ನಾನು ಹೆಣವಾದಾಗ : ಡಾ.ಶರಣಪ್ಪ ಗಬ್ಬೂರ್ ಕೋಲಾರ

“ನಾನು ಹೆಣವಾದಾಗ “

ರಚನೆ : ಡಾ. ಶರಣಪ್ಪ ಗಬ್ಬೂರ್
ಕೋಲಾರ

ಈ ಮಾದಲೇ,
ನಾನೇ ತೋರಿದ ತೋಡಿದ ಗೋರಿಯೊಳಗೆ ನನ್ನನ್ನು
ಹೂತುಬಿಡಿ
ಆ ದಿನ ನಿಶಬ್ದ, ಕಾರ್ಮೋಡ
ಓಯಸಿಸ್ ನ ಬಿಸಿಲ್ಗುದುರೆ
ಶುಭ ದಿನದ ಮಳೆಯಿಲ್ಲ………!

ಇದೀಗ ತಾನೇ
ಉಸಿರು ನಿಲ್ಲಿಸಿದ್ದೇನೆ
ಗಟ್ಟಿಯಾದ ಬಿಳಿ
ಖಾದಿ ಬಟ್ಟೆಯಿಂದ
ಬಿಗಿಯಾಗಿ ಸುತ್ತಬೇಡಿ
ಮೂಗಿಗೆ ಹತ್ತಿಯನು
ಒತ್ತಬೇಡಿ
ಸ್ವಲ್ಪ ಉಸಿರಾಡಲು,
ಜಗದ ಜನರ
ಡಾಂಭೀಕತೆನು ಕಾಣಲು
ದಾರದಷ್ಟು ಜಾಗ ಬಿಡಿ…….!

ಉತ್ತರ ದಿಕ್ಕಿನವನು ನಾನು
ಹಣವಿಲ್ಲದೆ ಹೆಣವಾಗಿದ್ದೇನೆ ಇಲ್ಲಿ
ಕೂಡಿಡದ ಕಾಂಚಾಣಕ್ಕೆ ಕನಿಕರವಿಲ್ಲ
ಹೃದಯವೂ ಕೂಡ
ಚಿಲುಮೆಯಂತೆ ನಿಂತು ಹೋಗಿದೆ
ಈಗಾಗಲೇ
ಕವಿತೆ ಮಾತ್ರ ಕಾರಿರುಳು
ಕಣ್ಣೀರು ಸುರಿಸುತ್ತಿದೆ……..!

ಬಿದಿರು ಕಂಬಗಳಿಗೆ
ಬಿಗಿಯಬೇಡಿ
ತೆಳುವಾಗಿದ್ದೇನೆ
ಜೆರಾಕ್ಸ್, ಎಕ್ಸರೆ ಗಳಂತೆ,
ಸ್ವಲ್ಪ ಮೆತ್ತಗೆ
ಎದೆಯೊಳಗಿನ ಎಲುಬುಗಳು
ಪುಡಿಪುಡಿಯಾಗಿ
ಬೆಂಕಿಗೆ ಆಹುತಿಯಾಗುತ್ತವೆ
ಚಿಕ್ಕ ಕರುಳು ಕೊರಳಿಗೆ ಬಂದು ಬೇಡುತ್ತಿದೆ
ಮಮತೆ ಸಮತೆ ಕರುಣೆಗಾಗಿ
ಕ್ರಾಂತಿ ಬಟ್ಟೆ ತೊಟ್ಟವನೆಂದು…….!

ನಾಲ್ಕು ಜನ
ಭಾರ ಹೊರುವಷ್ಟು
ತೂಕವಿಲ್ಲ
ಭುಜಕೊಟ್ಟು ಸುಸ್ತಾಗಬೇಡಿ
ಪೃಥ್ವಿಯ ಮೇಲೆ ಹಾಗೆಯೇ ಇರಿಸಿ
ಹೊತ್ತೊತ್ತಿಗೆ ಜಲಚರಗಳಿಗೆ
ಆಹಾರವಾಗಲು ಇಷ್ಟಪಡುತ್ತೇನೆ……!

