ಚಿಂತನೆ : ದಿವ್ಯತ್ವ’ ವು ಯಾರೊಬ್ಬರ ಸ್ವತ್ತಲ್ಲ,ಎಲ್ಲ ಜೀವರುಗಳಾತ್ಮ ತತ್ತ್ವ : ಮುಕ್ಕಣ್ಣ ಕರಿಗಾರ

ಮನುಷ್ಯನ ಶ್ರೇಷ್ಠತೆಯ ವ್ಯಸನವು ಅವತಾರಿಗಳು,ಪೂರ್ಣರು,ಮಹಾತ್ಮರುಗಳ ಸೃಷ್ಟಿಗೆ ಕಾರಣವಾಗಿದೆ.ಭೂಮಿಯ ಮೇಲಿನ ಮನುಷ್ಯರಾರೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ.ಪೂರ್ಣತೆಯ ಪಥದಿ ನಡೆದು ಅವರವರ ಶಕ್ತಿಗೆ ಅಳವಟ್ಟಷ್ಟು ಪೂರ್ಣತೆಯನ್ನು ಮೈಗೂಡಿಸಿಕೊಳ್ಳಬಹುದಷ್ಟೆ.ಆದರೆ ಕೆಲವರಿಗೆ ತಾವು ಇಷ್ಟಪಟ್ಟ,ಮೆಚ್ಚಿದ ವ್ಯಕ್ತಿ ಇತರರಿಗಿಂತ ಭಿನನ್ನನೂ ಸರ್ವಪೂಜ್ಯನೂ ಆಗಿರಬೇಕುವ ಎನ್ನುವ ಮನೋವ್ಯಾಧಿ ಅಂಟಿಕೊಂಡಿರುತ್ತದೆ.ಈ ಮನೋವ್ಯಾಧಿಮೂಲಜನ್ಯರೇ ನಮ್ಮ ಅವತಾರಿಗಳು,ಮಹಾತ್ಮರುಗಳು,ದೇವಾಂಶ ಸಂಭೂತರುಗಳು.ಮನೋವ್ಯಾಧಿಯು ಸಾಂಕ್ರಾಮಿಕ ರೋಗವಾಗಿ ವ್ಯಕ್ತಿಪೂಜೆಯ ಉಗಮಕ್ಕೆ ಕಾರಣವಾಗಿ ಮನುಷ್ಯರಾಗಿಯೇ ಹುಟ್ಟಿದ್ದ ಕೆಲವರು ದೈವತ್ವಕ್ಕೆ ಏರುತ್ತಾರೆ.ಪರಮಾತ್ಮನೊಬ್ಬನೇ ಪರಿಪೂರ್ಣನು,ಭೂಮಿಯ ಮೇಲೆ ಹುಟ್ಟಿದ ಮನುಷ್ಯರು ಅವರು ಯಾರೇ ಆಗಿರಲಿ,ಯಾವ ಕಾಲಕ್ಕೇ ಸೇರಿದವರಾಗಿರಲಿ,ಯಾವ ಮತಕ್ಕೇ ಸೇರಿದವರಾಗಿರಲಿ ಪೂರ್ಣರಾಗಿರಲು ಸಾಧ್ಯವಿಲ್ಲ ಎನ್ನುವ ನನ್ನ ನಿಲುವನ್ನು ಸ್ಪಷ್ಟಪಡಿಸಿ ಮುಂದುವರೆಯುವೆ.

