ಯಾದಗಿರಿ ಜಿಲ್ಲಾ ಪಂಚಾಯಿತಿ ಸಿ ಇ ಓ ಹುದ್ದೆ ಖಾಲಿ : ಆಡಳಿತ ಅಭಿವೃದ್ಧಿ ಕುಂಠಿತ ?

     ಬಸವರಾಜ ಕರೆಗಾರ

     * ಯಾದಗಿರಿ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಹುದ್ದೆ ಕಳೆದ ಮೂರು ತಿಂಗಳಿನಿಂದಲೂ ಖಾಲಿ ಇದ್ದು, ಜಿಲ್ಲಾ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಹಲವಾರು ಅಭಿವೃದ್ಧಿ ಕಾರ್ಯಗಳು ಮತ್ತು ಇತರ ಇಲಾಖೆಗಳ ಕೆಲಸಗಳು ಸಾರ್ವಜನಿಕರ ಕೆಲಸಗಳು ಕುಂಠಿತಗೊಂಡಿವೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇತ್ತೀಚೆಗೆ ಸಂಘಟನೆಗಳು ಕೂಡ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ನೇಮಕ ಮಾಡುವಂತೆ ಒತ್ತಾಯಿಸಿವೆ.

* ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಇಲಾಖೆಗಳು ಬರುತ್ತಿದ್ದು, ಎಲ್ಲಾ ಇಲಾಖೆಗಳ ನಿರ್ವಹಿಸುವುದು ಜಿಲ್ಲಾ ಪಂಚಾಯತಿಯ ಕರ್ತವ್ಯವಾಗಿದೆ. ಅಂತಹ ಮಹತ್ವದ ಜಿಲ್ಲಾ ಪಂಚಾಯಿತಿಯ ಜವಾಬ್ದಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಉಪ ಕಾರ್ಯದರ್ಶಿಗಳ ಮೇಲಿರುತ್ತದೆ. ಈ ಎರಡು ಹುದ್ದೆಗಳನ್ನು ಯಾದಗಿರಿ ಜಿಲ್ಲೆಯಲ್ಲಿ ಉಪಕಾರ್ಯದರ್ಶಿಯವರು ಒಬ್ಬರೇ ನಿರ್ವಹಿಸುತ್ತಿರುವುದು ದುರದೃಷ್ಟಕರ.

* ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹುದ್ದೆಯಲ್ಲಿ ಐಎ ಎಸ್ ಅಧಿಕಾರಿಗಳೇ ಹೆಚ್ಚಾಗಿ ಕಾರ್ಯನಿರ್ವಹಿಸುವರು. ಮತ್ತು ಕೆಎಎಸ್ ಹಿರಿಯ ಅಧಿಕಾರಿಗಳು ಅಥವಾ ಐಎಎಸ್ ಪದೋನ್ನತಿ ಹೊಂದಿದವರನ್ನು ಸರಕಾರ ನೇಮಿಸುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಪ್ರಭಾರಿಗಳನ್ನಾಗಿ ಸರಕಾರವೇ ಕೆಎಎಸ್ ಹುದ್ದೆಯಲ್ಲಿರುವವರನ್ನು ಕೆಲವು ದಿನಗಳ ಕಾಲ ಪ್ರಭಾರಿಯಾಗಿ ನೇಮಿಸುತ್ತದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಉಪ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿ ಬಂದಿರುವ ಅಧಿಕಾರಿಗಳೇ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಕಳೆದ ಮೂರು ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಸರಕಾರದ ಗಮನಕ್ಕಿದ್ದರೂ ಯಾಕೆ ಉನ್ನತ ಅಧಿಕಾರಿಗಳನ್ನು ನೇಮಕ ಮಾಡುತ್ತಿಲ್ಲ ಅಥವಾ ರಾಜಕೀಯ ಪ್ರಭಾವದಿಂದ ಈ ರೀತಿಯಾಗಿ ಸರಕಾರ ನಡೆದುಕೊಳ್ಳುತ್ತಿದೆಯೋ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

* ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದೆ. ಹಲವಾರು ಯೋಜನೆಗಳು ಜಿಲ್ಲೆಯಲ್ಲಿ ಜಾರಿಗೆ ಬಂದಿವೆ. ಈ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕಾದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸರಕಾರದ ಕರ್ತವ್ಯವಾಗಿದೆ.

