ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು–೨೧–ದೇಹವು ದೇವಾಲಯವಾಗಬೇಕು; ವಿಶ್ವಕಾಯ ನಿರ್ಮಾಣಕ್ಕೆ ಸನ್ನದ್ಧವಾಗಬೇಕು–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು–೨೧

“ದೇಹವು ದೇವಾಲಯವಾಗಬೇಕು; ವಿಶ್ವಕಾಯ ನಿರ್ಮಾಣಕ್ಕೆ ಸನ್ನದ್ಧವಾಗಬೇಕು “

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಮಾನವರ ದೇಹವು ಸಾಮಾನ್ಯವಾದುದಲ್ಲ,ಮನುಷ್ಯದೇಹದಲ್ಲಿ ಪರಮಾತ್ಮನಿದ್ದಾನೆ.ಪರಮಾತ್ಮನ ನೆಲೆಯಾದ ದೇಹದ ಪಾವಿತ್ರ್ಯತೆಯನ್ನು,ಪಾವನತೆಯನ್ನು ಮನುಷ್ಯರು ಅರ್ಥಮಾಡಿಕೊಳ್ಳದೆ ಪಾಪಾತ್ಮರು,ಪಾಪಿಗಳು ಎಂಬ ಶಂಕೆಗೀಡಾಗಿ ಬಳಲುತ್ತಿದ್ದಾರೆ.ಈ ಶಂಕಾತಂಕದಿಂದ ಹೊರಬಂದು ಕಾಣಬೇಕು ಶರೀರದೊಳಗಿನ ಶಂಕರನನ್ನು ಎನ್ನುತ್ತಿದ್ದರು.ಈ ದೇಹವು ದೇವಾಲಯವಾಗಿ,ದಿವ್ಯತ್ವವನ್ನು ಒಡಮೂಡಿಸಿಕೊಂಡು ಮಹಾನ್ ಸಿದ್ಧಿಯನ್ನು ಪಡೆಯಬೇಕು ಎನ್ನುತ್ತಾ ಗುರುದೇವನು ಹೇಳಿದ ಮಾತುಗಳು –” ದೇಹವು ದೇವಾಲಯವಾಗಬೇಕು ; ಅದು ಮಹಾಕಾಯವೆನಿಸಬೇಕು; ಅಲ್ಲ, ವಿಶ್ವಕಾಯ ನಿರ್ಮಾಣದ ಸಿದ್ಧತೆಗೆ ಎಡೆಗುಡಬೇಕು.ಅದರಲ್ಲಿ ಇಡೀ ಆಧ್ಯಾತ್ಮ ಜೀವನದ ತಿರುಳು ಮೈದೋರಬೇಕು”.

ಗುರುದೇವರು ಈ ಮಾತಿನಲ್ಲಿ ದೇಹದ ಮಹತಿಯನ್ನು ಸಾರಿದ್ದಾರೆ.ಈ ದೇಹವು ಸಾಮಾನ್ಯವಾದುದಲ್ಲ; ಎಲ್ಲವೂ ಈ ದೇಹದಲ್ಲಿಯೇ ಇದೆ.ಆದರೆ ನಮ್ಮ ದೇಹದ ಮಹತ್ವವನ್ನರಿಯದೆ ಅದನ್ನು ರಕ್ತ ಮಾಂಸಗಳ ಮುದ್ದೆ,ಎಲುವಿನ ಹಂದರ ಎಂದು ಭಾವಿಸಿದ್ದೇವೆ.ಬ್ರಹ್ಮಾಂಡವೆಲ್ಲವೂ ಪಿಂಡಾಂಡವಾದ ಈ ಶರೀರದಲ್ಲಿದೆ.ಬ್ರಹಾಂಡವನ್ನೇ ಒಡಲಲ್ಲಿ ಅಡಗಿಸಿಟ್ಟುಕೊಂಡ ಶರೀರವನ್ನು ಸಾಮಾನ್ಯ ಎನ್ನಲಾದೀತೆ ? ಆದರೆ ನರರು ತಮ್ಮ ದೇಹದ ಅದ್ಭುತ ಶಕ್ತಿ ಸಾಮರ್ಥ್ಯಗಳನ್ನು ಅರಿಯದಾಗಿದ್ದಾರೆ.ಇದರಿಂದಾಗಿ ಕೆಲವರು ತಮ್ಮ ಶರೀರವನ್ನು ವೈದ್ಯರುಗಳಲ್ಲಿ ಒತ್ತೆಇಟ್ಟು ಇಂಜಕ್ಷನ್,ಮಾತ್ರೆಗಳನ್ನೇ ಆಹಾರವನ್ನಾಗಿಸಿಕೊಂಡಿದ್ದಾರೆ.ಯೋಗಭೂಮಿಯಾದ ದೇಹವನ್ನು ದೌರ್ಬಲ್ಯವಶರಾಗಿ ಕೆಡಿಸಿಕೊಂಡು ರೋಗನಿರೋಧಕಶಕ್ತಿಯನ್ನು ಕಳೆದುಕೊಂಡು ರೋಗಿಗಳಾಗಿ ಆಸ್ಪತ್ರೆ ಸೇರುತ್ತಿದ್ದಾರೆ.

