ಗಬ್ಬೂರು:ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸದಲ್ಲಿ ಪ್ರತಿವರ್ಷ ಯುಗಾದಿಯಂದು ಮಹಾಶೈವ ಧರ್ಮಪೀಠದಲ್ಲಿ ಕಾಲಜ್ಞಾನದ ಕಾರಣಿಕ ನುಡಿಗಳು ಹೊರಹೊಮ್ಮುತ್ತವೆ.ಈ ವರ್ಷದ ಶುಭಕೃತ್ ಸಂವತ್ಸರದ ಯುಗಾದಿಯ ದಿನವಾದ ಇಂದು ಮಹಾಶೈವ ಧರ್ಮಪೀಠದಲ್ಲಿ ಹೊರಹೊಮ್ಮಿದ ೨೦೨೨ನೇ ವರ್ಷದ ಕಾಲಜ್ಞಾನ,ಕಾರಣಿಕ ನುಡಿ.
ಶುಭವ ತಂದೀತು ಶುಭಕೃತ್.ಮೋಡಗಳು ಕರೆದಾವು,ನದಿಗಳು ತುಂಬಿ ಹರಿದಾವು,ಕಾಡೀತು ಅತಿವೃಷ್ಟಿ.ಗುಡುಗೀತು ನಭ,ನಡುಗೀತು ನೆಲ. ಪಶುಪತಿಯು ಪೊರೆದಾನು ದನಕರುಗಳಾದಿ ಪಶುಸಂಕುಲವ .ಒಕ್ಕಲು ಮಕ್ಕಳ ಮುಖದಲ್ಲಿ ಮೂಡೀತು ನಗೆ.ದುಡಿವವರಿಗೆ ಬೆಲೆ,ದುಡಿಯದವರಿಗೆ ಇಲ್ಲ ನೆಲೆ.ಶಿಷ್ಟರಿಗೆ ಒಳಿತಾಗುವ ದುಷ್ಟರಿಗೆ ಕೇಡಾಗುವ ಕಾಲ.
ತಂಟೆ ತಕರಾರುಗಳುಂಟು ರಾಜಕಾರಣದಿ. ಹಾವು ಮುಂಗುಸಿಗಳಂತೆ ಹಗೆಸಾಧಿಸುವರು,ವಿಪ್ಲವಗಳೇಳುವವು.ಯುದ್ಧದ ಫಲ ಕಾಡೀತು.ದುರ್ಜನರ ಕಾಟ ಹೆಚ್ಚೀತು.ತಲೆಯಾಳುಗಳುದುರುವವು.ಅಕಾಲಫಲ ತಿನ್ನಲಾಗದು.ಒಳಿತು ಹೆಚ್ಚಿ ಕೆಡುಕುಕಡಿಮೆಯಾದೀತು ಶುಭಕೃತ್ ಸಂವತ್ಸರದಿ.