“ಧರೆಗಿಳಿದ ಕೈಲಾಸ” ಮಹಾಶೈವ ಧರ್ಮಪೀಠ

ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಮಹಾಶೈವ ಧರ್ಮಪೀಠವು ಯುಗಧರ್ಮಕ್ಕನುಗುಣವಾಗಿ ಉದಯಿಸಿದ ” ಸರ್ವರಲ್ಲಿಯೂ ಶಿವಚೈತನ್ಯವಿದೆ,ಸರ್ವರಿಗೂ ಶಿವಾನುಗ್ರಹದ ಹಕ್ಕಿದೆ” ಎಂದು ಸಾರುವ ಮಹಾಶೈವ ಧರ್ಮತತ್ತ್ವವನ್ನು ಲೋಕಪ್ರಚಾರಗೊಳಿಸುತ್ತಿರುವ ವಿಶಿಷ್ಟ ಧಾರ್ಮಿಕ ಕ್ಷೇತ್ರವಾಗಿದೆ.ಶಿವಸರ್ವೋತ್ತಮ ತತ್ತ್ವವನ್ನು ಸಾರುವ ಜೊತೆಗೆ ಸಮನ್ವಯ ಯುಗಮಂತ್ರವನ್ನು ಪ್ರಚುರಪಡಿಸುತ್ತಿದೆ.

ಜಾತಿ,ಮತ,ಪಂಥಗಳನ್ನು ಮೀರಿದ ಮನುಷ್ಯಮತ ತತ್ತ್ವವನ್ನು ಎತ್ತಿಹಿಡಿಯುತ್ತಿರುವ ಮಹಾಶೈವ ಧರ್ಮಪೀಠವು ಸರ್ವರ ಆತ್ಮಕಲ್ಯಾಣವನ್ನು ಸಾಧಿಸುವ ಶಿವತತ್ತ್ವ ವಿಶೇಷ ಮಠವಾಗಿದೆ.

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಧಾರವಾಡದ ತಪೋವನದ ಮಹಾತಪಸ್ವಿ, ಯುಗಸಂತ ಶ್ರೀಕುಮಾರಸ್ವಾಮಿಗಳವರಿಂದ ಶಿವಾನುಗ್ರಹವನ್ನು ಪಡೆದು ಶ್ರೀಗುರುವಾನುಗ್ರಹದಿಂದ ತಾವು ಪಡೆದ ಶಿವಬೆಳಕನ್ನು ಜಗದಗಲ ಲೋಕಸಮಸ್ತರಿಗೆ ಪಸರಿಸುವ ಕಾರ್ಯಮಾಡುತ್ತಿದ್ದಾರೆ.ಶಿವನ ಲೋಕಾನುಗ್ರಹ ಕಾರ್ಯದ ಪ್ರಾತಿನಿಧಿಕ ಕೇಂದ್ರವಾಗಿ ಎದ್ದು ನಿಂತಿರುವ ಮಹಾಶೈವ ಧರ್ಮಪೀಠವು ಧಾರ್ಮಿಕ ಜಾಗೃತಿಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯದಲ್ಲಿಯೇ ವಿಶಿಷ್ಟಮಠವೆಂಬ ಅನನ್ಯತೆಯನ್ನು ಹೊಂದಿರುವ ಮಹಾಶೈವ ಧರ್ಮಪೀಠವು ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರಗಳ ಪ್ರಸಾರ,ಪ್ರೋತ್ಸಾಹ ಕಾರ್ಯಗಳಲ್ಲಿ ಅಗ್ರಗಣ್ಯಧಾರ್ಮಿಕ ಕೇಂದ್ರವಾಗಿದೆ.ವಚನಸಾಹಿತ್ಯ ಚಳುವಳಿಯನ್ನು ಜನಸಾಮಾನ್ಯರಿಗೆ ಪರಿಚಯಿಸಲು ಪ್ರತಿ ಹುಣ್ಣಿಮೆಯಂದು ” ಅನುಭಾವ ಕವಿಗೋಷ್ಠಿ” ಯನ್ನು ಏರ್ಪಡಿಸಿ ನಾಡಿನಾದ್ಯಂತ ಇರುವ ಕವಿ ಸಾಹಿತಿಗಳನ್ನು ಮಹಾಶೈವ ಧರ್ಮಪೀಠಕ್ಕೆ ಆಹ್ವಾನಿಸಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನಕ್ರಾಂತಿಯ ಕ್ರಾಂತಿಜ್ಯೋತಿಗಳನ್ನು ಕುರಿತ ಕವಿಗೋಷ್ಠಿ ಏರ್ಪಡಿಸುವ ” ಇಪ್ಪತ್ತೊಂದನೇ ಶತಮಾನದ ಅನುಭವ ಮಂಟಪ” ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.ಪ್ರತಿ ಅಮವಾಸೆಯಂದು ” ಶಕ್ತ್ಯಾನುಭವ” ಎನ್ನುವ ವಿಶಿಷ್ಟ ಪ್ರವಚನ ಕಾರ್ಯದ ಮೂಲಕ ಸರ್ವರಲ್ಲಿಯೂ ಸುಪ್ತವಾಗಿರುವ ಶಿವಶಕ್ತಿಯನ್ನು ಜಾಗೃತಗೊಳಿಸುವ ಕಾರ್ಯ ನಡೆಯುತ್ತಿದೆ.

