ವ್ಯಕ್ತಿವಿಶೇಷ : ವಿಶ್ವಾತ್ಮರಾದ ‘ ನಡೆದಾಡುವ ದೇವರು’ಸಿದ್ಧೇಶ್ವರ ಸ್ವಾಮಿಗಳು ಅಡಿ ಇಟ್ಟು ಪಾವನಗೊಳಿಸಿದ್ದರು ಗಬ್ಬೂರಿನ ತಪೋವನವನ್ನು : ಮುಕ್ಕಣ್ಣ ಕರಿಗಾರ

 

ಜನೆವರಿ ೦೨,ರಂದು ಶ್ರೀ ಸಿದ್ಧೇಶ್ವರಸ್ವಾಮಿಗಳವರ ಕುರಿತು ‘ ಶತಮಾನದ ಸಂತ ಶ್ರೀಸಿದ್ಧೇಶ್ವರ ಸ್ವಾಮಿಗಳು’ ಎನ್ನುವ ಲೇಖನವನ್ನು ೨೦೨೩ ನೇ ಸಾಲಿನ ಮೊದಲ ಲೇಖನವನ್ನಾಗಿ ಬರೆದು,ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿದ್ದೆ,ಆತ್ಮೀಯರ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದೆ.ಬಹಳಷ್ಟು ಮಂದಿ ಓದಿ ಸಂತಸಗೊಂಡು ಪ್ರತಿಕ್ರಿಯಿಸಿದ್ದರು.ನನ್ನ ಸಾಹಿತ್ಯವನ್ನು ತಪಸ್ಸಿನಂತೆ ಓದುತ್ತಿರುವ ಗುರುಬಸವ ಹುರಕಡ್ಲಿ ಅವರು ಲೇಖನದ ಕೊನೆಗೆ ‘ ಶ್ರೀ ಸಿದ್ಧೇಶ್ವರಸ್ವಾಮಿಗಳು ದಿರ್ಘಾಯುಗಳಾಗಲಿ’ ಎಂದು ನಾನು ವ್ಯಕ್ತಪಡಿಸಿದ್ದ ಆಶಯವನ್ನು ಮೆಚ್ಚಿಕೊಂಡು ಮಹಾಶೈವಧರ್ಮಪೀಠದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಕಳಶಾರೋಹಣ ಸಮಾರಂಭ ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳವರಿಂದಲೇ ನಡಯಲಿ,ಅಷ್ಟುಕಾಲ ಪೂಜ್ಯರು ಬದುಕಿರಲಿ’ ಎಂದು ಮೆಸೇಜ್ ಮಾಡಿದ್ದರು.ಅವರಿಗೆ ಮರುಮೆಸೇಜ್ ಮಾಡಿ ‘ ಲೋಕಧರ್ಮದಂತೆ ಶ್ರೀ ಸಿದ್ಧೇಶ್ವರಸ್ವಾಮಿಗಳು ದೀರ್ಘಾಯುಗಳಾಗಲಿ ಎಂದು ಆಶಿಸಿದ್ದೇನೆ ಗುರುಬಸವ ಆದರೆ ಅವರು ಬಹುಕಾಲ ಬದುಕುವುದಿಲ್ಲ.ಮಹಾಶೈವ ಧರ್ಮಪೀಠದ ಶಿವದುರ್ಗಾ ದೇವಸ್ಥಾನಗಳ ಕಳಶಾರೋಹಣ ಯಾರಿಂದ ಆಗಬೇಕೆಂದು ಶಿವ ವಿಶ್ವೇಶ್ವರನ ಸಂಕಲ್ಪ ಇದೆಯೋ ಅವರಿಂದ ಆಗುತ್ತದೆ’ ಎಂದು ಉತ್ತರಿಸಿದ್ದೆ.ಮಹಾಶೈವ ಧರ್ಮಪೀಠದಲ್ಲಿ ಮುಕ್ತಾಯಹಂತದಲ್ಲಿರುವ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಶಿಖರ ನಿರ್ಮಾಣಕಾರ್ಯವು ಕೆಲವು ದಿನಗಳಲ್ಲಿ ಮುಗಿಯಲಿದ್ದು ಸಿದ್ಧೇಶ್ವರಸ್ವಾಮಿಗಳವರಿಂದ ಕಳಶಾರೋಹಣ ಮಾಡಿಸಬೇಕು ಎಂದು ಸಂಕಲ್ಪಿಸಿದ್ದೆವು.ಒಂದು ವರ್ಷದಿಂದ ಕಾರ್ಯಕ್ರಮ ನಿಗದಿಪಡಿಸಲು ಆಗುತ್ತಿರಲಿಲ್ಲ ಕಾರಣಾಂತರಗಳಿಂದ.ಸಿದ್ಧೇಶ್ವರಸ್ವಾಮಿಗಳು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರು ಚೇತರಿಸಿಕೊಂಡ ಬಳಿಕ ಅವರನ್ನು ಕಂಡು ಬಿನ್ನೈಸಿದರಾಯಿತು ಎಂದುಕೊಂಡಿದ್ದೆವು.