ಮನುಷ್ಯದೇಹವು ಕೇವಲ ರಕ್ತಮಾಂಸಗಳ ಮುದ್ದೆಯಲ್ಲ,ಎಲುವಿನ ಗೂಡೂಅಲ್ಲ; ಅದೊಂದು ದಿವ್ಯತ್ವದ ಒಡಲು.ಈ ದೇಹದಲ್ಲಿಯೇ ದೇವರಿದ್ದಾನೆ ಎಂದ ಬಳಿಕ ಸಾಮಾನ್ಯವಾದುದೇನು ದೇಹ? ಭಾವನಾಜೀವಿಯಾದ ಮನುಷ್ಯ ಭಾವನೆಗಳ ತಾಕಲಾಟಕ್ಕೆ ಸಿಕ್ಕು ತನ್ನ ದೇಹದ ಮಹತ್ತನ್ನು ಮರೆಯುತ್ತಾನೆ.ರೋಗಕ್ಕೆ ತುತ್ತಾಗಿ ವೈದ್ಯರ ಬಳಿಹೋಗುವ ಬದಲು ದೇಹದೊಳಗಿರುವ ವೈದ್ಯನಾಥ ಶಿವನ ನೆಲೆಯರಿತು ಭವರೋಗ ವೈದ್ಯರಾಗಬೇಕು.ದೇಹವನ್ನು ಅದರ ಬಂಧನ,ಇತಿ ಮಿತಿಗಳಿಂದ ಮುಕ್ತಗೊಳಿಸಬೇಕು.ಚರ್ಮ,ರಕ್ತ- ಮಾಂಸಗಳು ಉಂಟುಮಾಡುವ ಭವ- ಭಯಮುಕ್ತರಾಗಬೇಕು.ರಾಗ- ದ್ವೇಷ,ಮೋಹ ಮಮಕಾರಗಳನ್ನು ಮೆಟ್ಟಿನಿಲ್ಲಬೇಕು.ತಾಮಸ ಗುಣಗಳನ್ನು ಸುಟ್ಟು ಸಾತ್ತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು.ಕೆಟ್ಟಜನರ ಸಂಗದೊಳು ಇರದೆ ಸತ್ಪುರುಷರ ಸಖ್ಯದೊಳಿರಬೇಕು,ಸತ್ಸಂಗದಲ್ಲಿರಬೇಕು.ಗುರೂಪದೇಶ ಪಡೆದು,ಗುರು ತೋರಿದ ಮಾರ್ಗದಿ ಮುನ್ನಡೆಯಬೇಕು.

ದೇಹದ ದೋಷ- ದೌರ್ಬಲ್ಯಗಳನ್ನು ಅಳಿದುಕೊಂಡು ಸಾಗಬೇಕು ಈಶನ ಪಥದಿ.ದೇಹವನ್ನು ಶುಚಿಯಾಗಿಟ್ಟುಕೊಂಡು,ಶುದ್ಧವಾಗಿಟ್ಟುಕೊಂಡು ದೇಹವನ್ನೇ ದೇವಾಲಯವನ್ನಾಗಿ ಪರಿವರ್ತಿಸಿಕೊಳ್ಳಬೇಕು.ಹೊರಗಣ ದೇವಾಲಯಗಳಿಗೆ ಸುತ್ತದೆ ನಮ್ಮ ದೇಹವನ್ನೇ ದೇವಾಲಯವನ್ನಾಗಿ ಮಾರ್ಪಡಿಸಿಕೊಳ್ಳಬೇಕು.ದೇಹವು ದೇವಾಲಯವಾದಾಗ ದೇವರು ಒಡಮೂಡುತ್ತಾನೆ ದೇಹದಲ್ಲಿ.ದೇಹವು ದೇವಾಲಯವಾದಾಗ ಇಳಿದು ಬರುತ್ತದೆ ಪ್ರಭುಶಕ್ತಿ ನಮ್ಮೊಳಗೆ.

ದೇಹವು ದೇವಾಲಯವಾಗಬೇಕು ಮಾತ್ರವಲ್ಲದೆ ಮಹಾಕಾಯವಾಗಬೇಕು ಎನ್ನುತ್ತಾರೆ ಗುರುದೇವ.ಕಾಯವು ಮಹಾಕಾಯಬೇಕು.ಮಾಂಸಪಿಂಡವು ಮಂತ್ರಪಿಂಡವಾಗಬೇಕು; ಪ್ರಾಣತನುವು ಪ್ರಣವ ತನುವು ಆಗಬೇಕು.ಅದಾಗುವ ಪರಿ ಆವುದು ? ಗುರುವು ಉಪದೇಶದಲ್ಲಿ ಮಾರ್ಗದಲ್ಲಿ ಸಾಧನೆ ಕೈಗೊಂಡು ಸಾಧಿಸಬೇಕು ಸಿದ್ಧತ್ವವನ್ನು,ಸಿದ್ಧಶರೀರವನ್ನು.ಯೋಗಸಾಧನೆಯ ಬಲದಿಂದ,ಮಂತ್ರಾನುಷ್ಠಾನ ಮಹಿಮೆಯಿಂದ ಕಾಯವು ಮಂತ್ರಮಯವಾಗಿ,ಮಹಾತನುವು ಇಲ್ಲವೆ ಮಹಾಕಾಯವಾಗುತ್ತದೆ.ಕರದ ಇಷ್ಟಲಿಂಗದಲ್ಲಿ ನಿಷ್ಠೆಯನ್ನಿಟ್ಟು,ಏಕಾಗ್ರತೆಯಿಂದ ಲಿಂಗಾನುಸಂಧಾನ ಮಾಡುತ್ತ ಸರ್ವಾಂಗಲಿಂಗಿಯಾಗಬೇಕು.ಗುರುವು ಉಪದೇಶಿಸಿದ ಮಂತ್ರವನ್ನು ಅನವರತ ಜಪಿಸುತ್ತ ಪಡೆಯಬಹುದು ಕಾಯಶುದ್ಧಿ ಮತ್ತು ಸಿದ್ಧಿಯನ್ನು.ಮಂತ್ರದಲ್ಲಿ ಹಲವು ಬಗೆಗಳಿವೆ.ತನ್ನ ಗುರು ಸಂಪ್ರದಾಯಕ್ಕನುಗುಣವಾಗಿ,ಗುರುವು ಉಪದೇಶಿಸಿದ ಮಂತ್ರವನ್ನು ಅಚಲ ನಿಷ್ಠೆಯಿಂದ ಜಪಿಸಬೇಕು.ಶೈವ ಮಂತ್ರಸಾಧನೆಯಲ್ಲಿ ನಾಲ್ಕು ಮುಖ್ಯಮಾರ್ಗಗಳಿವೆ.ಅವುಗಳಲ್ಲಿ ಮೊದಲನೆಯದು ” ಓಂ ” ಕಾರ ಪ್ರಣವೋಪಾಸನೆ.ಓಂಕಾರವು ಪರಶಿವ,ಪರಬ್ರಹ್ಮವಾಚಕವಾಗಿದ್ದು ನಿರಾಕಾರೋಪಾಸಕರು ಓಂಕಾರೋಪಾಸನೆ ಮಾಡಬೇಕು.