ಮೂರನೇ ಕಣ್ಣು : ವಿಜಯದುರ್ಗೆ’ ಎಂದು ಬಿರುದುಗೊಂಡ ವಿಶ್ವೇಶ್ವರಿ ದುರ್ಗಾದೇವಿಯು ಗೆಲ್ಲಿಸಿದಳು ಕರಿಯಮ್ಮ ನಾಯಕ್ ಅವರನ್ನು : ಮುಕ್ಕಣ್ಣ ಕರಿಗಾರ

ನಮ್ಮ ನಿರೀಕ್ಷೆಯಂತೆ ಶ್ರೀಮತಿ ಕರಿಯಮ್ಮ ಜಿ ನಾಯಕ್ ಅವರು ಗೆದ್ದು ದೇವದುರ್ಗದ ಶಾಸಕಿಯಾಗಿದ್ದಾರೆ( ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಅವರ ಶಾಸಕತ್ವದ ಅವಧಿ ಪ್ರಾರಂಭವಾಗುತ್ತದೆ) ಕರಿಯಮ್ಮ ನಾಯಕ ಅವರು ಗೆದ್ದು ದೇವದುರ್ಗದ ಶಾಸಕರಾಗುವ ಬಗ್ಗೆ ನಾನು 05.10.2022 ರ ಶರನ್ನವರಾತ್ರಿಯ ವಿಜಯದಶಮಿಯ ದಿನದಂದೇ ಹೇಳಿದ್ದೆ.ಆಗ ಜೆಡಿಎಸ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಗುವ ಬಗ್ಗೆ ನಿಶ್ಚಿತತೆ ಇರಲಿಲ್ಲವಾಗಿ ‘ ಜೆಡಿಎಸ್ ನಿಂದ ಟಿಕೆಟ್ ಪಡೆಯುವುದು ನಿಮ್ಮ ಜವಾಬ್ದಾರಿ,ನಿಮ್ಮನ್ನು ಗೆಲ್ಲಿಸುವುದು ನಮ್ಮ ಹೊಣೆ’ ಎಂದು ಅವರಿಗೆ ಭರವಸೆ ನೀಡಿದ್ದೆ.

ಪ್ರತಿವರ್ಷ ನಾನು ಶರನ್ನವರಾತ್ರಿಯ ದಿನಗಳಲ್ಲಿ ಶ್ರೀದುರ್ಗಾ ಅನುಷ್ಠಾನ ಮಾಡುತ್ತೇನೆ.ಒಂಬತ್ತು ದಿನಗಳ ಕಾಲ ನಿರಾಹಾರ ಮತ್ತು ಅಖಂಡಮೌನ ವ್ರತದೊಂದಿಗೆ ನಮ್ಮ ಮಹಾಶೈವ ಧರ್ಮಪೀಠದ ಶ್ರೀ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿರುತ್ತೇನೆ.ವಿಜಯದಶಮಿಯ ‘ ವಿಜಯ ಮುಹೂರ್ತ’ ದ ಸಮಯ ಮೌನ ಮತ್ತು ನಿರಾಹಾರವ್ರತ ಸಮಾಪ್ತಿಗೊಳಿಸಿ ಶ್ರೀದುರ್ಗಾದೇವಿಯ ಲೋಕಕಲ್ಯಾಣ ಅನುಗ್ರಹ ವಚನವನ್ನು ಕರುಣಿಸುತ್ತೇನೆ.ಅಂದು ನಾನು ನುಡಿದುದನ್ನು ತಾಯಿ ದುರ್ಗಾದೇವಿಯು ನಡೆಸಿಕೊಡುತ್ತಾಳೆ.ಆ ಕಾರಣದಿಂದ ರಾಜಕಾರಣಿಗಳು ಪ್ರತಿವರ್ಷ ವಿಜಯದಶಮಿಯಂದು ನಮ್ಮ ಮಠಕ್ಕೆ ಬರುತ್ತಾರೆ.