‌ ಭೂಮಿ ಮತ್ತು ಆಕಾಶಗಳ ಅಂತರದಿಂದ ನಾವು ಇದನ್ನು ಅರ್ಥಮಾಡಿಕೊಳ್ಳಬಹುದು.ಭೂಮಿಗೆ ಆಕಾಶವೇ ಆಧಾರವಾದರೂ ಭೂಮಿಯ ಮೇಲೆ ನಿಂತು ನಾವು ಆಕಾಶದ ಅನಂತತೆಯನ್ನು,ಅಗಾಧತೆಯನ್ನು,ವರ್ಣನಾತೀತವೈಭವವನ್ನು ಕಂಡು ಆನಂದಿಸಬಹುದು,ಆದರೆ ಆಕಾಶಕ್ಕೆ ಏಣಿಹಚ್ಚಿ ಹತ್ತಲಾಗದು ! ಆಕಾಶಕ್ಕೆ ಹಾರಲಾಗದು!ಸೂರ್ಯನನ್ನು ನೋಡಬಹುದು,ಸೂರ್ಯನಿಂದ ಬೆಳಕು,ಶಕ್ತಿಯನ್ನು ಪಡೆಯಬಹುದು ಆದರೆ ಸೂರ್ಯನನ್ನು ಹಿಡಿಯಲಾಗದು.ಸೂರ್ಯನ ಬಳಿ ಹೋಗಬಯಸುವವರು ಸೂರ್ಯನಿನ್ನೂ ಅನಂತದೂರದಲ್ಲಿರುವಾಗಲೆ ಸುಟ್ಟು ಬೂದಿಯಾಗಬೇಕಾಗುತ್ತದೆ.ಪೂರ್ಣತ್ವ ಎನ್ನುವುದು ಮನುಷ್ಯರಾದ ನಮ್ಮಿಂದ ಬಹುದೂರ ಇರುವ ಆಕಾಶ ತತ್ತ್ವ,ಪೂರ್ಣತ್ವ ಎನ್ನುವುದು ಮನುಷ್ಯರಿಗೆ ಅಳವಡದ ಸುಡುವ ಸೂರ್ಯತತ್ತ್ವ!ಹಾಗಿದ್ದೂ ಕೆಲವರು ತಾವು ಪೂರ್ಣರು ಎಂದು ಭ್ರಮಿಸುತ್ತಾರೆ,ಅವರ ಅನುಯಾಯಿಗಳು ಅವರಲ್ಲಿ ಪೂರ್ಣತ್ವವನ್ನು ಆರೋಪಿಸುತ್ತಾರೆ.ಪರಮಾತ್ಮನೊಬ್ಬನೇ ಪೂರ್ಣನೆಂದು ಹೇಳಿದೆನಷ್ಟೆ,ಪೂರ್ಣವು ಅಪೂರ್ಣವಾಗದು; ಹಾಗೆಯೇ ಪೂರ್ಣನಿರುವ ಪರಮಾತ್ಮನು‌ ಅಪೂರ್ಣನಾಗಿರುವ ಮನುಷ್ಯನಾಗಿ ಹುಟ್ಟಲಾರನು.ಜಗತ್ತಿನಲ್ಲಿ ಅವತಾರಿಗಳು,ಪೂರ್ಣರು,ಮಹಾತ್ಮರುಗಳು ಎಂದು ಪರಿಗಣಿಸಲ್ಪಟ್ಟವರ ಜೀವನವನ್ನೊಮ್ಮೆ ಹೊಕ್ಕು ನೋಡಿ,ಅವರ ಜೀವನದಲ್ಲಿ ದೋಷಗಳು,ದೌರ್ಬಲ್ಯಗಳು ಢಾಳಾಗಿ ಕಾಣಿಸುತ್ತವೆ,ಕೆಲವೊಮ್ಮೆ ಸಾಮಾನ್ಯ ಮನುಷ್ಯರಿಗಿಂತಲೂ ಕೀಳುತನದಿಂದ ವರ್ತಿಸಿರುತ್ತಾರೆ ‘ ಮಹಾತ್ಮ’ ರುಗಳು ಎನ್ನಿಸಿಕೊಂಡವರು.ಆದರೆ ಅವರ ಅನುಯಾಯಿಗಳಿಗೆ ಅವರ ಕುಂದುಕೊರತೆಗಳು ಕಾಣಿಸುವುದಿಲ್ಲ ಅವರಲ್ಲಿ ಪೂರ್ಣಮಾನವನನ್ನು ಇಲ್ಲವೆ ದೇವರ ಅವತಾರಿಯನ್ನು ಕಾಣುವುದರಲ್ಲೇ ಸಾರ್ಥಕ್ಯ ಕಾಣುತ್ತಾರೆ.

