ಮೂರನೇ ಕಣ್ಣು : ಮಲೆನಾಡು, ಮಲೆನಾಡೇ ಆಗಿರಲಿ ,’ ಕೆಳದಿ ಕರ್ನಾಟಕ’ ಆಗುವುದು ಬೇಡ : ಮುಕ್ಕಣ್ಣ ಕರಿಗಾರ

ಮಲೆನಾಡಿನ ಹೆಸರನ್ನು ‘ ಕೆಳದಿ ಕರ್ನಾಟಕ’ ಎಂದು ಬದಲಿಸುವಂತೆ ಸರ್ಕಾರಕ್ಕೆ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಪತ್ರ ಬರೆದಿರುವ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದೆ.ಸರ್ಕಾರವು ಹೈದರಾಬಾದ್ ಕರ್ನಾಟಕವನ್ನು’ ಕಲ್ಯಾಣ ಕರ್ನಾಟಕ’ ಮತ್ತು ಮುಂಬೈ ಕರ್ನಾಟಕವನ್ನು ‘ ಕಿತ್ತೂರು ಕರ್ನಾಟಕ’ ಎಂದು ಘೋಷಿಸಿದಂತೆ ಮಲೆನಾಡು ಪ್ರದೇಶವನ್ನು ‘ ಕೆಳದಿ ಕರ್ನಾಟಕ’ ಎಂದು ಘೋಷಿಸಲು ಒತ್ತಾಯಿಸಿ,ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಆದರೆ ಇದರ ಅಗತ್ಯವಿಲ್ಲ ಮತ್ತು ಇಂತಹ ಸಲಹೆಯು ಸ್ವೀಕಾರಾರ್ಹವಾದುದಲ್ಲ.ಹೈದರಾಬಾದ್ ಕರ್ನಾಟಕ,ಮುಂಬೈ ಕರ್ನಾಟಕಗಳ ಹೆಸರು ಬದಲಾವಣೆಯ ಉದ್ದೇಶವೇ ಬೇರೆ ಮತ್ತು ಅದು ಅನಿವಾರ್ಯವಾಗಿತ್ತು ಕೂಡ.ಹೈದರಾಬಾದ್ ಕರ್ನಾಟಕ,ಮುಂಬೈ ಕರ್ನಾಟಕ ಎನ್ನುವ ಹೆಸರುಗಳು ದಾಸ್ಯದ ಸಂಕೇತವಾಗಿದ್ದವು,ಸ್ವಾಭಿಮಾನಿ ಕನ್ನಡಿಗರನ್ನು ಕೆರಳಿಸುತ್ತಿದ್ದವು.ಕನ್ನಡ ಸತ್ತೆಯ,ಸಾರ್ವಭೌಮತೆಯ ಕುರುಹಾಗಿ ಹೈದರಾಬಾದ್ ಕರ್ನಾಟಕವನ್ನು ‘ ಕಲ್ಯಾಣ ಕರ್ನಾಟಕ’ ವೆಂದು ಮತ್ತು ಮುಂಬೈ ಕರ್ನಾಟಕವನ್ನು ‘ ಕಿತ್ತೂರು ಕರ್ನಾಟಕ’ ವೆಂದು ಹೆಸರು ಬದಲಾಯಿಸಲಾಗಿದೆ.ಆದರೆ ಮಲೆನಾಡು ಸಹಸ್ರಾರು ವರ್ಷಗಳಿಂದ ಅಖಂಡ ಕರ್ನಾಟಕದ ಹೆಮ್ಮೆಯ ಪ್ರದೇಶವಾಗಿ,ಕನ್ನಡ ಸಂಸ್ಕೃತಿಯನ್ನು ರೂಪಿಸಿದ ತಪೋಭೂಮಿಯಾಗಿ ಪ್ರಸಿದ್ಧಿ ಪಡೆದಿದೆ.ದಟ್ಟವಾದ ಕಾಡು,ಮುಗಿಲೆತ್ತರದ ಬೆಟ್ಟಗಳ ಶ್ರೇಣಿಯ ಮಲೆನಾಡಿಗೆ ಅದರದೆ ಆದ ವಿಶಿಷ್ಟತೆ ಇದೆ,ಅನನ್ಯತೆ ಇದೆ.ಕುವೆಂಪು ಅವರಂತಹ ಯುಗಕವಿಯನ್ನು ರೂಪಿಸಿದೆ ಮಲೆನಾಡು. ಮಹಾಕವಿ ಕುವೆಂಪು ಅವರ ಎಲ್ಲ ಕೃತಿಗಳ ಹಿನ್ನೆಲೆ,ಸತ್ತ್ವವಾಗಿದೆ ಮಲೆನಾಡು. ‘ಕಾನೂರು ಹೆಗ್ಗಡತಿ’ ಮತ್ತು ‘ ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಗಳು ಮಲೆನಾಡ ಸಂಸ್ಕೃತಿಯ ರಾಮಾಯಣ,ಮಹಾಭಾರತಗಳು.