ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗದ ಹಾಲುಮತ ಅಭಿವೃದ್ಧಿ ನಿಗಮ : ಕುರುಬರನ್ನು ಕಡೆಗಣಿಸಿದ ಬಿಜೆಪಿ, ಮೌನವಹಿಸಿದ ಮಠಾಧೀಶರು ಬಸವರಾಜ ಅತ್ನೂರು ಆಕ್ರೋಶ

ಯಾದಗಿರಿ :ಪ್ರಸ್ತುತ ಅಧಿವೇಶನದಲ್ಲಿ ಹಲವು ಸಮಾಜದ ಅಭಿವೃದ್ಧಿ ನಿಗಮಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಹಾಲುಮತ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡದೇ ಕುರುಬ ಸಮಾಜದವರನ್ನು ಬಿಜೆಪಿ ಪಕ್ಷ ಕಡೆಗಣಿಸಿದೆ ಎಂದು ಜಿಲ್ಲಾ ಸಿದ್ದರಾಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ನೂರು ಆಕ್ರೋಶ ವ್ಯಕ್ತಪಡಿಸಿದರು.
      ಮುಖ್ಯಮಂತ್ರಿಗಳು ಸಣ್ಣಪುಟ್ಟ ಎಲ್ಲಾ ಸಮಾಜದವರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ.ಆದರೆ ಕುರುಬರನ್ನು ಕಡೆಗಣಿಸಲಾಗಿದೆ.ಪ್ರಸ್ತುತ ಬಿಜೆಪಿ ಸರಕಾರದ ಕೊನೆಯ ಬಜೆಟ್ ನಲ್ಲಾದರೂ ಹಾಲುಮತ ಅಭಿವೃದ್ಧಿ ನಿಗಮ ಆಗುತ್ತದೆ ಎನ್ನುವ ಭರವಸೆ ಇತ್ತು.ಆದರೆ ಕುರುಬರನ್ನು ಬಿಜೆಪಿ ಪಕ್ಷ ವಂಚನೆ ಮಾಡಿದೆ ಎಂದರು.ಪರಿಶಿಷ್ಟ ಪಂಗಡದಲ್ಲಾದರೂ ಸೇರ್ಪಡೆಗೊಳಿಸುತ್ತಾರೆ ಎನ್ನುವ ನಂಬಿಕೆ ಇತ್ತಾದರೂ ಅದು ಹುಷಿಯಾಗಿದೆ.
   ಮಠಾಧೀಶರ ಸಚಿವರ ಮೌನ :ಬಿಜೆಪಿ ಸರಕಾರದಲ್ಲಿ ಕುರುಬ ಸಮಾಜದ ಕೆ.ಎಸ್. ಈಶ್ವರಪ್ಪ, ಬಸವರಾಜ ಭೈರತಿ, ಎಂಟಿಬಿ ನಾಗರಾಜ ಸೇರಿದಂತೆ ಇತರ ಶಾಸಕರು ಮತ್ತು ಮಾಜಿ ಸಚಿವರು ಇದ್ದರೂ ಒಂದು ಅಭಿವೃದ್ಧಿ ನಿಗಮವನ್ನು ಕೊಡಿಸಲಾಗಲಿಲ್ಲ. ರಾಜ್ಯದಲ್ಲಿಯೇ ಕುರುಬ ಸಮಾಜ ಮೂರನೇ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿರುವ ಕುರುಬರಿಗೆ ಒಂದು ಅಭಿವೃದ್ಧಿ ನಿಗಮ ಇರದೇ ಇರುವುದು ದುರದೃಷ್ಟಕರ. ಮಠಾಧೀಶರು ಕೂಡ ಇದರ ಬಗ್ಗೆ ಮೌನವಹಿಸಿದ್ದಾರೆ. ಇತರ ಸಣ್ಣಪುಟ್ಟ ಸಮಾಜದವರನ್ನು ನೋಡಿ ನಾವು ಕಲಿಯಬೇಕಿದೆ ಎಂದರು.
   ಬಿಜೆಪಿಗೆ ತಕ್ಕ ಪಾಠ : ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕುರುಬ  ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ಇಲ್ಲದಿದ್ದರೆ ಬಿಜೆಪಿಯವರು ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಇಂದು ಸಮಾಜವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಐದು ವರ್ಷಗಳಲ್ಲಿ ನಮ್ಮನ್ನು ಕಡೆಗಣಿಸುತ್ತಾರೆ ಎಂದರು.

About The Author