ನಿನ್ನೆ ಸೋಮವಾರ ಆಗಿದ್ದರಿಂದ ಮನಸ್ಸು ವಿಚಲಿತಗೊಂಡಿತ್ತು,ಅವ್ಯಕ್ತದುಃಖದ ಭಾವನೆ ಆವರಿಸಿತ್ತು ಮೈ ಮನಸ್ಸುಗಳನ್ನು.ಶಿವಯೋಗಿಯಾದ ಸಿದ್ಧೇಶ್ವರಸ್ವಾಮಿಗಳು ಸೋಮವಾರ ಶಿವೈಕ್ಯರಾಗುವರು ಎಂದು ಸಂದೇಶನೀಡಿದ್ದ ಅಂತರಾತ್ಮ.ಆ ಕಾರಣದಿಂದ ಮಹಾಶೈವ ಧರ್ಮಪೀಠದ ಯಾವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳದೆ ಪೂಜೆ -ಧ್ಯಾನಗಳನ್ನು ಮುಗಿಸಿಕೊಂಡು ಏಕಾಂತವಾಸಿಯಾಗಿದ್ದೆ.ಮನಸ್ಸಿನ ಕಳವಳ ನೀಗಿಸಿಕೊಳ್ಳಲೆಂದು ದೇವುಡು ಅವರ ‘ ಮಹಾದರ್ಶನ’ ಕಾದಂಬರಿಯನ್ನು ಓದುತ್ತಿದ್ದೆ.ರಾತ್ರಿ ಹತ್ತುವರೆಯ ಸುಮಾರು ಅಳಿಯ ತ್ರಯಂಬಕೇಶ ಬಂದು ‘ ಸಿದ್ಧೇಶ್ವರ ಸ್ವಾಮಿಗಳು ಹೋದರು’ ಎನ್ನುವ ದುಃಖದ ಸುದ್ದಿಯನ್ನರುಹಿದ.ಪುಸ್ತಕವನ್ನು ಕೆಳಗಿಟ್ಟು ಟಿ ವಿ ಯ ಮುಂದೆ ಬಂದು ಕುಳಿತೆ.ಜ್ಞಾನಯೋಗಾಶ್ರಮದಿಂದ ಸುತ್ತೂರು ಶ್ರೀಗಳು ಮತ್ತಿತರ ಶ್ರೀಗಳು ಹಾಗೂ ಗಣ್ಯರಾಜ್ಯಕಾರಣಿಗಳು,ವಿಜಯಪುರ ಜಿಲ್ಲಾಧಿಕಾರಿಯವರು ಮಾತನಾಡುತ್ತಿರುವ ವಿಷಯವನ್ನು ಟಿವಿಯ ಪರದೆಯಲ್ಲಿ ತೋರಿಸುತ್ತ ಬಿತ್ತರಿಸುತ್ತಿದ್ದರು ಟಿ ವಿ 9 ವಾಹಿನಿಯ ನಿರೂಪಕರು.ಸೋಮವಾರ ಸಂಜೆ 6.05 ನಿಮಿಷಕ್ಕೆ ಸಿದ್ದೇಶ್ವರಸ್ವಾಮಿಗಳವರು ನಿಧನರಾದ ಆ ದೃಶ್ಯಗಳನ್ನು ಕಂಡು ದುಃಖವಾಯಿತು,ಮೈಮನಸ್ಸುಗಳು ಭಾರಗೊಂಡವು.ನನ್ನ ಬದುಕಿನ ಎರಡನೇ ಮಹತ್ವದ ವ್ಯಕ್ತಿತ್ವವನ್ನು ಕಳೆದುಕೊಂಡ ದುಃಖ ಮನಸ್ಸನ್ನು ಕಾಡತೊಡಗಿತು.ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ನಂತರ ನಾನು ಅತಿಯಾಗಿ ಇಷ್ಟಪಡುತ್ತಿದ್ದ,ಗೌರವಿಸುತ್ತಿದ್ದ ಪೂಜ್ಯರೆಂದರೆ ಶ್ರೀಸಿದ್ಧೇಶ್ವರಸ್ವಾಮಿಗಳವರೆ.ಅವರು ನನ್ನ ಗುರುದೇವನಿಗೆ ಆತ್ಮೀಯರಾಗಿದ್ದರು ಎನ್ನುವ ಕಾರಣದಿಂದ ನನಗೂ ಗೌರವಾದರಣೀಯ ಪೂಜ್ಯರಾಗಿದ್ದರು.ಗುರುದೇವ ಶ್ರೀಕುಮಾರಸ್ವಾಮಿಗಳವರ ನಂತರ ನಾನು ಸಾಸ್ಟಾಂಗ ನಮಸ್ಕರಿಸುತ್ತಿದ್ದುದು ಸಿದ್ಧೇಶ್ವರಸ್ವಾಮಿಗಳಿಗೆ ಮಾತ್ರ.ಅವರು ಕೂಡ ನನ್ನನ್ನು ಅಷ್ಟೇ ಪ್ರೀತಿ,ವಾತ್ಸಲ್ಯಗಳಿಂದ ಕಾಣುತ್ತಿದ್ದರು.ಅವರ ದರ್ಶನಕ್ಕೆ ಹೋದಾಗಲೆಲ್ಲ ಘಂಟೆಗಟ್ಟಲೆ ಮಾತನಾಡುತ್ತಿದ್ದರು,ಹರಸಿ- ಹಾರೈಸುತ್ತಿದ್ದರು.ನನ್ನ ಹೊಸಪುಸ್ತಕಗಳು,ವೃತ್ತಿಜೀವನದ ಬಗ್ಗೆ ವಿಚಾರಿಸುತ್ತಿದ್ದರು.ನನ್ನ ಏಳ್ಗೆಯನ್ನು ಸಂಭ್ರಮಿಸುತ್ತಿದ್ದರು.ನನ್ನ ಸಂದೇಹ,ಸಮಸ್ಯೆಗಳಿಗೆ ನಗುಮೊಗದಿಂದ ಉತ್ತರಿಸುತ್ತಿದ್ದರು.ಅಂತಹ ಹಿರಿಯ ಆದರಣೀಯ ಚೇತನರು ಶಿವೈಕ್ಯರಾದುದು ಬೇಸರ,ದುಃಖವನ್ನುಂಟು ಮಾಡಿತ್ತು. ಅಳಿಯ ತ್ರಯಂಬಕೇಶನಿಗೆ ಸಿದ್ಧೇಶ್ವರಸ್ವಾಮಿಗಳವರು ನಮ್ಮ ಮಠಕ್ಕೆ ಬಂದಿದ್ದ ಫೋಟೋಗಳನ್ನು ಕಳಿಸು,ಅವರ ನೆನಪಿನಲ್ಲಿ ಒಂದು ಲೇಖನ ಬರೆಯುವೆ ಎಂದೆ.ಹಳೆಯಫೋಟೋಗಳನ್ನು ಕಳಿಸಿದ ಅಂಬಕೇಶ .’ ತಪೋವನದ ಬೆಳಗು’ ಮಾಸಪತ್ರಿಕೆ ಬಿಡುಗಡೆಯ ಸಮಾರಂಭಕ್ಕೆ ಆಗಮಿಸಿದ್ದ ಸಿದ್ಧೇಶ್ವರಸ್ವಾಮಿಗಳವರ ಹಳೆಯ ಫೋಟೋಗಳನ್ನು ಕಂಡು ದುಃಖಾಶ್ರುಗಳುದುರಿದವು ನನಗರಿಯದಂತೆ.ನೀರುತುಂಬಿಕೊಂಡಿದ್ದವು ಕಣ್ಣುಗಳು.ಖಿನ್ನತೆ ಆವರಿಸಿತ್ತು ಮುಖದಲ್ಲಿ.ಭಾರವಾದ ಮನಸ್ಸು ಸ್ಮರಿಸಿಕೊಳ್ಳತೊಡಗಿತು ಹಿಂದಿನ ಸಂಗತಿಗಳನ್ನು.