ಕೆಳದಿ ಸಂಸ್ಥಾನದ ನೆನಪಿನ ಕಾರಣದಿಂದಾಗಿ ಮಲೆನಾಡಿನ ಹೆಸರನ್ನು ಬದಲಿಸ ಹೊರಟರೆ ಅದು ಮಲೆನಾಡ ಸಂಸ್ಕೃತಿಗೆ ಗೈಯ್ಯುವ ಅಪಚಾರವಾಗುತ್ತದೆ.ಕುವೆಂಪು ಅವರು ಮಾತ್ರವಲ್ಲ ಪೂರ್ಣಚಂದ್ರ ತೇಜಸ್ವಿ,ಯು ಆರ್ ಅನಂತಮೂರ್ತಿ ಮತ್ತು ಗೋಪಾಲಕೃಷ್ಣ ಅಡಿಗರುಗಳಂತಹ ಧೀಮಂತ ಪ್ರತಿಭೆಗಳು ಬಂದಿದ್ದು ಮಲೆನಾಡಿನ ಒಡಲಿನಿಂದ.ಶಾಂತವೇರಿ ಗೋಪಾಲಗೌಡರಂತಹ ಸಮಾಜವಾದಿಗಳನ್ನು ಕೊಟ್ಟಿದ್ದು ಮಲೆನಾಡು.ನಾಲ್ವಡಿ ಕೃಷ್ಣರಾಜ ಒಡೆಯರಂತಹ ಹಿಂದುಳಿದ ವರ್ಗಗಳ ಉದ್ಧಾರಕ ಅರಸರನ್ನು ಕೊಟ್ಟಿದ್ದು ಮಲೆನಾಡು.ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕವನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಮೈಸೂರು ದಸರಾ ಉತ್ಸವದ ಕಾರಣಳಾದ ಕರ್ನಾಟಕದ ನಾಡದೇವಿ ಚಾಮುಂಡೇಶ್ವರಿಯ ನೆಲೆಯೂ ಮಲೆನಾಡು.ವಚನಚಳುವಳಿಯ ವೈಚಾರಿಕ ಕ್ರಾಂತಿಯನ್ನು ದಕ್ಷಿಣದಲ್ಲಿ ಪಸರಿಸಿದ,ಸರ್ವಜಾತಿಯವರಿಗೆ ಶಿವಪಥವನ್ನು ತೆರೆದಿಟ್ಟ ಮಲೆಮಹದೇಶ್ವರರ ತಪೋಭೂಮಿ,ಕರ್ಮಭೂಮಿ ಮಲೆನಾಡು.ಮಂಟೆಸ್ವಾಮಿಯ ಲೀಲಾಭೂಮಿ ಮಲೆನಾಡು. ಕನ್ನಡಿಗರ ಜೀವ ನದಿ ಕಾವೇರಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಮಹತ್ವದ ಕೊಡುಗೆ ನೀಡಿದೆ; ಅಗಸ್ತ್ಯರಂತಹ ಮಹಾನ್ ತಪಸ್ವಿಗಳನ್ನು ತನ್ನೆಡೆಗೆ ಸೆಳೆದ ಸತ್ತ್ವಭೂಮಿ ಇದು.ಋಷ್ಯಶೃಂಗರಂತಹ ತಪಸ್ವಿಗಳ ತಪೋಭೂಮಿ ಇದು.ಆದಿ ಶಂಕರಾಚಾರ್ಯರು ಮೊದಲ ಆಮ್ನಾಯ ಪೀಠ ಸ್ಥಾಪಿಸಿದ ಶೃಂಗೇರಿ ಶಾರದಾಪೀಠ ಇರುವ ಸನಾತನ ಭಾರತದ ಸತ್ತ್ವಭೂಮಿ ಇದು.ಇಂತಹ ಸಾಕಷ್ಟು ವೈಶಿಷ್ಟ್ಯ,ವಿಶೇಷತೆ,ವೈಭವಗಳನ್ನು ಹೊಂದಿರುವ ಮಲೆನಾಡಿನ ಹೆಸರನ್ನು ಕೆಳದಿ ಕರ್ನಾಟಕ ಎಂದು ಬದಲಿಸುವುದು ಬೇಡ; ಮಲೆನಾಡು ಮಲೆನಾಡಾಗಿಯೇ ಉಳಿಯಲಿ.ಕನ್ನಡಕ್ಕೆ,ಕರ್ನಾಟಕ ಸಂಸ್ಕೃತಿಗೆ ಕೋಡುಮೂಡಿಸಿದ ಮಲೆನಾಡು ತನ್ನ ಅತಿವಿಶಿಷ್ಟತೆಯನ್ನು,ಅನನ್ಯತೆಯನ್ನು,ನಾಡಸಂಸ್ಕೃತಿ ರೂಪಿಸಿದ ಹಿರಿಮೆ ಗರಿಮೆಗಳನ್ನುಳ್ಳ ಮಲೆನಾಡ ಕರ್ನಾಟಕವಾಗಿಯೇ ಮುಂದುವರೆಯಲಿ.ಕರ್ನಾಟಕ ಸರಕಾರವು ವಚನಾನಂದ ಸ್ವಾಮಿಯವರ ವೈಯಕ್ತಿಕ ಭಾವನೆಯನ್ನು ಪುರಸ್ಕರಿಸಬಾರದು.

About The Author