ಭಾರತಕ್ಕೆ 4 ನೇ ರ್ಯಾಂಕ್ ಕರ್ನಾಟಕಕ್ಕೆ 3 ನೇ ರ್ಯಾಂಕ್ ಪಡೆದ ಕನಿಷ್ಕ ಆರ್. ದೇಸಾಯಿ

ಶಹಾಪುರ : ತಾಲ್ಲೂಕಿನ ಸಗರ ಗ್ರಾಮೀಣ ಭಾಗದ ಅಪ್ಪಟ ಬಾಲ ಪ್ರತಿಭೆ ನಟನೆಗೂ ಸೈ ಅಭ್ಯಾಸಕ್ಕೂ ಸೈ ಎನಿಸಿಕೊಂಡಿರುವ ಕನಿಷ್ಕ ರವಿ ದೇಸಾಯಿ ವಿದ್ಯಾರ್ಥಿ ಐ.ಸಿ.ಎಸ್.ಸಿ ಪರೀಕ್ಷೆಯಲ್ಲಿ ಭಾರತಕ್ಕೆ 4 ನೇ ರ್ಯಾಂಕ್ ಕರ್ನಾಟಕಕ್ಕೆ 3 ನೇ ರ್ಯಾಂಕ್ ಪಡೆದು ಓದಿದ ಶಾಲೆಗೂ ಕಲಿಸಿದ ಗುರುಗಳಿಗೂ ಹುಟ್ಟಿದ ಊರಿಗೆ ಕೀರ್ತಿ ತಂದಿದ್ದಾನೆ.ವೈದ್ಯರಾದ ಡಾ: ರವಿ ಸವಿತಾ ದೇಸಾಯಿ ಅವರ ಸುಪುತ್ರನಾದ ವಿದ್ಯಾರ್ಥಿ,ಬಾಲ್ಯದಿಂದಲೂ ಓದಿನ ಜತೆಗೆ ನಟನೆಯಲ್ಲೂ ಆಸಕ್ತಿ ಹೊಂದಿ “ಶನಿ”ಧಾರಾವಾಹಿಯಲ್ಲಿ ತುಂಟ ಬಾಲ ಹನುಮಾನನ ಪಾತ್ರ ಹಾಗೂ ಮಕ್ಕಳ ಚಿತ್ರವಾದ “ಅಂಗೈಯಲ್ಲಿ ಅಕ್ಷರ” ಹಾಗೂ ಹಲವಾರು ಧಾರಾವಾಹಿಗಳಲ್ಲಿ ಕೂಡ ಮಿಂಚಿದ್ದಾನೆ ಅದರ ಜೊತೆಗೆ ಅಭ್ಯಾಸದಲ್ಲಿ ಕೂಡ ಮುಂದೆ ಇದ್ದಾನೆ ಎಂಬುದು ಇಂದಿನ ಫಲಿತಾಂಶವೇ ಸಾಕ್ಷಿಯಾಗಿದೆ.ಬೆಂಗಳೂರಿನ ಶ್ರೀಸ್ವಾಮಿ ನಾರಾಯಣ ಗುರುಕುಲ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಓದುತ್ತಿರುವ ಈ ವಿದ್ಯಾರ್ಥಿ ಗಣಿತ  100,ವಿಜ್ಞಾನ 100,ಕಂಪ್ಯೂಟರ್ 100,ಸಮಾಜ ವಿಜ್ಞಾನ 100, ಇಂಗ್ಲಿಷ್ 97, ಪ್ರತಿಶತ 97 .2% 4 ನೇ ರ್ಯಾಂಕ್ ಕರ್ನಾಟಕಕ್ಕೆ 3 ನೇ ರ್ಯಾಂಕ್ ಪಡೆದುಕೊಂಡಿದ್ದಾನೆ.ಮುಂದೆ ಚೆನ್ನಾಗಿ ಓದಿ ಅಬ್ದುಲ್ ಕಲಾಂರಂತೆ ವಿಜ್ಞಾನಿ ಆಗಬೇಕೆಂಬದು ಈ ವಿದ್ಯಾರ್ಥಿಯ ಮಹದಾಸೆಯಾಗಿದೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಒಂದನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವಾಗ ಮಲೇಷ್ಯಾದಲ್ಲಿ ಏರ್ಪಡಿಸಿರುವ 58 ರಾಷ್ಟ್ರಗಳ ಮಕ್ಕಳು ಭಾಗವಹಿಸಿದ ಅಬಾಕಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ ಕನ್ನಡ,ಇಂಗ್ಲಿಷ್,ಹಿಂದಿ,ಭಾಷೆ ನಿರರ್ಗಳವಾಗಿ ಮಾತನಾಡಬಲ್ಲ ಚಾಣಾಕ್ಷನಾಗಿದ್ದು.ಅನೇಕ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.ಈ ವಿದ್ಯಾರ್ಥಿಯ ಸಾಧನೆಗೆ ಗ್ರಾಮದ ಹಿರಿಯ ಮುಖಂಡರಾದ ಡಾ:ಚಂದ್ರಶೇಖರ ಸುಬೇದಾರ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿಪಾಟೀಲ, ಸಾಹಿತಿಗಳಾದ ಲಿಂಗಣ್ಣ ಪಡಶೆಟ್ಟಿ, ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ,ಹಾಗೂ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

About The Author