ಬಿಸಿ ನೀರಿನಿಂದ
ಮೈ ತೊಳೆಯಬೇಡಿ
ನನಗಿಷ್ಟವಾದ
ಸಂತೂರು ಲಕ್ಸ್ ಸುಗಂಧ ದ್ರವ್ಯಗಳನ್ನು ಹಾಕಬೇಡಿ
ಮತ್ತೊಮ್ಮೆ ಈ ಹುಸಿಯಾದ
ಹಸಿ ತೊಗಲಿಗೆ
ಗಾಯಗೊಳಿಸಬೇಡಿ
ಮತ್ತೆ ಮತ್ತೆ ರಣಬಿಸಿಲಲ್ಲಿ
ಒಣಗಿ ಹೋಗಲಿ ಬಿಡಿ
ದೇಹ ಹಗುರಾದಾಗ
ಹೊತ್ತೊಯ್ಯಿರಿ
ಬರೀ ಈಗಲೂ ಐವತ್ತು ಕೆ.ಜಿ ಅಷ್ಟೇ…….!

ಶೃಂಗರಿಸಬೇಡಿ
ಜಾಜಿ ಮಲ್ಲಿಗೆ ಸಂಪಿಗೆಗಳಿಂದ
ಈ ಪುಟ್ಟ ಎದೆಗೂಡಿನ
ಕಪಾಟಿಗೆ
ಬೀದಿಯಲಿ ಬಿದ್ದು ಕೊಳೆತು ಹೋಗಿ ಕೊಳವೆ ಕಾಲುವೆಯಲಿ ಕೊಚ್ಚಿ ಹೋಗಲಿ ಬಿಡಿ
ಇಲ್ಲದಿದ್ದರೆ ಗಾಳಿಯಲ್ಲಿ
ಬೂದಿಯಾಗಿ ಹಾರಿ ಹೋಗಲಿ……..!

ಭೂಮಿಯ ಕೇಂದ್ರಗೋಳಕ್ಕೆ ತಳ್ಳಬೇಡಿ
ಮಧ್ಯದ ಹೊರಕೇಂದ್ರದಲ್ಲಿ
ಮಲಗಿಸಿ
ಹುಳು- ಉಪ್ಪಡಿಯಾಗಿ
ಯೋಗಿ ಅನ್ನದಾತನ
ಸ್ನೇಹಿತನಾಗಿ
ಜನ್ಮ ತಾಳುತ್ತೇನೆ
ಮತ್ತೊಮ್ಮೆ…….!

ಹಾಲೆರೆಯಬೇಡಿ
ಬದುಕಿನುದ್ದಕ್ಕೂ ನೀರು ಹಾಕದ
ಮುಟ್ಟದ ನಿಮ್ಮ ಕೈಗಳಿಂದ
ಮೈ ಮಡಿ-ಮೈಲಿಗೆಗಳೆಂದು
ದೇವಾಲಯ ಪೂಜಿಸಲು ಬಿಡದ
ನೀವು ಈಗ ಎಳನೀರು ಹೂವು
ಚೆಲ್ಲಿದರೇನು ಫಲ……..!
ನಾನು ಹೆಣವಾದಾಗ

ನನಗೇಕೆ ?
ಈ ಹಾರ-ತುರಾಯಿಗಳು
ನಾನಾ ತರಹ ವೆಜ್
ನಾನ್ ವೆಜ್ ಗಳು
ಹಣ್ಣು ಹಂಪಲಗಳು
ಪ್ರಾಣಿ-ಪಕ್ಷಿಗಳಿಗೆ ನೀಡಿ
ಅವು ಸ್ಮರಿಸುತ್ತವೆ………..!