ಈ ಹಿಂದೆ ಎರಡು ಸಲ ರಾಜಕೀಯ ಹಿನ್ನಡೆಯನ್ನು ಅನುಭವಿಸಿದ್ದ ಶ್ರೀಮತಿ ಕರಿಯಮ್ಮನವರು ನನ್ನ ಆತ್ಮೀಯರಾದ ರಾಯಚೂರು ಜಿಲ್ಲೆಯ ಪ್ರಗತಿಪರಸ್ವಾಮೀಜಿಗಳು ಎಂದು ಹೆಸರಾಗಿರುವ ದೇವರಗುಡ್ಡ- ಹತ್ತಿಗೂಡೂರು ಮಠಗಳ ಪೀಠಾಧಿಪತಿ ಶ್ರೀ ಗಿರಿಮಲ್ಲದೇವರು ಅವರ ಸೂಚನೆಯಂತೆ ವಿಜಯದಶಮಿಯ ದಿನದಂದೇ ನಮ್ಮ ಮಠಕ್ಕೆ ಬಂದಿದ್ದರು.ಗಿರಿಮಲ್ಲದೇವರು ಸ್ವಾಮೀಜಿಗಳವರಿಗೆ ನನ್ನ ತಪೋಬಲ,ಆಧ್ಯಾತ್ಮಿಕ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ತಮ್ಮ ಆತ್ಮೀಯ ಶಿಷ್ಯರಾಗಿರುವ ಕರಿಯಮ್ಮನವರನ್ನು ನಮ್ಮ ಮಠಕ್ಕೆ ಕಳಿಸಿದ್ದರು.ಅದಾದ ಬಳಿಕ ಒಂದುಸಾರೆ ಸ್ವತಃ ಗಿರಿಮಲ್ಲದೇವರು ಸ್ವಾಮೀಜಿಯವರೇ ಕರಿಯಮ್ಮನವರನ್ನು ನಮ್ಮ ಮಠಕ್ಕೆ ಕರೆದುಕೊಂಡು ಬಂದು ‘ ಇವರನ್ನು ಗೆಲ್ಲಿಸಲೇಬೇಕು’ ಎಂದು ಆಗ್ರಹಿಸಿದ್ದರು.ನಿಜಕ್ಕೂ ಗಿರಿಮಲ್ಲದೇವರು ಅವರ ಶಿಷ್ಯೆ ವಾತ್ಸಲ್ಯವು ಅನುಪಮವಾದುದು.ಸ್ವಾಮಿಗಳು ನನಗೆ ಅತ್ಯಂತ ಆತ್ಮೀಯರಾಗಿದ್ದರು ಮತ್ತು ದೇವದುರ್ಗದ ಶಾಸಕರಾಗಿದ್ದ ಕೆ.ಶಿವನಗೌಡ ನಾಯಕ್ ಅವರನ್ನು ಸೋಲಿಸುವುದು ನನಗೂ ಅನಿವಾರ್ಯವಾಗಿತ್ತು.

ಹಿಂದೊಮ್ಮೆ ಸೋತು ಸುಣ್ಣವಾಗಿದ್ದ ಶಿವನಗೌಡ ನಾಯಕರು ತಾಯಿ ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹದಿಂದಲೇ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದರು.ಅವರು ಸಹ ವಿಜಯದಶಮಿಯ ದಿನದಂದೇ ನಮ್ಮ ಮಠಕ್ಕೆ ಬಂದಿದ್ದರು.ಗೆಲ್ಲಿಸಲೇಬೇಕು ಎಂದು ಗೋಗರೆದಿದ್ದರು.ಆಗ ಸಿದ್ರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು,ನಾನು ಅವರ ಆತ್ಮೀಯ ಅಧಿಕಾರಿಗಳ ಬಳಗದಲ್ಲಿದ್ದೆ.