ಓಂಕಾರವು ” ಅ” ಕಾರ, ” ಉ” ಕಾರ ಮತ್ತು ” ಮ” ಕಾರಗಳ ಸಂಗಮವಾಗಿದ್ದು ಸೃಷ್ಟಿ,ಸ್ಥತಿ ಮತ್ತು ಲಯವಾಚಕವಾದ ಮಂತ್ರವಿದಾಗಿದ್ದು ಬ್ರಹ್ಮ,ವಿಷ್ಣು,ರುದ್ರಾತ್ಮಕನಾದ ಸದಾಶಿವ ಇಲ್ಲವೆ ಪರಶಿವನು ಈ ಮಂತ್ರದ ಅಧಿದೇವನು.ಎರಡನೆಯದು ” ನಮಃ ಶಿವಾಯ” ಎನ್ನುವ ಶಿವ ಪಂಚಾಕ್ಷರಿಯು.ಮೂರನೆಯದು ಪ್ರಣವಸಹಿತವಾದ ” ಓಂ ನಮಃ ಶಿವಾಯ” ಎನ್ನುವ ಶಿವಷಡಕ್ಷರಿ ಮಂತ್ರವು.ನಾಲ್ಕನೆಯದು ಮತ್ತು ಮಹತ್ವದ ಮಂತ್ರವು ಮಹಾಶೈವ ಮಂತ್ರವಾದ ” ಓಂ ನಮಃ ಶಿವಾಯ ಓಂ” ಎನ್ನುವ ಶಿವ ಸಪ್ತಾಕ್ಷರಿಯು.ಇದು ಶಿವಶಕ್ತ್ಯಾತ್ಮಕಮಂತ್ರವಾಗಿದ್ದು ಆದಿ ಪ್ರಣವವು ಶಕ್ತಿಯನ್ನು ಅಂತ್ಯ ಪ್ರಣವವು ಪರಶಿವನನ್ನು ಸಂಕೇತಿಸುತ್ತದೆ ಮತ್ತು ಕುಂಡಲಿನೀಯೋಗದಿಂದ ಸದಾಶಿವನ ದರ್ಶನ ಪಡೆಯುವುದು ಈ ಮಂತ್ರದ ಮಹದೋದ್ದೇಶವಾಗಿದ್ದು ಮಹಾಶೈವಯೋಗ ಎನ್ನುವ ಹೆಸರನ್ನು ಹೊಂದಿದೆ.ನಮ್ಮ ದೇಹದಲ್ಲಿ ಮೂಲಾಧಾರ,ಸ್ವಾದಿಷ್ಠಾನ,ಮಣಿಪೂರಕ,ಅನಾಹತ,ವಿಶುದ್ಧಿ ಮತ್ತು ಆಜ್ಞಾಚಕ್ರಗಳೆಂಬ ಆರು ಚಕ್ರಗಳಿವೆ.ಈ ಆರು ಚಕ್ರಗಳನ್ನು ಮೀರಿದ ಮಹಾಚಕ್ರವೆನಿಸಿದ ಸಹಸ್ರಾರವು ಏಳನೆಯ ಚಕ್ರವೆನಿಸಿ,ಸದಾಶಿವ ಇಲ್ಲವೆ ಪರಶಿವನ ನೆಲೆಯಾಗಿದೆ.ಮಹಾಶೈವ ಯೋಗವು ಮೂಲಾಧಾರದ ಶಕ್ತಿಯನ್ನು ಸಹಸ್ರಾರದ ಸದಾಶಿವನಲ್ಲಿ ಸಂಗಮಗೊಳಿಸುವ ಶಿವಶಕ್ತಿಯೋಗವಾಗಿದೆ.ಮೂಲಾಧಾರದಲ್ಲಿ ಊರ್ಧ್ವಮುಖಿಯಾಗಿ ಮಲಗಿರುವ ಓಂಕಾರಸ್ವರೂಪಿಣಿಯಾಗಿರುವ ಶಕ್ತಿಯನ್ನು ಜಾಗ್ರತಗೊಳಿಸಿ,ಮೇಲಕ್ಕೆಬ್ಬಿಸಿ ಒಂದೊಂದೇ ಚಕ್ರಗಳನ್ನು ದಾಟಿಸುತ್ತ ಕೊನೆಗೆ ಸಹಸ್ರಾರದಲ್ಲಿರುವ ” ಓಂಕಾರ ಪರಬ್ರಹ್ಮ” ನಾಗಿರುವ ಪರಶಿವನಲ್ಲಿ ಸಂಗಮಗೊಳಿಸುವುದು ಇಲ್ಲವೇ ಲಯಗೊಳಿಸುವುದೇ ಮಹಾಶೈವ ಯೋಗವು.