ಅತಿವೃಷ್ಟಿಯಿಂದ ಬೆಳೆ ನಾಶ ಪರಿಹಾರ ಒದಗಿಸಲು ಆಗ್ರಹ

ಶಹಾಪೂರ:ವಡಗೇರ ತಾಲೂಕಿನಾದ್ಯಂತ ದಿನವಿಡಿ ಸುರಿಯುತ್ತಿರುವ ಮಳೆಯಿಂದ ಹತ್ತಿ ಬೆಳೆಯು ಸೇರಿದಂತೆ ಭತ್ತ ಮತ್ತು ಇತರ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ತಕ್ಷಣವೇ ಸರಕಾರ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಲು ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮೌನೇಶ್ ಪೂಜಾರಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

 ಈ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಜಮೀನುಗಳಲ್ಲಿ ನೀರು ನಿಂತು ಹತ್ತಿ ಬೆಳೆಯು ನಾಶವಾಗಿದೆ. ಹಳ್ಳ ಕೊಳ್ಳಗಳು ಹರಿದು ಭತ್ತದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಹಯ್ಯಳ ಬಿ, ಹಯ್ಯಳ ಕೆ, ಹಂಚಿನಾಳ ಐಕೂರು ಕೊಂಕಲ್ ಮತ್ತು ನದಿ ದಡದ ಗ್ರಾಮಗಳಾದ ಯಕ್ಷಿಂತಿ ಹಳ್ಳ ತೀರದ ಗ್ರಾಮ ಮದರಕಲ್ ಗ್ರಾಮಗಳು ನೀರಿನಿಂದ ಆವೃತ್ತವಾಗಿವೆ.ರೈತ ಸಾಲ ಮಾಡಿಕೊಂಡು ಬೆಳೆಗೆ ವ್ಯಯಿಸಿದ ಹಣವೆಲ್ಲವೂ ನೀರಿನಲ್ಲಿ ಮುಳುಗಿದಂತಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಬೆಳೆ ಪರಿಹಾರ ಹಣ ಒದಗಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಒದಗಿಸಲು ಆಗ್ರಹ.

ದಿನಂಪ್ರತಿ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೂ ಹಾನಿಯಾಗಿದೆ. ಸರಕಾರ ಹಾನಿಗೊಳಗಾದ ಮನೆಗಳನ್ನು ವಿಂಗಡಿಸಿ 5000 ರೂ,10000 ರೂ ಮತ್ತು 50,000 ರೂ. ದಂತೆ ಹಣ ಕೊಡುತ್ತಾರೆ. ಇದು ಯಾವುದಕ್ಕೂ ಸಾಲುವುದಿಲ್ಲ ಎಂದು ಮೌನೇಶ ಪೂಜಾರಿ ಆರೋಪಿಸಿದರು. ಬಡ ಜನರು ಐದರಿಂದ 50,000 ರೂ.ಹಣದಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸರಕಾರವೇ ಮುತುವರ್ಜಿವಹಿಸಿ ಮನೆ ನಿರ್ಮಿಸಿ ಕೊಡಬೇಕು. ಇಲ್ಲವಾದರೆ ಐದು ಲಕ್ಷದಂತೆ ಹಣ ಬಿಡುಗಡೆ ಮಾಡಿ ಮನೆಗಳನ್ನು ನಿರ್ಮಿಸಿ ಕೊಳ್ಳುವುದರಿಂದ ಪದೇ ಪದೇ ಅತಿವೃಷ್ಟಿಯಿಂದ ಆಗುವ ಅನಾಹುತವನ್ನು ತಪ್ಪಿಸಬಹುದು ಎಂದರು.

About The Author