ಮೂರನೇ ಕಣ್ಣು : ಸಿದ್ರಾಮಯ್ಯನವರು ಆಗದಿದ್ದರೆ ಮಲ್ಲಿಕಾರ್ಜುನ ಖರ್ಗೆಯವರೇ ಕರ್ನಾಟಕದ ಮುಖ್ಯಮಂತ್ರಿ ಆಗಲಿ : ಮುಕ್ಕಣ್ಣ ಕರಿಗಾರ

ರಾಜ್ಯದ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟಗೊಂಡು ವಾರ ಸಮೀಪಿಸುತ್ತ ಬಂದಿದ್ದರೂ ಕರ್ನಾಟಕದ ಮುಖ್ಯಮಂತ್ರಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ,ಸಂಚಿವ ಸಂಪುಟದ ರಚನೆಯೂ ಆಗಿಲ್ಲ.135 ಸ್ಥಾನಗಳನ್ನು ಗೆದ್ದು ಇತ್ತೀಚಿನ ವರ್ಷಗಳಲ್ಲಿನ ಅತ್ಯುತ್ತಮ ಸಾಧನೆ ಮಾಡಿರುವ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ತಿಣುಕಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.ಕಾಂಗ್ರೆಸ್ ಹೈಕಮಾಂಡಿನ ಮುಂದೆಯೂ ಸಮಸ್ಯೆಗಳಿವೆ,ಪರಿಸ್ಥಿತಿ ಅಂದುಕೊಂಡಷ್ಟು ಸುಲಭ ಇಲ್ಲ.ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದವರೇ ಆಗಿದ್ದರೂ ಯಾರ ಪರವಾಗಿ ನಿರ್ಧಾರ ತೆಗೆದುಕೊಂಡರೂ ಕರ್ನಾಟಕದ ಜನತೆ ತಮ್ಮತ್ತ ಬೆರಳು ಮಾಡಿ ತೋರಿಸಬಹುದು ಎನ್ನುವ ಕಾರಣದಿಂದ ಗಟ್ಟಿ ನಿರ್ಧಾರ ತಳೆಯುತ್ತಿಲ್ಲ.ಸೋನಿಯಾ ಗಾಂಧಿಯವರು ಕೂಡಲೆ ನಿರ್ಧಾರ ಪ್ರಕಟಿಸುತ್ತಿಲ್ಲ.ರಾಹುಲ್ ಗಾಂಧಿಯವರು ವಸ್ತುಸ್ಥಿತಿಯನ್ನರಿತು ಸಿದ್ರಾಮಯ್ಯನವರೇ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ.

ಸಿದ್ರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರು ಪಟ್ಟು ಸಡಿಲಸದೆ ಇದ್ದುದರಿಂದ ಮುಖ್ಯಮಂತ್ರಿಯ ಆಯ್ಕೆ ವಿಳಂಬವಾಗುತ್ತಿದೆ.ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಹುದ್ದೆ ಸಿಗಲೇಬೇಕು ಎಂದು ವಾದ ಮಂಡಿಸುತ್ತಿರುವುದು ಅವರಿಗೆ ಹಕ್ಕು ಎನ್ನಿಸಿರಬಹುದು.ಆದರೆ ಸೆರೆಮನೆಗೆ ಹೋಗಿ ಬಂದವರು,ಸಾಕಷ್ಟು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವವರು ,ಅಕ್ರಮಸಂಪಾದನೆಯ ಆರೋಪ ಹೊತ್ತಿರುವವರು ರಾಜ್ಯದ ಮುಖ್ಯಮಂತ್ರಿಯಾಗುವುದು ಶೋಭೆಯಲ್ಲ.