ಮಹಿಳೆಯೊಂದಿಗೆ ಪಿಡಿಓ ಡ್ಯಾನ್ಸ್ ಕ್ರಮಕ್ಕೆ ಆಗ್ರಹ

ವಡಗೇರಾ : ತಾಲೂಕಿನ ತುಮಕೂರು ಗ್ರಾಮದ ಗ್ರಾಮ  ಪಂಚಾಯತ ಅಭಿವೃದ್ಧಿ ಅಧಿಕಾರಿ ಹಣಮಂತನ ವರ್ತನೆಯ ಬಗ್ಗೆ  ಗ್ರಾಮ ಪಂಚಾಯತ ಮಾಜಿ  ಅಧ್ಯಕ್ಷೆ  ಮರೆಮ್ಮ ಪಿಲ್ಲಿ ಹಾಗೂ ಗ್ರಾಮದ ಪರಶುರಾಮ ಛಲುವಾದಿ  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಗೆ ಇದ್ದರೂ ಕೂಡಾ ತುಮಕೂರು ಗ್ರಾಮದಲ್ಲಿ  ದಿನಾಂಕ 5 ರಂದು ನಡೆದ  ಸಾಮಾಜಿಕ ನಾಟಕದಲ್ಲಿ  ಅಸಭ್ಯವಾಗಿ ವರ್ತನೆ ಮಾಡಿ ನೃತ್ಯ ಮಾಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 
ಗ್ರಾಮದಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿದ್ದರೂ ಕೂಡ ಅಭಿವೃದ್ಧಿ ಅಧಿಕಾರಿ ಮಾತ್ರ ತಮಗೆ ಸ್ವಇಚ್ಛೆ ಬಂದಂತೆ ವರ್ತಿಸುತ್ತಿದ್ದಾರೆ.ಸರಿಯಾಗಿ ಪಂಚಾಯಿತಿಗೆ ಬರುವುದಿಲ್ಲ.ಯಾದಗಿರಿಯಲ್ಲಿ ಕುಳಿತುಕೊಂಡು ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ.  ಜನ ಸಾಮಾನ್ಯರ ಕೈಗೆ ಸಿಗುವುದಿಲ್ಲ.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚರಂಡಿ ಹಾಗೂ ಇನ್ನಿತರ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ.ಇಂತಹ ಅಧಿಕಾರಿ ನಮ್ಮ ಗ್ರಾಮಕ್ಕೆ ಬೇಡ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ ಸಿಇಓ ರವರಿಗೆ ಆಗ್ರಹಿಸಿದರು.