ಮಹಾಶೈವ ಯೋಗದಿಂದ ಕಾಯವು ಸಿದ್ಧಕಾಯವಾಗಿ,ಪ್ರಕೃತಿಯ ಮೇಲೆ ಪ್ರಭುತ್ವಪಡೆದು,ಪರಶಿವನಶಕ್ತಿಯನ್ನುಂಡು ವಿಶ್ವಕಾಯವಾಗುತ್ತದೆ.ಮಂತ್ರವನ್ನು ಅಕ್ಷರಕ್ಕೆ ಲಕ್ಷದಂತೆ ಜಪಿಸಿದರೆ ಸಿದ್ಧಿಯಾಗುತ್ತದೆ.ಅಂದರೆ ಮಂತ್ರದಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟುಲಕ್ಷಸಂಖ್ಯೆಯಲ್ಲಿ ಆ ಮಂತ್ರವನ್ನು ಜಪಿಸಿದರೆ ಮಾತ್ರ ಆ ಮಂತ್ರವು ಸಿದ್ಧಿಯಾಗುತ್ತದೆ.ಮಂತ್ರವು ಸಿದ್ಧಿಯಾಗದೆ ಫಲ ನೀಡದು.” ಓಂ” ಕಾರ ಪ್ರಣವವು ಏಕಾಕ್ಷರಿ ಮಂತ್ರವಾಗಿದ್ದು ಇದನ್ನು ಒಂದುಲಕ್ಷಸಾರೆ ಜಪಿಸಿದರೆ ಸಿದ್ಧಿಯಾಗುತ್ತದೆ.ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರದಲ್ಲಿ ಐದು ಅಕ್ಷರಗಳಿರುವುದರಿಂದ ಇದನ್ನು ಐದುಲಕ್ಷಬಾರಿ ಜಪಿಸಿದರೆ ಸಿದ್ಧಿಯಾಗುತ್ತದೆ.ಷಡಕ್ಷರಿ ಮಂತ್ರವನ್ನು ಆರುಲಕ್ಷಬಾರಿ ಮತ್ತು ಮಹಾಶೈವ ಸಪ್ತಾಕ್ಷರಿಯನ್ನು ಏಳುಲಕ್ಷಬಾರಿ ಜಪಿಸಿದರೆ ಈ ಮಂತ್ರಗಳು ಸಿದ್ಧಿಯಾಗುತ್ತವೆ.ಮಂತ್ರವು ಸಿದ್ಧಗೊಂಡಬಳಿಕವೇ ಸಾಧಕನ ಸಾಧನೆ ಆರಂಭವಾಗುತ್ತದೆ.ಮಂತ್ರಸಿದ್ಧಿಯಾಗದೆ ಮಾಡುವ ಪೂಜೆ,ಧ್ಯಾನಗಳು ವ್ಯರ್ಥವಾದವುಗಳು.ಮಂತ್ರವನ್ನು ಎಂಬತ್ನಾಲ್ಕು ಲಕ್ಷ ಜಪಿಸಿದರೆ ಮಂತ್ರಸಿದ್ಧನೆನಿಸುವನು,ಕಾಯವು ಮಂತ್ರಕಾಯವಾಗುವುದು.ಅಂಥಹ ಯೋಗಿಗಳನ್ನು ಮಂತ್ರಯೋಗಿಗಳು ಎಂದು ಕರೆಯುತ್ತಾರೆ.ಮಂತ್ರವನ್ನು ಒಂದುಕೋಟಿ ಜಪಿಸಿದರೆ ‘ ಪ್ರಾಣಪ್ರತಿಷ್ಠೆ ಮಾಡುವ ಶಕ್ತಿ’ ಲಭಿಸುತ್ತದೆ.ಅಂದರೆ ಗುರೂಪದೇಶಿತ ಮಂತ್ರವನ್ನು ಒಂದುಕೋಟಿಬಾರಿ ಜಪಿಸಿದ ಮಂತ್ರಯೋಗಿಯು ಸತ್ತವರನ್ನು ಬದುಕಿಸುವ ಸಾಮರ್ಥ್ಯ ಪಡೆಯುತ್ತಾನೆ.ಮಂತ್ರವನ್ನು ಏಳುಕೋಟಿಬಾರಿ ಜಪಿಸಿದವನು ಮಹಾಸಿದ್ಧನಾಗುತ್ತಾನೆ,ಮಹಾಋಷಿಯಾಗಿ ಮಹರ್ಷಿ ಎನ್ನಿಸಿಕೊಳ್ಳುತ್ತಾನೆ.

