ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು–೧೩::ಜೀವನದ ಸೊಬಗು ಮತ್ತು ಸಾರ್ಥಕತೆ:ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೩

ಜೀವನದ ಸೊಬಗು ಮತ್ತು ಸಾರ್ಥಕತೆ

 

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಮರ್ತ್ಯದ ಬಾಳನ್ನು ಕಡೆಗಣಿಸಿದವರಲ್ಲ,ಹೀಗಳೆದವರಲ್ಲ.ಮರ್ತ್ಯವೇ ಮಹಾದೇವನ ಮಹಾಮನೆ ಎಂದು ಭಾವಿಸಿ,ಅದನ್ನೇ ಬೋಧಿಸಿದವರು.ಇಹವನ್ನು ಕಡೆಗಣಿಸದೆ ಪರವನ್ನು ಪಡೆಯುವ ಪರಮರಹಸ್ಯವನ್ನು ಬೋಧಿಸಿದ ಪರಮಾಚಾರ್ಯರಾಗಿದ್ದರು ಗುರುದೇವ ಯೋಗೀಶ್ವರ ಶ್ರೀಕುಮಾರಸ್ವಾಮಿಗಳವರು.ಐಹಿಕ ಆಮುಷ್ಮಿಕಗಳೆಡರ ಸಮನ್ವಯ ಸಿದ್ಧಿಯೇ ಜೀವನದ ಸಾರ್ಥಕತೆ ಎನ್ನುತ್ತಿದ್ದ ಗುರುದೇವನ ಮಾತಿದು –” ಜೀವನದ ಸೊಬಗನ್ನು ಸವಿಯಬೇಕು ; ಅದರ ಸಾರ್ಥಕತೆಯಾಗಬೇಕು.ಎರಡೂ ಕೈಗೂಡಬೇಕು “.

