ಸ್ವಗತ : ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ ಎನ್ನುವ ವಿನೂತನ ಸಂಸ್ಥೆ ಒಂದನ್ನು ಕಟ್ಟಿದ ಸಂತಸದ ಕ್ಷಣಗಳು : ಮುಕ್ಕಣ್ಣ ಕರಿಗಾರ

ಬದುಕಿನಲ್ಲಿ ಅನಿರೀಕ್ಷಿತ ಪ್ರಸಂಗಗಳು ಸಂಭವಿಸುವುದು ಸಹಜವಾದರೂ ಕೆಲವೊಂದು ಅನಿರೀಕ್ಷಿತ ಪ್ರಸಂಗಗಳು ವ್ಯಕ್ತಿಗಳ ಜೀವನದಲ್ಲಿ ನಿರ್ಣಾಯಕ ಪಾತ್ರವಹಿಸುವುದಲ್ಲದೆ ಸಮಾಜ ಜೀವನದಲ್ಲಿ ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುತ್ತವೆ.ಇಂದು ಅಂತಹ ಅನಿರೀಕ್ಷಿತ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ನನ್ನ ಕೊಡುಗೆಯಾಗಲಿರುವ ಅನಿರೀಕ್ಷಿತ ಪ್ರಸಂಗ ಒಂದು ನನ್ನ ಬದುಕಿನಲ್ಲಿ ನಡೆಯಿತು.ನಿನ್ನೆ ರಾತ್ರಿಯ ಧ್ಯಾನದಲ್ಲಿದ್ದಾಗಲೇ ಆ ಹೊಳಹು ಮಿಂಚಿತ್ತು; ಇಂದಿನ ಬೆಳಗಿನ ಧ್ಯಾನದಲ್ಲಿ ಅದರ ಸ್ಪಷ್ಟರೂಪುರೇಷೆಯ ಪರಿಚಯವಾಯಿತು.ನಮ್ಮ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಸನ್ನಿಧಿಯಲ್ಲಿ ನಿಕಟವರ್ತಿಗಳೊಂದಿಗೆ ‘ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ ಎನ್ನುವ ನನ್ನ ಕನಸು- ಕಲ್ಪನೆಗಳ ಸಂಸ್ಥೆ ಒಂದರ ಕಾರ್ಯಾರಂಭಕ್ಕೆ ಚಾಲನೆ ನೀಡಿದೆ.

ಹಿಂದೆ ಹಲವು ಸಾರೆ ನಾನು ಈ ಬಗ್ಗೆ ಯೋಚಿಸಿದ್ದುಂಟು,ಆದರೆ ಕಾರ್ಯ ತತ್ಪರನಾಗಿರಲಿಲ್ಲ.ನಿನ್ನೆ ಮತ್ತು ಇಂದಿನ ಧ್ಯಾನದ ಸಮಯದಲ್ಲಿ ಅಂತರ್ ಪ್ರೇರಣೆಯಿಂದ ಸ್ಫೂರ್ತಿಗೊಂಡು ‘ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ ಎನ್ನುವ ಸಂಸ್ಥೆಯೊಂದರ ಶುಭಾರಂಭ ನೆರವೇರಿಸಿದೆ.ನನಗೆ ಗೊತ್ತಿರುವ ಮಟ್ಟಿಗೆ ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ ಪ್ರಯತ್ನ.ಪ್ರಜಾಪ್ರತಿನಿಧಿಗಳ ಮಾರ್ಗದರ್ಶನದ ಉದ್ದೇಶಕ್ಕಾಗಿಯೇ ಇರುವ ಸಂಸ್ಥೆಗಳು ರಾಜ್ಯದಲ್ಲಿ ಇಲ್ಲ.ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಗದಗ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಗಳು ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಧೀನದಲ್ಲಿ ಸ್ಥಾಪಿಸಲ್ಪಟ್ಟಿದ್ದು ಅವು ನಿರ್ದಿಷ್ಟ ಉದ್ದೇಶ ಮತ್ತು ಸೀಮಿತ ಕಾರ್ಯಕ್ಷೇತ್ರವನ್ನು ಹೊಂದಿವೆ.ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮೈಸೂರಿನಲ್ಲಿ ಕೇಂದ್ರಕಛೇರಿಯನ್ನು ಹೊಂದಿ ಈಗ ಕಲ್ಬುರ್ಗಿಯಂತಹ ಇತರ ಪ್ರದೇಶಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆಯಾದರೂ ಎಸ್ ಐ ಆರ್ ಡಿ ಯು ಜನಪ್ರತಿನಿಧಿಗಳಿಗೆ ಅವರು ಆಯ್ಕೆಯಾದ ಪ್ರಾರಂಭದ ಅವಧಿಯಲ್ಲಿ ಮಾತ್ರ ಸರಕಾರದ ಸ್ಕೀಮುಗಳು,ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತ್ರ ತರಬೇತಿ ನೀಡುತ್ತದೆ.ಸರಕಾರಿ ಅಧಿಕಾರಿಗಳ ಸಾಮರ್ಥ್ಯಾಭಿವೃದ್ಧಿಯತ್ತಲೇ ಎಸ್ ಐ ಆರ್ ಡಿ ಯು ಹೆಚ್ಚಿನ ಒತ್ತು ಕೊಟ್ಟಿದೆ.ಗದಗನಲ್ಲಿ ಸ್ಥಾಪಿಸಲ್ಪಟ್ಟ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿ ವಿಷಯವನ್ನು ಒಂದು ಅಕಾಡೆಮಿಕ್ ಶಿಸ್ತಿನ ವಿಷಯವನ್ನಾಗಿಸಿ ಸರ್ಟಿಫಿಕೇಟ್ ಕೋರ್ಸುಗಳು,ಡಿಪ್ಲೊಮಾ ಕೋರ್ಸುಗಳು ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುವ ವಿಶ್ವವಿದ್ಯಾಲಯವಾಗಿದೆ.ಪ್ರಜಾಪ್ರತಿನಿಧಿಗಳ ಸಾಮರ್ಥ್ಯಾಭಿವೃದ್ಧಿಯನ್ನು ಪಡಿಸಲೆಂದೇ ಇರುವ ಸಂಸ್ಥೆಗಳು ಇರಲಿಲ್ಲ ರಾಜ್ಯದಲ್ಲಿ.

ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಕೇವಲ ಸರಕಾರಿ ಅಧಿಕಾರಿಗಳಿಗೆ ಮಾತ್ರ ಶಿಕ್ಷಣ,ತರಬೇತಿ ನೀಡಿದರೆ ಸಾಲದು.ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಕಾರ್ಯಾಂಗದ ಭಾಗವಾಗಿ ಆಡಳಿತವನ್ನು ನಿಯಂತ್ರಿಸುವ,ಶಾಸನ- ಕಾಯ್ದೆ,ನಿಯಮಗಳನ್ನು ರೂಪಿಸುವ ಜನಪ್ರತಿನಿಧಿಗಳಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡಬೇಕು.ಪ್ರಜಾಪ್ರತಿನಿಧಿಗಳಿಗೆ ಶಿಕ್ಷಣ,ತರಬೇತಿ ನೀಡುವುದು ಸವಾಲಿನ ಮತ್ತು ಕಷ್ಟಕರ ಕೆಲಸ.ಅದರಲ್ಲೂ ಎಂ ಎಲ್ ಎ,ಎಂಪಿಗಳಿಗೆ ತರಬೇತಿ ನೀಡುವುದು ಸಾಹಸದ ಕಾರ್ಯವೇ ಸರಿ.ಒಂದು ಸಾರೆ ಶಾಸಕರು,ಸಂಸದರು ಆಗಿ ಆಯ್ಕೆಯಾದರೆ ಸಾಕು ಸರ್ವಜ್ಞರಂತೆ ವರ್ತಿಸುವ ಜನರೇ ಬಹಳಷ್ಟು.ಅವರ ಆಪ್ತವಲಯವೂ ಹಾಗೆಯೇ ಇರುತ್ತದೆ.ಸಾಹೇಬರಿಗೆ ಎಲ್ಲಗೊತ್ತಿದೆ,ಕಲಿಯುವುದು ಏನಿದೆ? ಎಂಬ ಉಡಾಫೆಯ ಮಾತುಗಳನ್ನು ಆಡುತ್ತಲೆ ಶಾಸಕರು,ಸಚಿವರುಗಳ ಆಪ್ತ ಸಿಬ್ಬಂದಿ ಜನಪ್ರತಿನಿಧಿಗಳನ್ನು ಕಟ್ಟಿಹಾಕುತ್ತಾರೆ.ಜನಪ್ರತಿನಿಧಿಗಳಿಗೂ ತಮ್ಮ ಹಕ್ಕು,ಅಧಿಕಾರ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ.ಶಾಸಕ ಇಲ್ಲವೆ ಸಂಸದರಾದೊಡನೆ ‘ ತಾವೇ ಸಾರ್ವಭೌಮರು,ಪ್ರಶ್ನಾತೀತರು’ ಎಂಬಂತೆ ವರ್ತಿಸುತ್ತಾರೆ.ಕಾನೂನಿಗಿಂತ ಯಾರೂ ದೊಡ್ಡವರಿಲ್ಲ,ಸಂವಿಧಾನಕ್ಕಿಂತ ಯಾರೂ ಹಿರಿಯರಿಲ್ಲ ಎನ್ನುವ ಸಂಗತಿ ಜನಪ್ರತಿನಿಧಿಗಳಿಗೆ ಗೊತ್ತಿರುವುದಿಲ್ಲ.ಸಂವಿಧಾನದ ಬಗ್ಗೆ ತಿಳಿದುಕೊಂಡಿರುವ ಜನಪ್ರತಿನಿಧಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ.ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಶಾಸಕರುಗಳು ಕೇಳುವ ಚುಕ್ಕೆಗುರುತಿನ,ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಗುಣಮಟ್ಟ ನೋಡಿಯೇ ನಮ್ಮ ಶಾಸಕರುಗಳ ರಾಜ್ಯ ಮತ್ತು ಕ್ಷೇತ್ರದ ಕಾಳಜಿಯನ್ನು ಅರಿಯಬಹುದಾಗಿದೆ.ಚುಕ್ಕೆಗುರುತಿನ ಪ್ರಶ್ನೆಗಳಂತಹ ಮಹತ್ವದ ಪ್ರಶ್ನೆಗಳನ್ನು ಸಹ ಅವರ ಆಪ್ತಸಹಾಯಕರುಗಳ ಅಪೇಕ್ಷೆ ಮತ್ತು ಯಾರದೋ ಪ್ರಭಾವಕ್ಕೆ ಒಳಗಾಗಿ ಕೇಳುತ್ತಾರೆ ಎಂದರೆ ಅಧಿವೇಶನದ ಮಹತ್ವದ ಭಾಗ ಪ್ರಶ್ನೋತ್ತರ ಅವಧಿ ಮತ್ತು ಅದಕ್ಕಿರುವ ಮಹತ್ವವು ಕಳೆಗುಂದದೆ ಇರುತ್ತದೆಯೆ? ಇಂತಹ ಪ್ರವೃತ್ತಿಯನ್ನು ತಪ್ಪಿಸಲು ಮತ್ತು ಶಾಸಕರುಗಳನ್ನು ಸಮಷ್ಟಿಕಲ್ಯಾಣಕ್ಕೆ ಸಂಬಂಧಿಸಿದಂತೆ ಹಾಗೂ ಅವರ ಕ್ಷೇತ್ರದ ಅಭಿವೃದ್ಧಿಯನ್ನು ಕುರಿತು ಕಾಳಜಿ ವಹಿಸುವಂತೆ ಸ್ಫೂರ್ತಿ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಶಾಸಕರುಗಳು ಸೇರಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಭಾರತದ ಸಂವಿಧಾನದ ಪರಿಚಯ,ಸರಕಾರಿ ಆಡಳಿತ ಯಂತ್ರದ ಕಾರ್ಯವಿಧಾನ,ನ್ಯಾಯಾಂಗದ ವೈಶಿಷ್ಟ್ಯ,ಪ್ರಜಾಪ್ರತಿನಿಧಿಗಳು ಹಕ್ಕು- ಜವಾಬ್ದಾರಿಗಳು,ವಿಧಾನ ಮಂಡಲ ಮತ್ತು ಸಂಸತ್ತಿನ ಕಾರ್ಯವಿಧಾನ,ಸಭೆಗಳ ಕಾರ್ಯವಿಧಾನ,ವಿವಿಧ ಸ್ಥಾಯಿಸಮಿತಿಗಳು,ಉಪಸಮಿತಿಗಳ ಕಾರ್ಯವಿಧಾನ,ಅಭಿವೃದ್ಧಿ ಯೋಜನೆಗಳು,ಆಡಳಿತಾಂಗದೊಂದಿಗೆ ಸಮನ್ವಯ ಸೇರಿದಂತೆ ಹತ್ತಾರು ಮಹತ್ವದ ವಿಷಯಗಳಲ್ಲಿ ಅವರುಗಳಿಗೆ ತರಬೇತಿ ನೀಡಬೇಕಿದೆ.ಅಲ್ಪಾವಧಿಯ ಸನಿವಾಸ ಮತ್ತು ಒಂದೆರಡು ತಿಂಗಳುಗಳ ಕರಸ್ಪಾಂಡೆನ್ಸ್ ಪದ್ಧತಿಯಲ್ಲಿ ಜನಪ್ರತಿನಿಧಿಗಳಿಗೆ ಅವರ ಕಾರ್ಯಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಅವರನ್ನು ಸಮರ್ಥರನ್ನಾಗಿಸಲು ಮಾರ್ಗದರ್ಶನ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ.

