ಮೂರನೇ ಕಣ್ಣು :  ಪುಣ್ಯಕೋಟಿ’ ಯೋಜನೆಗಾಗಿ ಸರಕಾರಿ ನೌಕರರ ಸಂಬಳದ ವಂತಿಗೆ ಪಡೆಯುವುದು ಸಲ್ಲದು : ಮುಕ್ಕಣ್ಣ ಕರಿಗಾರ

ಸರಕಾರವು ತನ್ನ ಹಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೋಶಾಲೆಗಳಲ್ಲಿ ಹಸುಗಳನ್ನು ಪೋಷಿಸುವ ‘ ಪುಣ್ಯಕೋಟಿ’ ಯೋಜನೆಗೆ ಸರಕಾರಿ ನೌಕರರ ದೇಣಿಗೆಯನ್ನು ಅವರ ಸಂಬಳದಲ್ಲಿ ಕಡಿತಗೊಳಿಸಲು ಆದೇಶಿಸಿದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ’.ಡಿ’ ದರ್ಜೆಯ ನೌಕರರನ್ನು ಹೊರತುಪಡಿಸಿ ಎ ಬಿ ಮತ್ತು ಸಿ ದರ್ಜೆಯ ಸರಕಾರಿ ಅಧಿಕಾರಿಗಳು,ನೌಕರರುಗಳು ಸೇರಿದಂತೆ ನಿಗಮ,ಮಂಡಳಿ,ಪ್ರಾಧಿಕಾರ,ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳ ನೌಕರರ ನವೆಂಬರ್ ತಿಂಗಳ ವೇತನದಲ್ಲಿ ಅವರ ಹುದ್ದೆಯ ಶ್ರೇಣಿಗನುಗುಣವಾಗಿ ವೇತನ ಕಡಿತಗೊಳ್ಳಲಿದೆ.’ ಪುಣ್ಯಕೋಟಿ’ ಯೋಜನೆಗೆ ಸರಕಾರದ ಎ ವೃಂದದ ಅಧಿಕಾರಿಗಳು 11000ರೂಪಾಯಿಗಳು, ಬಿ ವೃಂದದ ಅಧಿಕಾರಿಗಳು 4000ರೂಪಾಯಿಗಳು ಮತ್ತು ಸಿ ವೃಂದದ ನೌಕರರು 400 ರೂಪಾಯಿಗಳ ವಂತಿಗೆಯನ್ನು ನವೆಂಬರ್ ೨೦೨೨ ರ ತಿಂಗಳಿನ ಅವರ ಸಂಬಳದಲ್ಲಿ ನೀಡಬೇಕಿದೆ.ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗವು ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಸರಕಾರಿ ನೌಕರರ ವೇತನದಿಂದ ಒಂದು ಬಾರಿಗೆ ಸೀಮಿತವಾಗಿ ನೌಕರರ ವೇತನದಿಂದ ವಂತಿಗೆ ಕಡಿತಗೊಳಿಸುವಂತೆ ಪತ್ರನೀಡಿ ಈ ಯೋಜನೆಗೆ 100 ಕೋಟಿ ದೇಣಿಗೆ ನೀಡುವ ಪತ್ರ ನೀಡಿದ್ದರು.ರಾಜ್ಯ ಸರಕಾರಿ ನೌಕರರ ಸಂಘದ ಪತ್ರ ಮತ್ತು ಮನವಿಯನ್ನು ಆಧರಿಸಿ ಸರಕಾರವು ಆದೇಶ ಹೊರಡಿಸಿದೆ.

ಸರಕಾರದ ಈ ನಡೆಗೆ ನೌಕರರ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಇಂತಹ ಅಧಿಕಾರ ಕೊಟ್ಟವರು ಯಾರು? ಸಂಘದ ಅಧ್ಯಕ್ಷರಾದ ಷಡಾಕ್ಷರಿ ರಾಜ್ಯದಲ್ಲಿರುವ 107 ಸಂಘಗಳ ಪ್ರತಿನಿಧಿಗಳ ಸಭೆಕರೆದು ಚರ್ಚಿಸಿ,ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ .ಗುರುಸ್ವಾಮಿ ಮತ್ತು ರಾಜ್ಯ ಎಸ್ ಸಿ ಎಸ್ ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರಯ್ಯ ಅಸಮಧಾನ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಚಂದ್ರಶೇಖರಯ್ಯನವರು ಷಡಾಕ್ಷರಿ ಈ ನಿರ್ಧಾರ ಕೈಗೊಳ್ಳುವಾಗ ತಮ್ಮ ಸಂಘಟನೆಯೊಂದಿಗೆ ಸಮಾಲೋಚಿಸಿಲ್ಲ ಎಂದು ಆಕ್ಷೇಪಿಸಿದ್ದಾರೆ.ಎಸ್ ಸಿ ಎಸ್ ಟಿ ನೌಕರರ ಸಂಘದೊಂದಿಗೆ ಸಮಾಲೋಚಿಸದೆ ಅವರ ಪರವಾಗಿ ಷಡಾಕ್ಷರಿ ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ? ಎಸ್ ಸಿ,ಎಸ್ ಟಿ ನೌಕರರುಗಳೆಂದರೆ ಉದಾಸೀನವೋ? ಅಥವಾ ಎಸ್ ಸಿ,ಎಸ್ ಟಿ ನೌಕರರುಗಳು ಷಡಾಕ್ಷರಿ ಹೇಳಿದ್ದಕ್ಕೆಲ್ಲ ಹೂಂಗುಟ್ಟಬೇಕಾದ ದೈನೇಸಿ ಸ್ಥಿತಿಯಲ್ಲಿದ್ದಾರೋ ?

ಮುಂದುವರೆದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಷಡಾಕ್ಷರಿ ಅವರ ಮಾತುಗಳು ಆಶ್ಚರ್ಯಕರವಾಗಿವೆ–” 7 ನೇ ವೇತನ ಆಯೋಗ ರಚಿಸುವ ಮೂಲಕ ನೌಕರರ ಪರ ಸರ್ಕಾರ ನಿಂತಿದೆ.ಅದಕ್ಕೆ ಪೂರಕವಾಗಿ ನಾವೂ ಸ್ಪಂದಿಸಿದ್ದೇವೆ”.ಸರಕಾರ 7 ನೇ ವೇತನ ಆಯೋಗ ರಚಿಸುವುದಕ್ಕೂ’ ಪುಣ್ಯಕೋಟಿ’ ಯೋಜನೆಗೆ ಸರ್ಕಾರಿ ನೌಕರರಿಂದ ವಂತಿಗೆ ಪಡೆಯುವುದಕ್ಕೂ ಎತ್ತಣ ಸಂಬಂಧ? ಅದಕ್ಕು ಇದಕ್ಕೂ ತಳುಕು ಹಾಕುವುದು ಏಕೆ? ಏಳನೇ ವೇತನ ಆಯೋಗ ರಚಿಸಿದ ಮಾತ್ರಕ್ಕೆ ಅದರ ಸೌಲಭ್ಯಗಳು ಸರಕಾರಿ ನೌಕರರಿಗೆ ಸಿಕ್ಕೇಬಿಟ್ಟವು ಎಂದು ಭಾವಿಸಬಾರದು.ಏಳನೇ ವೇತನ ಆಯೋಗ ರಚನೆ ಮಾಡಲೇಬೇಕಿತ್ತು ಇಂದಿಲ್ಲ,ಮುಂದೆ.ಕೇಂದ್ರ ಸರಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳು ಏಳನೇ ವೇತನ ಆಯೋಗ ರಚಿಸಿ,ಅದರ ಶಿಫಾರಸ್ಸುಗಳು ಅನುಷ್ಠಾನ ಮಾಡುತ್ತಿರುವುದರಿಂದ ಕರ್ನಾಟಕ ಸರಕಾರವೂ ಇಂದಿಲ್ಲ ,ನಾಳೆ ಆ ನಿರ್ಧಾರ ಕೈಗೊಳ್ಳುತ್ತಿತ್ತು.ಏಳನೇ ವೇತನ ಆಯೋಗ ರಚನೆ ಸರಕಾರದ ಜವಾಬ್ದಾರಿ,ಅದರಿಂದ ಸರಕಾರವು ಸರಕಾರಿ ನೌಕರರುಗಳಿಗೆ ಉಪಕಾರವನ್ನೇನು ಮಾಡಿಲ್ಲ,ಅದು ಸರಕಾರಿ ನೌಕರರ ಹಕ್ಕು.ಸರಕಾರ ಏನೋ ಮಹದುಪಕಾರ ಮಾಡಿದೆ ಎಂದು ಷಡಾಕ್ಷರಿಯವರು ಬಿಂಬಿಸುವ ಅಗತ್ಯವಿರಲಿಲ್ಲ. ವೇತನ ಕಡಿತಕ್ಕೆ ಒಪ್ಪಿಗೆ ಇಲ್ಲದವರು ‘ ಅಸಮ್ಮತಿ ಪತ್ರ’ ನೀಡಬಹುದು ಎಂದು ಹೇಳಿದ್ದಾರಾದರೂ ಸರಕಾರಿ ಅಧಿಕಾರಿ,ನೌಕರರುಗಳ ಸಂಬಳ ಬಟಾವಡೆ ಅಧಿಕಾರಿಗಳು ಏನೋ ಮಾಡುತ್ತಾರೋ!