ಮನುಷ್ಯ ಜೀವನವು ವ್ಯರ್ಥವಾದುದಲ್ಲ,ಪರಮಾತ್ಮನಿಂದ ಹೊರಬಂದ ಮನುಷ್ಯ ಜೀವನವು ಶ್ರೇಷ್ಠವಾದುದು.ಪರಮಾತ್ಮನು ತನ್ನ ಸೃಷ್ಟಿಯಲ್ಲಿ ಮನುಷ್ಯನನ್ನು ಶ್ರೇಷ್ಠಪ್ರಾಣಿಯನ್ನಾಗಿ ಸೃಷ್ಟಿಸಿ ಅವನಿಗೆ ವಾಣಿಯಾದಿ ಸಕಲ ಸೌಕರ್ಯಗಳ ಬಳುವಳಿಯನ್ನಿತ್ತಿಹನು.ಪ್ರಾಣಿ- ಪಕ್ಷಿಸಂಕುಲಕ್ಕಿಲ್ಲದ ವಿಶೇಷ ಅವಯವಗಳು,ಬುದ್ಧಿ ವಿದ್ವತ್ತುಗಳನ್ನು ಮನುಷ್ಯರಿಗೆ ಮಾತ್ರ ಇತ್ತಿಹನು.ಇಂತಹ ವಿಶೇಷ ಜೀವಿಯಾದ ಮನುಷ್ಯ ತನ್ನ ವಿಶೇಷತೆಯನ್ನರಿತು ಪರಮಾತ್ಮನ ಸೃಷ್ಟಿಗೆ ತನ್ನದೆ ಆದ ಕೊಡುಗೆ ನೀಡಬೇಕು.ಅದುವೆ ಪರಮಾತ್ಮನಿಗೆ ಸಲ್ಲಿಸುವ ಕೃತಜ್ಞತೆ.ಆದರೆ ಮನುಷ್ಯರಲ್ಲಿ ಕೆಲವರು ಬೋಧಿಸಿದ ಅರ್ಥಹೀನ,ವಿಪರೀತ ಭಾವನೆಗಳ ಉಪದೇಶದಿಂದ ‘ ಜೀವನ ನಶ್ವರ, ನೀರಮೇಲೆ ಗುರುಳೆ’ ಎನ್ನುವಂತಹ ಜೀವವಿಮುಖಿ ಮಾತುಗಳು ಪ್ರಚಾರದಲ್ಲಿ ಬಂದು ಜೀವನದ ಸೊಬಗು,ಆನಂದಗಳನ್ನು ಸವಿಯದೆ ಕೊರಗುವ ಪರಿಸ್ಥಿತಿಗೆ ಸಿಕ್ಕಿತು ಜನತೆ.ಪರಮಾತ್ಮನ ಸೃಷ್ಟಿಯಲ್ಲಿ ಹುಟ್ಟಿದ್ದೆಲ್ಲವೂ ಅಳಿಯಲೇಬೇಕು,ಮುಂದಿನ ಸೃಷ್ಟಿಗಾಗಿ ಎನ್ನುವುದು ವಿಶ್ವನಿಯಮ; ವಿಶ್ವನಿಯಾಮಕನ ಎಣಿಕೆ.ಇದನ್ನರಿಯದೆ ‘ ಜೀವನ ನಿರಮೇಲಿನ ಗುರುಳೆ’ ಯಾವಾಗ ಹೊಡೆಯುವುದೋ ಗೊತ್ತಿಲ್ಲ ಎಂದು ಅಳುತ್ತ ಕುಳಿತರೆ ಹೇಗೆ? ಜೀವನ ಯಾವಾಗ ಬೇಕು ಆಗ ಅಂತ್ಯವಾಗುವುದಿಲ್ಲ.ಪ್ರತಿ ಜೀವಿಯ ಜೀವಿತಕ್ಕೊಂದು ಉದ್ದೇಶವಿದೆ,ಆ ಉದ್ದೇಶ ಈಡೇರದ ಹೊರತು ಆ ಜೀವಿಯು ಸಾಯನು.ಪರಮಾತ್ಮನ ಸಂಕಲ್ಪ ಏನಿದೆಯೋ ಅದನ್ನು ಈಡೇರಿಸಿಯೇ ಸಾಯುತ್ತಾರೆ ಮನುಷ್ಯರು.ಹಾಗಿದ್ದ ಬಳಿಕ ದುಃಖವೇಕೆ? ಬಳಲುವುದೇಕೆ ? ‘ನಾನು ಪಾಪಿಯಲ್ಲ,ಪುಣ್ಯಾತ್ಮನು.ನಾನು ಅಲ್ಪಾಯುವಲ್ಲ,ದೀರ್ಘಾಯು.ನಾನು ಸಾಮಾನ್ಯನಲ್ಲ; ಪರಮಾತ್ಮನ ಪ್ರೇರಣೆಯಂತೆ ಪರಮಾತ್ಮನ ಸಂಕಲ್ಪಸಿದ್ಧಿಗಾಗಿ ಅವತರಿಸಿದ ಸಿದ್ಧನು’ ಎನ್ನುವ ಭಾವನೆ ಮೊಳೆಯಬೇಕು.ಇದುವೇ ಜೀವನದ ಸೊಬಗು,ಸೌಂದರ್ಯ.ಜೀವರುಗಳ ಜನ್ಮದ ಹಿಂದಿನ ಪರಮಾತ್ಮನ ಸೂತ್ರ,ಸಂಕಲ್ಪವನ್ನರಿಯುವುದೇ ಜೀವನದ ಸೊಬಗು.ಇಂತಹ ಸೊಬಗನ್ನು ಅರಿತು ನಾವು ಪರಮಾತ್ಮನ ಸೃಷ್ಟಿಸಂಕಲ್ಪದ ಪಾತ್ರಧಾರಿಗಳು ಎಂದರಿತರೆ ಸೃಷ್ಟಿಯಲ್ಲಿ ಸೊಗಸು ಕಾಣಿಸುತ್ತದೆ,ಜೀವನದಲ್ಲಿ ಆನಂದವೂ ಉಂಟಾಗುತ್ತದೆ.

ಪರಮಾತ್ಮನ ಸೃಷ್ಟಿ ಸಂಕಲ್ಪವನ್ನರಿತರೆ ನಮ್ಮ ಹುಟ್ಟು,ಕುಲಗೋತ್ರಗಳ ಬಗ್ಗೆ ಹೆಮ್ಮೆಯಾಗಲಿ,ತಾತ್ಸಾರ ಭಾವನೆಯಾಗಲಿ ಮೂಡುವುದಿಲ್ಲ.ಪರಮಾತ್ಮನು ಜಾತಿ,ಮತಗಳನ್ನು ಸೃಷ್ಟಿಸಲಿಲ್ಲ,ಕುಲಗೋತ್ರಗಳನ್ನು ಎಣಿಸಲಿಲ್ಲ; ಅವು ಮನುಷ್ಯರ ಕಲ್ಪನೆಗಳಷ್ಟೆ.ಜೀವನವು ಅಖಂಡವಾದುದು,ಅನಂತವಾದುದು.ಈ ಅಖಂಡ ಜೀವನದ ಒಂದು ಬಿಂದುವಷ್ಟೆ ಇಂದಿನ ನಮ್ಮ ಇರುವಿಕೆ.ಇದೇ ಸತ್ಯವಲ್ಲ,ಇಂದಿನ ಇರುವಿಕೆಯೇ ಅಂತಿಮವಲ್ಲ.ಇಂದು ಅಂತ್ಯಜನಾಗಿದ್ದವನು ಮುಂದೆ ಬ್ರಾಹ್ಮಣನಾಗುತ್ತಾನೆ; ಇಂದು ಬ್ರಾಹ್ಮಣನಾಗಿದ್ದವನು ತನ್ನ ಅಜ್ಞಾನವಶದಿಂದ ಮುಂದೆ ಅಂತ್ಯಜನಾಗುತ್ತಾನೆ!ಇದು ಸುಳ್ಳಲ್ಲ,ಸೃಷ್ಟಿ ರಹಸ್ಯ.ನಾನು ಯಾವಕುಲದಲ್ಲಿ ಹುಟ್ಟಿದ್ದೇನೆ,ಯಾವ ಗೋತ್ರ ನನ್ನದು,ನನ್ನ ವಂಶದ ಹಿರಿಮೆ- ಗರಿಮೆಗಳೇನು ಎನ್ನುವುದು ಮುಖ್ಯವಲ್ಲ.ನನ್ನ ಹುಟ್ಟಿನ ಉದ್ದೇಶವೇನು ? ಪರಮಾತ್ಮನು ಯಾವ ಉದ್ದೇಶದಿಂದ ನನ್ನನ್ನು ಹುಟ್ಟಿಸಿದ್ದಾನೆ ಎಂದರಿತು ಪರಮಾತ್ಮನ ಸೃಷ್ಟಿಯಲ್ಲಿ ನಮಗೊದಗಿ ಬಂದ ಪಾತ್ರವನ್ನು ವಿಶಿಷ್ಟಪಾತ್ರವೆಂದು ಬಗೆದು,ಆನಂದದಿಂದ ನಿರ್ವಹಿಸಬೇಕು.ವೃತ್ತಿ- ಪ್ರವೃತ್ತಿಗಳು ಪರಮಾತ್ಮ ಸೃಷ್ಟಿಪೂರ್ಣತೆಯ ಸಾಧನಗಳಾಗಿದ್ದು ಆ ಸಾಧನೆಗಳಿಂದ ಉತ್ಕೃಷ್ಟವಾದುದನ್ನು ಸಾಧಿಸಬೇಕು. ಈ ಉತ್ಕೃಷ್ಟ ಸಾಧನೆಯೇ ಜೀವನದ ಸಿದ್ಧಿ,ಸೊಬಗು.