ಡಿಸೆಂಬರ್ 17,2002 ನನ್ನ ಬದುಕಿನ ಮಹತ್ವದ,ಮರೆಯಲಾರದ ದಿನಗಳಲ್ಲೊಂದು.ಆ ದಿನ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಗಬ್ಬೂರಿನ ಹೊರವಲಯದಲ್ಲಿರುವ ನಮ್ಮ ತಪೋವನಕ್ಕೆ ಆಗಮಿಸಿ ‘ ತಪೋವನದ ಬೆಳಗು’ ಮಾಸಪತ್ರಿಕೆಯನ್ನು ಬಿಡುಗಡೆ ಮಾಡಿ,ನಮ್ಮನ್ನು ಆಶೀರ್ವದಿಸಿದ್ದರು.ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಜೀವನ,ಸಾಧನೆ- ಸಂದೇಶಗಳ ತತ್ತ್ವಪ್ರಚಾರಕ್ಕಾಗಿ ನಾನು ‘ ತಪೋವನದ ಬೆಳಗು’ ಎನ್ನುವ ಮಾಸಪತ್ರಿಕೆಯನ್ನು ಹೊರತರಲಿರುವ ಸುದ್ದಿಕೇಳಿ ಹರ್ಷಿತರಾಗಿದ್ದ ಶ್ರೀಗಳು’ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ,ಮಾಡಿ’ ಎಂದಿದ್ದರು.’ಅದರ ಬಿಡುಗಡೆ ತಮ್ಮಿಂದಲೇ ಆಗಬೇಕು’ ಎಂದು ಕೋರಿದ್ದೆ.’ ಅವಶ್ಯವಾಗಿ’ ಎಂದು ಮರುಮಾತಿಲ್ಲದೆ ಒಪ್ಪಿಗೆ ಸೂಚಿಸಿದ್ದರಲ್ಲದೆ ದೇಹಾಯಾಸವನ್ನು ಲೆಕ್ಕಿಸದೆ ಗಬ್ಬೂರಿಗೆ ಬಂದು,ಕಾರ್ಯಕ್ರಮದಲ್ಲಿ ಸಂತಸದಿಂದ ಪಾಲ್ಗೊಂಡು ಪತ್ರಿಕೆಯನ್ನು ಬಿಡುಗಡೆ ಮಾಡಿ ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ತತ್ತ್ವಪ್ರಚಾರ ಪ್ರತಿಷ್ಠಾನ’ ಎನ್ನುವ ಶ್ರೀಗುರುಸೇವಾಯೋಗದ ಸಂಸ್ಥೆಯನ್ನು ಉದ್ಘಾಟಿಸಿದ್ದರು ತಮ್ಮ ಅಮೃತಹಸ್ತದಿಂದ.ಆರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಜನಸ್ತೋಮದಲ್ಲಿ ಭಕ್ತಿಯ ತರಂಗಗಳನ್ನೆಬ್ಬಿಸಿದ್ದರು ಈ ಪರಮಾಚಾರ್ಯರು.ಜನೆವರಿ 2003 ರ ‘ ತಪೋವನದ ಬೆಳಗು’ ಮಾಸಪತ್ರಿಕೆಯ ‘ಅಂಬೆಗಾಲಿಟ್ಟ ಮಗುವಿಗೆ ಜ್ಞಾನಯೋಗಿಯ ತಂಬೆಲರ ಹರಕೆ….’ ಎನ್ನುವ ಸಂಪಾದಕೀಯದಲ್ಲಿ ನಾನು ಆ ಅವರ್ಣನೀಯ ಸಮಾರಂಭವನ್ನು ಅಕ್ಷರರೂಪದಲ್ಲಿ ಹಿಡಿದಿಟ್ಟಿದ್ದೇನೆ.’ ಲೋಕಗುರು ಶ್ರೀ ಸಿದ್ಧೇಶ್ವರ ಸ್ವಾಮಿಗಳವರು ಅಂದಿನ ತಮ್ಮ ಅನುಗ್ರಹವಚನದಲ್ಲಿ ಆಡಿದ ಕೆಲವು ಮಾತುಗಳು ;

