ಶಹಾಪುರ : ಗ್ಯಾಸ್ ಟ್ರಬಲ್ : ಹೊರ ಸಾಗಿಸುತ್ತಿರುವ ಏಜೇನ್ಸಿಯವರು : ಪ್ರಶ್ನೆ ಮಾಡದ ಜನ 

ಶಹಾಪುರ,

ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್ ನಿಂದಾಗಿ ಶಹಪುರ ತಾಲೂಕಿನಲ್ಲಿ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಸಿಲಿಂಡರ್ ಗ್ಯಾಸ್ ತೆಗೆದುಕೊಳ್ಳಲು ಡೀಲರ್ ಅಂಗಡಿ ಮುಂದೆ ಜನಸಮೂಹವೆ ಮುಗಿಬಿದ್ದಿದ್ದು ಜನ ಸಾಲುಗಟ್ಟಿ ನಿಂತಿದ್ದಾರೆ. ಬೆಲೆ ಏರಿಕೆಯಿಂದ ಬಡವರು ಮಧ್ಯಮ ವರ್ಗದವರು ತತ್ತರಿಸಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ಹೇಳಿಕೆ ನೀಡದೆ ತೊಂದರೆ ಇಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ ಸಮಸ್ಯೆಗಳು ಪ್ರತಿದಿನ ಬಿಗಡಾಯಿಸುತ್ತಿವೆ. 

ಶಹಪುರ ತಾಲೂಕಿನ ವಿಜಯ್ ಗ್ಯಾಸ್ ಏಜೆನ್ಸಿಯಲ್ಲಿ ದಿನಂಪ್ರತಿ 300 ರಿಂದ 500 ರವರೆಗೆ ಜನ ಪ್ರತಿದಿನ ರಾತ್ರಿ ಇಡೀ ಸಾಲಾಗಿ ನಿಂತು ಖಾಲಿ ಸಿಲಿಂಡರ್ ಗಳನ್ನಿಟ್ಟು ಅದೇ ಸ್ಥಳದಲ್ಲಿ ಜಾಗರಣೆ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಕಂಡರೂ ಏಜೆನ್ಸಿಯವರು ಸಾಲುಗಟ್ಟಿ ನಿಂತ ಜನರಿಗೆ ಆದ್ಯತೆ ಕೊಡದೇ ಬೇರೆಡೆ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದಾರೆ. ರೊಚ್ಚಿಗೆದ್ದ ಜನ ಕೇಳಿದರೆ ಈಗಾಗಲೇ ಬುಕಿಂಗ್ ಮಾಡಲಾಗಿದೆ ಅವರ ಮನೆಗೆ ಕೊಡಬೇಕು ಎನ್ನುತ್ತಾರೆ. ಹಾಗಾದರೆ ಸಾಲಿನಲ್ಲಿ ನಿಂತ ನಾಲ್ಕು ನೂರರಿಂದ ಐದು ನೂರು ಜನರು ಸಿಲಿಂಡರ್ ಗಳನ್ನು ಬುಕ್ ಮಾಡಿದ್ದಾರೆ. ಅವರಿಗೆ ತಲುಪಿಸುವುದಿಲ್ಲ ಎನ್ನುವುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಇದನ್ನು ಜನರು ಪ್ರಶ್ನಿಸದಿದ್ದರೆ ಸಾಮಾನ್ಯ ಜನರಿಗೆ ಪ್ರತಿದಿನ ಸಿಲಿಂಡರ್ ಸಿಗುವುದಿಲ್ಲ. ಪ್ರತಿ ದಿನ ದಿನಂಪ್ರತಿ ಸಾಲುಗಟ್ಟಲೆ ನಿಂತು ಗ್ಯಾಸ್ ಖಾಲಿಯಾಗಿದೆ ಎಂದ ಮೇಲೆ ಮನೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೊರ ಹೋಗುತ್ತಿರುವ ಗ್ಯಾಸ್ ಸಿಲಿಂಡರ್ ಗಳನ್ನು ಯಾರು ಪ್ರಶ್ನೆ ಮಾಡದೇ ಇರುವುದೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪ್ರತಿಯೊಬ್ಬರೂ ಎರಡರಿಂದ ಮೂರು ಗ್ಯಾಸ್ ಗಳನ್ನು ತೆಗೆದುಕೊಂಡು ಸ್ಟಾಕ್ ಮಾಡಿಕೊಂಡರೆ ಸಾಮಾನ್ಯ ಜನರ ಗತಿ ಏನು ?.

ಪ್ರತಿದಿನ ಇದೇ ರೀತಿಯಾಗಿ ಜನರು ಸಿಲಿಂಡರ್ ಗ್ಯಾಸ್ ಗಳನ್ನು ತೆಗೆದುಕೊಳ್ಳಲು ಸಾಲು ಸಾಲುಗಟ್ಟಲೆ ನಿಂತು ಗ್ಯಾಸ್  ಸಿಗದೆ ಕೆಲವು ಜನರು ಹಿಂದುರುಗುತ್ತಿರುವುದು ಕಂಡುಬರುತ್ತಿದೆ. ಆದಷ್ಟು ಬೇಗ ರಾಜ್ಯ ಮತ್ತು ಕೇಂದ್ರ ಸರಕಾರ ಗ್ಯಾಸ್ ಸಮಸ್ಯೆಯನ್ನು ಪರಿಹರಿಸಬೇಕು.

ಭೀಮರಾಯ ಪೂಜಾರಿ.
ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು.