ಕುರಿಗಾಹಿ ಮಹಿಳೆ ಕೊಲೆ ಪ್ರಕರಣ: ಸಿ.ಒ.ಡಿ. ತನಿಖೆಗೆ ಸಚಿವ ಎಂ.ಟಿ.ಬಿ. ನಾಗರಾಜು ಆಗ್ರಹ

ಬೆಂಗಳೂರು: ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಕುರಿಗಾಹಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿ.ಒ.ಡಿ. ತನಿಖೆಗೆ ಒಪ್ಪಿಸುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹಾಗೂ ಕುರಿಗಾಹಿಗಳಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿ ಕುರುಬ ಸಮಾಜದ ಸಂಘಟನೆಗಳ ಒಕ್ಕೂಟ ನಡೆಸಿದ ‘ವಿಧಾನಸೌಧ ಚಲೋ’ ಹೋರಾಟಗಾರರನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಭೇಟಿ ಮಾಡಿ ಸಚಿವರು ಮಾತನಾಡಿದರು.ಕುಂದಗೋಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣವನ್ನು ಸಿ.ಒ.ಡಿ. ತನಿಖೆಗೆ ಒಪ್ಪಿಸಬೇಕು ಹಾಗೂ ಬಸವಕಲ್ಯಾಣ ತಾಲ್ಲೂಕಿನ ಜಾನಾಪುರ ಗ್ರಾಮದಲ್ಲಿ ನಿನ್ನೆ ನಡೆದಿರುವ ಕುರಿಗಾಹಿ ಕೊಲೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸಚಿವ ಎಂ.ಟಿ.ಬಿ. ನಾಗರಾಜು ಆಗ್ರಹಿಸಿದರು.
ಕುರಿಗಾಹಿಗಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುರಿಗಾಹಿ ಟೆಂಟ್‌ಗಳಿಗೆ ಪೊಲೀಸ್ ಬಂದೋಬಸ್ತ್ ಹಾಗೂ ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು. ಕುರಿಗಾಹಿಗಳು ಅರ್ಜಿ ಹಾಕಿದ ೧೫ ದಿನಗಳಲ್ಲಿ ಬಂದೂಕು ಲೈಸೆನ್ಸ್ ನೀಡಬೇಕು. ಅನುಗ್ರಹ ಯೋಜನೆಯನ್ನು ಮುಂದುವರಿಸಬೇಕು ಎಂದು ಸಚಿವ ಎಂ.ಟಿ.ಬಿ. ನಾಗರಾಜು ಒತ್ತಾಯಿಸಿದರು.ಕುರುಬರನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆ ಮಾಡಬೇಕೆನ್ನುವ ಬೇಡಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ ಇದ್ದು, ಈ ಬೇಡಿಕೆ ಈಡೇರಬೇಕಿದೆ. ಕುರುಬ ಸಮಾಜದ ಹಿತ ಕಾಪಾಡಲು ಒಕ್ಕೊರಲಿನ ಹೋರಾಟ ನಡೆಸೋಣ ಎಂದು ಸಚಿವರು ಕರೆ ನೀಡಿದರು.

ಹೋರಾಟದ ವೇದಿಕೆಯಲ್ಲಿ ಕನಕಗುರು ಪೀಠದ ತಿಂತಣಿ ಬ್ರಿಡ್ಜ್ ಶಾಖಾ ಮಠದ ಶ್ರೀ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಕೊಪ್ಪಳದ ಬಾದಮಿನಾಳ ಶ್ರೀ ಶಿವಸಿದ್ದೇಶವರ ಸ್ವಾಮೀಜಿ,ಶ್ರೀ ಬ್ರಹ್ಮಾನಂದ ಸ್ವಾಮೀಜಿ ಗೋಕಾಕ, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ,ಕುರಿ ಮತ್ತು ಮೇಕೆ ಸಾಕಾಣಿಕೆದಾರ ಸಂಘಗಳ ಮಹಾಮಂಡಳ ಅಧ್ಯಕ್ಷ ಪಂಡಿತರಾವ್ ಚಿದ್ರಿ,ನಿರ್ದೇಶಕ ಶಾಂತಗೌಡ ನಾಗನಟಿಗಿ, ಕುರುಬ ಸಮಾಜದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಸಿದ್ದಣ್ಣ ತೇಜಿ, ಕುರುಬ ಸಮಾಜದ ಮುಖಂಡ ಟಿ.ಬಿ. ಬಳಗಾವಿ,ಶ್ರೀನಿವಾಸ ಏಗನೂರು,ಹನುಮಂತ ಮಸ್ಕಿ ಸೇರಿ ವಿವಿದ ಜಿಲ್ಲೆಗಳಿಂದ ಆಗಮಿಸಿದ್ದ ಕುರಿಗಾರರ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು.

About The Author