ಡಿ.ಕೆ.ಶಿವಕುಮಾರ ಪಕ್ಷಕ್ಕಾಗಿ ಸಂಕಷ್ಟ ಎದುರಿಸಿರಬಹುದು,ಪಕ್ಷದ ಬಲವರ್ಧನೆಗೆ ಗಮನಾರ್ಹ ಕೊಡುಗೆ ನೀಡಿರಬಹುದು.ಆದರೆ ನೈತಿಕತೆ ಎನ್ನುವುದು ಬೇಡವೆ?ತಿಹಾರ್ ಜೈಲಿನಲ್ಲಿದ್ದ ವ್ಯಕ್ತಿ ಕರ್ನಾಟಕದ ಮುಖ್ಯಮಂತ್ರಿ ಎಂದು ದೇಶದಾದ್ಯಂತ ಸುದ್ದಿಯಾಗುತ್ತದೆ.ಇದರಿಂದ ಕಾಂಗ್ರೆಸ್ ಪಕ್ಷವೇ ಮುಜುಗರ ಅನುಭವಿಸಬೇಕಾಗುತ್ತದೆ.ಸುಪ್ರೀಂಕೋರ್ಟ್ Convicted persons ರಾಜ್ಯದ ಮುಖ್ಯಮಂತ್ರಿ ಆಗಬಾರದು ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರಕರಣದಲ್ಲಿ ಹಾಗೂ ಅಂತಹದೆ ಒಂದೆರಡು ಪ್ರಕರಣಗಳಲ್ಲಿ ನೀಡಿದ ತೀರ್ಪುಗಳಲ್ಲಿ ಭ್ರಷ್ಟಾಚಾರದಂತಹ ಗಂಭೀರ ಪ್ರಕರಣಗಳ ಆರೋಪ ಹೊತ್ತವರುಗಳನ್ನು ಸಹ ಮಂತ್ರಿ,ಮುಖ್ಯಮಂತ್ರಿಗಳಂತಹ ಸ್ಥಾನಕ್ಕೆ ಪರಿಗಣಿಸುವಾಗ ವಿಚಾರಿಸಬೇಕಾಗುತ್ತದೆ;ಸಾರ್ವಜನಿಕ ಮಹತ್ವದ ಹುದ್ದೆಯಾದ ಮಂತ್ರಿ,ಮುಖ್ಯಮಂತ್ರಿಯಂತಹ ಹುದ್ದೆಗಳಿಗೆ ಆಯ್ಕೆಯಾಗುವ ವ್ಯಕ್ತಿ ಉನ್ನತ ಮಟ್ಟದ ಚಾರಿತ್ರ್ಯ,ನೈತಿಕತೆ ಹೊಂದಿರಬೇಕಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಡಿ.ಕೆ.ಶಿವಕುಮಾರ ಅವರ ಬೇಡಿಕೆಗೆ ಸೊಪ್ಪು ಹಾಕಬಾರದು.

ನನ್ನಿಂದಲೇ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳು ಬಂದಿವೆ ಎನ್ನುವ ಡಿ.ಕೆ.ಶಿವಕುಮಾರ ಆತ್ಮಾವಲೋಕನ ಮಾಡಿಕೊಳ್ಳಬೇಕು.ಕಾಂಗ್ರೆಸ್ಸಿನಲ್ಲಿ ಶಾಮನೂರು ಶಿವಶಂಕ್ರಪ್ಪ,ಎಂ.ಬಿ.ಪಾಟೀಲ್,ಎಚ್.ಕೆ.ಪಾಟೀಲ್ ಅವರಂತಹ ಅನುಭವಿ ಮತ್ತು ಯಶಸ್ವಿ ರಾಜಕಾರಣಿಗಳು ಆಯ್ಕೆಯಾಗಿದ್ದಾರಲ್ಲ ,ಅವರ ಗೆಲುವಿನಲ್ಲಿ ಶಿವಕುಮಾರ ಅವರ ಪಾತ್ರವೇನು? ಬಿಜೆಪಿಯ ಮಧ್ಯಮವರ್ಗದ ವಿರೋಧಿ ನೀತಿ,ಹಿಂದುತ್ವದ ಪ್ರತಿಪಾದನೆ ಮತ್ತು ಏಕರೂಪನಾಗರಿಕ ಸಂಹಿತೆಯಂತಹ ಮುಸ್ಲಿಂ ವಿರೋಧಿ ನಿಲುವುಗಳಿಂದ ರಾಜ್ಯದ ಪ್ರಬುದ್ಧ ಮತದಾರರು ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆಯೇ ಹೊರತು ಡಿ.