ಸಿದ್ರಾಮಯ್ಯನವರು ನನ್ನ ಹಿತಕಾಯುತ್ತಿದ್ದರು.ಇದನ್ನು ಲೆಕ್ಕಿಸದೆ ನಾನು ಶಿವನಗೌಡ ನಾಯಕರ ಪ್ರಾರ್ಥನೆಗೆ ಕರಗಿ’ ಸ್ವತಃ ಸಿದ್ರಾಮಯ್ಯನವರೇ ನಿಮ್ಮ ವಿರುದ್ಧ ಪ್ರಚಾರಕ್ಕೆ ಬಂದರೂ ನೀವು ಗೆಲ್ಲುತ್ತೀರಿ’ ಎಂದು ತಾಯಿ ದುರ್ಗಾದೇವಿಯ ಕೊರಳಲ್ಲಿ ಇದ್ದ ಹೂಮಾಲೆಯನ್ನು ತೆಗೆದು ಶಿವನಗೌಡ ನಾಯಕರ ಕೊರಳಿಗೆ ಹಾಕಿ,ಆಶೀರ್ವದಿಸಿದ್ದೆ.ಶಿವನಗೌಡ ನಾಯಕರು ಅದನ್ನು ಮರೆತಿರಬಹುದು; ಆದರೆ ಅಂದಿನ ಆ ಘಟನೆಗೆ ಸಾಕ್ಷಿಯಾದವರು ನಮ್ಮೂರಿನಲ್ಲಿದ್ದಾರೆ.ನಾನು ಶಿವನಗೌಡ ನಾಯಕರಿಗೆ ಆಶೀರ್ವದಿಸಿದ ಸುದ್ದಿ ಕೇಳಿದ ಕುರುಬಸಮಾಜದ ಗಣ್ಯರಾಜಕಾರಣಿಗಳು ನಮ್ಮ ಮಠಕ್ಕೆ ಬಂದು ‘ ಅವರಿಗೆ ಯಾಕೆ ಆಶೀರ್ವದಿಸಿದಿರಿ?’ಎಂದು ಆಕ್ಷೇಪಿಸಿದರು.ಆಗ ನಾನು ಉತ್ತರಿಸಿದ್ದು ‘ ನಾನು ಮಠದ ಕಾಂಪೌಂಡಿನ ಆಚೆ ಸರಕಾರಿ ಅಧಿಕಾರಿ,ಮಠದ ಕಾಂಪೌಂಡಿನ ಒಳಗೆ ಶಿವ ದುರ್ಗಾದೇವಿಯರ ಸೇವಕ.ಇಲ್ಲಿ ಶಿವದುರ್ಗೆಯರ ಮಾತನ್ನು ಕೇಳುತ್ತೇನಲ್ಲದೆ ಮತ್ತಾರ ಮಾತು ಕೇಳುವುದಿಲ್ಲ.ತಾಯಿ ದುರ್ಗಾದೇವಿಯ ಸನ್ನಿಧಿಗೆ ಬಂದವರಿಗೆ ಆಶೀರ್ವದಿಸುವುದು ನನ್ನ ಕರ್ತವ್ಯ’.ನನ್ನ ವಿರೋಧಿಯಾಗಿದ್ದ ರಾಯಚೂರಿನ ಕಾಂಗ್ರೆಸ್ ಮುಖಂಡರೊಬ್ಬರು ಸಿದ್ರಾಮಯ್ಯನವರಿಗೆ ಚಾಡಿ ಹೇಳಿದ್ದೂ ಆಯಿತು.ಮುಖ್ಯಮಂತ್ರಿಗಳಾಗಿದ್ದ ಸಿದ್ರಾಮಯ್ಯನವರು ಸ್ವತಃ ದೇವದುರ್ಗಕ್ಕೆ ಪ್ರಚಾರಕ್ಕೆ ಬಂದರೂ ಶಿವನಗೌಡ ನಾಯಕರೇ ಗೆದ್ದರು.ಶಿವನಗೌಡ ನಾಯಕರನ್ನು ಬೆಂಬಲಿಸಿದ್ದ ಕಾರಣದಿಂದ ನಾನು ಸಿದ್ರಾಮಯ್ಯನವರ ಅವಕೃಪೆಗೆ ಪಾತ್ರನಾಗಿ ಹಲವು ತೊಂದರೆಗಳನ್ನು ಅನುಭವಿಸಬೇಕಾಯಿತು.ಇದಾದ ಬಳಿಕವೂ ಒಂದು ಸಲ ವಿಧಾನಸಭಾ ಚುನಾವಣೆಯಲ್ಲಿಯೂ ಶಿವನಗೌಡ ನಾಯಕರನ್ನು ಬೆಂಬಲಿಸಿದೆ.