ಯಾರೋ ಒಬ್ಬರಲ್ಲಿ ಪೂರ್ಣತ್ವವನ್ನು ಅರಸುವುದಾಗಲಿ ಯಾರೋ ಒಬ್ಬರನ್ನು ಆದರ್ಶ ಎಂದು ಸ್ವೀಕರಿಸುವುದಾಗಲಿ ಆತ್ಮಘಾತುಕವಾದುದು,ಆತ್ಮತತ್ತ್ವ ವಿರೋಧಿಯಾದದ್ದು.ಪರಮಾತ್ಮನ ಅಂಶವಾಗಿರುವ ಆತ್ಮನು ಎಲ್ಲರಲ್ಲಿಯೂ ಇದ್ದಾನೆ.ಎಲ್ಲ ಆತ್ಮಗಳ ಒಟ್ಟು ಮೊತ್ತವೇ ಪರಮಾತ್ಮನು.ಆತ್ಮನಿಗೂ ಪರಮಾತ್ಮನಿಗೂ ವ್ಯತ್ಯಾಸವಿಲ್ಲ.ಸಮುದ್ರದ ಒಂದು ಹನಿ ನೀರಿನಲ್ಲಿಯೂ ಘನವಾರಿಧಿಯೇ ಇರುವಂತೆ ಎಲ್ಲ ಜೀವರುಗಳಲ್ಲಿ ಆತ್ಮರೂಪದಲ್ಲಿದ್ದಾನೆ ಪರಮಾತ್ಮನು.ಹೀಗಿರುವಾಗ ಯಾರೋ ಒಬ್ಬರು ಶ್ರೇಷ್ಠರು,ಯಾರೋ ಒಬ್ಬರು ಪರಿಪೂರ್ಣರು ಎಂದು ಭಾವಿಸುವುದು ತಪ್ಪಲ್ಲವೆ? ಕೆಲವರು ತಮ್ಮ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಂಡು ಸಾಧನೆಮಾಡಿ ಸಿದ್ಧಿಪುರುಷರು ಆಗಬಹುದು,ಬಹಳಷ್ಟು ಜನರು ತಮ್ಮೊಳಗಣ ಅಂತರ್ಗತ ಶಕ್ತಿಯನ್ನು ಅರಿಯದೆ ಅವರಿವರನ್ನು ಅನುಸರಿಸುತ್ತಾರೆ.ಆಧ್ಯಾತ್ಮಿಗಳು,ಗುರುಗಳು ಎನ್ನುವವರು ಮಾಡಬೇಕಾದದ್ದು ಜೀವರುಗಳಲ್ಲಿ ಸುಪ್ತವಾಗಿರುವ ಚೈತನ್ಯದ ಜಾಗೃತಿಯ ಕಾರ್ಯವನ್ನು.ಆದರೆ ಧರ್ಮ ಮತ್ತು ಧಾರ್ಮಿಕ ವ್ಯಕ್ತಿಗಳು ಆ ಕಾರ್ಯವನ್ನು ಮಾಡದೆ ಜನಸಾಮಾನ್ಯರು ತಮ್ಮ‌ ಪಾದಪೂಜೆಗಳನ್ನು ಮಾಡುತ್ತ,ತಮ್ಮ ಪಾದಗಳನ್ನು ಒತ್ತುತ್ತ ತಮ್ಮ‌ ಪಾದಗಳಡಿಯಲ್ಲಿಯೇ ಬಿದ್ದಿರಬೇಕೆಂದು ಬಯಸುತ್ತಾರೆ.ತಲೆಯಿಲ್ಲದ ಜನರು ಇಂಥವರ ಪಾದಗಳಿಗೆ ತಲೆಗೊಟ್ಟು ಸಾಯುತ್ತಾರೆ.ಬಾಗಿ ನಮಸ್ಕರಿಸುವಂತಹ ವ್ಯಕ್ತಿತ್ವಯುಳ್ಳ ಯೋಗಿಗಳು,ಸಾಧಕರು,ಶರಣರುಗಳಿಗೆ ನಮಿಸಲಿ,ಅದಕ್ಕೆ ತಕರಾರು ಇಲ್ಲ.