗಳು ಅಲ್ಲವಾದ್ದರಿಂದ ಆ ಹುದ್ದೆಗಳ ಆಕಾಂಕ್ಷಿಗಳು ಸಾಂವಿಧಾನಿಕ ವಿಶೇಷಸೌಲತ್ತು ( Privilege) ಗಳನ್ನು ಅನುಭವಿಸಲು ಸಾಧ್ಯವಿಲ್ಲ.ಉಪಮುಖ್ಯಮಂತ್ರಿ ಹುದ್ದೆಗೆ ಅದರದ್ದೇ ಆದ ಸಂಬಳ,ಭತ್ತೆಗಳು,ಸೌಲಭ್ಯಗಳು ಇರುವುದಿಲ್ಲ.ಉಪಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುವವರು ಯಾವುದಾದರೂ ಸಚಿವ ಖಾತೆಯ ಸಂಬಳ,ಭತ್ತೆ ಮತ್ತು ಸೌಲಭ್ಯಗಳನ್ನಷ್ಟೇ ಪಡೆಯಲು ಅರ್ಹರು.

ಜನರೆದುರು ಉಪಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಗಿದ ಮಾತ್ರಕ್ಕೆ ಮುಖ್ಯಮಂತ್ರಿಯ ಅರ್ಧ ಅಧಿಕಾರವೇನೂ ಬರುವುದಿಲ್ಲ ಉಪಮುಖ್ಯಮಂತ್ರಿ ಆದವರಿಗೆ.ಹೆಚ್ಚೆಂದರೆ ಕ್ಯಾಬಿನೆಟ್ ಮೀಟಿಂಗ್ ಗಳಲ್ಲಿ ಮುಖ್ಯಮಂತ್ರಿಯ ಪಕ್ಕದಲ್ಲಿ ಕೂಡಬಹುದು,ಸರಕಾರಿ ಸಭೆ- ಸಮಾರಂಭಗಳಲ್ಲಿ ಮುಖ್ಯಮಂತ್ರಿಯ ನಂತರದ ಸ್ಥಾನಮಾನ ಅನುಭವಿಸಬಹುದಷ್ಟೆ.ಸಂವಿಧಾನದಲ್ಲಿ ಕೇಂದ್ರದಲ್ಲಿ ಪ್ರಧಾನಮಂತ್ರಿ ಮತ್ತು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಹುದ್ದೆಗಳ ಬಗೆಗಷ್ಟೆ ಪ್ರಸ್ತಾಪಿಸಲಾಗಿದೆ.ಸಂವಿಧಾನದ 163(1)ನೆಯ ಅನುಚ್ಛೇದವು ಸಚಿವ ಸಂಪುಟದ ಬಗ್ಗೆ ಪ್ರಸ್ತಾಪಿಸುತ್ತಿದ್ದು ‘ರಾಜ್ಯಪಾಲರಿಗೆ ಸಹಾಯ ಮತ್ತು ಸಲಹೆ ನೀಡಲು ಮುಖ್ಯಮಂತ್ರಿಯ ನೇತೃತ್ವದಲ್ಲಿ ಸಚಿವ ಸಂಪುಟ ಇರತಕ್ಕದ್ದು’ ಎನ್ನುತ್ತದೆ.ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳ ನೇಮಕದ ಬಗ್ಗೆ ಹೇಳುವ ಸಂವಿಧಾನದ 164ನೆಯ ಅನುಚ್ಛೇದವು ‘ ರಾಜ್ಯಪಾಲರು ಮುಖ್ಯಮಂತ್ರಿಯನ್ನು ಮತ್ತು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಇತರ ಮಂತ್ರಿಗಳನ್ನು ನೇಮಿಸತಕ್ಕದ್ದು’ ಎನ್ನುತ್ತದೆ.ಸಂವಿಧಾನದ ಈ ಅನುಚ್ಛೇದಗಳಂತೆ ಮುಖ್ಯಮಂತ್ರಿ ಮತ್ತು ಅವರ ಸಲಹೆಯಂತೆ ರಾಜ್ಯಪಾಲರಿಂದ ನೇಮಕಗೊಳ್ಳುವ ಇತರ ಮಂತ್ರಿಗಳಿಗಷ್ಟೆ ಅಧಿಕೃತ ಕಾರ್ಯಭಾರ ಹಂಚಿಕೆ ಆಗುತ್ತದೆ.ಮುಖ್ಯಮಂತ್ರಿಯು ಉಪಮುಖ್ಯಮಂತ್ರಿ ಎಂದು ಯಾರ ಹೆಸರುಗಳನ್ನೂ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ.ಸಂವಿಧಾನದ ವಿಧಿ- ನಿಯಮಗಳಿಗೆ ಅನುಗುಣವಾಗಿ ಪ್ರಮಾಣವಚನ ಸ್ವೀಕರಿಸಿ,ತಮಗೆ ಹಂಚಿಕೆಯಾದ ಸಚಿವಸ್ಥಾನದ ಕಾರ್ಯಭಾರ ನಿರ್ವಹಿಸುವ,ಆ ಸಚಿವ ಸ್ಥಾನಕ್ಕೆ ನಿಗದಿಯಾದ ಹಕ್ಕು- ಅಧಿಕಾರಗಳನ್ನು ಚಲಾಯಿಸಬೇಕಾದವರು ಸಂವಿಧಾನದಲ್ಲಿ ಅವಕಾಶವಿಲ್ಲದ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಯಾಕಿಷ್ಟು ವ್ಯಾಮೋಹಿತರಾಗುತ್ತಾರೋ?