ತಾಯಿ ವಿಶ್ವೇಶ್ವರಿ ದುರ್ಗಾದೇವಿಯ ಕೃಪೆಯಿಂದಲೇ ರಾಜಕೀಯ ಮರುಹುಟ್ಟು ಪಡೆದು ಶಾಸಕರಾದ ಶಿವನಗೌಡ ನಾಯಕರು ಗೆದ್ದು ಬಂದ ಬಳಿಕ ನಮ್ಮ ಮಹಾಶೈವ ಧರ್ಮಪೀಠವನ್ನು,ತಮ್ಮ ಗೆಲುವಿಗೆ ಕಾರಣಳಾದ ತಾಯಿ ವಿಶ್ವೇಶ್ವರಿ ದುರ್ಗಾದೇವಿಯನ್ನು ಮರೆತುಬಿಟ್ಟರು.ನಾವು ಮಹಾಶೈವ ಧರ್ಮಪೀಠದಲ್ಲಿ ಶ್ರೀಕ್ಷೇತ್ರ ಕೈಲಾಸವನ್ನು ನಿರ್ಮಿಸುತ್ತಿದ್ದು ಶಿವ ದುರ್ಗಾದೇವಸ್ಥಾನಗಳ ಜೊತೆಗೆ ಇತರ ದೇವಸ್ಥಾನಗಳನ್ನು ಕಟ್ಟುತ್ತಿದ್ದೇವೆ.ಸಂಪೂರ್ಣ ಶಿಲಾಮಯ ದೇವಸ್ಥಾನಗಳನ್ನು ನಿರ್ಮಿಸುತ್ತಿರುವುದರಿಂದ ಕೋಟ್ಯಾಂತರ ರೂಪಾಯಿಗಳ ವೆಚ್ಚ ಭರಿಸಬೇಕಿತ್ತು.ಮಠಕ್ಕೆ ಬರುವ ಭಕ್ತರುಗಳಿಗೆ ತಂಗುವ ವ್ಯವಸ್ಥೆ,ಸಮುದಾಯ ಭವನ,ಕಲ್ಯಾಣಮಂಟಪ ಮೊದಲಾದವುಗಳನ್ನು ನಿರ್ಮಿಸಬೇಕಿತ್ತು.ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹದಿಂದ ರಾಜಕೀಯ ಭವಿಷ್ಯ ರೂಪಿಸಿಕೊಂಡಿರುವ ಶಿವನಗೌಡನಾಯಕರು ನಮ್ಮ ಮಠಕ್ಕೆ ಸರಕಾರಿ ಅನುದಾನದಲ್ಲಿ ಏನಾದರೂ ಮಾಡಬಹುದು ಎಂದು ನಿರೀಕ್ಷಿಸಿದ್ದೆವು.ನಮ್ಮ ಮಠದತ್ತ ತಿರುಗಿಯೂ ನೋಡದ ಶಿವನಗೌಡ ನಾಯಕರು ಯಾವ ಯಾವುದೋ ಮಠ ಮಂದಿರಗಳಿಗೆ ಲಕ್ಷ- ಕೋಟಿಗಳ ಅನುದಾನ ನೀಡಿದರು.ವೇಷಲಾಂಛನಧಾರಿಗಳನ್ನು ‘ ನಡೆದಾಡುವ ದೇವರು’ ಎಂದು ಕೊಂಡಾಡತೊಡಗಿದರು.ತಮಗೆ ಆ ದೇವರ ಆಶೀರ್ವಾದವಿದೆ,ಈ ಶರಣರ ಆಶೀರ್ವಾದವಿದೆ ಎಂದು ಬೀಗತೊಡಗಿದರು.ಸಹಜವಾಗಿಯೇ ಇದು ನಮ್ಮನ್ನು ಕೆರಳಿಸತೊಡಗಿತ್ತು.ನಾನು ಊರಲ್ಲಿದ್ದ ಸಂದರ್ಭಗಳಲ್ಲಿಯೇ ಗಬ್ಬೂರಿಗೆ ಬಂದಿದ್ದರೂ ಅವರು ನಮ್ಮ ಮಠದತ್ತ ಬರಲಿಲ್ಲ.ನಮ್ಮ ಮಠಕ್ಕೆ ಕೋಟಿಗಳ ಅನುದಾನಬೇಡ ಒಂದು ಕಲ್ಲನ್ನೂ ಕೊಡದ ಶಿವನಗೌಡ ನಾಯಕರ ರಾಜಕೀಯ ಜೀವನಕ್ಕೆ ಕಲ್ಲು ಎಳೆಯಬೇಕು ಎಂದು ನಿರ್ಧರಿಸಿದ್ದೆ.