* ಸಾರ್ವಜನಿಕರು ಜಿಲ್ಲಾ ಪಂಚಾಯಿತಿಗೆ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸರಕಾರದ ಹಲವು ಕರ್ತವ್ಯದಲ್ಲಿ ನಿರ್ವಹಣೆಯಲ್ಲಿರುವದರಿಂದ ಕೆಲವು ಸಾರಿ ಕಚೇರಿಯಲ್ಲಿ ಗೈರಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಉಪ ಕಾರ್ಯದರ್ಶಿಗಳ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಉಪ ಕಾರ್ಯದರ್ಶಿಗಳೇ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಕಾರಣ ಹಲವಾರು ಸಾರ್ವಜನಿಕ ಸಮಸ್ಯೆಗಳ ನಿವಾರಣೆ,ಹಲವು ಇಲಾಖೆಗಳ ಕಡತಗಳ ವಿಲೇವಾರಿ ಹೀಗೆ ಹಲವು ಸಮಸ್ಯೆಗಳು ಉದ್ಭವಿಸುವುದು ಸಹಜ.

*  ಜಿಲ್ಲೆಯಲ್ಲಿ ಮೂರು ತಿಂಗಳಾದರೂ ಯಾಕೆ ಸರಕಾರ ಜಿಲ್ಲಾ ಪಂಚಾಯಿತಿಯಲ್ಲಿರುವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹುದ್ದೆಯನ್ನು ನೇಮಿಸಿಲ್ಲ ಎಂದು ಗೊತ್ತಾಗುತ್ತಿಲ್ಲ ?.ಇದರಿಂದ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.ಹಲವು ಸಂಘಟನೆಗಳು ಮತ್ತು ಸಾರ್ವಜನಿಕರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸಿಇಒ ನೇಮಕಾತಿಗಾಗಿ ಒತ್ತಾಯಿಸುತ್ತಿವೆ. ಸಾರ್ವಜನಿಕರ ಒತ್ತಡಕ್ಕೆ ಮಣಿದು ಆದಷ್ಟು ಬೇಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹುದ್ದೆ ನೇಮಕ ಮಾಡುತ್ತದೆಯೋ ?, ಇಲ್ಲ ಹಾಗೆಯೇ ಮುಂದಿನ ವಿಧಾನಸಭಾ 2023 ರ ಚುನಾವಣೆಗೆವರೆಗೂ ಎರಡು ಹುದ್ದೆಗಳನ್ನು ಒಬ್ಬರೆ ನಿರ್ವಹಿಸಿಕೊಂಡು ಹೋಗುವುರೋ ? ಕಾದು ನೋಡಬೇಕಿದೆ ?.

 

”  ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಎರಡು ಹುದ್ದೆಗಳನ್ನು ಒಬ್ಬರೇ ನಿಭಾಯಿಸುವುದರಿಂದ, ಆರು ತಾಲೂಕುಗಳ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಸಾರ್ವಜನಿಕರು ಸಮಸ್ಯೆಗಳನ್ನು ತೆಗೆದುಕೊಂಡು ಜಿಲ್ಲೆಗೆ ಆಗಮಿಸಿದಾಗ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಸರ್ಕಾರದ ವಿಡಿಯೋ ಕಾನ್ಫರೆನ್ಸ್ ಮತ್ತು ಇತರ ಸಭೆ ಸಮಾರಂಭದಲ್ಲಿ ಕಾರ್ಯನಿರತರಾಗಿದ್ದು, ಸಾರ್ವಜನಿಕರಿಗೆ ಸಿಗುತ್ತಿಲ್ಲ. ಆದ್ದರಿಂದ ಸರಕಾರವು ಆದಷ್ಟು ಬೇಗ ಮುಖ್ಯ ಕಾರ್ಯನಿರ್ವಾಹಣ ಅದಿಕಾರಿ ಹುದ್ದೆಯನ್ನು ಭರ್ತಿ ಮಾಡಿ ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಡಬೇಕು “

ಐಕೂರು ಅಶೋಕ
ಜಿಲ್ಲಾಧ್ಯಕ್ಷರು
ವರ್ತೂರು ಪ್ರಕಾಶ್ ಯುವ ಘರ್ಜನೆ ಯಾದಗಿರಿ

About The Author