ಕೆ.ಶಿವಕುಮಾರ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಎನ್ನುವ ಕಾರಣದಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಲ್ಲ.ಒಂದು ವೇಳೆ ಡಿ.ಕೆ.ಶಿವಕುಮಾರ ತಾವು ಮುಖ್ಯಮಂತ್ರಿಯಾಗಲು ಅರ್ಹರು ಎಂದು ಭಾವಿಸಿದ್ದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ‘ ಡಿ.ಕೆ.ಶಿವಕುಮಾರ ಅವರೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಘೋಷಿಸಬೇಕಿತ್ತು.ಬಿಜೆಪಿ ಪಡೆದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನಗಳಲ್ಲಿಯೇ ತೃಪ್ತಿಪಡಬೇಕಿತ್ತು ಕಾಂಗ್ರೆಸ್.ಹಳೆಯ ಮೈಸೂರು ಭಾಗದ ನಾಲ್ಕಾರು ಜಿಲ್ಲೆಗಳಿಗೆ ಸೀಮಿತ ನಾಯಕತ್ವವನ್ನು ಹೊಂದಿರುವ ಡಿ.ಕೆ.ಶಿವಕುಮಾರ ಅವರು ಅಖಂಡ ಕರ್ನಾಟಕದಾದ್ಯಂತ ವರ್ಚಸ್ಸಿನ ನಾಯಕ ಎಂದು ಬೀಗಿದರೆ ಅದು ಅವರ ಭ್ರಮೆ ಅಷ್ಟೆ! ಉತ್ತರ ಕರ್ನಾಟಕದ ಗ್ರಾಮೀಣ ಮತದಾರರನ್ನು ಕೇಳಿ ಅವರಿಗೆ ಸಿದ್ರಾಮಯ್ಯ,ಮಲ್ಲಿಕಾರ್ಜುನ ಖರ್ಗೆ,ಬಿ.ಎಸ್.ಯಡಿಯೂರಪ್ಪ,ದೇವೇಗೌಡರ ಹೆಸರುಗಳು ಗೊತ್ತೇ ವಿನಹ ಡಿ.ಕೆ.ಶಿವಕುಮಾರ ಗೊತ್ತೆ ಎಂದು ಕೇಳಿದರೆ ‘ ಯಾರವರು?’ ಎಂದು ಪ್ರಶ್ನಿಸುತ್ತಾರೆ ಹಳ್ಳಿಗರು.ಇತ್ತೀಚೆಗೆ ಒಕ್ಕಲಿಗರಲ್ಲಿ ಎಚ್ ಡಿ ಕುಮಾರಸ್ವಾಮಿಯವರ ಹೆಸರನ್ನು ಗ್ರಾಮೀಣ ಜನತೆ ಹೇಳಬಲ್ಲರು.ಡಿ.ಕೆ.ಶಿವಕುಮಾರ,ಡಿ.ಕೆ.ಸುರೇಶ ಅವರ ಹೆಸರುಗಳೇನಿದ್ದರೂ ಬೆಂಗಳೂರು ಸುತ್ತಮುತ್ತಲಿನ ಒಕ್ಕಲಿಗರ ಪ್ರಾಬಲ್ಯದ ನಾಲ್ಕಾರು ಜಿಲ್ಲೆಗಳ ವರ್ಣರಂಜಿತ ನಾಯಕತ್ವ ಉಳ್ಳ ಹೆಸರುಗಳೇ ಹೊರತು ಅವರು ಅಖಂಡ ಕರ್ನಾಟಕ ವ್ಯಾಪ್ತಿಯಲ್ಲಿ ಗುರುತಿಸಿಕೊಳ್ಳುವಂತಹ ಅಗ್ಗಳಿಕೆಯನ್ನು ಪಡೆದವರಲ್ಲ. ಕೇವಲ ಹಣಬಲವೇ ಎಲ್ಲವೂ ಅಲ್ಲ.

ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇದೆ.ಕಾಂಗ್ರೆಸ್ ಪಕ್ಷವು ಡಿ.ಕೆ.ಶಿವಕುಮಾರ ಅವರ ಒತ್ತಡ ತಂತ್ರಗಳಿಗೆ ಮಣಿದು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಹತ್ತು ಎಂಪಿಗಳನ್ನು ಗೆಲ್ಲಿಸುವುದೂ ಕಷ್ಟ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಿದ್ರಾಮಯ್ಯನವರು ಮುಖ್ಯಮಂತ್ರಿ ಆದರೆ ಕಾಂಗ್ರೆಸ್ ಪಕ್ಷದ ವರ್ಚಸ್ಸು ವೃದ್ಧಿಯಾಗುತ್ತದೆ,ಸಿದ್ರಾಮಯ್ಯನವರು ಪ್ರಧಾನಿ ನರೇಂದ್ರ ಮತ್ತು ಅಮಿತ್ ಶಾ ಅವರಿಬ್ಬರನ್ನು ಸಮರ್ಥವಾಗಿ ಎದುರಿಸಬಲ್ಲರು.ಚುನಾವಣೆಗೆ ಮುನ್ನವೇ ರಾಜ್ಯದ ಪೋಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರನ್ನು ‘ ನಾಲಾಯಕ್’ ಎಂದು ಅನುಚಿತವಾಗಿ ಟೀಕಿಸಿದ ಡಿ.ಕೆ.ಶಿವಕುಮಾರ ಅವರನ್ನು ಮಣಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರವೀಣಸೂದ್ ಅವರನ್ನೇ ಸಿ.ಬಿ.ಐ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ವರಿಷ್ಠರು ಅರ್ಥಮಾಡಿಕೊಳ್ಳಬೇಕು.

ಸೋನಿಯಾಗಾಂಧಿಯವರು ಸಿದ್ರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿ ಆಗುವುದು ಬೇಡ ಎನ್ನುವುದಾದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿ ಎಂದು ಘೋಷಿಸಬೇಕು.ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುತ್ತದೆ.ಇದುವರೆಗೂ ದಲಿತರು ಕರ್ನಾಟಕದ ಮುಖ್ಯಮಂತ್ರಿ ಆಗಿಲ್ಲ.ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆಗಳು ಇವೆ.ಅಲ್ಲದೆ ಎರಡು ಬಾರಿ ಅವರು ಸನಿಹಕ್ಕೆ ಬಂದ ಮುಖ್ಯಮಂತ್ರಿಸ್ಥಾನದಿಂದ ವಂಚಿತರಾಗಿದ್ದಾರೆ.ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯೂ ಹೆಚ್ಚುತ್ತದೆ.ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ವಯಸ್ಸು,ದಣಿವೆಗಳನ್ನು ಲೆಕ್ಕಿಸದೆ ನಿರಂತರವಾಗಿ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರದೆ ಕೊಡುಗೆಯನ್ನು ನೀಡಿದ್ದಾರೆ ಖರ್ಗೆಯವರು.ಡಿ.ಕೆ.ಶಿವಕುಮಾರ ರಾಜಕೀಯ ಪ್ರವೇಶಿಸುವ ಮುಂಚೆಯೇ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ಸಿನ ಉತ್ಸಾಹಿ ನಾಯಕರು ಆಗಿದ್ದರು,ರಾಜ್ಯದಾದ್ಯಂತ ಹೆಸರುಗಳಿಸಿದ್ದರು.ಕ್ರಿಮಿನಲ್ ಹಿನ್ನೆಲೆಯ,ಸಭ್ಯತೆ- ಶಿಷ್ಟಾಚಾರಗಳ ಪರಿವೆ ಇಲ್ಲದ ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ನಷ್ಟವನ್ನು ಅನುಭವಿಸುವುದಕ್ಕಿಂತ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಿ ಪ್ರಯೋಜನ ಪಡೆಯುವುದು ಕಾಂಗ್ರೆಸ್ ವರಿಷ್ಠರ ಆದ್ಯತೆ ಆಗಬೇಕು.

About The Author