ಆದರೆ’ ಮಲಭಾಂಡದೇಹಿ’ ಗಳ ಪಾದಗಳಿಗೆ ನಮಸ್ಕರಿಸಬೇಕು,ಅವರ ಪಾದಪೂಜೆ ಮಾಡಬೇಕು ಎನ್ನುವುದು ಧಾರ್ಮಿಕ ವ್ಯಕ್ತಿಗಳು ಮತ್ತು ಆ ವ್ಯವಸ್ಥೆಯ ಪೋಷಕರುಗಳ ಕಪಟವಾದರೆ ಮುಗ್ಧಜನರ ಅಜ್ಞಾನ.ಮನುಷ್ಯರ ಶ್ರೇಷ್ಠತೆಯ ವ್ಯಸನ ಎಷ್ಟು ವಿಪರೀತಕ್ಕೆ ಹೋಗಿದೆ ಎಂದರೆ ಮನುಷ್ಯರಲ್ಲೆಲ್ಲ ತಾವೇ ಶ್ರೇಷ್ಠರು ಎಂದು ಭ್ರಮಿಸಿರುವ ಬ್ರಾಹ್ಮಣರು ಬ್ರಾಹ್ಮೇಣತರರಾದ ಯಾರನ್ನೂ ಮುಟ್ಟಿಸಿಕೊಳ್ಳಲು ಬಯಸರು,ಇನ್ನು ಅಸ್ಪೃಶ್ಯರ ಮಾತಂತೂ ದೂರವೇ ಉಳಿಯಿತು.ಬ್ರಾಹ್ಮಣರದ್ದು ಒಂದು ಅತಿರೇಕವಾದರೆ ತಮ್ಮನ್ನು ತಾವು ಜಂಗಮರು ಎಂದು ಕರೆದುಕೊಳ್ಳುತ್ತಿರುವ ವೀರಶೈವ ಮತದ ಅಯ್ಯಗಳ ಜಾತಿಯ ಜನರದ್ದು ಇನ್ನೊಂದು ತೆರನಾದ ಅತಿರೇಕ,ತಾವು ಜಂಗಮರಾದುದರಿಂದ ಎಲ್ಲರಿಗಿಂತಲೂ ಶ್ರೇಷ್ಠರು,ಎಲ್ಲರಿಂದಲೂ ಪೂಜಿಸಿಕೊಳ್ಳುದು ತಮ್ಮ ಜನ್ಮಸಿದ್ಧ ಹಕ್ಕು ಎನ್ನುವ ಭ್ರಮೆಗೊಳಗಾಗಿ ಪಾದಪೂಜೆಯ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ.ಬ್ರಾಹ್ಮಣತ್ವವಾಗಲಿ,ಜಂಗಮತ್ವವಾಗಲಿ ಹುಟ್ಟಿನಿಂದ ಬರುವುದಿಲ್ಲ,ಆಧ್ಯಾತ್ಮಿಕ ಸಾಧನೆಯಿಂದ ಸಂಪಾದಿಸಬಹುದಾದ ಸ್ಥಿತಿ ಎಂಬುದನ್ನರಿಯದ ಮುಗ್ಧಜನರು ಬ್ರಾಹ್ಮಣರನ್ನು ದೂರದಿಂದಲೇ ಕೈಮುಗಿದು ನಮಿಸಿ,ಜಂಗಮರೆನ್ನಿಸಿಕೊಂಡವರ ಪಾದಪೂಜೆಯಲ್ಲಿ ಸಾರ್ಥಕತೆ ಕಾಣುತ್ತಾರೆ.ಇದು ಮೌಢ್ಯವೋ ಎನ್ನುವಷ್ಟು ಅತಿಗೇರಿ ಆಧ್ಯಾತ್ಮ ಸಾಧಕರು,ಗುರುಪುತ್ರರು ಎಂದು ಹೇಳಿಕೊಂಡು ತಿರುಗುವವರು ಕೂಡ ಜಾತಿಜಂಗಮರ ಮಠ ಪೀಠಗಳ ಗುರುಗಳ ಪಾದದಡಿ ಕುಳಿತೋ ಅವರ ಪಾದಪೂಜೆ ಮಾಡಿಯೋ ಸಾರ್ಥಕತೆ ಕಾಣುತ್ತಾರೆ!ಗುರುತ್ವವೂ ಜಾತಿಯಲ್ಲ,ಆಧ್ಯಾತ್ಮಿಕ ಸಾಧನೆಯ ಸಿದ್ಧಸ್ಥಿತಿ.