ಲೌಕಿಕ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಬೇಕು ನಿಜ,ಆದರೆ ಲೌಕಿಕ ಜೀವನದ ಸಾಧನೆಗೆ ಕಟ್ಟುಬೀಳಬಾರದು.ಲೌಕಿಕದಲ್ಲಿದ್ದು ಅಲೌಕಿಕನಾದ,ವಿಶ್ವಾತೀತನಾದ,ವಿಶ್ವೋತ್ತೀರ್ಣನಾದ ವಿಶ್ವೇಶ್ವರ ಶಿವನ ಸಾಕ್ಷಾತ್ಕಾರಕ್ಕೆ ಹಂಬಲಿಸಬೇಕು,ಹಾತೊರೆಯಬೇಕು.ನಮಗೆಲ್ಲ ಎರಡು ಕೈಗಳಿವೆ,ಎರಡು ಕಾಲುಗಳಿವೆ,ಎರಡು ಕಣ್ಣುಗಳು,ಎರಡು ಕಿವಿಗಳಿವೆ.ಇವು ಏನನ್ನು ಸೂಚಿಸುತ್ತವೆ ? ಜೀವನಕ್ಕೆ ಎರಡು ಉದ್ದೇಶಗಳಿವೆ ಎಂಬುದೇ ಎರಡೆರಡಾದ ಈ ಅವಯವಗಳ ಸೂಚನೆ.ಐಹಿಕವು ಒಂದು ಉದ್ದೇಶವಾದರೆ ಪಾರಲೌಕಿಕವು ಮತ್ತೊಂದು ಉದ್ದೇಶ.ಒಂದು ಕಾಲನ್ನು ನೆಲದ ಮೇಲೆ ಊರಿನಿಂತು ಮತ್ತೊಂದು ಕಾಲಿನಿಂದ ಪರಮಾತ್ಮನ ಪಥದಿ ನಡೆಯಬೇಕು.ಒಂದು ಕೈಯಿಂದ ಲೌಕಿಕ ಸಾಧನೆ ಮಾಡಿ ಮತ್ತೊಂದು ಕೈಯಿಂದ ಪರಮಾತ್ಮನನ್ನು ಹಿಡಿಯಲು ಪ್ರಯತ್ನಿಸಬೇಕು.ಒಂದು ಕಣ್ಣಿನಿಂದ ಲೋಕದ ಸೊಬಗನ್ನು ಆನಂದಿಸಿದರೆ ಮತ್ತೊಂದು ಕಣ್ಣಿನಿಂದ ನಿತ್ಯಸತ್ಯನಾದ ಪರಮಾತ್ಮನ ಸೌಂದರ್ಯವನ್ನು ಕಾಣಬೇಕು.ಒಂದು ಕಿವಿಯಿಂದ ಲೌಕಿಕ ವಾರ್ತೆಯನ್ನು ಕೇಳಿದರೆ ಮತ್ತೊಂದು ಕಿವಿಯಿಂದ ಪರಮಾತ್ಮನ ಸಾಮಗಾನವನ್ನು ಆಲಿಸಬೇಕು.ಹೀಗೆ ಇಹಪರಗಳೆರಡನ್ನು ಏಕತ್ರಗೊಳಿಸಬೇಕು.ಇಹದಲ್ಲಿಯೇ ಪರವನ್ನು ಕಾಣಬೇಕು,ಇಹವೇ ಪರವಾಗಬೇಕು.ಇಹವು ಪರದ ಎತ್ತರಕ್ಕೆ ಏರಿದಾಗ ಪರವು ಇಹದಲ್ಲಿ ಒಡಮೂಡಿ,ಇಹದೊಳು ಒಂದಾಗುತ್ತದೆ.ನಮ್ಮ ಮರ್ತ್ಯದ ಬಾಳು ಉತ್ತಮವಾದಷ್ಟು ಹತ್ತಿರರಾಗುತ್ತೇವೆ ಪರಮಾತ್ಮನ ಸನ್ನಿಧಿಗೆ.ನಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳುತ್ತ,ಇತರರ ಬದುಕಿಗೆ ಆಸರೆಯಾಗುತ್ತ ಪಡೆಯಬಹುದು ಪರಮಾತ್ಮನ ಅನುಗ್ರಹವನ್ನು.

ಮರ್ತ್ಯದ ಬಾಳನ್ನು ಅರ್ಥಪೂರ್ಣವಾಗಿ ಬಾಳಬೇಕು; ಮರ್ತ್ಯದಲ್ಲಿಯೇ ಅಮರ್ತ್ಯನಾದ ಪರಮಾತ್ಮನನ್ನು ಕಾಣುವುದೇ ಜೀವನದ ಸಾರ್ಥಕತೆ ಎನ್ನುವುದು ಗುರುದೇವನ ಈ ಮಾತಿನ ಅಂತರಾರ್ಥ.

About The Author