” ಹೂವು ಚೆಲ್ಲುವ ಕೆಲಸ ಮಾಡುವುದು ಜೀವನದ ಹಿರಿಮೆ.ಹೂವು ಚೆಲ್ಲುತ್ತಿರಬೇಕು; ಮುಳ್ಳು ಚೆಲ್ಲಬಾರದು.ಇತರರು ಮುಳ್ಳು ಚೆಲ್ಲುತ್ತಿದ್ದರೂ ಸಹ ನಾವು ಹೂವು ಚೆಲ್ಲಬೇಕು.ಅದೇ ಜೀವನದ ಶ್ರೇಯಸ್ಸು.ಅಂಥಹ ಹೂವುಗಳನ್ನು ಚೆಲ್ಲಿದ ಬಸವಣ್ಣ…ಬಸವಣ್ಣ ಚೆಲ್ಲಿದ ಹೂವುಗಳು ಇನ್ನೂ ಬಾಡಿಲ್ಲ.ಇನ್ನೂ ಘಮಘಮಿಸುತ್ತಿವೆ.ಒಳ್ಳೆಯ ಮಾತು– ಒಳ್ಳೆಯ ಕೃತಿ ಎಂಬ ಹೂವುಗಳನ್ನು ಚೆಲ್ಲಲು ನಾವು ಕಲಿಯಬೇಕು.