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ತಮ್ಮ ಮೂರುದಶಕಗಳ ಯೋಗಸಾಧನೆಯ ಬಲದಿಂದ ರೋಗಿಗಳು,ದೀನರು,ಆರ್ತರುಗಳನ್ನು ಅವರನ್ನು ಕಾಡುತ್ತಿರುವ ರೋಗ- ಅನಿಷ್ಟ,ವಿಪತ್ತುಗಳಿಂದ ಮುಕ್ತರಾಗಿಸಲು ” ಶಿವೋಪಶಮನ” ಎನ್ನುವ ಆಧ್ಯಾತ್ಮಿಕ ಶಕ್ತಿಯ ಮೂಲಕ ಪರಿಹಾರ( Spiritual healing) ದ ಮೂಲಕ ಲೋಕಸಮಸ್ತರನ್ನು ಸಂತೈಸುತ್ತಿದ್ದಾರೆ.ಪ್ರತಿ ರವಿವಾರ ಶ್ರೀ ಮಠಕ್ಕೆ ಬರುವವರ ಅಸಾಧ್ಯರೋಗಗಳು ವಾಸಿಯಾಗುತ್ತಿವೆ,

ಪೀಡಗಳು ತೊಲಗುತ್ತಿವೆ,ಭರವಸೆ ಕಳೆದುಕೊಂಡವರಿಗೆ ಅಭಯನೀಡುತ್ತಿದ್ದಾರೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಮತ್ತು ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯರ ಅನುಗ್ರಹವನ್ನುಂಡು.

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸವು ಮಾರ್ಚ್ 31,2014 ರಂದು ಉದ್ಘಾಟನೆಗೊಂಡಿದ್ದು ಅಂದಿನಿಂದ ನಿರಂತರ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಗುರುಗಳಾದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರ ಹುಟ್ಟುಹಬ್ಬದ ದಿನವಾದ ನೂಲಹುಣ್ಣಿಮೆಯಂದು ಮಹಾತಪಸ್ವಿಗಳ ಸ್ಮರಣೋತ್ಸ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.ಶ್ರೀಗುರುಗಳ ಸ್ಮರಣಾರ್ಥ” ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ಭೂಷಣ” ಎನ್ನುವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇಲ್ಲಿಯವರೆಗೆ ಸರ್ವಶ್ರೀ ಬಿ ಎ ಸನದಿ,ಶಾಶ್ವತಯ್ಯ ಮುಕ್ಕುಂದಿ ಮಠ,ಡಾ.ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ,ಸಿದ್ಧರಾಮ ಹೊನ್ಕಲ್ ಅವರುಗಳಿಗೆ ನೀಡಲಾಗಿದ್ದು ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ” ಯನ್ನು ನಾಡಿನ ಹೆಮ್ಮೆ ಕವಿ- ಸಾಹಿತಿ ಡಾ. ಎಚ್ ಎಸ್ ಶಿವಪ್ರಕಾಶ ಅವರಿಗೆ ೧೨.೦೮.೨೦೨೨ ರ ಮಹಾಶೈವ ಗುರುಪೂರ್ಣಿಮೆಯಂದು ಪ್ರದಾನಿಸಲಾಗುತ್ತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರನ್ನು ನವೆಂಬರ್ 25,2015 ರ “ಲೋಕ ಕಲ್ಯಾಣ ದಿನಾಚರಣೆ” ಯ ದಿನದಂದು ” ಮಹಾಕವಿ ಕಾಳಿದಾಸ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ” ನೀಡಿ,ಗೌರವಿಸಲಾಗಿದೆ.ಪ್ರತಿ ವರ್ಷ ಯುಗಾದಿಯಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದವರಿಗೆ ” ವಿಶ್ವೇಶ್ವರಾನುಗ್ರಹ ಪ್ರಶಸ್ತಿ” ಯನ್ನು ನೀಡಿ,ಸನ್ಮಾನಿಸಲಾಗುತ್ತಿದೆ.ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದುಡಿಯುತ್ತಿರುವವರನ್ನು ಪ್ರತಿವರ್ಷ ಗೌರಿಹುಣ್ಣಿಮೆಯಂದು ಪದವಿ- ಪ್ರಶಸ್ತಿಗಳನ್ನಿತ್ತು ಸನ್ಮಾನಿಸಲಾಗುತ್ತಿದೆ.

ಸದಾ ಸಾಹಿತ್ಯಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಮಹಾಶೈವ ಧರ್ಮಪೀಠವು ವಿಶ್ವವಿದ್ಯಾಲಯ,ಅಕಾಡೆಮಿಗಳಿಗೂ ಮಿಗಿಲಾಗಿ ಸಾಹಿತ್ಯ ಪ್ರೋತ್ಸಾಹ,ಸಂವರ್ಧನೆಯ ಕಾರ್ಯ ಮಾಡುತ್ತಿದೆ ಎನ್ನುವ ಹೆಮ್ಮೆಯ,ಅಭಿಮಾನದ ಸಂಗತಿ.

ಬಸವರಾಜ ಕರೆಗಾರ
ಸಂಪಾದಕರು ” ಕರುನಾಡ ವಾಣಿ”
ಮತ್ತು ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author