ಬೈಗುಳದ ಬಂಧನಗಳು
ಕಟೆಕಟೆಯಲಿ ಕಟ್ಟಿ ಹಾಕಿವೆ
ತಲಾ ಒಂದೊಂದು ಕೈಗಳಿಂದ
ಕಂಗಳಿಂದ ಹಾಕಿದ ವರಗಳೆಷ್ಟೋ ?
ಸಶ್ಮಾನದ ಶಾಪಗಳೆಷ್ಟೋ ? ನಾನರಿಯೆ……….!

ಒಂಟಿ ಜೀವಕ್ಕೆ ನೆಂಟರಿಲ್ಲ
ಊರ ಬಾಗಿಲದ ಮುಂದೆ
ಸುಳ್ಳಿನ ನಾಟಕ ಕಂಪನಿಗಳು
ಹೆಣ್ಣಿನ ನವರಸಗಳು
ಮುಖವಾಡದ ನೃತ್ಯ ಮಾಡುತ್ತಿವೆ
ಹೌಹಾರಿದ ಅಂಗಾಂಗಳಿಂದ……….!

ಗಂಟೆ ಜಾಗಟೆ ತಮಟೆ
ಶಂಕನಾದಗಳಲ್ಲಿ
ಆಳರಸರ ಬರೀ
ಹರಟೆ ತಮಾಸೆಗಳು ದಾರಿಯುದ್ದಕ್ಕೂ
ಕರುಳು ಕೂಡಿಸುವ
ಪನ್ನೀರು ಒಂದೆಡೆ
ಅಲ್ಲಲ್ಲಿ ಮಾತೆಯರ
ಮೊಸಳೆ ತಣ್ಣೀರು
ನಾನು ಹೋಗುವ
ಹಾದಿ-ಬೀದಿಗೆ……….!

ನನ್ನ ಹೆಣದ ಮೇಲೆ
ತುಳಸಿ ನೆಡಬೇಡಿ
ನಾನು ಬುದ್ಧನ
ವೃಕ್ಷದ ಕೆಳಗೆ
ಮಗುವಾದವನು………!

ಮೆರವಣಿಗೆ ಬೇಕಾಗಿಲ್ಲ
ನನ್ನಪ್ಪ ಇಲ್ಲದ ಈ
ಗಳಿಗೆ- ಮನೆಗಳಲ್ಲಿ
ಕುಂಕುಮ ಅರಿಶಿನ ಅಲಂಕಾರ
ನನ್ನಮ್ಮನ ಹಣೆಗಿಟ್ಟು
ಬದುಕಲು ಬಿಡಿ……..!

ಕಾಯ ಕಳೆದೋಗಿದೆ
ಕಾಯಿ ಬಾಳೆಗಳೇಕೆ ?
ಹೂತಿಟ್ಟ ಮೇಲೆ
ಊಟ ಮಾಡುವ ನಿಮ್ಮ
ಸಂಸ್ಕೃತಿ ಸತ್ತು ನಾರುತ್ತಿದೆ
ಈಗೀಗ……..!

ನೆಲದ ಮೇಲೆ ಅನ್ನವನ್ನು
ವ್ಯರ್ಥವಾಗಿ ಹರಡಬೇಡಿ
ಹಸಿದ ಉದರಕ್ಕೆ ಕಣದ
ರಾಶಿಯಾಗಿ ಬೇಯಿಸಿ
ಹಾಕುವ ಮಾನವೀಯ
ಮಡಿಕೆ- ನೀರ್ಕುಡಿಯಾಗುತ್ತೇನೆ……..!

ಛಂದವಿರದ ಜೀವವಿರದ
ಈ ಅಂಗಳದ ಅಂಗಕ್ಕೆ
ಗಂಧದ ಕಡ್ಡಿ, ಗುಡಿಗಳೇತಕೆ ?
ಬಡವರ ಮನೆಯ ಅಳಸಿದ ಅಗುಳಿನ ವಾಸನೆ ಮರೆಮಾಚಲಿ ………..!