ದೇವರು ನೆರಳು.ಆಸರಿಸಿ ಬಂದವರಿಗೆ ತಂಪು ನೀಡುವುದು ಆತನ ಕೆಲಸ.ಬದುಕಿನ ತಾಪದಿಂದ ಬೆಂದವರು,ನೊಂದವರಿಗೆ ದೇವರ ನೆರಳಡಿ ಪರಮಶಾಂತಿ ಇದೆ.

ದೇವರು ಒಂದೇ,ಎರಡಲ್ಲ.ಮಾನವ ಮತ್ತು ಮತಗಳು ಬೇರೆಯಾದರೂ ಭಗವಂತನೊಬ್ಬನೇ.ದೇವರು ಅವಿನಾಶಿ,ಅನಂತ

ದೇವರ ಇರವನ್ನು ಗುರುತಿಸುವುದೇ ಧರ್ಮ.ದೇವರ ಇರವಿನಲ್ಲಿ ಅರಿವಿನಿಂದ ನಡೆಯುವುದೇ ಸಾರ್ಥಕ ಜೀವನ.
ಜೀವನವೆಂದರೆ ಲೋಪ- ದೋಷಗಳು,ಕುಂದು ಕೊರತೆಗಳು ಸಹಜ.ದೋಷಗಳ ನಡುವೆಯೇ ಬಾಳಿ,ಬದುಕಬೇಕು,ದೋಷಮುಕ್ತರಾಗಬೇಕು.ಅದುವೇ ಸಾರ್ಥಕ ಜೀವನ”