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೂ ಇದೆ.ರಾಜ್ಯಾಡಳಿತದ ನಿಜವಾದ ಮುಖ್ಯಸ್ಥರು ಆಗಿ ಕಾರ್ಯನಿರ್ವಹಿಸುವ ಮುಖ್ಯಮಂತ್ರಿಯವರು ಆಡಳಿತಾತ್ಮಕ ನಿರ್ಧಾರಗಳು ಸೇರಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಮುಖ್ಯಮಂತ್ರಿಯ ನಂತರದ ಸ್ಥಾನ ಉಪಮುಖ್ಯಮಂತ್ರಿಯದ್ದು ಎಂದು ಮುಖ್ಯಮಂತ್ರಿಯವರಿಗೆ ಸಲ್ಲಿಸಬೇಕಾದ ಎಲ್ಲ ಕಡತಗಳು ಉಪಮುಖ್ಯಮಂತ್ರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಹೋಗುವುದಿಲ್ಲ.ಉಪಮುಖ್ಯಮಂತ್ರಿಯವರಿಗೆ ಅವರ ಇಲಾಖೆಯ ಕಡತಗಳಷ್ಟೇ ಹೋಗುತ್ತವೆ! ಅವರು ನಿರ್ವಹಿಸುತ್ತಿರುವ ಇಲಾಖೆಯ ಮೇಲಷ್ಟೇ ಅವರಿಗೆ ಅಧಿಕಾರ! ಉಪಮುಖ್ಯಮಂತ್ರಿ ಎಂದು ಇತರ ಸಚಿವರುಗಳಿಗೆ ನಿರ್ದೇಶನ ನೀಡುವಂತಿಲ್ಲ,ಇತರ ಸಚಿವರುಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.ಆ ವಿಶೇಷಾಧಿಕಾರ ಏನಿದ್ದರೂ ಮುಖ್ಯಮಂತ್ರಿಯಾದವರಿಗೆ ಮಾತ್ರ.ವಸ್ತುಸ್ಥಿತಿ ಹೀಗಿದ್ದೂ ರಾಜಕೀಯ ಪಕ್ಷಗಳು ಪ್ರಬಲ ಆಕಾಂಕ್ಷಿಗಳನ್ನು ಓಲೈಸಲು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುತ್ತಿವೆ,ಸಚಿವರಾಗುವವರು ಉಪಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುತ್ತಾರೆ.

ದೇವಸ್ಥಾನಗಳಲ್ಲಿರುವ ‘ ಉತ್ಸವ ಮೂರ್ತಿ’ ಯಂತೆ ಉಪಮುಖ್ಯಮಂತ್ರಿ ಸ್ಥಾನ.ದೇವಸ್ಥಾನದಲ್ಲಿ ದೇವರ ಮೂಲವಿಗ್ರಹಕ್ಕೆ ಮಾತ್ರ ನಿತ್ಯ,ನೈಮಿತ್ತಿಕ ಪೂಜೆ- ಸೇವೆಗಳು ಸಲ್ಲುತ್ತವೆ.ಮೂಲಮೂರ್ತಿಯು ಶಿಲಾಮೂರ್ತಿಯಾಗಿರುವುದರಿಂದ ಮತ್ತು ಅದನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠೆ ಮಾಡಿರುವುದರಿಂದ ಹೊರ ತರಲಾಗದು ಎನ್ನುವ ಕಾರಣಕ್ಕೆ ಜಾತ್ರೆ,ಉತ್ಸವಗಳ ಸಂದರ್ಭದಲ್ಲಿ ಮೂಲಮೂರ್ತಿಯ ಪ್ರತಿಬಿಂಬ ಎಂಬಂತೆ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಗುತ್ತದೆ.ಜಾತ್ರೆ- ಉತ್ಸವಗಳು ಮುಗಿದಬಳಿಕ ಉತ್ಸವಮೂರ್ತಿಯು ದೇವಸ್ಥಾನದಲ್ಲಿ ತನಗೆ ನಿಗದಿಪಡಿಸಿದ ಒಂದು ಮೂಲೆಯಲ್ಲಿ ಕೂಡಬೇಕಷ್ಟೆ ! ಮೂರ್ನಾಲ್ಕು ಜನರಲ್ಲ,ಹತ್ತು ಜನ ಉಪಮುಖ್ಯಮಂತ್ರಿಗಳಿದ್ದರೂ ಅವರು ಮುಖ್ಯಮಂತ್ರಿಯು ಚಲಾಯಿಸುವ ಹಕ್ಕು- ಅಧಿಕಾರಗಳನ್ನು ಚಲಾಯಿಸಲಾಗದು,ವಿಶೇಷಾಧಿಕಾರವನ್ನು ಅನುಭವಿಸಲಾಗದು,ವಿವೇಚನಾಧಿಕಾರದ ಸವಿಯನ್ನುಣ್ಣಲಾಗದು.

About The Author