ಶಿವನಗೌಡರ ನಾಯಕರ ಮೇಲೆ ಈ ಆಕ್ರೋಶ ಕರಿಯಮ್ಮನವರಿಗೆ ವರವಾಗಿ ಪರಿಣಮಿಸಿತು.ಅಲ್ಲದೆ ನನ್ನ ಆತ್ಮೀಯರಾಗಿರುವ ಗಿರಿಮಲ್ಲದೇವರು ಸ್ವಾಮಿಗಳವರ ಆಗ್ರಹವೂ ಸೇರಿ ಕರಿಯಮ್ಮನವರ ಯಶಸ್ಸಿನ ಜೀವನ ರೂಪಿಸತೊಡಗಿತು.ಯುಗಾದಿಯಂದು ಮತ್ತು ಆದಿತ್ಯವಾರ ಅಮವಾಸೆಯಂದು ನಮ್ಮ ಮಠಕ್ಕೆ ಬರಲು ಅವರಿಗೆ ತಿಳಿಸಿದ್ದೆ.ವಿಜಯದಶಮಿಯಂದು ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹ ಪ್ರಾಪ್ತಿಯಾದರೆ ಯುಗಾದಿಯಂದು ವಿಶ್ವೇಶ್ವರ ಶಿವನ ಅನುಗ್ರಹಪ್ರಾಪ್ರಾಪ್ತಿಯ ದಿನ.ಶ್ರೀಕ್ಷೇತ್ರ ಕೈಲಾಸವನ್ನು ರಕ್ಷಿಸುತ್ತಿರುವ ತಾಯಿ ಮಹಾಕಾಳಿಯು ಆದಿತ್ಯವಾರ ಅಮವಾಸೆಯಂದು ತನ್ನ ಸನ್ನಿಧಿಗೆ ಬರುವ ಭಕ್ತರುಗಳನ್ನು ಕಾಡುತ್ತಿರುವ ದುಷ್ಟಶಕ್ತಿಗಳನ್ನು ಸದೆಬಡಿದು ಕ್ಷುದ್ರವಿದ್ಯೆ,ತಾಂತ್ರಿಕ ಶಕ್ತಿಗಳ ಬಾಧೆಯನ್ನು ಪರಿಹರಿಸಿ ರಕ್ಷಿಸಿತ್ತಾಳೆ.ಈ ಮೂರೂ ದಿನಗಳಂದು ಕರಿಯಮ್ಮನವರು ನಮ್ಮ ಮಠಕ್ಕೆ ಬಂದಿದ್ದರಿಂದ ಅವರ ರಾಜಕೀಯ ಯಶೋಪಯಣವು ನಿರಾಂತಕವಾಗಿ,ನಿರೀಕ್ಷೆಗೂ ಮೀರಿದ ಜನಬೆಂಬಲದೊಂದಿಗೆ ಮುಂದುವರೆಯಿತು.ಕುಮಾರಸ್ವಾಮಿಯವರು ಅವರಿಗೆ ಜೆಡಿಎಸ್ ಟಿಕೆಟ್ ಘೋಷಿಸಿದರು.ದೇವದುರ್ಗ ತಾಲೂಕಿನ ಜನರು ಕರಿಯಮ್ಮನವರಲ್ಲಿ ತಮ್ಮ ಆಶೋತ್ತರಗಳನ್ನು ಈಡೇರಿಸುವ ನಾಯಕಿಯನ್ನು ಕಂಡರು,ಕರಿಯಮ್ಮನವರು ಹೋದಕಡೆಯಲೆಲ್ಲ ಜನರು ಅವರ ಪಕ್ಷಕ್ಕೆ ಸೇರತೊಡಗಿದರು.