ಗೋಸಂರಕ್ಷಣೆ ಪವಿತ್ರಕಾರ್ಯ ನಿಜ,ಆದರೆ ಸರಕಾರಿ ನೌಕರರ ಜೇಬಿಗೆ ಕತ್ತರಿ ಹಾಕಿ ಗೋಶಾಲೆಗಳನ್ನು ಬೆಳೆಸಬೇಕಿರಲಿಲ್ಲ.ಅಷ್ಟಕ್ಕೂ ಸರಕಾರಿ ಗೋಶಾಲೆಗಳ ಸಂಖ್ಯೆ ಎಷ್ಟು? ಮಠ ಮಂದಿರಗಳು ನಡೆಸುತ್ತಿರುವ ಗೋಶಾಲೆಗಳಿಗೆ ಹಣವರ್ಗಾಯಿಸುವದಕ್ಕೆ ಸರಕಾರಿ ನೌಕರರ ಸಂಬಳ ಬೇಕಿತ್ತೆ? ಷಡಾಕ್ಷರಿಯವರಿಗಾಗಲಿ ಅಥವಾ ಸರಕಾರಕ್ಕಾಗಲಿ ಹನ್ನೊಂದು ಸಾವಿರ ಮತ್ತು ನಾಲ್ಕು ಸಾವಿರ ರೂಪಾಯಿಗಳ ಬೆಲೆ ಗೊತ್ತಿರಲಿಕ್ಕಿಲ್ಲ.ಸಂಬಳವನ್ನೇ ನಂಬಿ ಬದುಕುತ್ತಿರುವ ಸರಕಾರಿ ಅಧಿಕಾರಿಗಳು,ನೌಕರರೂ ಇದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು.ಜೀವನ ನಿರ್ವಹಣೆ ಹೊರೆಯಾಗುತ್ತಿರುವ ದಿನಗಳಲ್ಲಿ ಹನ್ನೊಂದುಸಾವಿರ,ನಾಲ್ಕು ಸಾವಿರಗಳನ್ನು ಕಡಿತಗೊಳಿಸುವುದೆಂದರೆ ? ಸರಕಾರವು ‘ ಪುಣ್ಯಕೋಟಿ’ ಯೋಜನೆಗಾಗಿ ಕಾರ್ಪೋರೇಟ್ ಸಂಸ್ಥೆಗಳು,ಉಳ್ಳವರು,ಉದ್ಯಮಿಗಳಿಂದ ದೇಣಿಗೆ- ಕೊಡುಗೆಗಳನ್ನು ಪಡೆಯಬಹುದಿತ್ತು ಬಡಪಾಯಿ ಸರಕಾರಿ ನೌಕರರ ಸಂಬಳದ ಮೇಲೆ ಕಣ್ಣಿಡುವ ಬದಲು.ಷಡಾಕ್ಷರಿ ಅವರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಅವರು ಇರುವುದು ಸರಕಾರಿ ನೌಕರರ ಹಿತರಕ್ಷಣೆಗೆ,ಸರಕಾರಿ ನೌಕರರಿಗೆ ಆರ್ಥಿಕ ಹೊರೆಯಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಅಲ್ಲ.ಗೋಹತ್ಯೆ ನಿಷೇಧ ಮತ್ತು ಗೋಸಂರಕ್ಷಣೆ ಪ್ರಜ್ಞಾವಂತರೆಲ್ಲರ ಕರ್ತವ್ಯ.ಹಾಗಂತ ಬಡಪಾಯಿ ಸರಕಾರಿ ನೌಕರರ ಜೇಬಿಗೆ ಕತ್ತರಿ ಹಾಕಿ ಅವರ ನೊಂದ ಮನಸ್ಸುಗಳಿಂದ ಗೋಶಾಲೆಗಳನ್ನು ಪೊರೆಯಬೇಕು ಎಂದರ್ಥವಲ್ಲ.ಗೋವನ್ನು ಪೂಜ್ಯಭಾವನೆಯಿಂದ ಕಾಣುವವರು ಸ್ವಸಂತೋಷದಿಂದ ಕೊಡಲಿ.ಆರ್ಥಿಕವಾಗಿ ಅನುಕೂಲ ಇರುವವರು ಕೊಡಲಿ.ಬೇಕಿದ್ದರೆ ಸರಕಾರವು ‘ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ’ ಯ ಮಾದರಿಯಲ್ಲಿ ‘ ಗೋಸಂರಕ್ಷಣಾ ನಿಧಿ’ ಯನ್ನು ಸ್ಥಾಪಿಸಿ,ಸಾರ್ವಜನಿಕರು,ಆಸಕ್ತ ಸರಕಾರಿ ನೌಕರರುಗಳಿಂದ ಸ್ವಯಂ ಇಚ್ಛೆಯಿಂದ ನಿಧಿ ಸಂಗ್ರಹಿಸಲಿ.ಅದನ್ನು ಬಿಟ್ಟು ಯಾರೋ ಪತ್ರ ಕೊಟ್ಟರು,ನಾವು ಆದೇಶ ಮಾಡಿದೆವು ಎನ್ನುವುದು ಸರಿಯಾದ ನಿಲುವಲ್ಲ.

About The Author