ಬ್ರಾಹ್ಮಣ,ಜಂಗಮ ತತ್ತ್ವಗಳಂತೆ ಗುರುತತ್ತ್ವವೂ ತನ್ನ ಗುರುತ್ವದ ಮಹತ್ವಕಳೆದುಕೊಂಡು ಲಘುವಾಗಿದೆ,ತಿಕತೊಳೆದುಕೊಳ್ಳಲು ಬಾರದವರೆಲ್ಲ ಗುರುಗಳು ಎಂದು ಹೇಳಿಕೊಂಡು ತಿರುಗುತ್ತ,ಅಜ್ಞಾನಿಶಿಷ್ಯಪಡೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ.’ಉದರನಿಮಿತ್ತಂ ಬಹುಕೃತ ವೇಷಂ’ ಮಾತು ಆಧ್ಯಾತ್ಮಿಕ ಕ್ಷೇತ್ರದಲ್ಲೂ ಕಾಲಿಟ್ಟು ಗುರುಬೋಧೆ ಎನ್ನುವುದು ದುಡ್ಡುಸಂಪಾದಿಸುವ,ಶಿಷ್ಯರೆನ್ನುವ ದಡ್ಡಜೀವಿಗಳನ್ನು ಹಿಂಸಿಸಿ ಬದುಕುವ ಪರೋಪದ್ರವ ಜೀವಿಗಳ ಬದುಕುವ ಜಾಣ್ಮೆಯಾಗಿದೆ.ಮನುಷ್ಯರಲ್ಲಿ ಕೆಲವರು ಶ್ರೇಷ್ಠರು ಎನ್ನುವ ತಪ್ಪು ತಿಳಿವಳಿಕೆಯಿಂದ ಇಂತಹ ಆಭಾಸಗಳುಂಟಾಗುತ್ತವೆ.

ಶಿಕ್ಷಣ,ಸಂಸ್ಕಾರ ಮತ್ತು ಸಾಧನೆಯ ಬಲದಿಂದ ವ್ಯಕ್ತಿ ತನ್ನೊಳಗಣ ದಿವ್ಯತ್ವವನ್ನು ಜಾಗೃತಿಗೊಳಿಸಿಕೊಳ್ಳಬಲ್ಲ.ನರ ತನ್ನೊಳಗಣ ಹರನನ್ನು ಪ್ರಕಟಿಸಬಲ್ಲ.ಎಲ್ಲವನ್ನೂ ವ್ಯಾಪಿಸಿ ಎಲ್ಲವನ್ನೂ ಮೀರಿ ಬೆಳೆದಿರುವ ದಿವ್ಯತ್ವವು ಎಲ್ಲರನ್ನೂ ತನ್ನತ್ತ ಕರೆಯುತ್ತಿದೆ,ಎಲ್ಲರಿಗೂ ತನ್ನ ಸ್ವಯಂಪ್ರಭೆಯ ದಿವ್ಯಪಥವನ್ನು ತೆರೆದಿಟ್ಟಿದೆ.ನಾನು ಕ್ಷುದ್ರನಲ್ಲ,ನಾನೇ ದಿವ್ಯವು ಎಂದು ನರನು ತಿಳಿದುಕೊಂಡಿದ್ದಾರೆ ಆತನೇ ಹರನಾಗುತ್ತಾನೆ.ಪೂರ್ಣತ್ವದ ಹರತ್ವವನ್ನು,ಹರತತ್ತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬಹುದು ಪ್ರಯತ್ನದಿಂದ.ಪುರುಷಸಿಂಹರು ತಮ್ಮಲ್ಲಿಯೇ ಹರನನ್ನು ಕಂಡು ಮೆಯ್ಮೆ ಮೆರೆದರೆ ಹೇಡಿಗಳು ಕೆಲವರ ಪಾದಗಳಡಿ ದಿವ್ಯತ್ವವಿದೆ ಎನ್ನುವ ಭ್ರಮೆಗೊಳಗಾಗಿ ಬಳಲುತ್ತಾರೆ,ಅವನತಿಯನ್ನು ಹೊಂದುತ್ತಾರೆ.

About The Author