ಈ ಮೊದಲು ಬದುಕಿದ್ದಾಗ
ಅಹಂದಿಂದ ಎದ್ದು-ಬಿದ್ದಾಗ
ಕುರಿ-ಕೋಳಿ-ಮೇಕೆ ಚರ್ಮಗಳ
ಸುಲಿದು ಮಾಂಸಹಾರಿಯಾದಾಗ
ರಕ್ತ ಕುಡಿದು ಸವಿದ ಸವಿಯಾದ
ಸ್ಮೃತಿಯಿದೆ ಇಂದಿಗೂ
ತಿಂದದ್ದು ಮಾತ್ರ
ಅಷ್ಟಕಷ್ಟೇ
ಬರೀ ನೀರು ಸಾರು ಮಾತ್ರ……..!

ಪಾಪದ ಬದುಕಿನ ಈ ಪುಟಕ್ಕೆ
ಸಮಾಧಿ ಕಟ್ಟಿಸಬೇಡಿ
ಶಾಪ ಹಾಕಿ, ಇಡಿ ಮಣ್ಣನ್ನು
ತೂರಿಬಿಡಿ, ದೂರ ಹೋಗಿ
ಹಾಗೆಯೇ ನೋಡುತ್ತಾ ನಿಲ್ಲಿ
ಕಾಗೆ ಹದ್ದು ನಾಯಿಗಳು
ನನ್ನ ಮೋಹದ ದೇಹವನ್ನು
ಚುಚ್ಚಿ-ಚುಚ್ಚಿ, ಕಚ್ಚಿ ರುಚಿಯನು
ಸವಿಯುತ್ತಾ ನಾಲಿಗೆ
ಚಪ್ಪರಿಸಲು ಬಿಡಿ……..!

ನಾನು ನತದೃಷ್ಟ….!
ಹೆತ್ತು-ಹೊತ್ತವರು
ಎಳ್ಳುನೀರು ಬಿಟ್ಟಾಗ
ಒಂದಿಡೀ ಮಣ್ಣು
ಹಾಕಿದವನಲ್ಲ
ಬೈಗುಳದ ಮಣ್ಣು
ತೂರಿ ದೂರಿದ್ದೇ ಜಾಸ್ತಿ
ಇದೀಗ ತಕ್ಕಶಾಸ್ತಿ
ಪ್ರಾಯಶ್ಚಿತ್ತ ಪಡುತ್ತಿದ್ದೇನೆ
ಈಗ ನನ್ನಿಂದಲೂ
ಯಾರು ಬರಬೇಡಿ
ಹೊರಳಾಡಿ ಉರುಳಾಡಿ
ಹೋಗುತ್ತಿದ್ದೇನೆ
ಕುಣಿಯೊಳಗೆ ಕಸವಾಗುತ್ತಿದ್ದೇನೆ
ಮಣ್ಣಲ್ಲಿ ಮಣ್ಣಾಗುತ್ತಿದ್ದೇನೆ
ಕಾಡ ಕವಿತೆಯ ಕತ್ತಲೆಯೊಳಗೆ ಕಾನನದ ಏಕಾಂತದೊಳಗೆ………!

ಇದು,
ನನ್ನ ಕೊನೆಯ ಯಾತ್ರೆ
ಊರಿನವರಿಗೆ ಜವ್ವನದ ಜಾತ್ರೆ
ಅಂದ ಹಾಗೆ
ಬೀರು-ಬ್ರಾಂಡಿ, ಸೇಂದಿ-ಸರಾಯಿ
ಗಳನ್ನು ಸೇವಿಸಿ
ಹೆಜ್ಜೆ-ಗೆಜ್ಜೆ- ಕೋಲಾಟಗಳೊಂದಿಗೆ
ಕುಣಿದು ಕುಪ್ಪಳಿಸಬೇಡಿ ದಯವಿಟ್ಟು
ನಾನು ಬರೀ ನೀರು ಕುಡಿದವನು……..!

ರಚನೆ : ಡಾ. ಶರಣಪ್ಪ ಗಬ್ಬೂರ್
ಕೋಲಾರ

About The Author