ಇಲಾಖೆಯ ಪರಿಷ್ಕೃತ ಆದೇಶ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ,

ಶಹಾಪುರ : 2022ರ ಡಿ.3 ರಂದು ಇಲಾಖೆಯ ಪರಿಷ್ಕೃತ ಆದೇಶ ತಿದ್ದುಪಡಿ ಮಾಡಬೇಕು. ವಯೋಮಿತಿಯ ಆಧಾರದಲ್ಲಿ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಸಿಐಟಿಯು ಸಂಯೋಜಿತದಲ್ಲಿ ಪ್ರತಿಭಟನೆ ನಡೆಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘದ ತಾಲೂಕ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕರ, 2022ರ ಡಿ.3 ರಂದು ಇಲಾಖೆಯ ನಿರ್ದೇಶನದ ಪ್ರಕಾರ ಪರಿಷ್ಕೃತ ಆಯ್ಕೆ ಮಾರ್ಗಸೂಚಿಗಳನ್ನು ಮಾಡಿರುವುದರಿಂದ ಈಗಾಗಲೇ ಇರುವ ಇಲಾಖೆಯ 2017ರ ನ.23 ಮತ್ತು 2019 ಜ.19ರ ತಿದ್ದುಪಡಿ ಮಾರ್ಗಸೂಚಿಗಳಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ಮತ್ತು ಅನುಭವವಿರುವ ಅಂಗನವಾಡಿ ಸಹಾಯಕಿ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಬಡ್ತಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪರಿಷ್ಕೃತ ಆದೇಶವನ್ನು ಅನ್ವಯಿಸಬಾರದೆಂದು ಇಲಾಖೆಗೆ 2022 ಡಿ.14ರ ಮನವಿ ನೀಡಿದ್ದರೂ ಪರಿಗಣಿಸಿಲ್ಲ. ಇದರಿಂದ ಸಾವಿರಾರು ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯವಾಗುತ್ತಿದೆ. ಪರಿಷ್ಕೃತ ಆದೇಶವನ್ನು ತಿದ್ದುಪಡಿಸಬೇಕು. ವಯೋಮಿತಿ ಆಧಾರದಲ್ಲಿ ಮುಂಬಡ್ತಿ ನೀಡಬೇಕೆಂದು ಒತ್ತಾಯಿಸಿ ಜ. 23ರಂದು  ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಡಗೇರಾ ತಾಲೂಕ ಅಧ್ಯಕ್ಷೆ  ಇಂದಿರಾ ಕೊಂಕಲ್ ಮಾತನಾಡಿ, 2022 ಆ.1ರ ಕೇಂದ್ರ ಸರ್ಕಾರದ ಸಕ್ಸಮ್ ಅಂಗನವಾಡಿ ಕೇಂದ್ರಗಳ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳನ್ನು ಭಾರತದ ಇತರೆ ಯಾವ ರಾಜ್ಯಗಳಲ್ಲಿಯೂ ಹೊಸ ಮಾರ್ಗಸೂಚಿಗಳನ್ನು ಅಳವಡಿಸಿಲ್ಲ. ಆದರೆ, ರಾಜ್ಯ ಸರ್ಕಾರ ಇದರ ಸಾದಕ ಬಾದಕಗಳನ್ನು ಪರಿಶೀಲನೆ ಮಾಡದೇ ಕೂಡಲೇ ಬದಲಾಯಿಸಿದೆ, ಹಾಸನ, ತುಮಕೂರು, ಕೋಲಾರ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಅರ್ಹತೆಯಿರುವ ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಬಡ್ತಿ ನೀಡಿಲ್ಲ. ಈ ಆದೇಶವನ್ನು ಬದಲಾಯಿಸಿ ವಯೋಮಿತಿಯ ಆಧಾರದ ಮೇಲೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದರು.ಸಂಘದ ಶಹಾಪುರ ತಾಲೂಕು ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ವಡಗೇರಾ ತಾಲೂಕು ಕಾರ್ಯದರ್ಶಿ ಚಂದಮ್ಮ ನಾಯ್ಕಲ್,  ದೋರನಹಳ್ಳಿ, ವಡಗೇರಾ ಖಜಾಂಚಿ ಮಹಾದೇವಿ, ಶಹಾಪುರ ಖಜಾಂಚಿ ಲಕ್ಷ್ಮೀ , ಉಪಾಧ್ಯಕ್ಷೆ ರೇಣುಕಾ ಗೋಗಿ,ಸಿಐಟಿಯು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಇತರರಿದ್ದರು.

About The Author