ಸಂವಿಧಾನದ 73 ಮತ್ತು 74 ನೆಯ ತಿದ್ದುಪಡಿಯಂತೆ ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಸಂಸ್ಥೆಗಳಿಗೆ ಹೆಚ್ಚಿನ ಜವಾಬ್ದಾರಿ,ಅಧಿಕಾರಗಳನ್ನು ನೀಡಲಾಗಿದೆಯಾದರೂ ಈ ಸಂಸ್ಥೆಗಳಿಗಿರುವ ಸ್ವಯಂ ಆಡಳಿತದ ಅಧಿಕಾರವನ್ನು ಸರಕಾರಿ ಅಧಿಕಾರಿಗಳೇ ಚಲಾಯಿಸುತ್ತಿದ್ದಾರೆ ಮಾತ್ರವಲ್ಲ ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಮರಸಭಾವವನ್ನು ಹೊಂದದೆ ಸಂಘರ್ಷಕ್ಕಿಳಿಯುತ್ತಿದ್ದಾರಲ್ಲದೆ ತಾವೇ ಶ್ರೇಷ್ಠರು ಎನ್ನುವ ಅಹಮಿಕೆಯಿಂದ ವರ್ತಿಸುತ್ತಿದ್ದಾರೆ.ಪ್ರಜಾಪ್ರತಿನಿಧಿಗಳಾದವರಲ್ಲಿ ಇರಬೇಕಾದ ಗಟ್ಟಿತನ ಮತ್ತು ವ್ಯವಸ್ಥೆಯ ಬಗೆಗಿನ ತಿಳಿವಳಿಕೆಯ ಕೊರತೆಯ ಕಾರಣದಿಂದ ಜನಪ್ರತಿನಿಧಿಗಳು ಸೋಲುತ್ತಿದ್ದಾರೆ.ಇಂತಹ ಅಪಸವ್ಯಗಳನ್ನು ತಪ್ಪಿಸಿ ಪ್ರಜಾಪ್ರತಿನಿಧಿಗಳನ್ನು ನಿಜವಾದ ನಾಯಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯೋನ್ಮುಖವಾಗಲಿದೆ.

ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯು ‘ ಮಹಾಶೈವ ಧರ್ಮಪ್ರವರ್ಧನಾ ಟ್ರಸ್ಟ್’ ಎನ್ನುವ ನೊಂದಾಯಿತ ಟ್ರಸ್ಟಿನ ಆಧೀನದಲ್ಲಿ ಸ್ಥಾಪಿಸಲ್ಪಡುತ್ತಿರುವ ಸಂಸ್ಥೆಯಾಗಿದ್ದು ಮಹಾಶೈವ ಧರ್ಮಪ್ರವರ್ಧನಾ ಟ್ರಸ್ಟಿನ ಉದ್ದೇಶಗಳಡಿಯೇ ಸ್ಥಾಪಿಸಲಾಗುತ್ತಿರುವ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯ ಮೇಲೆ ಟ್ರಸ್ಟಿಗೆ ಪೂರ್ಣ ನಿಯಂತ್ರಣ ಮತ್ತು ನಿರ್ದೇಶನಾಧಿಕಾರವಿದೆ.ಮಹಾಶೈವ ಧರ್ಮಪ್ರವರ್ಧನಾ ಟ್ರಸ್ಟ್ ಅನ್ನು ದೇವದುರ್ಗದ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ 25.10.2012ರಂದು ನೊಂದಾಯಿಸಲ್ಪಟ್ಟಿದ್ದು ನಾನು ಆ ಟ್ರಸ್ಟಿನ ಅಧ್ಯಕ್ಷನಾಗಿದ್ದು ಗಬ್ಬೂರಿನ ನಮ್ಮ ಮಹಾಶೈವ ಧರ್ಮಪೀಠವು ಟ್ರಸ್ಟಿನ ಕೇಂದ್ರಸ್ಥಾನವಾಗಿದೆ.

About The Author