“ಸಾರ್ಥಕ ಜೀವನ” ದ ಕುರಿತು ಒಂದುವರೆ ಘಂಟೆಯವರೆಗೆ ಅದ್ಭುತವಾಗಿ ಮಾತನಾಡಿದ ಅವರ ಅಮೋಘಭಾಷಣವನ್ನು ಮಂತ್ರಮುಗ್ಧವಾಗಿ ಆಲಿಸಿದ ವೇದಿಕೆಯಲ್ಲಿದ್ದ ನಾವುಗಳು ಸೇರಿದಂತೆ ಪ್ರೇಕ್ಷಕ ಜನಸಮೂಹ ಪ್ರಪುಲ್ಲಿತಮನಸ್ಕರಾಗಿದ್ದೆವು,ಸ್ಫೂರ್ತಿಗೊಂಡಿದ್ದೆವು,ಆನಂದಿತರಾಗಿದ್ದೆವು.ಪ್ರವಚನದ ಕೊನೆಯಲ್ಲಿ ” ಹೂವು ಚೆಲ್ಲುವ ಕೆಲಸ ಮಾಡುತ್ತಿದ್ದಾರೆ ಮುಕ್ಕಣ್ಣ ಕರಿಗಾರರು .ಅವರು ಮತ್ತು ಅವರ ಗೆಳೆಯರು ಸ್ಥಾಪಿಸಿದ ಮಹಾತಪಸ್ವಿ ಶ್ರೀಕುಮಾರಸ್ವಾಮಿ ತತ್ತ್ವಪ್ರಚಾರಪ್ರತಿಷ್ಠಾನ ಬೆಳೆಯಲಿ,ಬೆಳೆದು ಅದರ ತಂಪು ನಾಡಿನ ತುಂಬ ಹರಡಲಿ.ಆ ಮೂಲಕ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಜೀವನ ದರ್ಶನ ನಾಡಿನಾದ್ಯಂತ ಹರಡಲಿ” ಎಂದು ಹರಸಿ,ಆಶೀರ್ವದಿಸಿದ್ದರು.ತಪೋವನದ ಬೆಳಗು ಮಾಸಪತ್ರಿಕೆಗೆ ಶ್ರೀರಕ್ಷೆಯಾಗಿದ್ದವರೂ ಸಿದ್ಧೇಶ್ವರ ಸ್ವಾಮಿಗಳೆ.ಅವರ ದರ್ಶನಕ್ಕೆ ಹೋದಾಗಲೆಲ್ಲ ‘ತಪೋವನದ ಬೆಳಗು ‘ಮತ್ತು ಮಹಾತಪಸ್ವಿ ಶ್ರೀಕುಮಾರಸ್ವಾಮಿ ತತ್ತ್ವಪ್ರಚಾರ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ಬಗ್ಗೆ ವಿಚಾರಿಸುತ್ತಿದ್ದರು.ಹತ್ತುಹಲವು ವೈವಿಧ್ಯಮಯ ಕಾರ್ಯ,ಕಾರ್ಯಕ್ರಮಗಳ ಮೂಲಕ ನಾವು ನಡೆಸುತ್ತಿದ್ದ ಗುರುಸೇವೆಯನ್ನು ಕೇಳಿ ಹರ್ಷಚಿತ್ತರಾಗಿ ಹೃದಯತುಂಬಿ ಹರಸುತ್ತಿದ್ದರು.ಅಂತಹ ತಾಯ್ಗರುಳಿನ ಪೂಜ್ಯರನ್ನು ಕಳೆದುಕೊಂಡ ದುಃಖ ಬಾಧಿಸುತ್ತಿದೆ.ನನ್ನ ಗುರುದೇವ ಪೂಜ್ಯ ಶ್ರೀಕುಮಾರಸ್ವಾಮಿಗಳವರ ಪದತಲಗಳಲ್ಲಿ ನಾನಿದ್ದುದು ಕೇವಲ ಮೂರುವರೆವರ್ಷಗಳ ಕಡಿಮೆ ಅವಧಿಯ ಕಾಲ.ಆದರೆ ಶ್ರೀಸಿದ್ಧೇಶ್ವರ ಸ್ವಾಮಿಗಳವರನ್ನು ಇಪ್ಪತ್ತಕ್ಕೂ ಹೆಚ್ಚುಬಾರಿ ಕಂಡು ಅವರ ಅನುಭಾವಾಮೃತವನ್ನುಂಡು ಪರಿಪುಷ್ಟನಾಗಿದ್ದೇನೆ,ಪಾವನನಾಗಿದ್ದೇನೆ.

ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿದ್ದರೂ ಶ್ರೀಸಿದ್ಧೇಶ್ವರಸ್ವಾಮಿಗಳವರು ಸದಾ ನಮ್ಮೊಂದಿಗಿರುತ್ತಾರೆ ಅವರ ಸುಧೆಯಸೊಬಗಿನ ವಾಕ್ಕು – ಉಪದೇಶದಿಂದ.ಲೋಕೋದ್ಧಾರ ಬದ್ಧ ಅವರ ಕಾಯದ ಕಾರ್ಯಮುಗಿದಿರಬಹುದಾದರೂ ಶ್ರೀಸಿದ್ಧೇಶ್ವರಸ್ವಾಮಿಗಳವರ ಲೋಕೋದ್ಧಾರಬದ್ಧ ಆತ್ಮವು ಸತ್ಕಾರ್ಯನಿರತರೆಲ್ಲರ ಮೈಮನಗಳನ್ನು ಸ್ಫೂರ್ತಿಗೊಳಿಸುತ್ತ,ಬಾಳುಗಳನ್ನು ಅರಳಿಸುವ ಕಾರ್ಯ ಮಾಡುತ್ತಿರುತ್ತದೆ ಜಗತ್ತು ಇರುವವರೆಗೆ.ಕೈಲಾಸವಾಸಿಗಳಾದ ಪೂಜ್ಯ ಶ್ರೀಸಿದ್ಧೇಶ್ವರಸ್ವಾಮಿಗಳವರ ದಿವ್ಯವಿಶ್ವಾತ್ಮನೆದುರು ಮೈಮಣಿದು,ಭಕ್ತಿಯ ಪುಷ್ಷಗಳನ್ನರ್ಪಿಸಿ ಅವರ ವ್ಯಕ್ತಿಚಿತ್ರಣದ ಈ ಲೇಖನವನ್ನು ಮಂಗಲಗೊಳಿಸುವೆ.

ಮುಕ್ಕಣ್ಣ ಕರಿಗಾರ

 

About The Author