ಮಹಾಋಷಿ ಇಲ್ಲವೆ ಮಹರ್ಷಿಯಾದವನ ಕಾಯವೇ ವಿಶ್ವಕಾಯವಾಗುತ್ತದೆ.ಅಂದರೆ ಮಹರ್ಷಿಯು ಪ್ರಕೃತಿಯ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸುತ್ತಾನಲ್ಲದೆ ತನ್ನ ಇಷ್ಟಬಂದ ಹಾಗೆ ಪ್ರಕೃತಿಯನ್ನು ಮಣಿಸುವ,ಪ್ರಕೃತಿಯಿಂದ ಕಾರ್ಯಸಾಧಿಸಿಕೊಳ್ಳುವ ಯೋಗಸಿದ್ಧಿಯನ್ನು ಪಡೆಯುತ್ತಾನೆ.ಮಹರ್ಷಿಯ ಕಾಯವು ವ್ಯೋಮಕಾಯವಾಗುತ್ತದೆ.ಅವನ ಕಾಯವು ಬೆಂಕಿಯಲ್ಲಿ ಸುಡದು,ನೀರಿನಲ್ಲಿ ನೆನೆಯದು.ಮಂತ್ರರ್ಷಿಯಾದ ಮಹರ್ಷಿಯು ಬೆಂಕಿಯಲ್ಲಿ ಬೆಂಕಿಯಾಗುತ್ತಾನೆ,ಗಾಳಿಯಲ್ಲಿ ಗಾಳಿಯಾಗುತ್ತಾನೆ.ಇಂತಹ ಮಂತ್ರಸಿದ್ಧರು ಪರಮಾತ್ಮನ ವಿಭೂತಿಗಳಾಗಿ ಪರಮಾತ್ಮನ ಸಂಕಲ್ಪದಂತೆ ವಿಶ್ವದ ಆಗು ಹೋಗುಗಳನ್ನು ನಿರ್ಧರಿಸುತ್ತಾರೆ.ಸಪ್ತರ್ಷಿಗಳು ಅಂತಹ ವಿಶ್ವಕಾಯರಾದ ಮಂತ್ರರ್ಷಿಗಳಾಗಿದ್ದು ಅವರು ಜಗದ ಸೃಷ್ಟಿಕಾರ್ಯದಲ್ಲಿ ಬ್ರಹ್ಮನಿಗೆ ಸಹಾಯ ಮಾಡುತ್ತಾರೆ. ಮಂತ್ರರ್ಷಿಗಳಾದ ನವನಾರಾಯಣರುಗಳು ಇದ್ದು ಅವರು ವಿಷ್ಣುವಿನ ಸ್ಥಿತಿಕಾರ್ಯದಲ್ಲಿ ನೆರವು ಆಗುತ್ತಾರೆ.ಮಂತ್ರಕಾಯರಾದ ನವಸಿದ್ಧರುಗಳಿದ್ದು ರುದ್ರ ಇಲ್ಲವೆ ಮಹೇಶ್ವರನ ಪ್ರಳಯಕಾಲದಲ್ಲಿ ನೆರವು ಆಗುತ್ತಾರೆ.ಒಂಬತ್ತು ಜನ ಮಹಾಸಿದ್ಧರುಗಳಿರುವಂತೆ ನವಕೋಟಿಸಿದ್ಧರುಗಳಿದ್ದು ಅವರು ಶಿವನ ಜಗನ್ನಿಯಾಮಕಸೂತ್ರಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕಾಯವು ವಿಶ್ವಕಾಯವಾಗುವ ಪರಮ ಸಿದ್ಧಿ ಇದು.

About The Author