ನಮ್ಮ ಮಠದಲ್ಲಿ ಪ್ರತಿ ರವಿವಾರ ‘ ಶಿವೋಪಶಮನ’ ಕಾರ್ಯ ನಡೆಯುತ್ತಿದ್ದು ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ,ಹೊರರಾಜ್ಯಗಳಿಂದ ಭಕ್ತರು ಸಮಸ್ಯೆಗಳ ಪರಿಹಾರಕ್ಕೆ ಬರುತ್ತಿದ್ದಾರೆ.ಶಿವನಗೌಡ ನಾಯಕರ ಆತ್ಮೀಯರಾಗಿರುವ ಗಲಗಿನ ಬಸ್ಸಣ್ಣ ಗುತ್ತೆದಾರರು ನಮ್ಮ ಮಠದ ನಿಷ್ಠಾವಂತರಾಗಿದ್ದು ಅವರ ಮುಂದೆಯೂ ಶಿವನಗೌಡ ನಾಯಕರು ಸೋಲುತ್ತಾರೆ ಎಂದು ಆರು ತಿಂಗಳಿನ ಹಿಂದಿನಿಂದಲೂ ಹೇಳುತ್ತ ಬಂದಿದ್ದೆ.ಅದನ್ನು ಕೇಳಿಯೂ ಕೇಳದಂತೆ ಇದ್ದ ಶಿವನಗೌಡರು ಈಗ ‘ ಅತ್ಯಧಿಕ ಮತಗಳ ಅಂತರ’ ದಿಂದ ಸೋತಿದ್ದಾರೆ.ಶ್ರೀಮತಿ ಕರಿಯಮ್ಮನವರು 34000 ಕ್ಕೂ ಅಧಿಕ ಮತಗಳಿಂದ ಗೆದ್ದಿದ್ದಾರೆ.

ಕರಿಯಮ್ಮನವರನ್ನು ಗೆಲ್ಲಿಸಲೇಬೇಕು ಎಂದು ಹಠ ಹಿಡಿದಿದ್ದ ನಾನು ಸಿದ್ರಾಮಯ್ಯನವರು ಮತ್ತು ಕರಿಯಮ್ಮನವರ ಗೆಲುವಿಗಾಗಿ ನಮ್ಮ ಮಠದ ಕ್ಷೇತ್ರರಕ್ಷಕಿ ತಾಯಿ ಮಹಾಕಾಳಿಯ ಸನ್ನಿಧಿಯಲ್ಲಿ ಎಪ್ರಿಲ್ 11 ರಿಂದ ಮೇ 13 ರವರೆಗೆ 30ದಿನಗಳ ಕಾಲ ಶ್ರೀದೇವಿ ಪುರಾಣ ಅಖಂಡ ಪಾರಾಯಣ ಪಾರಾಯಣ ಮಾಡಿದೆ. ತಾಯಿ ಮಹಾಕಾಳಿಯ ಆದೇಶದಂತೆ ಮೇ 10 ರಂದು ನಡೆದ ಚುನಾವಣೆಯಲ್ಲಿ ನಾನು ನಮ್ಮೂರಿನಲ್ಲಿ ಮೊದಲಿಗನಾಗಿ ಮತಚಲಾವಣೆ ಮಾಡಿದ್ದೆಸಂಕಲ್ಪಸಹಿತ ಶ್ರೀದೇವಿ ಪುರಾಣದ ಅಖಂಡ ಪಾರಾಯಣವು ನನ್ನ ಯಶಸ್ಸಿನ ಮೂಲವಾಗಿದ್ದು ಸಿದ್ರಾಮಯ್ಯನವರ ಮತ್ತು ಕರಿಯಮ್ಮನವರ ಗೆಲುವಿಗೆ ಕಾರಣವಾಯಿತು ಶ್ರೀದೇವಿ ಪುರಾಣದ ಮುವ್ವತ್ತುದಿನಗಳ ಅಖಂಡ ಪಾರಾಯಣ.

ಶ್ರೀಮತಿ ಕರಿಯಮ್ಮನವರು ಶಾಸಕ ಜೀವನವು ಯಶಸ್ವಿಯಾಗಲಿ,ಜಗನ್ಮಾತಾಪಿತರುಗಳಾದ ಶ್ರೀ ವಿಶ್ವೇಶ್ವರ ಶಿವ ಮತ್ತು ಶ್ರೀ ವಿಶ್ವೇಶ್ವರಿ ದುರ್ಗಾದೇವಿಯರು ಅವರಿಗೆ ಸಕಲ ಸನ್ಮಂಗಳನ್ನಿತ್ತು ಪೊರೆಯಲಿ ಎನ್ನುವ ಶುಭ ಹಾರೈಕೆಯೊಂದಿಗೆ ಲೇಖನವನ್ನು ಮಂಗಲಗೊಳಿಸುವೆ.

About The Author